Advertisement
ಆಕೆಯ ಬದುಕು ಅದ್ಭುತವೇ ಸರಿ. ಒಬ್ಬ ಗಂಡನನ್ನು ಕಟ್ಟಿಕೊಂಡು ಹೋರಾಡುವುದೇ ಕಷ್ಟ ! ಅಂಥಾದ್ದರಲ್ಲಿ ಐದು ಬೆರಳುಗಳಂತಹ ಭಿನ್ನ ಭಿನ್ನ ಸ್ವಭಾವದ ಐವರನ್ನು ಅವಳು ನಿಭಾಯಿಸುವ ರೀತಿಯೇ ವಿಸ್ಮಯ. ಅವಳ ಅತೀಂದ್ರಿಯತೆಯನ್ನು ಒಂದು ವಾಸ್ತವಿಕ ನೆಲೆಬಿಟ್ಟು ಕಾವ್ಯವಾಗಿ ಒಪ್ಪಿದಾಗ ಅದು ಸೌಂದರ್ಯವೇ. ಅವಳು ಅತಿಮಾನುಷಳಾಗಿರುವುದರಿಂದಲೇ ಐವರೊಡನೆ ಬದುಕು ಸಾಧ್ಯವಾಯಿತು, ಕಷ್ಟಗಳನ್ನು ಎದುರಿಸುವ ಶಕ್ತಿ ಬಂತು. ಅಗ್ನಿಸುತೆ ಆಗಿದ್ದುದರಿಂದಲೇ ಹೊಟ್ಟಿನೊಳಗಿನ ನಿಗಿನಿಗಿ ಕೆಂಡದಂತೆ ಸುಡುವ ಬೆಂಕಿಬೇಗೆ ಆಕೆಗೆ ಸಹಜವಾಯಿತು. ಜಲಕನ್ಯೆಯಾಗಿ ಹುಟ್ಟಿದ್ದರೆ ಇದು ಸಾಧ್ಯವಾಗುತ್ತಿತ್ತೆ? ಅತಿಮಾನುಷೆಯಾಗಿದ್ದರಿಂದಲೇ ರುದ್ರಭೂಮಿಯಲ್ಲಿ ದುಶ್ಯಾಸನನ ಎದೆಬಗೆದು ರಕ್ತಹೀರಿ ನೆತ್ತರಿಂದ ತೊಯ್ದ ಕರುಳಲ್ಲೇ ಆಕೆಯ ಮುಡಿಯನ್ನು ಭೀಮಕಟ್ಟುವುದನ್ನು ಆಕೆ ಒಪ್ಪಿಕೊಳ್ಳಲು ಸಾಧ್ಯವಾಯಿತು. ಸಾಮಾನ್ಯಸ್ತ್ರೀಯಾಗಿದ್ದರೆ ಹುಚ್ಚುಹಿಡಿದು ಓಡುತ್ತಿರಲಿಲ್ಲವೆ?
Related Articles
Advertisement
ಕೃಷ್ಣನೂ ಕಪ್ಪು , ಕೃಷ್ಣೆಯೂ ಕಪ್ಪು, ಕತ್ತಲೆ! ಕತ್ತಲಲ್ಲಿ ಎಲ್ಲವೂ, ಎಲ್ಲರೂ ಒಂದೇ. ಬೆಳಕಿಗೆ ಬಂದಾಗ ಮಾತ್ರ ನಾನು, ಅವನು, ಅದು ಬೇರೆ ಬೇರೆ. ಕೆಂಪು ಕೆಂಪಾಗಿ, ನೀಲಿ ನೀಲಿಯಾಗಿ, ಪಾರಿಜಾತ ಪಾರಿಜಾತವಾಗಿ, ಮಂದಾರ ಮಂದಾರವಾಗಿ ಕಾಣುವುದು ಬೆಳಕಿನಲ್ಲೇ. ಬೆಳಕು ಹೇಗೆ ಚೆಲುವನ್ನು ಬೀರುವುದೋ ಅದೇ ರೀತಿ ತಾರತಮ್ಯವನ್ನೂ ಸೃಷ್ಟಿಸುತ್ತದೆ, ಭಿನ್ನವಾಗಿಸುತ್ತದೆ, ಎರಡಾಗಿಸುತ್ತದೆ. ಬೆಳಕು ದ್ವೆ„ತ. ಕತ್ತಲು ಎಲ್ಲವನ್ನೂ ಎಲ್ಲರನ್ನೂ ಸಮಾನಗೊಳಿಸುವುದರಿಂದ ಅದು ಅದ್ವೆ„ತ. ಕಪ್ಪಿನಲ್ಲಿ ಎಲ್ಲವೂ ಕರಗಿ ಒಂದೇ ಆಗುತ್ತದೆ. ಅದಕ್ಕೇ ಇದು ಪರಮಾತ್ಮನ ಸಂಕೇತ, ಆಧ್ಯಾತ್ಮಿಕ ಸಂದೇಶ.
ಕತ್ತಲು ಕತ್ತಲು ಸೇರಿದಾಗ, ಇಬ್ಬರೂ ಒಂದೇ ಬೇಧವೇ ಇಲ್ಲವೆಂದಾದಾಗ ಅಲ್ಲಿ ಸೃಷ್ಟಿಕ್ರಿಯೆ ಅಸಾಧ್ಯ. ಕೃಷ್ಣೆ- ಕೃಷ್ಣರ ನಡುವೆ ಬೇಧವಿಲ್ಲ, ಜೀವಾತ್ಮ -ಪರಮಾತ್ಮರ ನಡುವೆ ಬೇಧವಿಲ್ಲ. ಆದುದರಿಂದ ಇಲ್ಲಿ ಸೃಷ್ಟಿ ಸಾಧ್ಯವಿಲ್ಲ. ದೇಹ ಮೀರಿದ ಆಧ್ಯಾತ್ಮಿಕ ಅಮೂರ್ತ ಆತ್ಮಮಟ್ಟದ ಸಂಬಂಧವದು. ಅದಕ್ಕೆ ಮನುಷ್ಯ ದೇಹದ ನಂಟನ್ನು ಅಂಟಿಸಲಾಗದು, ಮಿತಿಯಿಲ್ಲ. ಇದು ದೇಹದ ಸ್ಥಿತಿಗೆ ಬರಬೇಕಾದರೆ ದ್ವೆ„ತಗೊಳ್ಳಬೇಕಾಗುತ್ತದೆ. ಸೃಷ್ಟಿ ಸಾಧ್ಯವಾಗುವುದು ದ್ವೆ„ತದಿಂದ, ಪ್ರಕೃತಿ-ಪುರುಷ ಎಂಬ ಬೇಧದಿಂದ. ದ್ರೌಪದಿ ಪ್ರಕೃತಿ, ಜೀವಾತ್ಮ. ದೇಹದ ಮಟ್ಟದಲ್ಲಿ ಕೃಷ್ಣ ಗಂಡನಾಗಲಾರ, ಅವ ಪರಮಾತ್ಮ. ಆದರೆ ಅರ್ಜುನನಲ್ಲಿ ಆತ ಆತ್ಮರೂಪದಲ್ಲಿರುವವನಾದುದರಿಂದ ಪರಮಾತ್ಮಳಾಗಿ ಹುಟ್ಟಿದ ದ್ರೌಪದಿ ಜೀವಾತ್ಮಳಾಗಿ ಬದುಕಿರುವಾಗ ಪರಮಾತ್ಮನಾಗಿರುವ ಕೃಷ್ಣ ಆಕೆಗೆ ಆತ್ಮವಾಗಿಯೇ ಸಿಗಬೇಕಾಗುತ್ತದೆ, ಜೀವಾತ್ಮನಾದ ಅರ್ಜುನನೇ ಆಕೆಗೆ ಗಂಡನಾಗಬೇಕಾಗುತ್ತದೆ. ಈ ಕಾರಣದಿಂದಲೇ ಕೃಷ್ಣೆ ಆತನಿಗೆ ಸಹೋದರಿ, ಸಖೀ, ಭಕ್ತೆ ಎಲ್ಲವೂ ಆಗುತ್ತಾಳೆ. ಇದೊಂದು ಲಿಂಗಾತೀತ ದೇಹಾತೀತ ಸಂಬಂಧ. ಕಬೀರ-ರಾಮ, ಸೂರದಾಸ-ಕೃಷ್ಣ, ಅಕ್ಕ-ಚನ್ನ, ಕನಕ-ಕೃಷ್ಣ ಮುಂತಾದ ಅನುಭಾವೀ ನೆಲೆಯ ದಿವ್ಯವಾದ ಸಂಬಂಧಗಳ ತಳಹದಿಯನ್ನು ನಾವು ಮಹಾಭಾರತದಲ್ಲೇ ಕೃಷ್ಣ-ಕೃಷ್ಣೆಯರಲ್ಲಿ ಕಾಣಬಹುದು. ಉದಾತ್ತವಾದ ದೈವೀ ನೆಲೆಗೇರಿದ ಭಕ್ತ ಮತ್ತು ಪರಮಾತ್ಮನ ನಡುವಿನ ಸಂಬಂಧವಿದು. ವೈಜ್ಞಾನಿಕವಾಗಿ ನೋಡಿದರೂ ಪರಸ್ಪರ ವಿರುದ್ಧ ಧ್ರುವಗಳು ಆಕರ್ಷಿಸುತ್ತವೆ, ಸಮಧ್ರುವಗಳಲ್ಲಿ ಆಕರ್ಷಣೆ ಅಸಾಧ್ಯ. ಅದಕ್ಕೇ ಕೃಷ್ಣ-ಕೃಷ್ಣೆಯರಲ್ಲಿ ವಿವಾಹ ಸಂಬಂಧ ಅಸಾಧ್ಯವಾಗುತ್ತದೆ.
ಆತ ಕೃಷ್ಣ, ಶ್ಯಾಮ! ಈಕೆ ಕೃಷ್ಣೆ, ಶ್ಯಾಮಲೆ! ಮಹಾಭಾರತದ ಎರಡು ನೀಲ ನೈದಿಲೆಗಳು. ಕೃಷ್ಣೆಯ ಸಿರಿಮುಡಿಯಲ್ಲಿ ಕೃಷ್ಣನ ನವಿಲುಗರಿ. ಕೃಷ್ಣನ ನವಿಲುಗರಿಯಲ್ಲಿ ಕೃಷ್ಣೆಯದ್ದೇ ಕಣ್ಣು. ಆತ ಪರಮಾತ್ಮ , ಈಕೆ ಜೀವಾತ್ಮ. ಹೂವಿನಲ್ಲಡಗಿದ ಪರಿಮಳದಂತೆ ಕೃಷ್ಣ ಪರಮಾತ್ಮನು ಕೃಷ್ಣೆಯ ಆತ್ಮವನ್ನು ಆವರಿಸಿಕೊಂಡು ಏಕಕಾಲದಲ್ಲೇ ಮಹಾಭಾರತ ಕಾವ್ಯದ ಆತ್ಮವೂ ಆಗಿ ಅಲೌಕಿಕ ಅಮೂರ್ತ ಆಧ್ಯಾತ್ಮಿಕ ಗಂಧವನ್ನು ಸೂಸುತ್ತಿರುವ ಅನುಭವವಾಗುತ್ತದೆ.
ಕಾತ್ಯಾಯಿನಿ ಕುಂಜಿಬೆಟ್ಟು