Advertisement

ಎಂದೆಂದಿಗೂ ಕಾಡುವ ಚೋಮನ ದುಡಿ

01:13 AM Jan 03, 2020 | mahesh |

ಅವರಿಗೆಲ್ಲ ಸಿಗೋದು ನಂಗ್ಯಾಕೆ ಸಿಗಲ್ಲ ಕೇಳ್ತೀನಿ. ಅಸಮಾನತೆಯ ವಿರುದ್ಧವಾಗಿ ಚೋಮ ಆಡುವ ಈ ಮಾತುಗಳು ನಾಟಕ ಮುಗಿದರೂ ಕಾಡುತ್ತವೆ. ಕರಿನಾಯಿ ಯಾವತ್ತೂ ಬಿಳಿನಾಯಿಯಾಗಲ್ಲ ಎಂದು ಅಪ್ಪನನ್ನು ಸಂತೈಸುವ ಬೆಳ್ಳಿಗೆ ಕರಿನಾಯಿ ಏನು ತಿನ್ನುತ್ತೋ ಅದನ್ನೇ ಬಿಳಿನಾಯಿ ತಿನ್ನುವುದೆಂದು ಚೋಮನ ಉತ್ತರ ವ್ಯವಸ್ಥೆಯನ್ನು ವಿರೋಧಿಸಿ ಇಷ್ಟೆಲ್ಲಾ ಮಾತನಾಡುವ ಚೋಮ ತನ್ನ ಧನಿಯರ ಎದುರು ಬಗ್ಗಿಸಿದ ತಲೆಯನ್ನು ಮೇಲೆತ್ತಲಾರ. ಬೇಸಾಯಗಾರನಾಗಬೇಕೆಂದು ಜೀವನದುದ್ದಕ್ಕೂ ಹಂಬಲಿಸುತ್ತಲೇ ಚೋಮನ ಬದುಕು ಅಂತ್ಯವಾಗುತ್ತದೆ. ಯಾವ ಅನ್ಯಾಯವನ್ನೂ ಮಾಡದೇ ಹುಟ್ಟಿನಿಂದ ಬಂದ ಜಾತಿಯ ಕಾರಣಕ್ಕೆ ಬೇಕಾದುದನ್ನು ಪಡೆಯಲಾಗದೆ ಹೋಗುವುದು ಯಾವ ನ್ಯಾಯ? ಸಾಮಾಜಿಕ ನ್ಯಾಯಕ್ಕಾಗಿ ಸರಕಾರಗಳೆಲ್ಲವೂ ಏನೇ ಯೋಜನೆ ಹಾಕಿಕೊಳ್ಳಲಿ ಒಂದಷ್ಟು ಜಾತಿ ಜನಾಂಗದವರು ಆಳು ಮಕ್ಕಳಾಗಿ ಕೆಲವರು ಧನಿಯರಾಗಿಯೇ ಉಳಿದಿದ್ದಾರೆ.

Advertisement

ಕಾರಂತ ಥೀಮ್‌ ಪಾರ್ಕ್‌ ಕೋಟದಲ್ಲಿ ಚೋಮನ ಕತೆಯನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರಲ್ಲೂ ಹುಟ್ಟಿರಬಹುದಾದ ಯೋಜನೆಗಳಿವು. ಇಲ್ಲಿ “ಚೋಮನ ದುಡಿ’ ಕಾದಂಬರಿ ಆಧಾರಿತ ನಾಟಕವು ರಂಗ ಸುರಭಿ ಕಲಾತಂಡ ಬೈಂದೂರು ಇವರಿಂದ ಪ್ರದರ್ಶಿಸಲ್ಪಟ್ಟಿತು. ಕತೆಗೆ ಪೂರಕವಾದ ಪರಿಕರಗಳು ಉತ್ತಮವಾದ ಬೆಳಕಿನ ಸಂಯೋಜನೆ. ರಂಗ ವಿನ್ಯಾಸಗಳಿಂದ ಅದೊಂದು ಉತ್ಕೃಷ್ಟ ಕಲಾಕೃತಿಯಾಗಿ ಮನಸ್ಸಿನಲ್ಲಿ ಉಳಿಯಿತು. “ಚೋಮನ ದುಡಿ’ ಮುದ್ರಣಗೊಂಡು ಶತಮಾನವೇ ಕಳೆಯುತ್ತ ಬಂದರೂ ಸಾಮಾಜಿಕ ಮಡಿವಂತಿಕೆ ಹೆಚ್ಚಾಗುತ್ತಲೇ ಇದೆ. ತಲೆ ಬೋಳಿಸಿಕೊಂಡು, ಕೆಂಪು ಸೀರೆಯುಟ್ಟಿರುವ ಧನಿಯರ ತಾಯಿ ತಾನೇ ಸ್ವತಃ ವೈದಿಕ ಶಾಹಿ ವ್ಯವಸ್ಥೆಯ ಶೋಷಿತೆಯಾಗಿದ್ದರೂ, ಹೊಲೆಯರು ಭೂಮಿಯನ್ನು ಹೊಂದಿ ಸಾಗುವಳಿ ಮಾಡಬಾರದೆನ್ನುವುದು ಚೋದ್ಯವೇ ಸರಿ. ಬೇಸಾಯಗಾರನಾಗಬೇಕೆಂಬ ಹಪಾಹಪಿಗೆ ಬಿದ್ದ ಚೋಮ ಒಬ್ಬರಾದ ಮೇಲೆ ಒಬ್ಬರಂತೆ ಮಕ್ಕಳನ್ನು ಕಳೆದುಕೊಂಡರೂ ಸಾಕಿದ ಎತ್ತುಗಳನ್ನು ಬಿಡಲೊಲ್ಲ. ಕೊನೆಗೂ ಆ ಎತ್ತುಗಳನ್ನು ಧನಿಯರ ಮನೆಯ ಹೊಲದ ಉಳುಮೆಗೆ ಬಳಸುವ ಚೋಮನ ದುಃಖ ಎಲ್ಲರ ಕಣ್ಣಂಚನ್ನು ಒದ್ದೆಯಾಗಿಸಿತು. ಚೋಮನ ಪಾತ್ರ ನಿರ್ವಹಿಸಿರುವ ಶಿಕ್ಷಕರಾದ ಸತ್ಯನಾ ಕೋಡೇರಿಯವರು ಅಭಿನಂದನಾರ್ಹರು. ಎಲ್ಲಾ ಹತಾಶೆಗಳನ್ನು ದುಡಿಯ ಮೂಲಕವೇ ತೋರಿಸುವ ಚೋಮ ಕತೆ, ಕಾದಂಬರಿ ಚಲನಚಿತ್ರಕ್ಕಿಂತಲೂ ಮಿಗಿಲಾಗಿ ನೋಡುಗರ ಮನ ಕಲಕುತ್ತಾನೆ.

ಕತೆಯ ಕೊನೆಯಲ್ಲಿ ಸಂಭವಿಸುವ ಚೋಮನ ಪುಟ್ಟ ಮಗ ನೀಲನ ಸಾವಿನ ನೋವು ಶಾಶ್ವತವಾಗಿ ಉಳಿಯುತ್ತದೆ. ಸಾವಿಗೆ ಜಾತಿ ಧರ್ಮಗಳ ಭೇದ ಭಾವವಿಲ್ಲವೆಂಬ ವಾದ ಎಲ್ಲರದ್ದು, ಆದರೆ ಇರಬೇಕಿತ್ತೆಂಬ ಭಾವ ಕ್ಷಣಕಾಲ ಬಂದಿದ್ದು ಸುಳ್ಳಲ್ಲ. ಅಸ್ಪೃಶ್ಯತೆಯೇ ಅವನ ಸಾವಿಗೆ ಕಾರಣವಾಯಿತೆಂದು ನಾಟಕದ ಸನ್ನಿವೇಶದ ನಂತರ ತಲೆತಗ್ಗಿಸುವ ಸರದಿ ನೋಡುಗರದ್ದಾಗಿತ್ತು.

ಹಲವಾರು ವರ್ಷಗಳ ಕೆಳಗೆ ಚಲನಚಿತ್ರವಾಗಿ ಸಾವಿರಾರು ಜನರನ್ನು ಈ ಕತೆ ತಲುಪಿದ್ದರೂ ನಾಟಕದಷ್ಟು ಅಂತರಂಗಕ್ಕೆ ಹತ್ತಿರವಾಗಲು ಸಾಧ್ಯವಿಲ್ಲವೆನಿಸುತ್ತದೆ. ಇದಕ್ಕೆ ಕಾರಣ ರಂಗಸುರಭಿಯ ಎಲ್ಲ ಕಲಾವಿದರ ನೈಜವಾದ ಅಭಿನಯ. ಭಾವಪೂರ್ಣವಾದ ಅಭಿನಯದಿಂದ ಎಲ್ಲಾ ಪಾತ್ರಗಳೂ ಜೀವಂತವಾಗಿ ಉಳಿದುಬಿಡುತ್ತವೆ. ಅಸ್ಪೃಶ್ಯತೆಯ ಕುರಿತು ತೋರಿಕೆಯ ಮಾತನಾಡುವವರಿಂದಲೇ ಪ್ರಪಂಚ ತುಂಬಿದೆಯೇನೋ ಎನಿಸುವ ಹೊತ್ತಿನಲ್ಲಿ ಈ ನಾಟಕ ಬಹಳ ಪ್ರಸ್ತುತವಾದುದು.

ಅಶ್ವಿ‌ನಿ, ಬ್ರಹ್ಮಾವರ

Advertisement
Advertisement

Udayavani is now on Telegram. Click here to join our channel and stay updated with the latest news.

Next