Advertisement
ಸಹಜವಾಗಿ 3 ವರ್ಷಗಳಗೊಮ್ಮೆ ನಡೆಯುವ ಸಿಪಿಎಂ ಸಮ್ಮೇಳನಗಳಲ್ಲಿ ಪಕ್ಷದ ಸಂಘಟನೆ, ಹೋರಾಟ, ಭವಿಷ್ಯದ ಸವಾಲುಗಳ ಜೊತೆಗೆ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಸನ್ನಿವೇಶಗಳ ಬಗ್ಗೆ ಇತರೆ ಪಕ್ಷಗಳಗಿಂತ ಭಿನ್ನವಾಗಿ ಗಂಭೀರ ಚರ್ಚೆ ನಡೆಸಿ ಹಲವು ತೀರ್ಮಾನ ಕೈಗೊಳ್ಳುವ ಸಂಪ್ರದಾಯ ಇದೆ. ಜೊತೆಗೆ ಸಮ್ಮೇಳನದ ಕಡೆ ದಿನ ನೂತನ ಸಮಿತಿ ಆಯ್ಕೆ ಕೂಡ ಪಕ್ಷದ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಆದರೆ, ಚಿಕ್ಕಬಳ್ಳಾಪುರ ಸಿಪಿಎಂ ಪಕ್ಷದ ನಾಯಕರ ಮಧ್ಯೆ ಅದರಲ್ಲೂ ಸಿಪಿಎಂ ಜಿಲ್ಲಾ ಸಮಿತಿಯಲ್ಲಿ ಉಲ್ಬಣಿಸಿದ್ದ ಬಣ ರಾಜಕೀಯ ತಾರಕ್ಕೇರಿ ಶನಿವಾರ ಪಕ್ಷದ ನೂತನ ಜಿಲ್ಲಾ ಸಮಿತಿ ಆಯ್ಕೆಗೆ ಒಮ್ಮತ ಮೂಡದೇ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಿರುವುದು ಕುತೂಹಲ ಕೆರಳಿಸಿದೆ.
Related Articles
Advertisement
ಬಾಗೇಪಲ್ಲಿಯಲ್ಲಿ ಕೆಂಬಾವುಟ ನೆರಳು: ಜಿಲ್ಲೆಯ ಬಾಗೇಪಲ್ಲಿ ಇಂದಿಗೂ ಕೆಂಬಾವುಟದ ನೆರಳು ಉಳಿದುಕೊಂಡಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿರುವ ಜಿ.ವಿ.ಶ್ರೀರಾಮರೆಡ್ಡಿ ಸೇರಿದಂತೆ ಹಲವು ಮಂದಿ ನಾಯಕರು ಸಿಪಿಎಂನ ಕೆಂಬಾವುಟದಡಿ ವಿಧಾನಸಭೆಗೆ ಆರಿಸಿ ಹೋಗಿರುವುದು ಈಗ ಇತಿಹಾಸ. ಹಣ ಬಲದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಸಿಪಿಎಂ ಪ್ರತಿ ಚುನಾವಣೆಯಲೂ ಪ್ರಬಲ ಪೈಪೋಟಿ ನೀಡಿ ಕಳೆದ ವಿಧಾನಸಭಾ ಚುನಾಣೆಯಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಕೂದಳೆಯ ಅಂತದಲ್ಲಿ ಪರಾಭಾವಗೊಂಡಿದ್ದರು. ಆದರೆ, ಇತ್ತೀಚೆಗೆ ಪಕ್ಷದಲ್ಲಿ ಕಾಣಿಸಿಕೊಂಡಿರುವ ಗೊಂದಲ, ನಾಯಕತ್ವದ ವಿರುದ್ಧ ಕೇಳಿ ಬರುತ್ತಿರುವ ಅಪಸ್ವರ, ಅಸಮಾಧಾನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಲಿದೆಯೆಂದು ಪಕ್ಷ ಸಾಮಾನ್ಯ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಸಿಪಿಎಂ ಪಕ್ಷದಲ್ಲಿ ಇತ್ತೀಚೆಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಾಗೇಪಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹಾಗೂ ಸಿಪಿಎಂ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ಎಂ.ಪಿ. ಮುನಿ ವೆಂಕಟಪ್ಪ ನಡುವೆ ವೈಮನಸ್ಸು ಉಂಟಾಗಿ ಹಲವು ವರ್ಷಗಳಿಂದ ಬಣ ರಾಜಕೀಯ ಶುರುವಾಗಿದ್ದು, ಅದು ಇದೀಗ ವಿಕೋಪಕ್ಕೆ ತಿರುಗಿ 3 ವರ್ಷಗಳಗೊಮ್ಮೆ ನಡೆಯುವ ಪಕ್ಷದ ಸಮ್ಮೇಳನದಲ್ಲಿ ನೂತನ ಜಿಲ್ಲಾ ಸಮಿತಿ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡದೇ ಚುನಾವಣೆ ನಡೆದಿರುವುದು ಪಕ್ಷದ ಆಂತರಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಯರಾಮರೆಡ್ಡಿ ಸಿಪಿಎಂ ನೂತನ ಜಿಲ್ಲಾ ಕಾರ್ಯದರ್ಶಿ
ಶನಿವಾರ ಕೊನೆಗೊಂಡ ಸಿಪಿಎಂ ಪಕ್ಷದ ಜಿಲ್ಲಾ ಸಮ್ಮೇಳನದಲ್ಲಿ ಪಕ್ಷದ ರಾಜ್ಯ ನಾಯಕರ ಸಮ್ಮುಖದಲ್ಲಿ ನೂತನ ಜಿಲ್ಲಾ ಸಮಿತಿ ಚುನಾವಣೆ ಮೂಲಕ ಆರಿಸಿದ ನಂತರ ಒಟ್ಟು 21 ಸದಸ್ಯರು ಸೇರಿ ಗುಡಿಬಂಡೆ ತಾಲೂಕಿನ ಜಯರಾಮರೆಡ್ಡಿ ಪಕ್ಷ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಾರೆ. ಮತ್ತೆ ಜಿಲ್ಲಾ ಕಾರ್ಯದರ್ಶಿಯಾಗಿ ಪುನರಾಯ್ಕೆ ಆಗಬೇಕೆಂದು ಪ್ರಯತ್ನಿಸಿದ್ದ ಎಂ.ಪಿ.ಮುನಿವೆಂಕಟಪ್ಪ ಹಾಗೂ ಅವರ ಬಣಕ್ಕೆ ಸೋಲು ಕಂಡಿದೆ. ವಿಶೇಷ ಅಂದರೆ ಹಲವು ವರ್ಷಗಳಿಂದ ಪಕ್ಷದಲ್ಲಿ ದುಡಿದುಕೊಂಡ ಬಂದಿರುವ ಚಿಂತಾಮಣಿ ಸಿ.ಗೋಪಿನಾಥ್, ಗೌರಿಬಿದನೂರಿನ ಸಿದ್ದಗಂಗಪ್ಪ, ಜಿಲ್ಲಾ ಕಾರ್ಯದರ್ಶಿಯಾಗಿದ್ದ ಎಂ.ಪಿ.ಮುನಿವೆಂಕಟಪ್ಪಗೆ ಜಿಲ್ಲಾ ಸಮಿತಿಯಲ್ಲಿ ಅವಕಾಶ ಕೈ ತಪ್ಪಿರುವುದು ಪಕ್ಷದ ಒಳ ಜಗಳಕ್ಕೆ ಹಿಡಿದ ಕನ್ನಡಿಯಾಗಿದೆ.