Advertisement

ಸುಂಕ ಕಟ್ಟಿದ್ರೂ ಸೌಲಭ್ಯ ಒದಗಿಸಿಲ್ಲ

07:31 AM Mar 09, 2019 | |

ಅರಸೀಕೆರೆ: ನಗರದಲ್ಲಿ ನಡೆಯುವ ಶುಕ್ರವಾರ ಸಂತೆ ವ್ಯಾಪಾರಿಗಳಿಗೆ, ಗ್ರಾಹಕರಿಗೆ ಕನಿಷ್ಠ ಮೂಲ ಸೌಕರ್ಯವನ್ನು ನಗರಸಭೆ ಒದಗಿಸಿಲ್ಲ. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಹತ್ತಾರು ಹಳ್ಳಿಗಳಿಂದ ರೈತರು, ವ್ಯಾಪಾರಿಗಳು, ಸೊಪ್ಪು, ತರಕಾರಿ, ಹಣ್ಣು ಹಂಪಲು, ಮಡಿಕೆ, ಬಿದಿರಿನ ಮರ, ಕೃಷಿಕರಿಗೆ ಬೇಕಾದ ಕುಕ್ಕೆ, ಕುಡುಗೋಲು, ಎತ್ತಿಗೆ ಮೂಗುದಾರ ಹೀಗೆ ಪ್ರತಿಯೊಂದು ವಸ್ತುಗಳನ್ನು ಸಂತೆಗೆ ತಂದು ಮಾರಾಟ ಮಾಡುತ್ತಾರೆ.

Advertisement

ಇಂತಹ ಸಂತೆ ವ್ಯಾಪಾರಿಗಳಿಂದ ಸುಂಕ ವಸೂಲಿಗೆ ಆದ್ಯತೆ ನೀಡುವ ನಗರಸಭೆ ಆಡಳಿತ, ಕನಿಷ್ಠ ಮೂಲ ಸೌಲಭ್ಯ ಒದಗಿಸಲು ಮುಂದಾಗುತ್ತಿಲ್ಲ. ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲದೆ, ವ್ಯಾಪಾರಸ್ಥರು ಬಯಲನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ವ್ಯಾಪಾರಸ್ಥರು ಬೆಳಗ್ಗಿನಿಂದ ಸಂಜೆವರೆಗೂ ಮಳೆ, ಬಿಸಿಲಿನಿಂದ ತರಕಾರಿ, ಹಣ್ಣು ಹಂಪಲು, ಇತರೆ ಮಾರಾಟದ ವಸ್ತುಗಳನ್ನು ರಕ್ಷಿಸಿಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಬಿಸಿಲಿನಲ್ಲಿ ಒಣಗಿಕೊಂಡು ವ್ಯಾಪಾರ ಮಾಡಬೇಕಿದೆ.

ಮಳೆ ಬಂದರೆ ಸಾಕು ರೈತರು ಕಷ್ಟಪಟ್ಟು ಬೆಳೆದು ತಂದಿದ್ದ ತರಕಾರಿ, ದವಸ ಧಾನ್ಯ ಚರಂಡಿ ಪಾಲಾಗುತ್ತದೆ. ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಸಂತೆ ಸುಂಕ ವಸೂಲಿ ಮಾಡಲು ಹೆಚ್ಚಿನ ಆಸಕ್ತಿ ವಹಿಸುತ್ತಿರುವ ನಗರಸಭೆ ಜನಪ್ರತಿನಿಧಿಗಳು ಹಾಗೂ ಅ ಧಿಕಾರಿಗಳು ಕಣ್ಣಮುಚ್ಚಿ ಕುಳಿತಿರುವುದು ವಿಪರ್ಯಾಸ.

ಪಾರ್ಕಿಂಗ್‌ ವ್ಯವಸ್ಥೆ ಇಲ್ಲ: ವ್ಯಾಪಾರಸ್ಥರು, ರೈತರು, ಸಂತೆಗೆ ಮಾರಾಟದ ವಸ್ತುಗಳನ್ನು ತರುವ ವಾಹನಗಳನ್ನು ನಿಲ್ಲಿಸಲು ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಮೂಲೆಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ವ್ಯಾಪಾರದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ. ಅಲ್ಲದೇ, ಸಂತೆ ಪ್ರದೇಶಕ್ಕೆ ಹೊಂದಿಕೊಂಡಂತೆ ಸಾಯಿನಾಥ ರಸ್ತೆ, ಶಾನುಭೋಗರ ರಸ್ತೆ ಹಾಗೂ ಪೇಟೆ ಬೀದಿ ಹಾದು ಹೋಗಿದ್ದು, ಈ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಸಂತೆ ನಡೆಯುವ ದಿನದಂದು ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿದೆ. 

ಶುಕ್ರವಾರದ ಸಂತೆಯಲ್ಲಿ ತಾಜಾಸೊಪ್ಪು, ತರಕಾರಿ, ಹಣ್ಣು, ಹಂಪಲು, ಅಗತ್ಯ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಸಂತೆಯಲ್ಲಿ ಖರೀದಿಸುವುದರಿಂದ ವಾರ ಪೂರ್ತಿ ಇತರೆಡೆ ವಸ್ತು ಖರೀದಿಸುವ ಅಗತ್ಯವಿರುವುದಿಲ್ಲ. ಹಾಗಾಗಿ ಪ್ರತಿವಾರ ತಪ್ಪದೆ ಸಂತೆ ವ್ಯಾಪಾರದಲ್ಲಿ ಪಾಲ್ಗೊಳ್ಳುತ್ತೇನೆ. ಆದರೆ, ಇಷ್ಟು ದೊಡ್ಡ ಮಟ್ಟದಲ್ಲಿ ವ್ಯಾಪಾರ ನಡೆಯುವ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಮೂಲಭೂತ ಸೌಕರ್ಯ ಇಲ್ಲದಿರುವುದು ವಿಷಾದದ ಸಂಗತಿ.
-ಮಲ್ಲಿಕಾರ್ಜುನ್‌, ಸಂತೆ ವ್ಯಾಪಾರಿ.

Advertisement

ಸಂತೆ ಮೈದಾನದಲ್ಲಿ ಈಗಾಗಲೇ ತರಕಾರಿ ಹಣ್ಣು ಹಂಪಲು ಸಗಟು ವ್ಯಾಪಾರಕ್ಕೆ ಕಟ್ಟಡ ನಿರ್ಮಿಸಿಕೊಡಲಾಗಿದೆ. ಅದೇ ರೀತಿ ಚಿಲ್ಲರೆ ವ್ಯಾಪಾರಸ್ಥರಿಗೆ ನಗರಸಭೆ ಆಡಳಿತ ಕಟ್ಟೆಗಳನ್ನು ನಿರ್ಮಿಸಿಕೊಟ್ಟಿದೆ. ಶೌಚಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಒಳಚರಂಡಿ ಸಂಪರ್ಕ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ಇತರೆ ಮೂಲ ಸೌಲಭ್ಯ ಕಲ್ಪಿಸಲಾಗುವುದು.
-ಪರಮೇಶ್ವರಪ್ಪ, ನಗರಸಭೆ ಪೌರಾಯುಕ್ತ.

ಅರಸೀಕೆರೆ ಸಂತೆ ಮೈದಾನದಲ್ಲಿ ಈಗಾಗಲೇ ಸಗಟು ವ್ಯಾಪಾರಕ್ಕೆ ಕಟ್ಟಡ ನಿರ್ಮಿಸಿ ಅನುಕೂಲ ಕಲ್ಪಿಸಲಾಗಿದೆ. 3.5 ಕೋಟಿ ರೂ. ವೆಚ್ಚದಲ್ಲಿ ವ್ಯಾಪಾರ ವ್ಯವಹಾರ ಮಾಡಲು ಅನುಕೂಲವ ರೀತಿಯಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು.
-ಕೆ.ಎಂ.ಶಿವಲಿಂಗೇಗೌಡ, ಶಾಸಕ.

Advertisement

Udayavani is now on Telegram. Click here to join our channel and stay updated with the latest news.

Next