Advertisement
ಎತ್ತಿನಹೊಳೆ ಯೋಜನೆ ಜಿಲ್ಲೆಯ 4 ತಾಲೂಕುಗಳಲ್ಲಿ ಹಾದು ಹೋಗುತ್ತಿದೆ. ಸಕಲೇಶಪುರ ತಾಲೂಕಿನಲ್ಲಿ ನೀರು ಸಂಗ್ರಹ ಮತ್ತು ನೀರೆತ್ತುವ ಕಾಮಗಾರಿಗಳಿಗಷ್ಟೇ ಎತ್ತಿನಹೊಳೆ ಸೀಮಿತ. ನೀರು ಸಂಗ್ರಹಣೆಗೆ ಐದಾರು ಮಿನಿ ಡ್ಯಾಂಗಳನ್ನು ಈಗಾಗಲೇ ನಿರ್ಮಿಸಿದ್ದು, ಆ ಮಿನಿ ಡ್ಯಾಂಗಳಿಂದ ನೀರನ್ನು ಮೇಲೆತ್ತಿ ಪೈಪ್‌ಲೈನ್ ಮೂಲಕ ಸಕಲೇಶಪುರ ತಾಲೂಕು ಗಡಿ ಭಾಗ ಹರುವನಹಳ್ಳಿ ಬಳಿ ನಿರ್ಮಿಸಿರುವ ಬೃಹತ್ ತೊಟ್ಟಿಗೆ ತುಂಬಿಸಲಾಗುತ್ತದೆ.
Related Articles
Advertisement
48 ಎಕರೆ ಸ್ವಾಧೀನಕ್ಕಾಗಿ ಸುಮಾರು 20 ಕೋಟಿ ರೂ. ಪರಿಹಾರದ ಮೊತ್ತವನ್ನೂ ನಿಗಮವು ಕಾಯ್ದಿರಿಸಿಕೊಂಡಿದೆ. ಅಲ್ಲಿಗೆ ಸಕಲೇಶಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ನೀರೆತ್ತುವ ಏತ ನೀರಾವರಿಯ ಒಂದನೇ ಹಂತದ ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾಧೀನ ಪೂರ್ಣವಾಗಲಿದೆ.
ಮೊದಲ ಹಂತದ ಶೇ. 80 ಕಾಮಗಾರಿ ಪೂರ್ಣ: ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ 400 ಎಕರೆಯನ್ನು ನೇರ ಖರೀದಿ ಮಾಡಿಕೊಂಡಿರುವ ಪರಿಣಾಮ ಒಂದನೇ ಹಂತದಲ್ಲಿ ಶೇ.80ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಭೂ ಸ್ವಾಧೀನದ ವಿವಾದವಿರುವ 48 ಎಕರೆಯ ವ್ಯಾಪ್ತಿಯಲ್ಲಿ ಮಾತ್ರ ಪೈಪ್‌ಲೈನ್ ಅಳವಡಿಕೆ ಬಾಕಿ ಉಳಿದಿದೆ ಎಂದು ವಿಶ್ವೇಶ್ವಯರಯ್ಯ ಜಲ ನಿಗಮದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇನ್ನೊಂದು ತಿಂಗಳಲ್ಲಿ ಪರಿಹಾರ: 2ನೇ ಹಂತದಲ್ಲಿ ಅಂದರೆ ಒಟ್ಟು 100 ಕಿ.ಮೀ. ನಾಲೆ ನಿರ್ಮಾಣಕ್ಕೆ ಸಕಲೇಶಪುರ ತಾಲೂಕಿನ 4 ಗ್ರಾಮಗಳ ವ್ಯಾಪ್ತಿಯಲ್ಲಿ, ಆಲೂರು ತಾಲೂಕಿನ 16 ಗ್ರಾಮ, ಬೇಲೂರು ತಾಲೂಕಿನ 30 ಗ್ರಾಮ ಮತ್ತು ಆರಸೀಕೆರೆ ತಾಲೂಕಿನ 25 ಗ್ರಾಮಗಳ ವ್ಯಾಪ್ತಿಯಲ್ಲಿ 2,769 ಎಕರೆ ಸ್ವಾಧೀನದ ಪ್ರಕ್ರಿಯೆ ಅಂತಿಮ ಹಂತ (ಭೂ ಸ್ವಾಧೀನ ಕಾಯ್ದೆ 19 (1) ಪ್ರಕ್ರಿಯೆ)ದಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಪರಿಹಾರ ನಿಗದಿಯಾಗಲಿದೆ.
ಆನಂತರ ಭೂ ಮಾಲೀಕರಿಗೆ ಪರಿಹಾರ ವಿತರಣೆಯೊಂದಿಗೆ ವಿಶ್ವೇಶ್ವರಯ್ಯ ಜಲ ನಿಗಮವು ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದಾಗಿದೆ. 2,769 ಎಕರೆಗೆ ಪರಿಹಾರದ ಮೊತ್ತ 423.38 ಕೋಟಿ ರೂ. ಗಳನ್ನು ಬಿಡುಗಡೆ ಮಾಡುವಂತೆ ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರಕ್ಕೆ ಮನವಿ ಮಾಡಿದೆ.
ಸರ್ಕಾರ ಪರಿಹಾರದ ಮೊತ್ತ 423.38 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರೆ ಅಲ್ಲಿಗೆ ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಯ ಭೂ ಸ್ವಾಧೀನದ ಸಮಸ್ಯೆ ಬಹುತೇಕ ಪೂರ್ಣಗೊಂಡು ನಾಲಾ ಕಾಮಗಾರಿಗಳು ಮುಂದುವರಿಯಲು ಅಡೆತಡೆಗಳು ನಿವಾರಣೆಯಾಗಲಿವೆ. ಆನಂತರ ಹಣ ಬಿಡುಗಡೆಗೆ ತಕ್ಕಂತೆ ಸಿವಿಲ್ ಕಾಮಗಾರಿಗಳು ನಡೆಯಲಿವೆ.
ಅರಸೀಕೆರೆ ತಾಲೂಕಿಗೆ ಅನುಕೂಲ: ಎತ್ತಿನಹೊಳೆ ಯೋಜನೆಯಿಂದ ಅರಸೀಕೆರೆ ತಾಲೂಕಿಗೆ ಅನುಕೂಲವಾಗಲಿದೆ. ಆ ತಾಲೂಕಿನ 18 ರಿಂದ 20 ಕೆರೆಗಳಿಗೆ ನೀರು ತುಂಬಲಿದೆ. ಆದರೆ 100 ಕಿ.ಮೀ.ವರೆಗೆ ನಾಲೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಮಾತ್ರ ಕೆರೆಗಳಿಗೆ ನೀರು ಹರಿಯಲಿದೆ. ಇನ್ನು ಬೇಲೂರು ತಾಲೂಕಿನ ಕೆಲವು ಕೆರೆಗಳಿಗೂ ನೀರು ತುಂಬಿಸಲು ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಅಧಿಕೃತ ಆದೇಶ ಹೊರಬೀಳಬೇಕಾಗಿದೆ. ಇನ್ನು ಆಲೂರು ಮತ್ತು ಸಕಲೇಶಪುರ ತಾಲೂಕಿಗೆ ಈ ಯೋಜನೆಯಿಂದ ಪ್ರಯೋಜನ ಲಭ್ಯವಾಗುತ್ತಿಲ್ಲ.
* ಎನ್. ನಂಜುಂಡೇಗೌಡ