Advertisement

ದಶಕದಲ್ಲಿ ಕ್ರಿಕೆಟ್‌ನ ಚಹರೆಯೇ ಬದಲಾಯ್ತು

11:29 AM Jan 05, 2020 | Team Udayavani |

ದಶಕವೊಂದು ಉರುಳಿಯೇ ಹೋಗಿದೆ. ಈ ಘಟ್ಟದಲ್ಲಿ ನಡೆದಿದ್ದೆಲ್ಲ ಕಾಲಗರ್ಭದಲ್ಲಿ ಸೇರಿಕೊಂಡಿದೆ. ಇನ್ನೆಂದೂ ಹಿಂತಿರುಗಿ ಹೋಗಿ ಆ ಘಟನೆಗಳಿಗೆ ಮುಖಾಮುಖೀಯಾಗುವುದು ಸಾಧ್ಯವೇ ಇಲ್ಲದ ಮಾತು. ನಮಗಿಷ್ಟವಿರಲೀ, ಬಿಡಲೀ ಆಗಿದ್ದನ್ನು ಒಪ್ಪಿಕೊಳ್ಳುವುದು ಅನಿವಾರ್ಯ. ಹಿಂದಾಗಿರುವ ಒಳಿತನ್ನು ನೆನೆದು ಖುಷಿಪಡಬಹುದು, ತಪ್ಪುಗಳನ್ನು ನೆನೆದು ಪಶ್ಚಾತ್ತಾಪಪಡಬಹುದು. ಭವಿಷ್ಯದಲ್ಲಿ ಹಾಗಾದಂತೆ ಎಚ್ಚರವಹಿಸಬಹುದು. ನಿರಂತರವಾಗಿರುವುದೊಂದೇ ಬದಲಾವಣೆ ಎನ್ನುವುದು ಭಗವದ್ಗೀತೆಯ ಸಾರಾಂಶ. ಅದನ್ನೇ ಬೌದ್ಧತತ್ವಜ್ಞಾನವೂ ಹೇಳುತ್ತದೆ ಎಂದು ತಿಳಿದವರು ಹೇಳುತ್ತಾರೆ.

Advertisement

ಜಗತ್ತಿನ ಎಲ್ಲ ವಿಷಯಗಳಲ್ಲಿ ಜರುಗುವಂತೆ, ವಿಶ್ವ ಕ್ರಿಕೆಟ್‌ನಲ್ಲೂ ಹಲವು ಮಹತ್ವಪೂರ್ಣ ಬದಲಾವಣೆಗಳು ಸಂಭವಿಸಿವೆ. ಕ್ರಿಕೆಟ್‌ನ ಚಹರೆಯನ್ನೇ ಇವು ಬದಲಿಸುವಂತಿವೆ. ಕಾಲಕಾಲಕ್ಕೆ ಬದಲಾವಣೆ ಹೊಂದುತ್ತಲೇ ಇರುವ ಕ್ರಿಕೆಟ್‌, ಹೀಗೇ ಮುಂದುವರಿದರೆ, ಭವಿಷ್ಯದಲ್ಲಿ ಸಂಪೂರ್ಣ ಹೊಸರೂಪ ಪಡೆದು, ದಿಢೀರನೆ ಮುಖಾಮುಖೀಯಾಗುವ ಹಳಬರಿಗೆ ದಿಗ್ಬಮೆ ಹುಟ್ಟಿಸಬಹುದು. ಹೀಗೆ ವೇಗವಾಗಿ ಬದಲಾಗುತ್ತಿರುವ ಕ್ರಿಕೆಟ್‌, ಈ ದಶಕದಲ್ಲಿ ಕಂಡ ಪ್ರಮುಖ ಬದಲಾವಣೆಗಳು ಇಲ್ಲಿವೆ.

2015ರಿಂದ ಹಗಲುರಾತ್ರಿ ಟೆಸ್ಟ್‌: ಕ್ರಿಕೆಟ್‌ನ ಮೂಲಮಾದರಿಯಾದ ಟೆಸ್ಟ್‌ ಈಗ ತನ್ನ ಕುತೂಹಲವನ್ನು ಕಳೆದುಕೊಂಡಿದೆ. ಅದನ್ನು ನೋಡಲು ಜನರು ಮೈದಾನಕ್ಕೆ ಬರುವುದೇ ನಿಂತುಹೋಗಿದೆ. ಈ ಸ್ಥಿತಿಯನ್ನು ಸರಿಪಡಿಸಲು ಹಲವುರಾಷ್ಟ್ರಗಳು ಹಲವಾರು ಉಪಾಯಗಳನ್ನು ಯೋಜಿಸಿವೆ. ಅದರಲ್ಲಿ ಅತಿಪ್ರಮುಖವಾಗಿರುವುದು ಹಗಲುರಾತ್ರಿ ಟೆಸ್ಟ್‌. 2015, ನ.27ರಂದು ಅಡಿಲೇಡ್‌ನ‌ಲ್ಲಿ ಆಸ್ಟ್ರೇಲಿಯ ಈ ಪ್ರಯೋಗ ಮಾಡಿಯೇ ಬಿಟ್ಟಿತು. ನ್ಯೂಜಿಲೆಂಡ್‌-ಆಸ್ಟ್ರೇಲಿಯ ನಡುವೆ ಐತಿಹಾಸಿಕ ಪಂದ್ಯ ನಡೆದೇ ಹೋಯಿತು. ಈ ಪಂದ್ಯದಲ್ಲಿ ಗುಲಾಬಿ ಚೆಂಡನ್ನು ಬಳಸಲಾಗುತ್ತಿದೆ. ಕೆಂಪುಚೆಂಡಿನ ಬದಲಿಗೆ ರಾತ್ರಿ ಬೆಳಕಿಗೆ ಹೊಂದುವ ಗುಲಾಬಿ ಚೆಂಡನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬೆಳವಣಿಗೆಯಾದ ನಂತರ ಎಲ್ಲ ರಾಷ್ಟ್ರಗಳು ವರ್ಷಕ್ಕೊಮ್ಮೆಯಾದರೂ ಹಗಲುರಾತ್ರಿ ಪಂದ್ಯ ನಡೆಸುತ್ತಿವೆ. ಇವುಗಳು ಟೆಸ್ಟ್‌ ಕ್ರಿಕೆಟ್‌ ಉಳಿಸುತ್ತವೆಯಾ ಎಂದು ಕಾದುನೋಡಬೇಕು.

ಪಂದ್ಯಾರಂಭದಲ್ಲಿ ಎರಡು ಹೊಸ ಚೆಂಡು: 2011ಕ್ಕೂ ಮುಂಚೆ ಪಂದ್ಯಾರಂಭವಾಗುವಾಗ, ಒಂದು ಹೊಸ ಚೆಂಡಿನ ಮೂಲಕ ಬೌಲಿಂಗ್‌ ಆರಂಭಿಸಲಾಗುತ್ತಿತ್ತು. 2011ರ ನಂತರ ಎರಡೂ ತುದಿಯಿಂದ ಬೌಲಿಂಗ್‌ ಮಾಡುವ ಬೌಲರ್‌ಗಳಿಗೆ ಪ್ರತ್ಯೇಕ ಚೆಂಡನ್ನೇ ನೀಡಲಾಯಿತು. ಇದು ಬೌಲರ್‌ಗಳಿಗೆ ಅನುಕೂಲಕರ ಎಂದು ವಿಶ್ಲೇಷಿಸಲಾಗಿತ್ತಾದರೂ, ಅದು ಹಾಗೆ ಆಗದೇ ಬ್ಯಾಟ್ಸ್‌ಮನ್‌ಗಳಿಗೇ ಅನುಕೂಲಕರವಾಗಿ, ಸತತವಾಗಿ ಬೌಲರ್‌ಗಳನ್ನು ಚಚ್ಚಲು ಪೂರಕವಾಗಿ ಬದಲಾಯಿತು.

ರೋಚಕತೆ ಹೆಚ್ಚಿಸಿದ ಫ್ರೀಹಿಟ್‌: ಫ್ರೀಹಿಟ್‌ ಎನ್ನುವುದು ಕ್ರಿಕೆಟ್‌ನಲ್ಲಿ ಅತ್ಯಂತ ಕ್ರಾಂತಿಕಾರಕವಾದ ಬದಲಾವಣೆ. ಇದರಿಂದ ಸೀಮಿತ ಓವರ್‌ಗಳ ರೋಮಾಂಚಕತೆ ಇನ್ನಷ್ಟು ಹೆಚ್ಚಾಗಿದೆ. 2007ರಿಂದ ಇದು ಜಾರಿಯಾಯಿತು. ಆರಂಭದಲ್ಲಿ ಟಿ20ಯಲ್ಲಿ ಮಾತ್ರವಿದ್ದದ್ದು, ನಂತರ ಏಕದಿನಕ್ಕೂ ಹಬ್ಬಿಕೊಂಡಿತು. ಪ್ರಾರಂಭದಲ್ಲಿ ಬೌಲರ್‌ಗಳು ಕ್ರೀಸ್‌ನಿಂದ ಹೊರಗೆ ಕಾಲಿಟ್ಟು ಚೆಂಡೆಸೆದಾಗ ಮಾತ್ರ ಫ್ರೀಹಿಟ್‌ ನೀಡಲಾಗುತ್ತಿತ್ತು. ಈಗ ಎಲ್ಲ ರೀತಿಯ ನೋಬಾಲ್‌ಗ‌ಳಿಗೂ ಫ್ರೀಹಿಟ್‌ ನೀಡಲಾಗುತ್ತದೆ. ಇಷ್ಟು ಹೇಳಿದ ಮೇಲೆ ಫ್ರೀ ಹಿಟ್‌ ಅಂದರೇನೆಂದು ಪ್ರಶ್ನೆ ಬರುವುದು ಸಹಜ.

Advertisement

ಹಿಂದೆ ಬೌಲರ್‌ರೊಬ್ಬ ಮುಂಗಾಲನ್ನು ಕ್ರೀಸ್‌ನಿಂದ ಹೊರಗಿಟ್ಟೋ, ಚೆಂಡನ್ನು ಬ್ಯಾಟ್ಸ್‌ಮನ್‌ ಭುಜಕ್ಕಿಂತ ಹೆಚ್ಚು ಬೌನ್ಸ್‌ ಆಗುವಂತೆ ಎಸೆದೋ, ಸೊಂಟಕ್ಕಿಂತ ಮೇಲೆ ಬರುವಂತೆ ಫ‌ುಲ್‌ಟಾಸ್‌ ಎಸೆದೋ ನೋಬಾಲ್‌ಗೆ ಕಾರಣವಾಗುತ್ತಿದ್ದರು. ಆಗ ಅದನ್ನು ನೋಬಾಲ್‌ ಎಂದು ಪರಿಗಣಿಸಿ ಹೆಚ್ಚುವರಿ ಒಂದು ರನ್‌ ನೀಡಲಾಗುತ್ತಿತ್ತು. ಜೊತೆಗೆ ಆ ಎಸೆತದಲ್ಲಿ ಬ್ಯಾಟ್ಸ್‌ಮನ್‌ ಔಟಾದರೆ ಅದನ್ನು ಔಟ್‌ ನೀಡುತ್ತಿರಲಿಲ್ಲ (ರನೌಟ್‌ ಹೊರತುಪಡಿಸಿ). ಈಗಲೂ ಇವೆಲ್ಲ ಇವೆ. ಗಮನಿಸಬೇಕಾದ ಸಂಗತಿಯೆಂದರೆ ಮುಂದಿನ ಎಸೆತದಲ್ಲಿ ಬ್ಯಾಟ್ಸ್‌ಮನ್‌, ತನಗೆ ಇಷ್ಟಬಂದಂತೆ ಬಾರಿಸಬಹುದು. ಅಲ್ಲಿ ಆತನಿಗೆ ಔಟ್‌ ನೀಡುವುದಿಲ್ಲ. ಅದನ್ನೇ ಫ್ರೀಹಿಟ್‌ ಎನ್ನಲಾಗಿದೆ. ಆದರೆ ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಲ್ಲ.

ತಲೆಗೇಟು ಬಿದ್ದರೆ, ಬದಲೀ ಆಟಗಾರ: ಕ್ರಿಕೆಟ್‌ನಲ್ಲಿ ಆಗಿರುವ ಅತ್ಯಂತ ಮಹತ್ವಪೂರ್ಣ ಬದಲಾವಣೆಯೆಂದರೆ, ತಲೆಗೆ ಗಾಯಗೊಂಡು ಆಟದಿಂದ ನಿವೃತ್ತನಾಗುವ ಆಟಗಾರನಿಗೆ ಬದಲಾಗಿ ಇನ್ನೊಬ್ಬ, ಆಟಗಾರನಿಗೆ ಆಡಲು ಅವಕಾಶ ನೀಡಲಾಗುತ್ತದೆ. ಗಾಯಗೊಂಡವನು ಯಾವ ಪಾತ್ರ ನಿರ್ವಹಿಸುತ್ತಾನೋ, ಬದಲೀ ಆಟಗಾರನೂ ಅದೇ ಪಾತ್ರನಿರ್ವಹಿಸಬೇಕು. ಆಲ್‌ರೌಂಡರ್‌ ಆಗಿದ್ದರೆ, ಆಲ್‌ರೌಂಡರ್‌ಗೆ, ಬ್ಯಾಟ್ಸ್‌ಮನ್‌/ಬೌಲರ್‌ ಆಗಿದ್ದರೆ ಅದೇ ರೀತಿಯ ಆಟಗಾರರಿಗೆ ಅವಕಾಶ ನೀಡಲಾಗುತ್ತದೆ. ನೆನಪಿಡಿ: ಇದು ತಲೆಗೆ ಹೊಡೆತ ತಿಂದು ನಿವೃತ್ತರಾಗುವ ಆಟಗಾರರಿಗೆ ಮಾತ್ರ. ಉಳಿದ ಯಾವುದೇ ರೀತಿ ಗಾಯಗೊಂಡರೆ ಬದಲೀ ಆಟಗಾರ ಸಿಗುವುದಿಲ್ಲ. 2019ರ ಆ್ಯಷಸ್‌ ಸರಣಿ ಮೂಲಕ ಇದು ಶುರುವಾಯಿತು.

ರನ್ನರ್‌ಗಳಿಗೆ ಅವಕಾಶವಿಲ್ಲ: ಈ ಹಿಂದೆ ಬ್ಯಾಟ್ಸ್‌ಮನ್‌ ಆಡುತ್ತ ಗಾಯಗೊಂಡೋ, ಕಾಲು ಸೆಳೆತಕ್ಕೊಳಗಾಗಿಯೋ ಓಡಲಾಗದ ಸ್ಥಿತಿ ತಲುಪಿದರೆ, ರನ್ನರ್‌ ನೀಡಲಾಗುತ್ತಿತ್ತು. ಅಂದರೆ ಬ್ಯಾಟ್ಸ್‌ಮನ್‌ಗೆ ಚೆಂಡು ಬಾರಿಸುವುದಷ್ಟೇ ಕೆಲಸ. ಓಡುವುದು ಇನ್ನೊಬ್ಬ ಆಟಗಾರನ ಕೆಲಸ. 2011ರಿಂದ ಈ ನಿಯಮ ಬದಲಾಗಿ, ಗಾಯಗೊಳ್ಳುವ ಬ್ಯಾಟ್ಸ್‌ಮನ್‌ ಸುಮ್ಮನೆ ಕ್ರೀಸ್‌ನಿಂದ ಹೊರ ನಡೆಯಬೇಕು ಎಂದು ಹೇಳಲಾಯಿತು. ಒಂದುವೇಳೆ ಆತ ಸುಧಾರಿಸಿಕೊಂಡರೆ, ಇನ್ನೊಬ್ಬ ಬ್ಯಾಟ್ಸ್‌ಮನ್‌ ಔಟಾದಾಗ ಮತ್ತೆ ಕ್ರೀಸ್‌ಗಳಿದು ಬ್ಯಾಟಿಂಗ್‌ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next