ಮಳೆಯ ಚೆಲುವನ್ನು ಆಸ್ವಾದಿಸುವುದರ ಜತೆಗೆ ಮಂಜಿನ ವಾತಾವರಣದ ನಡುವೆ ಪ್ರವಾಸಿ ತಾಣಗಳನ್ನ ಕಣ್ತುಂಬಿಕೊಳ್ಳುವ ಬಯಕೆ ಎಲ್ಲರಿಗೂ ಸಾಮಾನ್ಯ.
ಅಂತಹ ಸ್ವರ್ಗ ಸದೃಶ ತಾಣ ಮಲೆನಾಡಿನ ಹೆಬ್ಟಾಗಿಲು ಶಿವಮೊಗ್ಗದಲ್ಲಿ ಬಹಳಷ್ಟಿವೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಹಸುರು ಹೊದ್ದಿರುವ ಪ್ರಕೃತಿ, ಮೋಡಗಳ ಕಣ್ಣಾಮುಚ್ಚಾಲೆ, ತಂಗಾಳಿ, ಮಂಜಿನಾಟ ಹಾಗೂ ಜಿಟಿ-ಜಿಟಿ ಮಳೆ ಇವೆಲ್ಲ ಸ್ವರ್ಗ ಸದೃಶ ಅನುಭವ ನೀಡುತ್ತವೆ. ಇಲ್ಲಿ ರಾಜರ ಕತೆ ಮಾತ್ರವಲ್ಲ, ಪ್ರಕೃತಿಯೂ ತನ್ನ ಕತೆಯನ್ನು ಬಿಚ್ಚಿಡುತ್ತದೆ.
ಒಂದು ಕಾಲದಲ್ಲಿ ರಾಜವೈಭೋಗದಲ್ಲಿ ಮುಳುಗಿದ್ದ ಕವಲೆದುರ್ಗ ಈಗ ಅಕ್ಷರಶಃ ಪಾಳುಬಿದ್ದ ಕೋಟೆ. ಆದರೆ ದಟ್ಟಾರಣ್ಯದ ಪ್ರಕೃತಿಯ ನಡುವೆ ಇಲ್ಲಿನ ಕೋಟೆ ಈಗಲೂ ರಾಜ, ರಾಣಿಯರ, ಅರಮನೆಯ ದರ್ಬಾರಿನ ಕಥೆಗಳನ್ನು ಪಿಸು ದನಿಯಲ್ಲಿ ಹೇಳುತ್ತದೆ; ಗತ ವೈಭವಕ್ಕೆ ಸಾಕ್ಷಿಯಾಗುತ್ತದೆ.
ಇತಿಹಾಸ
ಕವಲೇದುರ್ಗವು ಸುಮಾರು 600ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ. ವಿಶೇಷವಾಗಿ ಇಲ್ಲಿ ಮಳೆ ನೀರು ಕೊಯ್ಲು ಆಧಾರಿತ ತಾಂತ್ರಿಕ ಕೌಶಲಗಳನ್ನು ಬಳಸಿರುವುದು ಕಂಡಾಗ ಅಚ್ಚರಿಯಾಗುತ್ತದೆ.ಛತ್ರಪತಿ ಶಿವಾಜಿ ಮಹಾರಾಜರ ಮಗ ರಾಜರಾಮನಿಗೆ ರಾಣಿ ಚೆನ್ನಮ್ಮಾಜಿ ಆಶ್ರಯ ನೀಡಿದ್ದು ಕವಲೇದುರ್ಗದಲ್ಲಿ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿದೆ.
ಇದೇ ವಿಷಯವಾಗಿ ಮೊಘಲ್ ದೊರೆ ಔರಂಗಜೇಬನೊಂದಿಗೆ ಯುದ್ಧ ಮಾಡಿ ಗೆದ್ದ ಕೀರ್ತಿ ರಾಣಿ ಚೆನ್ನಮ್ಮಳಿಗೆ ಸಲ್ಲುತ್ತದೆ. 9ನೇ ಶತಮಾನದಲ್ಲಿ ನಿರ್ಮಿಸಲಾದ ಕವಲೇದುರ್ಗ ಮೂರು ಸುತ್ತಿನ ಕೋಟೆಯಾಗಿದ್ದು, ಬೆಟ್ಟದ ದಿಣ್ಣೆಗಳ ನೈಸರ್ಗಿಕ ಬಾಹ್ಯಗಳನ್ನು ಅನುಸರಿಸಿ ಬೃಹದ್‌ಗಾತ್ರದ ಪೆಡಸು ಕಲ್ಲುಗಳು ಇಟ್ಟಿಗೆಯನ್ನಾಗಿ ಉಪಯೋಗಿಸಿ ಈ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆಯ ಆವರಣದಲ್ಲಿ 16ನೇ ಶತಮಾನದಲ್ಲಿ ವೆಂಕಟಪ್ಪ ನಾಯಕ ಕಟ್ಟಿದ ಅರಮನೆಯ ಅವಶೇಷಗಳು ಇವೆ.
ಏಳು ಕೊಳಗಳ ಸಮೂಹ
ಈ ಕೋಟೆಯಲ್ಲಿ ಒಟ್ಟಾರೆ ಏಳು ಕೊಳಗಳಿದ್ದು, ಇವುಗಳಲ್ಲಿ ಸದಾ ನೀರಿರುವುದು ವಿಶೇಷ. ಅಲ್ಲದೆ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಭೂತಳದಿಂದಲೇ ನೀರು ವರ್ಗಾವಣೆ ಯಾಗುವಂತೆ ಮಾಡಲಾಗಿದೆ ಎನ್ನಲಾಗುತ್ತದೆ.
ಸೂರ್ಯಾಸ್ತ ವೀಕ್ಷಣೆ
ಕವಲೇದುರ್ಗದಲ್ಲಿ ಸೂರ್ಯಸ್ತ ವೀಕ್ಷಣೆಗೆ ಪ್ರತ್ಯೇಕ ತಾಣವಿದೆ. ಆಗುಂಬೆಯಲ್ಲಿ ಕಾಣಿಸುವಂತೆ ಸೂರ್ಯ ಕೆಂಬಣ್ಣದಲ್ಲಿ ಮುಳುಗುವುದನ್ನು ಇಲ್ಲಿಯೂ ಸವಿಯಬಹುದು.
ಸುಶಾಂತ್ ಮಂಗಳೂರು, ವಿ.ವಿ. ಕಾಲೇಜು, ಮಂಗಳೂರು