Advertisement

ಕೋಡಗಲಹಟ್ಟಿ ಮನೆಯಲ್ಲಿ ಸ್ಫೋಟ

01:11 AM Sep 21, 2019 | Lakshmi GovindaRaju |

ಬೆಂಗಳೂರು: ಚಿಕ್ಕಜಾಲದ ಕೋಡಗಲಹಟ್ಟಿಯ ಮನೆಯೊಂದರಲ್ಲಿ ಶುಕ್ರವಾರ ಬೆಳಗ್ಗೆ ಶಂಕಾಸ್ಪದ ವಸ್ತು ಸ್ಫೋಟಿಸಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಶಿವಮೊಗ್ಗ ಮೂಲದ ಪವನ್‌ (27) ಗಾಯಗೊಂಡಿರುವ ಯುವಕ. ಪವನ್‌ ಶೇ.40ರಷ್ಟು ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

Advertisement

ಅನಿರೀಕ್ಷಿತವಾಗಿ ಸಂಭವಿಸಿರುವ ಸ್ಫೋಟ ಕೋಡಗಲಹಟ್ಟಿಯನ್ನು ಬೆಚ್ಚಿಬೀಳಿಸಿದೆ. ಸ್ಫೋಟ ಸಂಭವಿಸಿರುವ “ನಂಜುಂಡೇಶ್ವರ ನಿಲಯ’ ಕಟ್ಟಡದಲ್ಲಿದ್ದ ಎಂಟು ಕುಟುಂಬಗಳು ಆತಂಕಗೊಂಡಿದ್ದು, ಮನೆ ಖಾಲಿ ಮಾಡಿದ್ದು, ಪರಿಚಯಸ್ಥರ, ನೆಂಟರ ಮನೆಗಳಿಗೆ ಸ್ಥಳಾಂತರಗೊಂಡಿವೆ. ಘಟನೆ ಸಂಬಂಧ ಚಿಕ್ಕಜಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗ್ಯಾಸ್‌ ಸೋರಿಕೆಯಿಂದ ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆ ನಡೆದ ಕೂಡಲೇ ಸಹಾಯಕ್ಕೆ ಧಾವಿಸಿದ್ದ ಸ್ಥಳೀಯರು, ಸ್ಫೋಟ ಸಂಭವಿಸಿದ ಮನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ಗಳು ಸುಸ್ಥಿತಿಯಲ್ಲಿದ್ದವು. ಒಂದು ವೇಳೆ ಗ್ಯಾಸ್‌ ಸೋರಿಕೆಯಾಗಿ ಸ್ಫೋಟ ಸಂಭವಿಸಿದ್ದರೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿತ್ತು. ಗಾಯಾಳು ಪವನ್‌ ಸೊಣ್ಣಪ್ಪನಹಳ್ಳಿಯಲ್ಲಿರುವ ಕಲ್ಲು ಕ್ವಾರಿಯಲ್ಲಿ ರೈಟರ್‌ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ, ಕಲ್ಲು ಸಿಡಿತಕ್ಕೆ ಬಳಸಲಾಗುವ ಜಿಲೆಟಿನ್‌ ಕಡ್ಡಿಗಳು ಅಥವಾ ಇನ್ನಿತರೆ ಸ್ಫೋಟಕಗಳು ಸ್ಫೋಟಗೊಂಡಿರುವ ಶಂಕೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಪೂರ್ವವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಮುರುಗನ್‌, ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಕೂಡ ಭೇಟಿ ನೀಡಿತ್ತು. ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌) ತಜ್ಞರು ಭೇಟಿ ನೀಡಿ ಘಟನಾಸ್ಥಳದಲ್ಲಿದ್ದ ಕೆಲವು ಮಾದರಿಯನ್ನು ಸಂಗ್ರಹಿಸಿದರು.

ಬೆಚ್ಚಿದ ಜನತೆ: ಶುಕ್ರವಾರ ಬೆಳಗ್ಗೆ 7.55ರ ಸುಮಾರಿಗೆ ಬಾಂಬ್‌ ಸ್ಫೋಟವಾದಂತೆ ಭಾರೀ ಸದ್ದು ಕೇಳಿ ಇಡೀ ಕೋಡಗಲಹಟ್ಟಿ ಅಕ್ಷರಶಃ ಬೆಚ್ಚಿಬಿದ್ದಿತ್ತು. ಗ್ರಾಮದ ಹೊರವಲಯದ ಮನೆಯಲ್ಲಿ ಸಂಭವಿಸಿದ ಸ್ಫೋಟದ ಸದ್ದು ಕೇಳಿ ಆಗ ತಾನೆ ಹಾಸಿಗೆಯಿಂದ ಎದ್ದವರು, ವಾಕಿಂಗ್‌ ಮಾಡುತ್ತಿದ್ದವರು, ಶಾಲಾ ಮಕ್ಕಳು ಆತಂಕಗೊಂಡಿದ್ದರು. ಸ್ಫೋಟ ಸಂಭವಿಸಿದ ಕಟ್ಟಡದಲ್ಲಿದ್ದ ಕುಟುಂಬಗಳ ಸದಸ್ಯರು ಮನೆ ಕಂಪಿಸಿದ ಅನುಭವಾಗಿ ಕಿರುಚಾಡುತ್ತಾ, ಹೊರಗೆ ಓಡಿದರು.

Advertisement

ಎರಡನೇ ಮಹಡಿಯ ಮನೆಯಲ್ಲಿ ಸಂಭವಿಸಿದ ಈ ಸ್ಫೋಟದ ಶಬ್ಧ ಸುಮಾರು ಒಂದು ಕಿ.ಮೀ ವರೆಗೂ ಕೇಳಿಬಂತು. ಸ್ಫೋಟದ ತೀವ್ರತೆಗೆ ಮನೆಯ ಬಾಗಿಲು ಚೂರುಚೂರಾಗಿದೆ. ಅಲ್ಲದೆ ಪಕ್ಕದ ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ. ಬಾಗಿಲಿನ ಬೋಲ್ಡ್‌ಗಳು ಕೂಡ ಕಳಚಿ ಬಂದಿದ್ದವು. ಎರಡು ಕಿಟಕಿ ಒಡೆದು ಬಾಗಿಲು ಬಿರುಕುಬಿಟ್ಟಿದ್ದವು.

ಸುಟ್ಟಗಾಯಗಳಿಂದ ಓಡಿಬಂದ ಪವನ್‌: ಸ್ಫೋಟ ಸಂಭವಿಸುತ್ತಲೇ ಸುಟ್ಟಗಾಯಗಳಿಂದ ಪವನ್‌ ಸ್ವತಃ ಎರಡನೇ ಮಹಡಿಯಿಂದ ಮೆಟ್ಟಿಲುಗಳ ಮೂಲಕ ಕೆಳಗಡೆ ಇಳಿದಿದ್ದಾರೆ. ಅಷ್ಟರಲ್ಲಾಗಲೇ ಜನರ ದಂಡೇ ನೆರೆದಿತ್ತು. ಪವನ್‌ನನ್ನು ಕೂಡಲೇ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತಂಕದ ನಡುವೆಯೇ ದಟ್ಟ ಹೊಗೆ ತುಂಬಿಕೊಂಡಿದ್ದ ಮನೆಯೊಳಗೆ ಹೋದ ಕೆಲವರು ಬೆಂಕಿ ನಂದಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಅಗ್ನಿಶಾಮಕ ದಳ ಕೂಡ ಆಗಮಿಸಿ ಕಾರ್ಯಾಚರಣೆ ನಡೆಸಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ಪೊಲೀಸರಿಗೇ ಗೊಂದಲ: ತನಿಖೆ ಆರಂಭವಾದ ಕೂಡಲೇ ಗ್ಯಾಸ್‌ ಲೀಕ್‌ನಿಂದ ಸ್ಫೋಟ ಸಂಭವಿಸಿರಬಹುದು ಎಂಬ ತೀರ್ಮಾನಕ್ಕೆ ಚಿಕ್ಕಜಾಲ ಪೊಲೀಸರು ಬಂದಿದ್ದಾರೆ. ಪವನ್‌ ಶುಕ್ರವಾರ ಬೆಳಗ್ಗೆ ಸಿಗರೇಟ್‌ ಹಚ್ಚಿಕೊಳ್ಳುವಾಗ ಗ್ಯಾಸ್‌ ಸೋರಿಕೆಯಾಗಿ ಕಿಡಿ ತಾಕಿ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಹೇಳುತ್ತಾರೆ. ಆದರೆ, ಜೆಲೆಟಿನ್‌ ಕಡ್ಡಿಗಳು ಅಥವಾ ಇನ್ನಿತರೆ ಸ್ಫೋಟಕ ವಸ್ತುಗಳಿಂದ ಈ ಘಟನೆ ಸಂಭವಿಸಿರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಪ್ರತ್ಯಕ್ಷದರ್ಶಿಗಳು ಅನುಮಾನ ವ್ಯಕ್ತಪಡಿಸುತ್ತಾರೆ.

ಬೆಳಗ್ಗೆ ದಿನಪತ್ರಿಕೆ ಓದುವಾಗ ಇದ್ದಕ್ಕಿದ್ದಂತೆ ಭಾರೀ ಸದ್ದು ಕೇಳಿಸಿತು. ಪತ್ನಿಯೂ ಹೆದರಿ ಹೊರಗೆ ಓಡಿಬಂದರು. ಆತಂಕದಿಂದ ಕೆಳಗೆ ಬಂದು ನೋಡಿದಾಗ ಪಕ್ಕದ ಮನೆಯ ಎರಡನೇ ಮಹಡಿಯಲ್ಲಿ ಹೊಗೆ ಆವರಿಸಿತ್ತು. ನಮ್ಮ ಮನೆ ಕಿಟಕಿ ಗಾಜುಗಳು ಓಡೆದಿವೆ.
-ಸಿದ್ದಪ್ಪ, ಸ್ಥಳೀಯ ನಿವಾಸಿ

ವಾಕಿಂಗ್‌ ಹೋಗುವಾಗ ಭಾರೀ ಸದ್ದು ಕೇಳಿ ದಿಗಿಲುಗೊಂಢೆ. ಭೂಮಿಯೇ ಕಂಪಿಸಿದ ಅನುಭವ ಆಗಿ ಆತಂಕವಾಯಿತು. ಬಳಿಕ ಸ್ನೇಹಿತರ ಜತೆಗೂಡಿ ಸ್ಥಳಕ್ಕೆ ಓಡಿಬಂದೆವು. ಸದ್ಯ, ಕಟ್ಟಡದಲ್ಲಿ ಬೇರೆ ಯಾವುದೇ ಅನಾಹುತ ಸಂಭವಿಸಿರಲಿಲ್ಲ’
-ಸೋಮಶೇಖರ್‌, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next