ದೇವದುರ್ಗ: ಪಟ್ಟಣದ ಕಪಿಲ ಸಿದ್ದರಾಮೇಶ್ವರ ಜಾತ್ರೆ ಪ್ರಯುಕ್ತ ಜಾನುವಾರುಗಳ ಜಾತ್ರೆಗೆ ಸೌಲಭ್ಯ ಮರೀಚಿಕೆಯಾಗಿದೆ. ಕುಡಿಯುವ ನೀರು, ವಿದ್ಯುತ್ ಸೇರಿ ಇತರೆ ಸೌಲಭ್ಯಗಳ ಕೊರತೆಯಿಂದ ಜಾತ್ರೆಗೆ ಆಗಮಿಸಿರುವ ನೂರಾರು ರೈತರು ಚಳಿಯಲ್ಲಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮುದ್ದೇಬಿಹಾಳ, ಸುರುಪುರ, ಕೊಡೇಕಲ್, ಶಹಾಪುರ, ಕೋಳ್ಳರು ಸೇರಿ ದೇವದುರ್ಗ ತಾಲೂಕಿನ ಸುತ್ತಲೂ ಗ್ರಾಮಗಳಿಂದ ಜಾನುವಾರುಗಳು ಮಾರಾಟ ಮಾಡಲು ಆಗಮಿಸಿದ ರೈತರಿಗೆ ಸೌಲಭ್ಯ ಕಲ್ಪಿಸಬೇಕಾದ ಇಲ್ಲಿಯ ಪುರಸಭೆ ಆಡಳಿತ ವರ್ಗ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪ ಕೇಳಿ ಬಂದಿದೆ. ಕಪಿಲ ಸಿದ್ದರಾಮೇಶ್ವರ ಜಾತ್ರೆ ಪ್ರಯುಕ್ತ ಜಾನುವಾರುಗಳ ವಹಿವಾಟು ಪಟ್ಟಣದ ಸಾರ್ವಜನಿಕ ಕ್ಲಬ್, ಪೊಲೀಸ್ ಠಾಣೆ ಎದುರು, ದುರುಗಮ್ಮ ದೇವಸ್ಥಾನ, ಜಾಮೀಯ ಮಸೀದಿಗೆ ಹೋಗುವ ರಸ್ತೆ ಸೇರಿ ಪ್ರಮುಖ ಬೀದಿಯಲ್ಲಿ ವಹಿವಾಟು ನಡೆಯುತ್ತದೆ.
ಎಲ್ಲೆಂದರಲ್ಲಿ ಜಾನುವಾರುಗಳ ಜಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಸತತ ಬರ ಆವರಿಸಿದ್ದರಿಂದ ರೈತರು ಚಿಂತೆಯಲ್ಲಿದ್ದಾರೆ. ಇಂಥ ಸಂಕಷ್ಟದ ಸ್ಥಿತಿಯಲ್ಲಿ ಜಾನುವಾರಗಳನ್ನು ಖರೀದಿಸಲು ರೈತರು ಬರುತ್ತಿಲ್ಲ. ಹೀಗಾಗಿ ಮಾರಾಟಕ್ಕೆ ಬಂದಿರುವ ಜಾನುವಾರು ಮಾಲೀಕರಿಗೆ ಚಿಂತೆ ಎದುರಾಗಿದೆ. ಎರಡು ದಿನಗಳಿಂದ ನಡೆಯುತ್ತಿರುವ ಜಾನುವಾರುಗಳ ಜಾತ್ರೆ ಮಂದಗತಿಯಲ್ಲಿ ಸಾಗಿದೆ.
ಮೇವಿಗೆ ಪರದಾಟ: ತಾಲೂಕಿನಲ್ಲಿ ಸತತ ಬರದ ಛಾಯೆ ಎದುರಾದ ಹಿನ್ನೆಲೆಯಲ್ಲಿ ಬೆಳೆಗಳು ಕೈಗೆ ಬಂದಿಲ್ಲ. ಹೀಗಾಗಿ ಮೇವಿಗಾಗಿ ರೈತರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಮುದ್ದೇಬಿಹಾಳ, ಶಹಾಪುರ, ಸುರುಪುರ ಸೇರಿ ಇತರೆ ತಾಲೂಕಿನಿಂದ ಆಗಮಿಸಿದ ರೈತರು ಕೈಯಲ್ಲಿ ಹಣ ಹಿಡಿದುಕೊಂಡು ಅಲೆದರೂ ಮೇವು ಸಿಗದೇ ಅನೇಕ ತೊಂದರೆ ಪಡುವಂತಾಗಿದೆ.
ಎಲ್ಲೆಂದರಲ್ಲಿ ಊಟ: ಪಟ್ಟಣದ ಸಾರ್ವಜನಿಕ ಕ್ಲಬ್, ಪೊಲೀಸ್ ಠಾಣೆ, ನ್ಯಾಯಾಧೀಶರ ಮನೆ ಎದುರು ನಡೆಯುತ್ತಿರುವ ಜಾನುವಾರಗಳ ಜಾತ್ರೆಯಲ್ಲಿ ಮಾರಾಟ ಮಾಡಲು ಆಗಮಿಸಿದ ರೈತರು ಊಟ ಮಾಡಲು ಸೂಕ್ತ ಸ್ಥಳದ ಅಭಾವದ ಹಿನ್ನೆಲೆ ರೈತರು ಎಲ್ಲೆಂದರಲ್ಲಿ ಕುಳಿತು ಊಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಜಾನುವಾರುಗಳ ಜಾತ್ರೆಗೆ ಆಗಮಿಸುವ ರೈತರಿಗೆ ಪುರಸಭೆ ಆಡಳಿತ ವರ್ಗ ಅನುಕೂಲ ಕಲ್ಪಿಸಲು ಹಿಂದೇಟು ಹಾಕಿದ್ದರಿಂದ ಅವ್ಯವಸ್ಥೆ ಆಗರ ಮಧ್ಯೆ ಊಟ ಮಾಡಬೇಕಾಗಿದೆ ಎಂದು ರೈತ ಹನುಮಂತ ಆಗ್ರಹಿಸಿದರು
ಜಾನುವಾರಗಳ ಜಾತ್ರೆಗೆ ಬಂದ ರೈತರಿಗೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಸಂಬಂಧಿಸಿದ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇನೆ.
ಫೇರೋಜ್ ಖಾನ್, ಪುರಸಭೆ ಮುಖ್ಯಾಧಿಕಾರಿ
ನಾಗರಾಜ ತೇಲ್ಕರ