Advertisement

ಜೀತದಿಂದ ಮುಕ್ತವಾಯಿತು ಕುಟುಂಬ

04:14 PM Dec 04, 2019 | Suhan S |

ಮಾಗಡಿ: ಇಟ್ಟಿಗೆ ಕಾರ್ಖಾನೆಯಲ್ಲಿ ಜೀತಕ್ಕಿದ್ದ ಪತಿ, ಪತ್ನಿ ಹಾಗೂ ಐವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಸದಸ್ಯರನ್ನು ಶಾಂತ ಜೀವನ ಜ್ಯೋತಿ ಸರ್ಕಾರೇತರ ಸಂಸ್ಥೆ ಪೊಲೀಸರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಜೀತ ಕಾರ್ಮಿಕರನ್ನು ರಕ್ಷಣೆ ಮಾಡಿರುವ ಘಟನೆ ಮಾಡಬಾಳ್‌ ಹೋಬಳಿಯ ಅಜ್ಜನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಟ್ಟಿಗೆ ತಯಾರಿಕಾ ಕಾರ್ಖಾನೆಯ ಮಾಲೀಕರಾದ ದೇವಮ್ಮ, ಗೋವಿಂದರಾಜು ವಿರುದ್ಧ ಮಾಗಡಿ ಪೊಲೀಸ್‌ ಠಾಣೆಯಲ್ಲಿ ಜೀತಕಾರ್ಮಿಕ ಪದ್ದತಿ ನಿರ್ಮೂಲನೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

9 ತಿಂಗಳಿನಿಂದ ಜೀತ: ಶೋಭಾ, ಕುಮಾರ್‌ ಈ ದಂಪತಿ ಹಾಗೂ ಇವರ ನಾಲ್ಕು ಮಂದಿ ಮಕ್ಕಳು ಜೀತದಿಂದ ಮುಕ್ತರಾಗಿದ್ದಾರೆ. ಹಾವೇರಿ ಜಿಲ್ಲೆಯ ಯಾತನಹಳ್ಳಿ ಗ್ರಾಮದವರಾಗಿದ್ದು, 9 ತಿಂಗಳ ಹಿಂದೆ ಇಟ್ಟಿಗೆ ತಯಾರಿಕೆ ಕಾರ್ಖಾನೆಯಲ್ಲಿ ಮಾಲೀಕರು ಜೀತಗಿಟ್ಟುಕೊಂಡಿದ್ದರು.

20 ಸಾವಿರ ನೀಡಿ ಜೀತಕ್ಕೆ ಪಡೆದುಕೊಂಡರು: ಪ್ರಾರಂಭದಲ್ಲಿ ರಾಮನಗರದ ಇಟ್ಟಿಗೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ ಕುಟುಂಬ ಅಲ್ಲಿ ಮುಂಗಾಡವಾಗಿ ಪಡೆದಿದ್ದ 20 ಸಾವಿರ ಹಣವನ್ನು ಮಾಲಿಕರಾದ ದೇವಮ್ಮ, ಗೋವಿಂದರಾಜು ಅವರು ಹಿಂದಿನ ಮಾಲೀಕರಿಗೆ ನೀಡಿ ಅಲ್ಲಿಂದ ಅಜ್ಜನಹಳ್ಳಿ ಬಳಿ ಇರುವ ಇಟ್ಟಿಗೆ ತಯಾರಿಕಾ ಕಾರ್ಖಾನೆಗೆ ಕರೆ ತಂದಿದ್ದರು ಎಂದು ಶಾಂತಿ ಜೀವನ ಜ್ಯೊತಿ ಸಂಸ್ಥೆ ತಿಳಿಸಿದೆ.

2 ವರ್ಷದಿಂದ ಊರಿನ ಮುಖ ನೋಡದ ಕುಟುಂಬ: ಈ ಕುಟುಂಬಸ್ಥರು ಕಳೆದ 2 ವರ್ಷದಿಂದ ತಮ್ಮ ಊರಾದ ಹಾವೇರಿ ಜಿಲ್ಲೆ ಯಾತನಹಳ್ಳಿ ಗ್ರಾಮಕ್ಕೆ ಹೋಗಲು ಸಾಧ್ಯವಾಗಿಲ್ಲ. ಈ ದಂಪತಿ ಪ್ರತಿದಿನ ಎಡಬಿಡದೆ 14 ಗಂಟೆಗಳ ಕಾಲ ದುಡಿಯುತ್ತಿದ್ದರು. ಪ್ರತಿ ದಿನ 1 ಸಾವಿರ ಇಟ್ಟಿಗೆ ತಯಾರಿಸುತ್ತಿದ್ದರು. ಜೊತೆಗೆ ಅವರ ನಾಲ್ಕು ಮಕ್ಕಳು ಸಹ ಇಟ್ಟಿಗೆ ಕಾರ್ಖಾನೆಯಲ್ಲಿ ಇಟ್ಟಿಗೆ ಒಣಗಿಸಿ ಸುಡುವುದು, ಜೋಡಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

Advertisement

20 ಸಾವಿರಕ್ಕೆ 51 ಸಾವಿರ ಬಡ್ಡಿ: ಮೂಲಸೌಕರ್ಯವಿಲ್ಲದ ಸಣ್ಣ ಕೊಠಡಿಯೊಂದರಲ್ಲಿ ರಾತ್ರಿ ಕಳೆಯುತ್ತಿದ್ದ ಕುಟುಂಬ ವಾರಕ್ಕೊಮ್ಮೆ ಇಂತಿಷ್ಟು ಎಂದು ಹಣ ಪಡೆದು ಧವಸ ಧಾನ್ಯ ತಂದು ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಧವಸ ಧಾನ್ಯ ಖರೀದಿಸಲು ದಂಪತಿ ಹೊರ ಹೋಗಬೇಕಾದರೆ, ಮಕ್ಕಳನ್ನು ಕಾರ್ಖಾನೆಯಲ್ಲಿಯೇ ಬಿಟ್ಟು ಹೋಗಬೇಕಿತ್ತು.

ದಂಪತಿ ಊರಿಗೆ ಹೋಗಿ ಬರುವುದಾಗಿ ಕೇಳಿದಾಗ, ನಾವು ಕೊಟ್ಟಿರುವ ಮುಂಗಡ ಹಣ ಹಾಗೂ ಬಡ್ಡಿ ಸೇರಿ 71 ಸಾವಿರ ರೂ. ಆಗಿದೆ. ಕೊಟ್ಟು ಹೋಗುವಂತೆ ಹೇಳಿದ್ದರು ಎನ್ನಲಾಗಿದೆ. ಈ ಸಂಬಂಧ ಜಿಲ್ಲಾಢಾಳಿತ ಜೀತಮುಕ್ತ ಪ್ರಮಾಣ ಪತ್ರ ವಿತರಿಸಲಿದ್ದು, 2016 ಜೀತ ಮುಕ್ತ ಕಾರ್ಮಿಕರ ಪುನರ್ವಸತಿ ಕೇಂದ್ರ 20 ಸಾವಿರ ರೂ. ಪ್ರಾರಂಭಿಕ ಪರಿಹಾರ ನೀಡಲಿದ್ದು, ಕಾರ್ಮಿಕರನ್ನು ಶೀಘ್ರದಲ್ಲೇ ಕುಟುಂಬದ ಸ್ವಂತ ಊರಾದ ಹಾವೇರಿ ಜಿಲ್ಲೆಯ ಯಾತನಹಳ್ಳಿ ಗ್ರಾಮಕ್ಕೆ ಕಳಿಸಿಕೊಡಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next