ಅಹಮದಾಬಾದ್:ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ತಲೆ ಎತ್ತಲಿರುವ ಐತಿಹಾಸಿಕ ಬೃಹತ್ ರಾಮ ದೇವಾಲಯದ ವಾಸ್ತುಶಿಲ್ಪಿ ಸೋಂಪುರಾ ಕುಟುಂಬ. ಹೌದು ಹಲವು ತಲೆಮಾರುಗಳಿಂದ ವಾಸ್ತುಶಿಲ್ಪಿಯಾಗಿ ಹೆಸರಾಗಿದ್ದ ಈ ಕುಟುಂಬ ಭಾರತ ಮತ್ತು ವಿದೇಶ ಸೇರಿದಂತೆ 200ಕ್ಕೂ ಅಧಿಕ ದೇವಾಲಯಗಳ ನಿರ್ಮಾಣದ ಹಿಂದಿನ ರೂವಾರಿಯಾಗಿದ್ದಾರೆ. ಇದರಲ್ಲಿ ಸೋಮನಾಥ್ ದೇವಾಲಯ, ಪ್ರಭಾಸ್ ಪಠಾಣ್ ಮತ್ತು ಗುಜರಾತ್ ನ ಗಾಂಧಿನಗರದಲ್ಲಿರುವ ಅಕ್ಷರಧಾಮಕ್ಕೆ ವಾಸ್ತುಶಿಲ್ಪಿಯಾಗಿದ್ದವರು ಸೋಂಪುರಾ ಕುಟುಂಬ.
ಆಶೀಷ್ ಸೋಂಪುರಾ(49ವರ್ಷ) ಮಾಹಿತಿ ಪ್ರಕಾರ, ಮೂರು ದಶಕಗಳ ಹಿಂದೆ ಮೊದಲು ಅಶೋಕ್ ಸಿಂಘಾಲ್ ಅವರು ರಾಮಮಂದಿರ ನಿರ್ಮಾಣ ವಿಚಾರದಲ್ಲಿ ನಮ್ಮ ಕುಟುಂಬವನ್ನು ಸಂಪರ್ಕಿಸಿದ್ದರು. ಸಿಂಘಾಲ್ ಜೀ ಅವರು ನನ್ನ ತಂದೆ(ಚಂದ್ರಕಾಂತ ಸೋಂಪುರಾ)ಗೆ 1989-90ರಲ್ಲಿ ಕರೆ ಮಾಡಿ ದೆಹಲಿಗೆ ಬರುವಂತೆ ತಿಳಿಸಿದ್ದರು.
ಅದರಂತೆ ನನ್ನ ತಂದೆ ಸಿಂಘಾಲ್ ಜೀ ಅವರನ್ನು ಭೇಟಿಯಾಗಿ ಮಂದಿರ ನಿರ್ಮಾಣದ ಕುರಿತು ಚರ್ಚಿಸಿದ್ದರು. ನಂತರ ಅಯೋಧ್ಯೆಯಲ್ಲಿ ಸ್ಥಳ ಪರಿಶೀಲಿಸಲು ತೆರಳಿದ್ದರು. ಆದರೆ 1990ರಲ್ಲಿ ಭಾರೀ ಪ್ರಮಾಣದ ಭದ್ರತೆ ಅಲ್ಲಿತ್ತು. ದೇವಾಲಯದ ಆವರಣದೊಳಗೆ ಏನನ್ನೂ ಕೊಂಡೊಯ್ಯಲು ಸಾಧ್ಯವಾಗುತ್ತಿರಲಿಲ್ಲವಾಗಿತ್ತು. ಆದರೂ ನನ್ನ ತಂದೆ ಸಾಮಾನ್ಯ ಭಕ್ತನಂತೆ ಒಳಗೆ ಹೋಗಿ, ತಮ್ಮ ಪಾದದ ಹೆಜ್ಜೆ ಮೂಲಕ ಅಳತೆ ತೆಗೆದುಕೊಂಡು, ದೇವಾಲಯ ನಿರ್ಮಾಣದ ಮಾಸ್ಟರ್ ಪ್ಲ್ಯಾನ್ ತಯಾರಿಸಿದ್ದರು ಎಂಬುದಾಗಿ ಆಶೀಷ್ ವಿವರಿಸಿದ್ದಾರೆ.
ಅಂದು ದೇಗುಲದ ಮುಖ್ಯವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರಾ ಅವರು ರಚಿಸಿದ್ದ ಅಯೋಧ್ಯೆ ರಾಮಮಂದಿರದ ವಿನ್ಯಾಸ ಸುಪ್ರೀಂಕೋರ್ಟ್ ತೀರ್ಪಿನ ನಂತರ ಬಹುತೇಕ ಬದಲಾಗಿದೆ. ದೇವಾಲಯ ನಾಗರ ಶೈಲಿಯಲ್ಲಿ ನಿರ್ಮಿಸಲಾಗುತ್ತಿದ್ದು, ಆರಂಭದಲ್ಲಿ ಎರಡು ಗುಮ್ಮಟ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ನಂತರ ಬದಲಾದ ನೀಲನಕ್ಷೆಯಲ್ಲಿ ಐದು ಗುಮ್ಮಟ ನಿರ್ಮಾಣವಾಗಲಿದೆ. ದೇಗುಲದ ವಿಸ್ತಾರ ಕೂಡಾ ಹೆಚ್ಚಾಗಿರುವುದಾಗಿ ತಿಳಿಸಿದ್ದಾರೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, 2018ರಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಮಂಡಳಿಯೊಂದನ್ನು ರಚಿಸಿತ್ತು. ರಾಮಮಂದಿರ ನಿರ್ಮಾಣ ಪೂರ್ಣಗೊಳಿಸುವ ಹೊಣೆಗಾರಿಕೆ ನಿಖಿಲ್ ಮ್ತು ಆಶೀಷ್ ಸೋಂಪುರಾ ನಿರ್ವಹಿಸಲಿದ್ದಾರೆ. ತಂದೆ ಈಗಲೂ ನಿರ್ಮಾಣ ಕಾರ್ಯದ ಕೆಲಸದಲ್ಲಿ ತೊಡಗಿದ್ದಾರೆ. ಮಕ್ಕಳಿಗೆ ದಿನಂಪ್ರತಿ ಕಟ್ಟಡ ನಿರ್ಮಾಣ ಕಾಮಗಾರಿಯ ಪುನರ್ ಪರಿಶೀಲನೆ ನಡೆಸುವ ಜವಾಬ್ದಾರಿ ವಹಿಸಿದ್ದಾರೆ. ತಂದೆಗೆ ಈಗ 78 ವರ್ಷ ಆದರೂ ಚಟುವಟಿಕೆಯಿಂದ ಕೆಲಸ ಮಾಡಿ, ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ನಿಖಿಲ್ ಸೋಂಪುರಾ ತಿಳಿಸಿದ್ದಾರೆ.
ಸಾಂಪ್ರದಾಯಿಕವಾಗಿ ನಮಗೆ ವಂಶಪಾರಂಪರ್ಯವಾಗಿ ಶಿಲ್ಪ ಶಾಸ್ತ್ರದ ಕಲಿಕೆಯನ್ನು ಹಸ್ತಾಂತರಿಸುತ್ತಿದ್ದಾರೆ. ಪುರಾತನ ದೇವಾಲಯಗಳ ವಾಸ್ತುಶಿಲ್ಪಕಲೆಯನ್ನು ಮುಂದಿನ ತಲೆಮಾರಿಗೆ ಕಲಿಸುತ್ತಿರುತ್ತಾರೆ. ಆದರೆ ಇಂದು ಅದಕ್ಕೆ ಯಾವುದೇ ಪ್ರಾಥಮಿಕವಾದ ತರಬೇತಿ ಇಲ್ಲ. ಸೋಂಪುರಾ ಕುಟುಂಬ ಆಧುನಿಕ ವಾಸ್ತುಶಿಲ್ಪವನ್ನು ಕಲಿತುಕೊಂಡು ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಆಶೀಷ್ ಮತ್ತು ನಿಖಿಲ್ ಇಬ್ಬರೂ ಡಿಪ್ಲೋಮಾ ಸಿವಿಲ್ ಇಂಜಿನಿಯರ್ ಆಗಿದ್ದಾರೆ.
ಇದೀಗ ನಿಖಿಲ್ ಪುತ್ರ ಅಶುತೋಷ್ (28ವರ್ಷ) ಕೂಡಾ ಪೂರ್ವಜರ ಹಾದಿಯಲ್ಲಿಯೇ ಹೆಜ್ಜೆ ಹಾಕತೊಡಗಿದ್ದಾರೆ. ಅಶುತೋಷ್ ಬಿಟೆಕ್ (ಸಿವಿಲ್ ಇಂಜಿನಿಯರ್) ಪದವಿ ಪಡೆದಿದ್ದಾರೆ. ಆಧುನಿಕ ತಂತ್ರಜ್ಞಾನದ ಜತೆಗೆ ವಾಸ್ತುಶಿಲ್ಪ ಕಲೆಯನ್ನು ಮುಂದುವರಿಸುವ ಮೂಲಕ ಪಿಜ್ಜಜ್ಜ(ಚಂದ್ರಕಾಂತ್ ಸೋಂಪುರಾ ತಂದೆ ಪ್ರಭಾಶಂಕರ್)ಆಸೆಯನ್ನು ನೆರವೇರಿಸಲಿದ್ದಾರೆ ಎಂಬ ಆಶಯ ಹೊಂದಿದ್ದಾರೆರಂತೆ.
1990ರಲ್ಲಿ ರಾಮಜನ್ಮಭೂಮಿ ನ್ಯಾಸ್ ನಾಲ್ಕರಿಂದ ಐದು ವಿವಿಧ ಪ್ಲ್ಯಾನ್ ಗಳನ್ನು ಪ್ರಸ್ತಾಪಿಸಿತ್ತು. ನಂತರ ಈ ಯೋಜನೆಯನ್ನು ಸಂತರ ಬಳಿ ತೆಗೆದುಕೊಂಡು ಹೋಗಿ ಒಮ್ಮತದ ಮೇರೆಗೆ ವಿನ್ಯಾಸವನ್ನು ಅಂತಿಮಗೊಳಿಸಲಾಗಿತ್ತು. ಇದೀಗ ದೇವಾಲಯದಲ್ಲಿ ಐದು ಗೋಪುರಗಳಿವೆ.ಸ್ತಂಭಗಳ ಸಂಖ್ಯೆಯನ್ನು 212ರಿಂದ 360ಕ್ಕೆ ಏರಿಕೆ ಮಾಡಲಾಗಿದೆ. ಅಷ್ಟೇ ಅಲ್ಲ ಶ್ರೀರಾಮ್ ಎಂದು ಬೇರೆ, ಬೇರೆ ಭಾಷೆಯಲ್ಲಿ ಬರೆಯಲಾಗಿರುವ ಇಟ್ಟಿಗೆ(ದೇಶಾದ್ಯಂತ ಸಂಗ್ರಹವಾಗಿದ್ದ 2 ಲಕ್ಷ ಇಟ್ಟಿಗೆ) ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.