Advertisement

ಪರಮ ವೀರ ಚಕ್ರ ಪುರಸ್ಕೃತ ವೀರ ಯೋಧ CQMH ಅಬ್ದುಲ್ ಹಮೀದ್ ಶೌರ್ಯದ ನೆನಪು

09:22 AM Sep 12, 2019 | sudhir |

1965ರ ಭಾರತ ಪಾಕಿಸ್ಥಾನ ಯುದ್ಧದಲ್ಲಿ ಪಾಕ್ ಪಡೆಗಳಿಗೆ ಭಾರತೀಯ ಸೈನಿಕರ ಶೌರ್ಯ ಮತ್ತು ಕೆಚ್ಚಿನ ವಿಶ್ವರೂಪ ದರ್ಶನ ಮಾಡಿಸಿದ ಮತ್ತು ಆ ಮೂಲಕ ‘ಅಸಲ್ ಉತ್ತರ್’ ಮೂಲಕ ಪಾಕಿಗಳನ್ನು ಕಂಗೆಡಿಸಿದ ಪರಮವೀರ ಚಕ್ರ ಪುರಸ್ಕೃತ ವೀರಯೋಧ ಕಂಪೆನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್ ಅವರನ್ನು ಭಾರತೀಯ ಸೇನೆಯು ಸ್ಮರಣೆ ಮಾಡಿಕೊಂಡು ಅವರಿಗೆ ವೀರ ನಮನವನ್ನು ಸಲ್ಲಿಸಿದೆ.

Advertisement

ಹವಿಲ್ದಾರ್ ಅಬ್ದುಲ್ ಹಮೀದ್ ಅವರು ಆ ಯುದ್ಧದಲ್ಲಿ ಪಾಕಿಸ್ಥಾನ ಪಡೆಗಳಿಗೆ ತನ್ನ ಕೆಚ್ಚೆದೆಯ ಶೌರ್ಯದ ನಿಜದರ್ಶನವನ್ನು ಮಾಡಿಸಿದ ಘಟನೆಗೆ ಸೆಪ್ಟಂಬರ್ 10ಕ್ಕೆ 54 ವರ್ಷಗಳು ತುಂಬಿತು. ಇವರ ಈ ಧೀರೋದ್ದಾತ ಶೌರ್ಯವನ್ನು ಭಾರತೀಯ ಸೇನೆಯ ಸಾರ್ವಜನಿಕ ಸಂಪರ್ಕಕ್ಕಾಗಿನ ಅಡಿಷನಲ್ ಡೈರೆಕ್ಟರ್ ಜನರಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸ್ಮರಿಸಿಕೊಂಡು ವೀರ ಯೋಧ ಹಮೀದ್ ಅವರಿಗೆ ತನ್ನ ನಮನಗಳನ್ನು ಸಲ್ಲಿಸಿದ್ದಾರೆ.

1965ರ ಸಮರದಲ್ಲಿ ಎದುರಾಳಿ ಸೈನ್ಯದ ಹಲವು ಪಟ್ಟಾನ್ ಯುದ್ಧ ಟ್ಯಾಂಕ್ ಗಳನ್ನು ತನ್ನಲ್ಲಿದ್ದ ರಿಕಾಯ್ಲ್ ಲೆಸ್ ಗನ್ ನಿಂದ ಧ್ವಂಸಗೊಳಿಸಿದ CQMH ಅಬ್ದುಲ್ ಹಮೀದ್ ಅವರ ಈ ಸಾಧನೆ ಚಿನ್ನದ ಅಕ್ಷರದಲ್ಲಿ ಬರೆದಿಡುವಂತದ್ದು ಎಂದು ಅದು ತನ್ನ ಯೋಧನ ಶೌರ್ಯ ಮತ್ತು ಬಲಿದಾನವನ್ನು ಭಾರತೀಯ ಸೇನೆ ಈ ಸಂದರ್ಭದಲ್ಲಿ ಕೊಂಡಾಡಿದೆ.

ಏನಾಯ್ತು ಅಂದು?
ಅದು 1965ರ ಸಮಯ ಚೀನಾ ವಿರುದ್ಧ ಸೋತಿದ್ದ ಭಾರತದ ಸೇನೆಯ ಬಲವನ್ನು ಕಡಿಮೆ ಅಂದಾಜಿಸಿ ಯುದ್ಧ ಸಾರಿದ್ದ ಪಾಕಿಸ್ಥಾನಕ್ಕೆ ನಮ್ಮ ವೀರಯೋಧರು ನೀಡಿದ ದಿಟ್ಟ ಪ್ರತ್ಯುತ್ತರದ ಪ್ರತೀ ಘಟನೆಗಳು ಚರಿತ್ರೆಯಲ್ಲಿ ದಾಖಲಾರ್ಹವೇ ಸರಿ. ಅದರಲ್ಲಿ ಹವಿಲ್ದಾರ್ ಅಬ್ದುಲ್ ಹಮೀದ್ ಅವರು ತೋರಿದ ಶೌರ್ಯವಂತೂ ಪಾಕಿಸ್ಥಾನಕ್ಕೆ ಇಂದಿಗೂ ಎಚ್ಚರಿಕೆಯ ಗಂಟೆಯಾಗಿಯೇ ಇದೆ. ಮತ್ತು ನಮ್ಮೆಲ್ಲಾ ಯೋಧರಿಗೆ ಸ್ಪೂರ್ತಿದಾಯಕ ಘಟನೆಯೂ ಹೌದು.

Advertisement

ಅಂದು ಪಾಕಿಸ್ಥಾನ ಸೇನೆಯು ತನ್ನ ಪಟ್ಟಾನ್ ಟ್ಯಾಂಕ್ ಪಡೆಯೊಂದಿಗೆ ಪಂಜಾಬ್ ನ ಖೇಮ್ ಕರಣ್ ಸೆಕ್ಟರ್ ನ ಛೀಮಾ ಹಳ್ಳಿಯ ಸಮೀಪದಿಂದ ಭಾರತದ ಗಡಿ ಭಾಗಕ್ಕೆ ನುಗ್ಗಿಯೇ ಬಿಟ್ಟಿತ್ತು. ಪಾಕಿಸ್ಥಾನದ ಈ ದಾಳಿಯನ್ನು ಎದುರಿಸಲು ಭಾರತೀಯ ಸೇನೆ ಕಾರ್ಯತಂತ್ರವೊಂದನ್ನು ರೂಪಿಸಿತ್ತು. ಮತ್ತು ಇದಕ್ಕಾಗಿ ನಮ್ಮ ಸೇನೆ ಲಾಳಾಕಾರದ ಅಡಗುದಾಣವನ್ನು ಯೋಜನೆಗೊಳಿಸಿದ್ದರು. ಛೀಮಾ ಹಳ್ಳಿಯ ಗದ್ದೆಗಳಲ್ಲಿ ಹತ್ತಿ ಮತ್ತು ಕಬ್ಬಿನ ಬೆಳೆಗಳ ನಡುವೆ ನಮ್ಮ ಸೇನೆ ರೂಪಿಸಿದ್ದ ಈ ಸೇನಾ ವ್ಯೂಹದ ಅರಿವಿರದಿದ್ದ ಪಾಕ್ ಟ್ಯಾಂಕರ್ ಗಳು ಇತ್ತಲೇ ನುಗ್ಗಿ ಬರುತ್ತಿದ್ದವು.


ಆ ಕಾಲದಲ್ಲಿ ಅತ್ಯಾಧುನಿಕ ಎಣಿಸಿಕೊಂಡಿದ್ದ ಅಮೆರಿಕಾದಿಂದ ಪಡೆದುಕೊಂಡಿದ್ದ ಪಟ್ಟಾನ್ ಟ್ಯಾಂಕ್ ಗಳನ್ನೇರಿ ಪಾಕಿಸ್ಥಾನೀ ಸೈನಿಕರು ನಮ್ಮ ನೆಲದೊಳಕ್ಕೆ ನುಗ್ಗಿ ಬರುತ್ತಿದ್ದರೆ, ಅದನ್ನು ನೋಡಿಕೊಂಡು ಇನ್ನು ಸುಮ್ಮನಿದ್ದರೆ ಆಗದು ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು ಕಂಪೆನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್!

ತಕ್ಷಣವೇ ಸೇನಾ ಜೀಪೊಂದನ್ನು ಏರಿದ ಹವಿಲ್ದಾರ್ ಹಮೀದ್ ಅದರಲ್ಲಿದ್ದ ರಿಕಾಯ್ಲ್ ಲೆಸ್ ಯುದ್ಧ ಬಂದೂಕಿನಿಂದ ತಮ್ಮ ನೆಲದತ್ತ ನುಗ್ಗಿ ಬರುತ್ತಿದ್ದ ಪಾಕ್ ಸೇನೆಯ ಟ್ಯಾಂಕ್ ಗಳ ಮೇಲೆ ಮತ್ತು ಸೈನಿಕರ ಮೇಲೆ ಗುಂಡಿನ ಮಳೆಯನ್ನೇ ಸುರಿಸುತ್ತಾರೆ. ಈ ಅನಿರೀಕ್ಷಿತ ದಾಳಿಗೆ ಕಂಗಾಲಾದ ಪಾಕ್ ಸೈನಿಕರು ಸಾವರಿಸಿಕೊಳ್ಳುವಷ್ಟರಲ್ಲಿ ಅವರ ಮೂರು ಪಟ್ಟಾನ್ ಟ್ಯಾಂಕ್ ಗಳು ಧ್ವಂಸಗೊಂಡಿದ್ದವು. ಅಷ್ಟು ಹೊತ್ತಿಗಾಗಲೇ ಪಾಕ್ ಸೈನಿಕರೂ ಮರು ಗುಂಡಿನ ದಾಳಿಯನ್ನು ಪ್ರಾರಂಭಿಸಿದರು.

ಈ ಮುಖಾಮುಖಿ ಹೋರಾಟದಲ್ಲಿ ಹಮೀದ್ ಅವರ ದೇಹದೊಳಕ್ಕೆ ಎಲ್ಲೆಂದರಲ್ಲಿ ಗುಂಡುಗಳು ಹೊಕ್ಕವು. ಆದರೂ ಹವಿಲ್ದಾರ್ ಹಮೀದ್ ಅವರ ಹೋರಾಟದ ಕಿಚ್ಚು ಆರಿರಲಿಲ್ಲ. ತಾನು ನಿಂತು ಹೋರಾಡುತ್ತಿದ್ದ ಸೇನಾ ಜೀಪಿನಲ್ಲೇ ಪ್ರಾಣ ಬಿಡುವ ಅರೆಕ್ಷಣಕ್ಕೂ ಮುನ್ನ ಪಾಕಿಸ್ಥಾನದ ನಾಲ್ಕನೇ ಟ್ಯಾಂಕ್ ಅನ್ನೂ ಸಹ ಹಮೀದ್ ಧ್ವಂಸಗೊಳಿಸಿಯಾಗಿತ್ತು. ಅಷ್ಟು ಹೊತ್ತಿಗಾಗಲೇ ಹವಿಲ್ದಾರ್ ಹಮೀದ್ ಅವರ ದೇಹ ಗುಂಡಿನ ದಾಳಿಗೆ ಜರ್ಝರಿತಗೊಂಡು ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಇಷ್ಟು ಹೊತ್ತಿಗಾಗಲೇ ಸ್ಥಳದಲ್ಲಿದ್ದ ಭಾರತೀಯ ಸೇನೆಯ ಯೋಧರೂ ಸಹ ಪಾಕಿಸ್ಥಾನ ಸೈನಿಕರ ಮೇಲೆ ಪ್ರತಿದಾಳಿ ಪ್ರಾರಂಬಿಸಿದ್ದರು. ಹಮೀದ್ ಅವರ ವೀರಾವೇಶದ ದಾಳಿ ಮತ್ತು ಉಳಿದ ಸೈನಿಕರ ಪ್ರತಿದಾಳಿಗೆ ಹೆದರಿದ ಪಾಕ್ ಸೈನಿಕರು ಅಳಿದುಳಿದ ಯುದ್ಧ ಟ್ಯಾಂಕರ್ ಗಳನ್ನು ಸ್ಥಳದಲ್ಲಿಯೇ ಬಿಟ್ಟು ಪಲಾಯನಗೈದಿದ್ದರು. ಈ ಹೋರಾಟ ಇತಿಹಾಸದ ಪುಟಗಳಲ್ಲಿ ‘ಅಸಲ್ ಉತ್ತರ್ ಜಂಗ್’ (ಅಸಲಿ ಉತ್ತರದ ಹೋರಾಟ) ಎಂದೇ ದಾಖಲುಗೊಂಡಿದೆ.

ಹಮೀದ್ ಅವರ ಈ ಶೌರ್ಯ ಭರಿತ ಈ ಹೋರಾಟದ ಬಿಸಿ ಎಲ್ಲಿಯವರೆಗೆ ಮುಟ್ಟಿತ್ತೆಂದರೆ ಭವಿಷ್ಯದಲ್ಲಿ ಅಮೆರಿಕಾ ಈ ಪಟ್ಟಾನ್ ಯುದ್ಧ ಟ್ಯಾಂಕ್ ಗಳ ಉತ್ಪಾದನೆಯನ್ನೇ ನಿಲ್ಲಿಸಿಬಿಟ್ಟಿತ್ತು. ಅಷ್ಟರಮಟ್ಟಿಗೆ ಪಾಕಿಸ್ಥಾನ ಯುದ್ಧರಂಗದಲ್ಲಿ ತನ್ನ ಮರ್ಯಾದೆಯನ್ನು ಮಾತ್ರವಲ್ಲದೇ ವಿಶ್ವಮಟ್ಟದಲ್ಲಿ ಅಮೆರಿಕಾದ ಮಾನವನ್ನೂ ಹರಾಜು ಹಾಕಿಬಿಟ್ಟಿತ್ತು!

ಆದರೆ ಇದಕ್ಕೆಲ್ಲಾ ಮೂಲ ಕಾರಣವಾದದ್ದು ಹವಿಲ್ದಾರ್ ಅಬ್ದುಲ್ ಹಮೀದ್ ಎಂಬ ಭಾರತೀಯ ಯೋಧನ ಕೆಚ್ಚೆದೆಯ ಹೋರಾಟ. ಒಂದು ಅಂದಾಜಿನ ಪ್ರಕಾರ ಪಾಕ್ ಸೈನಿಕರು ಆ ಸ್ಥಳದಲ್ಲಿ ಅಂದು ಬಿಟ್ಟು ಓಡಿದ್ದು ಸುಮಾರು ನೂರಕ್ಕೂ ಹೆಚ್ಚು ಯುದ್ಧ ಟ್ಯಾಂಕ್ ಗಳನ್ನು! ಹಾಗಾಗಿ ಆ ಛೀಮ ಹಳ್ಳಿಯ ಸುತ್ತಲಿನ ಪ್ರದೇಶವನ್ನು ಇಂದಿಗೂ ಪಟ್ಟಾನ್ ನಗರ ಎಂದೇ ಕರೆಯಲಾಗುತ್ತದೆ.

ಶತ್ರುಪಡೆಯ ಗುಂಡಿನ ದಾಳಿಗೆ ಎದೆಯೊಡ್ಡಿ ತಾಯ್ನೆಲದ ಮಾನವನ್ನು ಕಾಪಾಡುವ ಕಾರ್ಯದಲ್ಲಿ ವೀರಮರಣವನ್ನಪ್ಪಿದ್ದ ಹವಿಲ್ದಾರ್ ಅಬ್ದುಲ್ ಹಮೀದ್ ಅವರಿಗೆ ಅವರು ಹುತಾತ್ಮರಾದ ಆರು ದಿನಗಳ ಬಳಿಕ ಮರಣೋತ್ತರವಾಗಿ ಪರಮ ವೀರ ಚಕ್ರ ಪುರಸ್ಕಾರವನ್ನು ಘೋಷಿಸಿ ಭಾರತ ಸರಕಾರ ತನ್ನ ವೀರ ಯೋಧನ ಬಲಿದಾನವನ್ನು ಅಮರವಾಗಿಸಿತು.

1966ರ ಗಣರಾಜ್ಯೋತ್ಸವ ಪರೇಡ್ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರು ಹುತಾತ್ಮ ಯೋಧ ಅಬ್ದುಲ್ ಹಮೀದ್ ಅವರ ಪತ್ನಿ ರಸೂಲಾನ್ ಬೀಬಿ ಅವರಿಗೆ ಪರಮವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.

ಹಮೀದ್ ಅವರ ಈ ಹೋರಾಟ ಪಾಕಿಸ್ಥಾನದ ಆತ್ಮಸ್ಥೈರ್ಯಕ್ಕೆ ಬಹುದೊಡ್ಡ ಹೊಡೆತವನ್ನು ನೀಡಿದ್ದು ಮಾತ್ರವಲ್ಲದೇ ಆ ದೇಶದ ಹುಂಬತನಕ್ಕೆ ‘ಅಸಲಿ ಉತ್ತರ’ವನ್ನೂ ಸಹ ನೀಡಿತ್ತು. ವೀರ ಯೋಧ ಕಂಪೆನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್ ಬಲಿದಾನಕ್ಕೆ 54 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಭಾರತ ಮಾತೆಯ ವೀರ ಪುತ್ರನ ಶೌರ್ಯ ಪರಾಕ್ರಮಕ್ಕೆ ನಮ್ಮದೊಂದು ಸೆಲ್ಯೂಟ್.

ಮಾಹಿತಿ ಸಂಗ್ರಹ ಬರಹ: ಹರಿಪ್ರಸಾದ್

Advertisement

Udayavani is now on Telegram. Click here to join our channel and stay updated with the latest news.

Next