ಕೋಟಾ: ಇಲ್ಲಿನ ರಾಂಪುರ ಪ್ರಾಂತ್ಯದ ನಿವಾಸಿಯೊಬ್ಬರು ಅಸ್ತಮಾದಿಂದ ಮೃತಪಟ್ಟಿದ್ದಾರೆ. ಆದರೆ, ತಮ್ಮ ತಂದೆಯ ಸಾವಿಗೆ ಪೊಲೀಸರು ಹಾಗೂ ವೈದ್ಯರ ಅಮಾನವೀಯತೆಯೇ ಕಾರಣ ಎಂದು ಮೃತರ ಪುತ್ರ ಆರೋಪಿಸಿದ್ದಾನೆ.
ಕೋಟಾದ ರಾಂಪುರ ಪ್ರದೇಶದ ಪೈಥಾಗಡಿಯಲ್ಲಿ ವಾಸ ಮಾಡುತ್ತಿದ್ದ ತರಕಾರಿ ವ್ಯಾಪರಿ ಸತೀಶ್ ಅಗರ್‌ವಾಲ್ ಮೃತಪಟ್ಟ ವ್ಯಕ್ತಿ. ಲಾಕ್‌ಡೌನ್ ಸಮಯದಲ್ಲಿ ಸತೀಶ್ ಅಗರ್‌ವಾಲ್ ಅವರಿಗೆ ಅಸ್ತಮಾ ಉಲ್ಬಣಗೊಂಡಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್‌ಗಾಗಿ ಸತೀಶ್ ಪುತ್ರ ಮನೀಶ್ ಪ್ರಯತ್ನ ಮಾಡಿದ್ದಾರೆ.
ಯಾವುದೇ ವಾಹನ ಸಿಗದ ಕಾರಣ, ಕುಟುಂಬಸ್ಥರು ಕೊನೆಗೆ ತರಕಾರಿ ಮಾರಾಟ ಮಾಡುತ್ತಿದ್ದ ತಳ್ಳುಗಾಡಿಯಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎರಡೂವರೆ ಕಿ.ಮೀ.ದೂರದಲ್ಲಿರುವ ಆಸ್ಪತ್ರೆಗೆ ತಳ್ಳುಗಾಡಿಯಲ್ಲೇ ಹೊರಟ ಮನೀಶ್ ಕುಟುಂಬಕ್ಕೆ ದಾರಿಯಲ್ಲಿದ್ದ ಪೊಲೀಸರು ರಸ್ತೆಗೆ ಹಾಕಿದ್ದ ಬ್ಯಾರಿ ಕೇಡ್ ತೆಗೆದರೂ, ಅವರ್ಯಾರೂ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲು ಸಹಾಯಕ್ಕೆ ಮುಂದಾಗಲಿಲ್ಲ ಎಂಬುದು ಮೃತರ ಪುತ್ರ ಮನೀಶ್ ಆರೋಪಿಸಿದ್ದಾನೆ.
ಅತ್ತ, ಮನೀಶ್ ಸಂಬಂಧಿ ಬೇರೊಂದು ಆಂಬ್ಯುಲೆನ್ಸ್ ವ್ಯವಸ್ಥೆಗೊಳಿಸಿ ಆಸ್ಪತ್ರೆಗೆ ಕರೆತಂದರೂ, ಅಲ್ಲಿಯೂ ಸಹ ಚಿಕಿತ್ಸೆಗೆ ಸ್ಪಂದನೆ ಸಿಗದಿದ್ದರಿಂದ ಸತೀಶ್ ಅಗರ್‌ವಾಲ್ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ. ಆದರೆ, ಎಂಬಿಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ನವೀನ್ ಸಕ್ಸೇನಾ ಈ ಆರೋಪವನ್ನು ನಿರಾಕರಿಸಿದ್ದಾರೆ.
‘ಕುಸಿದ ಸ್ಥಿತಿಯಲ್ಲಿದ್ದ ಸತೀಶ್ ಅಗರ್‌ವಾಲ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರು ಕೂಡಲೇ ಅವರನ್ನು ಪರೀಕ್ಷಿಸಿದ್ದಾರೆ. ಆ ನಂತರ ಅವರು ಮೃತಪಟ್ಟ ಬಗ್ಗೆ ಘೋಷಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆಯಲ್ಲಿ ವಿಳಂಬ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅತ್ತ, ಕೋಟಾದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಸೈನಿ ಕೂಡ ಪೊಲೀಸರು ನಿರ್ಲಕ್ಷಿಸಿಲ್ಲ. ಅಲ್ಲಿದ್ದ ಪೊಲೀಸರಿಗೆ ಯಾವುದೇ ವಾಹನದ ವ್ಯವಸ್ಥೆ ಇರಲಿಲ್ಲ” ಎಂದಿದ್ದಾರೆ.