ಚಿಕ್ಕೋಡಿ: ನೆತ್ತಿ ಸುಡುವ ಬಿಸಿಲಿನ ಪರಿತಾಪದಿಂದ ಬೇಸತ್ತ ಹೋಗಿರುವ ಚಿಕ್ಕೋಡಿ ತಾಲೂಕಿನ ಮಡ್ಡಿ ಭಾಗದ ಜನರಿಗೆ
ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ವಡ್ರಾಳ ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಕರೋಶಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಡ್ರಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ದಿನಕ್ಕೊಮ್ಮೆಬರಬೇಕಾದ ನೀರು ಒಂದು ವಾರದವರಿಗೆ ಬರುತ್ತಿಲ್ಲ ಎಂಬುದು ಮಡ್ಡಿ ಭಾಗದ ಜನರ ಆಕ್ರೋಶವಾಗಿದೆ.
ಪ್ರತಿ ವರ್ಷ ಬರಗಾಲದಿಂದ ನರಳಿ ಹೋಗುತ್ತಿರುವ ವಡ್ರಾಳ ಗ್ರಾಮಸ್ಥರಿಗೆ ಈ ವರ್ಷವು ಕೂಡಾ ಹನಿ ನೀರಿಗಾಗಿ
ಪರಿತಪಿಸುವ ಪ್ರಸಂಗ ಎದುರಾಗಿದೆ. ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ಸಹ ಪ್ರಯೋಜನೆವಾಗುತ್ತಿಲ್ಲ, ನೀರಿನ ಸಮಸ್ಯೆ ಕಂಡು ಅಧಿಕಾರಿಗಳು ಒಂದು ಕೊಳವೆ ಬಾವಿ ಕೊರೆಯಿಸಿ 15 ದಿನವಾದರೂ ಅದಕ್ಕೆ ಪಂಪ್‌ಸೆಟ್ ಅಳವಡಿಸಿಲ್ಲ ಹೀಗಾಗಿ ನಾವು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಡ್ರಾಳ ಗ್ರಾಮದ ಲಕ್ಷ್ಮೀ ನಗರದಲ್ಲಿ ಈ ತರಹದ ಕುಡಿಯುವ ನೀರಿಗಾಗಿ ಪ್ರತಿದಿನ ಪರದಾಡಬೇಕಾದ ಪ್ರಸಂಗ ಇದು. ಬೇಸಿಗೆ ಬಂದ ಮೇಲೆ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬುಗಿಲೇಳುತ್ತಿದೆ. ದಿನಬೆಳಗಾದರೆ ಕುಡಿಯುವ ನೀರಿಗಾಗಿ ಮಕ್ಕಳು, ಮಹಿಳೆಯರು ಮೈಲುಗಟ್ಟಲೇ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಗ್ರಾಮದ ಲಕ್ಷ್ಮೀ ನಗರದಲ್ಲಿ 50 ರಿಂದ 60 ಕುಟುಂಬಗಳಿಗೆ ಸಮರ್ಪಕ ಕುಡಿಯುವ ನೀರು ಲಭಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಪ್ರತಿ ಚುನಾವಣೆ ಬಂದಾಗ ರಾಜಕಾರಣಿಗಳು ಬಂದು ಸಮರ್ಪಕ ನೀರು ಕೊಡುತ್ತೇವೆಂದು ಭರವಸೆ ನೀಡಿ ಹೋಗುತ್ತಾರೆ. ಆದರೆ ಇಲ್ಲಿಯವರಿಗೆ ಯಾರು ನಮ್ಮ ಗೋಳು ಕೇಳುತ್ತಿಲ್ಲ, ಇದೀಗ ಚುನಾವಣೆ ಬಂದಾಗ ಮಾತ್ರ ಮತ್ತೆ ವೋಟು ಕೇಳಲು ಬರುತ್ತಿದ್ದಾರೆ. ನಮಗೆ ಯಾರು ನೀರು ಕೊಡುತ್ತಾರೆಯೋ ಅಂತಹ ವ್ಯಕ್ತಿಗೆ ವೋಟು ಹಾಕುತ್ತೇವೆ.
ಜಯಶ್ರೀ ಇರಬಾಳೆ, ಗ್ರಾಮಸ್ಥ
ಬಾವಿ, ಕೊಳವೆಬಾವಿ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಗಿತ ಇದ್ದ ಕಡೆಯಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಕೊಳವೆ ಬಾವಿ ಇದ್ದ ಕಡೆಗಳಲ್ಲಿ ಪಂಪ್‌ಸೆಟ್ ಅಳವಡಿಸಿ ಸಾರ್ವಜನಿಕರಿಗೆ ನೀರು ಕೊಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಡಾ| ಸಂತೋಷ ಬಿರಾದಾರ ತಹಶೀಲ್ದಾರ್, ಚಿಕ್ಕೋಡಿ
ಮಹಾದೇವ ಪೂಜೇರಿ