ಚನ್ನರಾಯಪಟ್ಟಣ: ತಾಲೂಕಿನಲ್ಲಿ ನಡೆಯುವ ಏಕೈಕ ರಾಸುಗಳ ಜಾತ್ರೆಗೆ ಪ್ರಸಕ್ತ ವರ್ಷ ಕೊರೊನಾ ಅಡ್ಡಿಪಡಿಸಿದ್ದು ತಾಲೂಕು ಆಡಳಿತ ಜಾತ್ರೆ ಮಾಡದಂತೆ ಆದೇಶ ಹೊರಡಿಸಿತ್ತು. ಆದರೂ, ರೈತರು ಬೂಕನಬೆಟ್ಟದ ತಪ್ಪಲಿಗೆ ರಾಸುಗಳನ್ನು ಕರೆತರುವ ಮೂಲಕ ರಾಸುಗಳ ಜಾತ್ರೆಗೆ ಮುಂದಾಗಿದ್ದಾರೆ. ವಿವಿಧ ಜಿಲ್ಲೆಯಿಂದ ಆಗಮನ: ವಿಷಯ ತಿಳಿದ ತಕ್ಷಣ ಕ್ಷೇತ್ರದ ಶಾಸಕ ಬಾಲಕೃಷ್ಣ ಸಭೆ ನಡೆಸಿ 13 ದಿನದ ಜಾತ್ರೆಯನ್ನು 6 ದಿನಕ್ಕೆ ಇಳಿಸಿದ್ದಾರೆ.
ಪ್ರಸಕ್ತ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ಮಾಡಬಾರದು ಎಂದುಹೇಳಲಾಗಿತ್ತು. ಆದರೂ, ತುಮಕೂರು ಜಿಲ್ಲೆಯ ತುರುವೇಕೆರೆ, ತಿಪಟೂರು, ಗುಬ್ಬಿ. ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ, ನಾಗಮಂಗಲ, ಪಾಂಡವಪುರ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಅರಸೀಕೆರೆ, ಹೊಳೆನರಸೀಪುರ ಹಾಸನ ತಾಲೂಕುಗಳಿಂದ ಸಾವಿರಾರು ರಾಸುಗಳನ್ನು ಕರೆತಂದು ಬೆಟ್ಟದ ತಪ್ಪಲಿನಲ್ಲಿ ಕಟ್ಟಿದ್ದಾರೆ. ಈಗ, ಏಕಾಏಕಿ ರಾಸುಗಳನ್ನು ತಂದು ಕಟ್ಟಿರುವುದರಿಂದ ರಾಸುಗಳ ಜಾಗ ಕಾಲಿ ಮಾಡಿಸಿದರೆ ರೈತರರು ವಿರೋಧ ಮಾಡುತ್ತಾರೆ ಎಂಬ ಉದ್ದೇಶದಿಂದ ಜ.12ರ ವರೆಗೆ ಜಾತ್ರೆಗೆ ಅವಕಾಶ ನೀಡಲಾಗಿದೆ.
ಆರೋಗ್ಯಕ್ಕೆ ಆದ್ಯತೆ: ಈಗಾಗಲೇ ಶಾಸಕರು ಪಟ್ಟಣ ಸಮೀಪದ ಕೆಎಂಎಫ್ ಹೈಟೆಕ್ ಹಾಲಿನ ಉತ್ಪನ್ನ ಘಟಕದಿಂದ ನಿತ್ಯವೂ 2ಟ್ಯಾಂಕರ್ ಮೂಲಕ ನೀರು ಸರಬರಾಜು ಆಗಲಿದೆ. ಇದರೊಂದಿಗೆ ಪಶು ಪಾಲನಾ ಇಲಾಖೆಯಿಂದ ತಾತ್ಕಾಲಿಕ ಟೆಂಟ್ ಆಸ್ಪತ್ರೆ ನಿರ್ಮಾಣವೂ ಆಗಲಿದ್ದು ರಾಸುಗಳ ಆರೋಗ್ಯ ನೋಡಿಕೊಳ್ಳಲಿದ್ದಾರೆ.ಲಕ್ಷಾಂತರ ಬೆಲೆ ಬಾಳುವ ರಾಸು: ರಾಸುಗಳನ್ನು ಖರೀದಿಸಲು ಹಾಸನ, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಮಡಿಕೇರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರೈತರು ಜಾನುವಾರು ಖರೀದಿಸಲು ಆಗಮಿಸುತ್ತಾರೆ. ಸುಮಾರು 25 ಸಾವಿರದಿಂದ 6 ಲಕ್ಷ ರೂ.ವರೆಗೆ ಬೆಲೆಬಾಳುವ ರಾಸುಗಳು ಜಾತ್ರೆಯಲ್ಲಿವೆ.
ದೇಶಿ ತಳಿಗಳು: ಕೃಷಿ ಕೆಲಸಕ್ಕೆ ಯೋಗ್ಯವಾದ ಹಳ್ಳಿಕಾರ್ ತಿಳಿ, ನಾಟಿ ಹಸುಗಳು, ಗಿಡ್ಡರಾಸುಗಳು, ಗೀರ್, ಅಮೃತ್ ಮಹಲ್ ಸೇರಿದಂತೆ ದೇಶಿ ತಳಿ ರಾಸುಗಳ ಮಾರಾಟ ನಡೆಯುತ್ತಿದೆ. ದೇಶೀಯ ರಾಸುಗಳ ಮಾರಾಟ, ಪ್ರದರ್ಶನ ಮಾಡಲಾಗುತ್ತದೆ. ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ಮಹಾರಾಷ್ಟ್ರ ಗಡಿಭಾಗದ ಜಿಲ್ಲೆ ರೈತರು ರಾಸು ಖರೀದಿಸಲು ಆಗಮಿಸುತ್ತಾರೆ. ಸ್ಥಳೀಯ ಕೃಷಿಕರು ಕುಟುಂಬ ಸಮೇತರಾಗಿ ಆಗಮಿಸಿ ರಾಸುಗಳನ್ನು ಕಣ್ತುಂಬಿಕೊಳ್ಳುತ್ತಾರೆ.
ಇದನ್ನೂ ಓದಿ:ವಿಮಾನ ನಿಲ್ದಾಣ ಕಾಮಗಾರಿಗೆ ಸಿಎಂ ಚಾಲನೆ : ಯೋಜನೆಯ ಮೊದಲ ಹಂತದ ಕಾಮಗಾರಿಗೆ ಟೆಂಡರ್
ಹಲವು ಕಾರ್ಯಕ್ರಮಗಳು ಸ್ಥಗಿತ
ಜಾತ್ರಾ ಮಹೋತ್ಸದ ದಿನದಿಂದ 2 ದಿನ ಕೃಷಿ ಮೇಳ ನಡೆಯುತ್ತಿತ್ತು. ಆದರೆ ಈ ವರ್ಷ ಕೃಷಿ ಮೇಳ ನಿಲ್ಲಿಸಲಾಗಿದೆ. ಗ್ರಾಮೀಣ ಕ್ರೀಡೆಯನ್ನು ಪ್ರತಿ ವರ್ಷವೂ ನಡೆಸುತ್ತಿದ್ದು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಮ್ಯಾರಥಾನ್ ಓಟ, ಮ್ಯೂಜಿಕಲ್ ಚೇರ್, ಪುರುಷರಿಗಾಗಿ ಹಗ್ಗ ಜಗ್ಗಾಟ, ಸ್ಲೋ ಸೈಕಲ್ ರೈಡ್, ಕಬಡ್ಡಿ, ಲಗೋರಿ, ಮ್ಯಾರಥಾನ್ ಓಟವನ್ನು ಏರ್ಪಡಿಸುತ್ತಿದ್ದರು. ಇದಕ್ಕೂ ಕಡಿವಾಣ ಹಾಕಿರುವುದಲ್ಲದೆ ರಂಗನಾಥಸ್ವಾಮಿ ರಥೋತ್ಸವವನ್ನು ಸ್ಥಗಿತಮಾಡಲಾಗಿದೆ.
ಶಾಮಸುಂದರ್ ಕೆ.ಅಣ್ಣೇನಹಳ್ಳಿ