Advertisement

ನಿರುದ್ಯೋಗಿಗಳ ಆಶಾಕಿರಣ ಜಿಟಿಟಿಸಿ

02:09 PM May 13, 2019 | Suhan S |

 

Advertisement

ಕೋಲಾರ: ನಗರದ ಗಡಿಯಾರಗೋಪುರ ವೃತ್ತದ ಬಳಿ ಇರುವ ಸರ್ಕಾರಿ ಟೂಲ್ಸ್ ರೂಂ ಆ್ಯಂಡ್‌ ಟ್ರೈನಿಂಗ್‌ ಸೆಂಟರ್‌ ಎಸ್ಸೆಸ್ಸೆಲ್ಸಿ ಪಾಸಾದ 60 ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿಯೊಂದಿಗೆ ತರಬೇತಿ ನೀಡುತ್ತಿದ್ದು, ಜಿಲ್ಲೆಯವರು ಸದ್ಬಳಕೆ ಮಾಡಿಕೊಳ್ಳಬಹುದು.

ಡಿಪ್ಲೋಮಾ ಶಿಕ್ಷಣ ಮತ್ತು ಶೇ.100 ಉದ್ಯೋಗದ ಗ್ಯಾರಂಟಿಯೊಂದಿಗೆ ಬಿಇ ತಾಂತ್ರಿಕ ಶಿಕ್ಷಣದ 2ನೇ ವರ್ಷಕ್ಕೆ ನೇರ ದಾಖಲಾತಿಗೂ ಅವಕಾಶ ನೀಡುವ ಡಿಪ್ಲೋಮಾ ಕೋರ್ಸ್‌ಗಳನ್ನು ಸರ್ಕಾರಿ ಟೂಲ್ಸ್ ರೂಂ ಆ್ಯಂಡ್‌ ಟ್ರೈನಿಂಗ್‌ ಸೆಂಟರ್‌ ಆರಂಭಿಸಿದ್ದು, ಜಿಲ್ಲೆಯ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಒದಗಿ ಬಂದಿದೆ.

ನಗರದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಸುಸಜ್ಜಿತ ಕಟ್ಟಡದಲ್ಲಿ ಈ ಜಿಟಿಡಿಸಿ ಕೇಂದ್ರವನ್ನು ರಾಜ್ಯ ಸರಕಾರ ಆರಂಭಿಸಿದ್ದು, ಕೈಗಾರಿಕೀಕರಣಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಗೆ ತರಬೇತಿ ನೀಡುವ ಕಾರ್ಯವನ್ನು ಈ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಇಲ್ಲಿ ಆರಂಭಿಸಲಾಗಿರುವ ‘ಡಿಪ್ಲೋಮಾ ಇನ್‌ ಟೂಲ್ ಆ್ಯಂಡ್‌ ಡೈ ಮೇಕಿಂಗ್‌ ಕೋರ್ಸ್‌’ಗೆ ಕಾರ್ಖಾನೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.ಜಿಲ್ಲೆಯವರಿಗೆ ಇಲ್ಲಿ ಅವಕಾಶ ಕಲ್ಪಿಸಲು ಮುಂದಾಗಿರುವ ಜಿಟಿಡಿಸಿ ಸಂಸ್ಥೆ, ಇದೀಗ ಎಸ್ಸೆಸ್ಸೆಲ್ಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಈ ಡಿಪ್ಲೋಮಾ ಪೂರೈಸಿದವರಿಗೆ ಶೇ.100 ಉದ್ಯೋಗ ಗ್ಯಾರಂಟಿಯನ್ನೂ ನೀಡುತ್ತಿದೆ.

ಮಧ್ಯಮ ವರ್ಗದವರಿಗೆ ಸ್ವಾವಲಂಬಿ ಶಿಕ್ಷಣ: ಮಕ್ಕಳಿಗೆ ದುಬಾರಿ ಶಿಕ್ಷಣ ಕೊಡಿಸುವುದು ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಕಷ್ಟವಾಗಿರುವಾಗ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಜಿ.ಟಿ.ಟಿ.ಸಿ. ಕೇಂದ್ರ ಪ್ರಾರಂಭಿಸಿದ್ದು, ನಗರದಲ್ಲಿ 2009ರಿಂದ ಗಡಿಯಾರ ಗೋಪುರ ವೃತ್ತದ ಬಳಿ ಪ್ರಾರಂಭವಾಗಿದೆ. ಗುಣಮಟ್ಟದ ಯಂತ್ರೋಪಕರಣ, ಸುಸಜ್ಜಿತ ಕಟ್ಟಡ ಹೊಂದಿದೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ಇದರ ಸದುಪಯೋಗ ಜಿಲ್ಲೆಯ ವಿದ್ಯಾರ್ಥಿಗಳು ಪಡೆಯಬೇಕೆಂದು ಪ್ರಾಂಶುಪಾಲ ಕೆಂಪರಾಜ್‌ ಮನವಿ ಮಾಡಿದ್ದಾರೆ. ಪ್ರಸ್ತುತ ಕೈಗಾರಿಕೆಗಳು ತರಬೇತಿ ಪಡೆದವರಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜಿಲ್ಲೆಗೆ ಬಂದಿರುವ ಬೃಹತ್‌ ಕಂಪನಿಗಳಲ್ಲಿ ಇಲ್ಲಿ ಡಿಪ್ಲೋಮಾ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

ಡಿಪ್ಲೋಮಾ ಆದರೆ ಬಿಇಗೆ ಪ್ರವೇಶ ಸಾಧ್ಯ: ಜಿ.ಟಿ.ಟಿ.ಸಿ. ಸಂಸ್ಥೆ ನೀಡುವ ಡಿಪ್ಲೋಮ ಇನ್‌ ಟೂಲ್ ಆ್ಯಂಡ್‌ ಡೈ ಮೇಕಿಂಗ್‌ ಕೋರ್ಸ್‌ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಅನುಮೊದನೆಗೊಂಡಿದೆ. ಇಲ್ಲಿ ಕೋರ್ಸ್‌ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ 2ನೇ ವರ್ಷದ ಬಿ.ಇ. ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿ ನಂತರ ನೀಟ್ ಅಥವಾ ಸಿಇಟಿ ಪರೀಕ್ಷೆ ಬರೆಯಲು ಲಕ್ಷಾಂತರ ರೂ. ಕಲಿಕೆಗಾಗಿ ಖರ್ಚು ಮಾಡುವ ಅಭ್ಯರ್ಥಿಗಳು ಎಂಜಿನಿಯರಿಂಗ್‌ ಪ್ರವೇಶದ ಆಶಯ ಹೊಂದಿರುತ್ತಾರೆ. ಅಂತಹ ವಿದ್ಯಾರ್ಥಿಗಳ ಆಶಯ ಈಡೇರಿಸಲು ಜಿಟಿಟಿಸಿ ಸಂಸ್ಥೆ ಡಿಪ್ಲೋಮಾ ಪೂರೈಸಿದವರು ನೇರವಾಗಿ 2ನೇ ವರ್ಷದ ಎಂಜಿನಿಯರಿಂಗ್‌ ಕೋರ್ಸ್‌ಗೆ ಸೇರಲು ಅವಕಾಶ ಕಲ್ಪಿಸಿದ್ದು, ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಲಾಗದ ವಿದ್ಯಾರ್ಥಿಗಳು ತಮ್ಮ ಬಿಇ ಶಿಕ್ಷಣದ ಆಶಯ ಇಲ್ಲಿ ದಾಖಲಾಗಿ ಪೂರೈಸಿಕೊಳ್ಳಬಹುದಾಗಿದೆ.

ಐಟಿಐ ಪಾಸಾಗಿದ್ದರೆ 2ನೇ ವರ್ಷಕ್ಕೆ ದಾಖಲು: ಐ.ಟಿ.ಐ. ಪಾಸಾದ ವಿದ್ಯಾರ್ಥಿಗಳು ಈ ಡಿಪ್ಲೋಮಾ ಓದಲು ಇಚ್ಛಿಸಿದ್ದಲ್ಲಿ ಅವರು ನೇರವಾಗಿ ಎರಡನೇ ವರ್ಷದ ಡಿಪ್ಲೋಮಾ ಇನ್‌ ಟೂಲ್ ಆ್ಯಂಡ್‌ ಡೈ ಮೇಕಿಂಗ್‌ ಪ್ರವೇಶಕ್ಕೆ ಅರ್ಹರಾಗಿದ್ದು, ಪ್ರಥಮ ವರ್ಷ ಓಡುವ ಅಗತ್ಯ ಇರುವುದಿಲ್ಲ.

ಅರ್ಜಿ ಸಲ್ಲಿಕೆಗೆ ಮೇ 24 ಕೊನೆ: ಈಗಾಗಲೇ ಜಿಟಿಟಿಸಿ ಸಂಸ್ಥೆ ಅರ್ಜಿಗಳನ್ನು ವಿತರಿಸುತ್ತಿದ್ದು, ಅಭ್ಯರ್ಥಿಗಳು ಡಿಪ್ಲೋಮಪ್ರವೇಶಕ್ಕಾಗಿ ನೇರವಾಗಿಅರ್ಜಿಯನ್ನು ಪಡೆದು ಕೇಳಿರುವ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳ ಪ್ರತಿಗಳನ್ನು ಲಗತ್ತಿಸಿ ಅರ್ಜಿಯನ್ನು ಮೇ.24 ರೊಳಗೆ ಸಂಸ್ಥೆಗೆ ಹಿಂದಿರುಗಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ರೋಸ್ಟರ್‌ ಮತ್ತು ಮೆರೀಟ್ ಆಧಾರದಂತೆ ಸಂದರ್ಶನಕ್ಕೆ ಮೇ.27 ರಂದು ಕರೆಯಲಿದ್ದು, ಅಂದು ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ : ದೂರವಾಣಿ ಸಂಖ್ಯೆ: 9141630317 ಯನ್ನು ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next