ಹಳೇಬೀಡು: ಹೋಬಳಿಯ ಗಂಗೂರು ಗ್ರಾಮದ ಕಾಡಂಚಿನ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬವೊಂದು 18 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೇ ಕಗ್ಗತ್ತಲಲ್ಲೇ ಕಾಲ ಕಳೆಯುತ್ತಿದೆ. ಗ್ರಾಮದ ವಿಶಾಲಾಕ್ಷಿ ಮತ್ತು ಪರ್ವತೇಗೌಡ ತಮ್ಮ ಇಬ್ಬರು ಮಕ್ಕಳೊಂದಿಗೆ ತಮ್ಮ ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಕರೆಂಟ್‌ಗಾಗಿ 18 ವರ್ಷದಿಂದ ಸತತ ಪ್ರಯತ್ನ ನಡೆಸುತ್ತಿದ್ದರೂ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ಸಂಬಂಧ ಸೆಸ್ಕ್ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.
ಗ್ರಾಮ ಪಂಚಾಯ್ತಿಯಿಂದ ಮುಂಜೂರಾಗಿದ್ದ ವಸತಿ ಯೋಜನೆಯ ಅನುದಾನದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಆರಂಭದಲ್ಲಿ ಪಕ್ಕದ ಜಮೀನಿನ ಮಾಲಿಕರ ಸಹಕಾರದಿಂದ ಕೊಳವೆ ಬಾವಿಯಿಂದ ನೀರು ಪಡೆಯುತ್ತಿದ್ದರು.ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡ ದಿನದಿಂದಲೂ ಸೆಸ್ಕ್, ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಕೊಟ್ಟಿದ್ದೇವು. ಸ್ಥಳೀಯ ಅಸಹಕಾರದಿಂದ ನಮಗೆ ಇಲ್ಲಿಯವರೆಗೂ ಸಂಪರ್ಕ ಕಲ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಮನೆಯೊಡತಿ ವಿಶಾಲಾಕ್ಷಿ.
ಕಾಡು ಪ್ರಾಣಿಗಳ ಭಯ: ಬೆಳಗ್ಗೆ ಹೊತ್ತು ಕಾಲ ಕಳೆಯಬಹುದು. ಸಂಜೆ ಆಗುತ್ತಿದ್ದಂತೆ ಕಾಡಂಚಿನಲ್ಲಿ ಮನೆ ಇರುವುದರಿಂದ ಪ್ರಾಣಿಗಳ ಭಯ ಶುರುವಾಗುತ್ತದೆ. ಇಂತಹ ಆಧುನಿಕ ಯುಗದಲ್ಲಿ ಕತ್ತಲಲ್ಲೇ ಜೀವನ ನಡೆಸುವುದು ನಿಜಕ್ಕೂ ದುಸ್ತರವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ ಮನೆಯ ಮಾಲಿಕಪರ್ವತೇಗೌಡ..ಗಂಗೂರು ಗ್ರಾಮದ ಜಮೀನುಗಳ ಮೂಲಕ ಹೈದಳ್ಳ ಕಾವಲು ಕಾಡಿನಲ್ಲಿ ಮುಖ್ಯಲೈನ್ ಹಾದು ಹೋಗಿದ್ದು, ತ್ರಿಫೇಸ್ ಸಂಪರ್ಕ ಕಲ್ಪಿಸಲು ಮಾತ್ರ ಸಾಧ್ಯವಾಗಿದೆ. ಮನೆಗೆ ಸಂಪರ್ಕ ಕಲ್ಪಿಸಲು ಬೇರೆಯದ್ದೇ ಲೈನ್ ಮಾರ್ಗದ ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.
ಬೀಟ್ ಸಮಯದಲ್ಲಿ ಗಂಗೂರು ಗ್ರಾಮಕ್ಕೆ ಭೇಟಿ ನೀಡಿದಸಂದರ್ಭ ದಲ್ಲಿ ಗ್ರಾಮದಿಂದ 3 ಕಿ.ಮೀ. ದೂರದಕಾಡಂಚಿನಲ್ಲಿ ಸಣ್ಣದಾಗಿ ಬೆಳಕುಕಾಣಿಸಿಕೊಂಡಿತು. ಅಲ್ಲಿಗೆ ಭೇಟಿ ನೀಡಿದಾಗ ವಿದ್ಯುತ್ ಸಂಪರ್ಕ ವಿಲ್ಲದೇ ಸೀಮೆಎಣ್ಣೆ ಬುಡ್ಡಿ ಹಿಡಿದು ವಾಸಿಸುತ್ತಿರುವುದುಕಂಡುಬಂತು. ತಕ್ಷಣ ಕೆಇಬಿ ಗಮನಕ್ಕೂ ತಂದಿದ್ದೇನೆ. ಶೀಘ್ರ ಅವರ ಮನೆಗೆ ವಿದ್ಯುತ್‌ಕಲ್ಪಿಸಿಕೊಟ್ಟರೆ ಬಡವರ ಮನೆಗೆ ಬೆಳಕಾದಂತಾಗುತ್ತದೆ.
–ಪ್ರಭಾಕರ್, ಹೆಡ್ ಕಾನ್ಸ್‌ಟೇಬಲ್, ಹಳೇಬೀಡು
ಪರ್ವತೇ ಗೌಡರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಜಂಕ್ಷನ್ ಪಾಯಿಂಟ್‌ನಿಂದ ಹತ್ತುಕಂಬ ಹಾಕಬೇಕಿದೆ. ಆ ಕಂಬಗಳನ್ನು ರೈತರ ಕೃಷಿ ಜಮೀನಿನ ಮಧ್ಯೆ ಹಾಕಬೇಕು, ಇದಕ್ಕೆ ಜಮೀನಿನವರ ಯಾವುದೇ ತಗಾದೇ ಇರಬಾರದು. ಸ್ಥಳೀಯರನ್ನು ಮನವೊಲಿಸಿ ಕಾರ್ಯ ಸಾಧಿಸಬೇಕಿದೆ. ಆದರೂ, ಅವರ ಮನೆಗೆ ಮಾದರಿ ಗ್ರಾಮ ಯೋಜನೆ ಅಡಿಯಲ್ಲಿ ಗ್ರಾಪಂ ಚುನಾವಣೆ ಮುಗಿದ ಮೇಲೆ ವಿದ್ಯುತ್ ಸಂಪರ್ಕ ಒದಗಿಸುತ್ತೇವೆ.
–ಸಂತೋಷ್‌ಕುಮಾರ್, ಸಹಾಯಕ ಅಭಿಯಂತರ, ಸೆಸ್ಕ್