Advertisement

ಸುಜ್ಲಾನ್‌ನಿಂದ ಕಾರ್ಮಿಕರ ಶೋಷಣೆ

02:45 PM Nov 16, 2017 | Team Udayavani |

ಪಡುಬಿದ್ರಿ: ಮೊನ್ನೆಯಷ್ಟೇ ಲಾಕೌಟ್‌ ಘೋಷಿಸಿಕೊಂಡಿರುವ ಗಾಳಿಯಂತ್ರ ತಯಾರಿಕೆಯ ಬಹುರಾಷ್ಟ್ರೀಯ ಕಂಪೆನಿ ಸುಜ್ಲಾನ್‌ ತನ್ನ ಕಾರ್ಮಿಕರನ್ನು ಅಮಾನವೀಯವಾಗಿ ದುಡಿಸಿಕೊಂಡಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ. ಕರ್ತವ್ಯದಲ್ಲಿದ್ದಾಗಲೇ ಓರ್ವ ಕಾರ್ಮಿಕ ತನ್ನ ಒಂದು ಕಣ್ಣಿನ ದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡಿದ್ದರೆ, ಇನ್ನಿಬ್ಬರು ಕೈ ಬಲವನ್ನು ಕಳೆದುಕೊಂಡಿದ್ದಾರೆ. ಆದರೆ ಇವರಿಗೆ ಕಂಪೆನಿ ಚಿಕ್ಕಾಸೂ ಪರಿಹಾರ ನೀಡಿಲ್ಲ. 

Advertisement

ದೃಷ್ಟಿ ನಷ್ಟಕ್ಕೆ ಜುಜುಬಿ ಹಣ 
ಹಾಸನದ ಚೇತನ್‌ ತಾವು ಕರ್ತವ್ಯ ನಿರತರಾಗಿದ್ದಾಗ ರಾಸಾಯನಿಕ ಕಣ್ಣಿಗೆ ಬಿದ್ದುದರಿಂದ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ 2.5 ಲಕ್ಷ ರೂ. ಖರ್ಚಾಗಿದ್ದರೂ ಕಂಪೆನಿ 80 ಸಾವಿರ ರೂ. ನೀಡಿ ಕೈತೊಳೆದುಕೊಂಡಿದೆ. ಇದು ಹೊರತಾಗಿ ಕಂಪೆನಿ ಚಿಕ್ಕಾಸೂ ಪರಿಹಾರ ನೀಡಿಲ್ಲ ಎಂದು ಚೇತನ್‌ ಆರೋಪಿಸಿದ್ದಾರೆ. ಯಾವುದೇ ಪರಿಹಾರವಿಲ್ಲ, ಮತ್ತದೇ ಕಾಯಕಕ್ಕೆ ಒತ್ತಾಯ
ಪಶ್ಚಿಮ ಬಂಗಾಳದ ಆನಂದ ಚೌಧುರಿ ಅವರದ್ದೂ ಇದೇ ಕತೆ. ಯಂತ್ರಕ್ಕೆ ಕೈ ಸಿಲುಕಿ ಬೆರಳಿನ ಸ್ವಾಧೀನ ಕಳೆದುಕೊಂಡಿದ್ದರೆ, ದ.ಕ., ಜಿಲ್ಲೆ ಪುತ್ತೂರಿನ ಸಂದೀಪ್‌ ಅವರ ಅಂಗೈ ಪೂರ್ಣ ಸ್ವಾಧೀನತೆ ಕಳೆದುಕೊಂಡಿದೆ. ಆದರೂ ಸಂದೀಪ್‌ ಅದೇ ಯಂತ್ರದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವಂತೆ ಈಗಲೂ ಒತ್ತಾಯಿಸಿದ್ದಾಗಿ ಹೇಳಿದ್ದಾರೆ. ಇಬ್ಬರಿಗೂ ಕಂಪೆನಿ ಯಾವುದೇ ಪರಿಹಾರ ನೀಡಿಲ್ಲ. 

ಕಂಪೆನಿಯ ತುಘಲಕ್‌ ದರ್ಬಾರ್‌
ಸ್ಥಳೀಯಾಡಳಿತವಾಗಲಿ, ಕಾನೂನಾಗಲಿ ತಮಗೇನೂ ಮಾಡದು ಎಂಬ ಭಂಡತನದಿಂದ ಕಂಪೆನಿ ಮಾನವ ಸಂಪನ್ಮೂಲ ಅಧಿಕಾರಿಗಳು ತಮ್ಮನ್ನು ದುಡಿಸುತ್ತಿದ್ದರು. ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಿಸಿದ ಕೇಂದ್ರ ಸರಕಾರದ ವಿಶೇಷಾಧಿಕಾರದ ಕಾನೂನು, ನಿಯಮಾವಳಿಗಳಷ್ಟೇ ತಮಗೆ ಅನ್ವಯ ಎಂಬಂತೆ ಸುಜ್ಲಾನ್‌ ಆಡಳಿತ ತುಘಲಕ್‌ ದರ್ಬಾರ್‌ ನಡೆಸಿತ್ತು ಎಂದು ಕಾರ್ಮಿಕ ನಾಯಕರು ಆರೋಪಿಸಿದ್ದಾರೆ. 

ಏತನ್ಮಧ್ಯೆ ಕಂಪೆನಿ ಸ್ಥಳಕ್ಕೆ ಇಂಟಕ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ, ದ. ಕ. ಜಿಲ್ಲಾ ಇಂಟಕ್‌ ಅಧ್ಯಕ್ಷ ಮನೋಹರ ಶೆಟ್ಟಿ ಕಾರ್ಯದರ್ಶಿ ಸ್ಟೀವನ್‌ ಡಿ”ಸೋಜ, ಇಂಟಕ್‌ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್‌ ಕೋಟ್ಯಾನ್‌, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ತಾ. ಪಂ. ಸದಸ್ಯ ದಿನೇಶ್‌ ಕೋಟ್ಯಾನ್‌ ಭೇಟಿ ನೀಡಿದ್ದಾರೆ. ಲಾಕೌಟ್‌ ತೆರವು, ಒಳಿತಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next