Advertisement

ದುಬಾರಿ ನೇರಳೆ ಹಣ್ಣಿನ ವ್ಯಾಪಾರ ಜೋರು

09:49 PM Jun 16, 2019 | Lakshmi GovindaRaj |

ದೇವನಹಳ್ಳಿ: ಜೂನ್‌ ತಿಂಗಳೆಂದರೆ ನೇರಳೆ ಹಣ್ಣಿನ ಸುಗ್ಗಿ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ನೇರಳೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ನೇರಳೆ ಹಣ್ಣು ದುಬಾರಿಯಾಗಿದ್ದರೂ ಸಹ ಗ್ರಾಹಕರ ಖರೀದಿ ಜೋರಾಗಿಯೇ ನಡೆದಿದೆ.

Advertisement

ಹೆಚ್ಚಾಗಿ ಕಾಡಿನಲ್ಲೆ ಬೆಳೆಯುವ ನೇರಳೆ ಹಣ್ಣಿಗೆ ಪಟ್ಟಣ, ನಗರ ಪ್ರದೇಶದ ಜನರಿಗೆ ಅಚ್ಚುಮೆಚ್ಚಿನ ಹಣ್ಣು. ಹೀಗಾಗಿಯೇ ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿಗೆ ಹೆಚ್ಚು ಬೇಡಿಕೆ. ಜತೆಗೆ ಬೆಳೆಗಾರರು ಮತ್ತು ಮಾರಾಟಗಾರರಿಗೂ ಒಳ್ಳೆಯ ಲಾಭವಿದೆ ಎನ್ನುತ್ತಾರೆ ತಳ್ಳುಗಾಡಿ ವ್ಯಾಪಾರಿಯೊಬ್ಬರು.

ತಾಲೂಕಿನಲ್ಲಿ ನೇರಳೆ ಹಣ್ಣನ್ನು 10ರಿಂದ 15 ಹೆಕ್ಟೇರ್‌ ಮಾತ್ರ ಬೆಳೆಯುತ್ತಾರೆ. ವಿಜಯಪುರ ಮತ್ತು ಚನ್ನರಾಯಪಟ್ಟಣ ಹೋಬಳಿಗಳಲ್ಲಿ ಹೆಚ್ಚು ಬೆಳೆಯುತ್ತಾರೆ. ರಸ್ತೆ ಬದಿಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಂಬು ನೇರಳೆ ಹಣ್ಣಿನ ಗಿಡಗಳನ್ನು ಬೆಳೆಸಿದೆ. ರೈತರು ಕೂಡ ತಮ್ಮ ಜಮೀನುಗಳಲ್ಲಿ ಜಂಬುನೇರಳೆ ಮರಗಳನ್ನು ಬೆಳೆಸಿದ್ದಾರೆ. ಕೆಲವರು ಪ್ರತ್ಯೇಕವಾಗಿಯೇ ಜಂಬುನೇರಳೆ ಬೆಳೆಸಿದ್ದಾರೆ.

ಜಂಬು, ನಾಯಿ ನೇರಳೆ: ನೇರಳೆ ಹಣ್ಣಿನಲ್ಲಿ ಎರಡು ವಿಧ, ಒಂದು ನಾಯಿ ಮತ್ತು ಜಂಬು ನೇರಳೆ. ಜಂಬು ನೇರಳೆ ಹಣ್ಣು ತುಂಬಾ ರುಚಿಯಾಗಿವೆ. ಹೀಗಾಗಿ ಜಂಬು ನೇರಳೆಯನ್ನು ಗ್ರಾಹಕರು ಹೆಚ್ಚು ಇಷ್ಟಪಡುತ್ತಾರೆ. ಅಲ್ಲದೆ ಮಾರುಕಟ್ಟೆಯಲ್ಲಿಯೂ ಜಂಬು ನೇರಳೆಯೇ ಹೆಚ್ಚಾಗಿರುತ್ತದೆ.

ಈ ಹಣ್ಣು ಕಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ರಸ್ತೆ ಬದಿಗಳಲ್ಲಿ ಸಾಮಾನ್ಯವಾಗಿ ನಾಯಿ ನೇರಳೆ ಹಣ್ಣಿನ ಮರಗಳೇ ಹೆಚ್ಚಿದ್ದು, ಹಣ್ಣು ಅಷ್ಟೊಂದು ರುಚಿಕರವಾಗಿಲ್ಲವಾದ್ದರಿಂದ ಜನಪ್ರಿಯವಾಗಿಲ್ಲ. ಹೀಗಾಗಿ ನಾಯಿ ನೇರಳೆ ಮರಗಳ ಬದಲಿಗೆ ರೈತರು ವ್ಯಾಪಾರಿಗಳು ಜಂಬು ನೇರಳೆ ಗಿಡಗಳನ್ನೇ ಹೆಚ್ಚಾಗಿ ಬೆಳೆಸುತ್ತಾರೆ.

Advertisement

ಯಥೇಚ್ಛ ಔಷಧೀಯ ಗುಣ: ಜಂಬು ನೇರಳೆ ಯಥೇಚ್ಛವಾಗಿ ಔಷಧೀಯ ಗುಣಗಳನ್ನು ಹೊಂದಿದೆ. ಸಕ್ಕರೆ ಕಾಯಿಲೆ ನಿಯಂತ್ರಣ ಹಾಗೂ ಜೀರ್ಣ ಶಕ್ತಿ ವೃದ್ಧಿಸುವ ಜಂಬುನೇರಳೆ ಸಿಗುವುದೇ ಅಪರೂಪ. ಮೇದೋಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರುವುದರಿಂದ ಸಕ್ಕರೆ ಕಾಯಿಲೆಗೆ ಉತ್ತಮ ಔಷಧಿಯುಳ್ಳ ಅಂಶವುಳ್ಳ ಹಣ್ಣಾಗಿದೆ.

ಪ್ರತಿ ದಿನ ಮತ್ತು ಸಂಜೆ ಜಂಬುನೇರಳೆ ಹಣ್ಣಿನ ಬೀಜದ ಪುಡಿ ಸೇವಿಸುವುದರಿಂದ ಅತಿಯಾದ ಮೂತ್ರ ತೊಂದರೆ ನಿವಾರಣೆ ಆಗುತ್ತದೆ. ಜಂಬುನೇರಳೆ ಹಣ್ಣು ಮೂಲವ್ಯಾದಿ ಹಾಗೂ ಪಿತ್ಥಜನಕಾಂಗ ತೊಂದರೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ವೈದ್ಯರ ಸಲಹೆಯಾಗಿದೆ.

ಕ್ಯಾನ್ಸರ್‌ ವಿರುದ್ಧ ಹೋರಾಡು ಶಕ್ತಿ: ಜಂಬುನೇರಳೆ ಹಣ್ಣಿನ ಜ್ಯೂಸ್‌ನಿಂದ ಹೃದಯ ಕಾಯಿಲೆ, ರೋಗ ನಿರೋಧಕ ಶಕ್ತಿ ಹಾಗೂ ನಿರಂತರ ಭೇದಿ ನಿಯಂತ್ರಣಕ್ಕೆ ಬರುತ್ತದೆ. ಸೇವನೆಯಿಂದ ಕ್ಯಾನ್ಸರ್‌ ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಹೊಂದಿದೆ.

ಹಣ್ಣು ತಿನ್ನುವುದರಿಂದ ಯಕೃತ್ತು ಸ್ವಚ್ಛಗೊಳ್ಳುತ್ತದೆ. ಗಾಯ ಹಾಗೂ ಅಸ್ತಮಾ ಕಾಯಿಲೆಗೆ ರಾಮಬಾಣವಾಗಿದೆ. ಹಣ್ಣಿನಲ್ಲಿ ಕಬ್ಬಿನಾಂಶ ಮತ್ತು ಕ್ಯಾಲ್ಸಿಯಂ, ಪೊಟಾಸಿಯಂ ಇರುತ್ತದೆ. ಅಜೀರ್ಣ, ಚಂಚಲತೆ, ಕಿಡ್ನಿ ಸಮಸ್ಯೆ ನಿವಾರಣೆಗೂ ನೇರಳೆ ಹಣ್ಣು ದಿವ್ಯವಾಗಿದೆ ಎಂಬುದು ವೈದ್ಯರ ಅನಿಸಿಕೆ.

ಕೆಜಿಗೆ 170ರಿಂದ 200 ರೂ: ಒಂದು ಕೇಜಿ ಜಂಬು ನೇರಳೆ ಬೆಲೆ ಮಾರುಕಟ್ಟೆಯಲ್ಲಿ 170 ರಿಂದ 200, 250 ರೂ.ವರೆಗೆ ಇದೆ. ದುಬಾರಿಯಾದರೂ ಮಾರಾಟ ಭರದಿಂದ ಸಾಗಿದೆ. ಆರಂಭದಲ್ಲಿ ಹೆಚ್ಚು ಬೇಡಿಕೆಯಿರಲ್ಲಿಲ್ಲ. ಆದರೆ ಸದ್ಯ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಗಗನಕ್ಕೇರಿದೆ.

ಸುಲಭ ಬೇಸಾಯ: ಮಳೆಗಾಲದಲ್ಲಿ ಜಂಬು ನೇರಳೆ ಗಿಡ ನೆಟ್ಟು, ಜಾನುವಾರು ಬಾಯಿ ಹಾಕದಂತೆ ಎಚ್ಚವಹಿಸಿದರೆ 2-3 ವರ್ಷಗಳಲ್ಲಿ ಬೆಳೆದು ನಿಲ್ಲುತ್ತದೆ. ಗಿಡವಾಗಿರುವಾಗಲೇ ಕಾಯಿ ಬಿಡಲು ಪ್ರಾರಂಭಿಸಿ, ವರ್ಷದಿಂದ ವರ್ಷಕ್ಕೆ ಫ‌ಸಲು ಹೆಚ್ಚುತ್ತಾ ಹೋಗುತ್ತದೆ. ಹುಳು ಬಾಧೆಗೆ ಒಂದೆರಡು ಸಲ ಔಷಧಿ ಸಿಂಪರಣೆ ಮಾಡಿದರೆ ಸಾಕು. ಕಷ್ಟಕ್ಕೆ ತಕ್ಕ ಪ್ರತಿಫ‌ಲ ಸಿಗುತ್ತದೆ ಎಂದು ರೈತ ನಾರಾಯಣಸ್ವಾಮಿ ಹೇಳುತ್ತಾರೆ.

ಮಳೆ ಕೊರತೆಯಿಂದ ಫ‌ಸಲು ಕಡಿಮೆಯಿದೆ. ಮಾರುಕಟ್ಟೆಗೆ ಕಡಿಮೆ ಹಣ್ಣು ಬರುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಹಣ್ಣು ಬಂದಿಲ್ಲವಾದ್ದರಿಂದ ಬೇಡಿಕೆ ಹೆಚ್ಚಿದೆ. ಹಾಗೇ ಬೆಲೆಯೂ ಹೆಚ್ಚಿದೆ.
-ಗೋಪಾಲ್‌, ವ್ಯಾಪಾರಸ್ಥ

ನೇರಳೆ ಹಣ್ಣು ಕ್ಯಾನ್ಸರ್‌ನಂತಹ ರೋಗಗಳು ಬರದಂತೆ ತಡೆಯುತ್ತದೆ. ಜತೆಗೆ ಹಲವು ಕಾಯಿಲೆಗಳಿಗೆ ರಾಮಬಾಣವಾಗಿದೆ. ಹೀಗಾಗಿಯೇ ದುಬಾರಿಯಾಗಿದ್ದರೂ ಹಣ್ಣು ಖರೀದಿಸುತ್ತೇವೆ.
-ನಾಗರಾಜ್‌, ಗ್ರಾಹಕ

ರೈತರು ನೇರಳೆ ಹಣ್ಣು ಬೆಳೆಯಲು ಆಸಕ್ತಿ ತೋರಬೇಕು. ವರ್ಷದಲ್ಲಿ ಒಂದು ಬಾರಿ ಮಾತ್ರ ನೇರಳೆ ಫ‌ಲ ದೊರೆಯುತ್ತದೆ. ಉತ್ತಮ ಔಷಧೀಯ ಗುಣಗಳನ್ನು ಹೊಂದಿದ್ದು, ಹೆಚ್ಚಿನ ಲಾಭ ಪಡೆಯಬಹುದಾಗಿದೆ.
-ಜಿ.ಮಂಜುನಾಥ್‌, ತೋಟಗಾರಿಕೆ ಅಧಿಕಾರಿ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next