Advertisement

ನಿರೀಕ್ಷೆ ಇದ್ದುದ್ದು ಬಹಳಷ್ಟು ನೀಡಿದ್ದು ಎಳ್ಳಷ್ಟು

08:28 PM Mar 05, 2020 | Lakshmi GovindaRaj |

ಚನ್ನರಾಯಪಟ್ಟಣ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಡಿಸಿರುವ 2020-21ನೇ ಸಾಲಿನ ಬಜೆಟ್‌ ತಾಲೂಕಿನ ಜನರಿಗೆ ನಿರಾಸೆಯುಂಟು ಮಾಡಿದೆ.

Advertisement

ಭೈರಪ್ಪ ಹುಟ್ಟೂರು ಅಭಿವೃದ್ಧಿಗೆ 5 ಕೋಟಿ ರೂ.: ಖ್ಯಾತ ಸಾಹಿತಿ ಎಸ್‌.ಎಲ್‌.ಭೈರಪ್ಪ ನವರ ಹುಟ್ಟೂರು ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಸಂತೇಶಿವರದ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಹೊರತುಪಡಿಸಿದರೆ ತಾಲೂಕನ್ನು ಸಂಪೂರ್ಣ ಕಡೆಗಣಿಸಿದ್ದು, ಬೇರೆ ಯೋಜನೆಗಳಿಗೆ ಬಜೆಟ್‌ನಲ್ಲಿ ನಯಾಪೈಸೆ ಮೀಸಲಿಟ್ಟಿಲ್ಲ.

ಪ್ರವಾಸೋದ್ಯಮ ನಿರ್ಲಕ್ಷ್ಯ: ಪ್ರವಾಸೋದ್ಯಮದ ಮೂಲಕ ಶ್ರವಣಬೆಳಗೊಳ ಹಾಗೂ ಇತರ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ದೊರೆತಿಲ್ಲ. ಚನ್ನರಾಯಪಟ್ಟಣ ನಗರಸಭೆಯಾಗುವುದು ಹಾಗೂ ಶ್ರವಣಬೆಳಗೊಳ ಪಟ್ಟಣಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರುವ ಕನಸು ಕನಸಾಗಿಯೇ ಉಳಿದಿದೆ. ಇನ್ನು ಅಮೃತ್‌ ಮಹಲ್‌ ತಳಿ ಸಂವರ್ಧನ ಉಪಕೇಂದ್ರದಲ್ಲಿನ ಹಳ್ಳಿàಕಾರ್‌ ತಳಿ ಸಂರಕ್ಷಣೆಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕು ಇದ್ದರೂ ಕೈಗಾರಿಕಾ ವಲಯ ಮಾಡಲು ಸರ್ಕಾರ ಬಜೆಟ್‌ನಲ್ಲಿ ಅಸಕ್ತಿ ತೋರಿದಂತೆ ಕಾಣುತ್ತಿಲ್ಲ.

ಏತ ನೀರಾವರಿ ನಿರ್ಲಕ್ಷ್ಯ: ರಾಜ್ಯದಲ್ಲಿ ಮೈತ್ರಿ ಸರ್ಕರ ಅವಧಿಯಲ್ಲಿ ಕುಮಾರಸ್ವಾಮಿ ಬಜೆಟ್‌ ಮಂಡನೆ ಮಾಡಿದಾಗ ತಾಲೂಕಿನ ಏತನೀರಾವರಿ ಯೋಜನೆಗೆ ಬರಪೂರ ಕೊಡುಗೆ ನೀಡಿದ್ದು, ಕಾಚೇನಹಳ್ಳಿ ಏತನೀರಾವರಿ ಯೋಜನೆಗೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ ಯೋಜನೆ ಈ ವರೆಗೂ ಪ್ರಾರಂಭವಾಗದೇ ಇರುವುದರಿಂದ ಈ ಭಾಗದ ಜನರು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ.

ತೋಟಿ ಏತನೀರಾವರಿ ಯೋಜನೆಗೆ ಅನುದಾನ ನೀಡಿದ್ದು ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ತೆಂಗು ಪುನಶ್ಚೇತದಲ್ಲಿ 24 ಕೋಟಿ ಹಣ ನೀಡಿ ತೆಂಗು ಹಾಳಾಗಿರುವ 36 ಸಾವಿರ ರೈತರಿಗೆ ಸಹಾಯ ಧನ ನೀಡುವ ಮೂಲಕ ರೈತರಿಗೆ ಉತ್ತೇಜನ ನೀಡಲಾಗಿತ್ತು, ಆದರೆ ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಚನ್ನರಾಯಪಟ್ಟಣ ತಾಲೂಕಿಗೆ ಅಂದು ಕೊಂಡಷ್ಟು ಅನುದಾನ ಬಿಡುಗಡೆಯಾಗಿಲ್ಲ.

Advertisement

ಚನ್ನರಾಯಪಟ್ಟಣ ತಾಲೂಕಿನ ಸಾಹಿತಿ ಎಸ್‌.ಎಲ್‌. ಭೈರಪ್ಪನವರ ಹುಟ್ಟೂರಾದ ಸಂತೆಶಿವರ ಗ್ರಾಮದ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ.
-ಶಿವನಂಜೇಗೌಡ. ತಾಲೂಕು ಬಿಜೆಪಿ ಅಧ್ಯಕ್ಷ

ತಾಲೂಕಿನಲ್ಲಿ ಆರಂಭವಾಗಿರುವ 6 ಏತನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಯಾಡಿಯೂರಪ್ಪ ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಅನುದಾನ ನೀಡಿಲ್ಲ. ತಾಲೂಕಿನಲ್ಲಿ ತೆಂಗು ಹಾಗೂ ಎಳನೀರು ಮಾರುಕಟ್ಟೆ ನಿರ್ಮಿಸಲು ಸರ್ಕಾರ ಮುಂದಾಗಿಲ್ಲ. ರಾಜ್ಯದ ಮಟ್ಟಿಗೆ ಉತ್ತಮ ಬಜೆಟ್‌ ಆದರೂ ತಾಲೂಕಿನ ಮಟ್ಟಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.
-ಸಿ.ಜಿ.ರವಿ, ತಾಲೂಕ ರೈತ ಸಂಘದ ಅಧ್ಯಕ್ಷ

ಅಂತಾರಾಷ್ಟ್ರೀಯ ಪ್ರಸಿದ್ಧ ಪ್ರವಾಸಿ ತಾಣ ಶ್ರವಣ ಬೆಳಗೊಳದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಹೊಸದೇನೂ ಇಲ್ಲ. ಜನರ ಮೂಗಿಗೆ ತುಪ್ಪ ಸವರಲಾಗಿದೆ
-ಬಿ.ಪಿ.ಧರ್ಮರಾಜ್‌ ಸಾಮಾಜಿಕ ಕಾರ್ಯಕರ್ತ

ಸಿಎಂ ಯಡಿಯೂರಪ್ಪ ಮಹಿಳೆಯರಿಗೆ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನ, ವಿಧಾವಾ ವೇತನ ಹೆಚ್ಚಿಸಿಲ್ಲ. ಜಿಲ್ಲಾ ಕೇಂದ್ರದಲ್ಲಿನ ಗಾರ್ಮೆಂಟ್ಸ್‌ಗಳಿಗೆ ತೆರಳುವ ಮಹಿಳೆಯರಿಗೂ ಬಸ್‌ ಪಾಸ್‌ ಸೌಲಭ್ಯ ಕಲ್ಪಸಬೇಕಿತ್ತು.
-ರಂಜಿತಾ, ತಾಪಂ ಸದಸ್ಯೆ

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next