Advertisement

ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆ ಭರವಸೆ

11:49 AM Feb 25, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆಯೊಂದಿಗೆ 25 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

Advertisement

ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿರುವ ಬೆಂಗಳೂರು ಮಹಾನಗರ ವಿಪ್ರರ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯ ಮೀಸಲಾತಿಗೆ ಬದಲಾಗಿ ಸಮಾನತೆ ಕೋರಿದ್ದು, ಇದಕ್ಕೆ ನನ್ನ ಸಹಮತವಿದೆ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲೂ ನಿಗಮ ಸ್ಥಾಪನೆಯ ಬೇಡಿಕೆ ನ್ಯಾಯಯುತವಾಗಿದೆ.

ಮುಂದೆ ಖಂಡಿತ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಆಗ ಸಮುದಾಯದ ಎಲ್ಲ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಎಲ್ಲರಿಗೂ ಒಳಿತನ್ನು ಬಯಸುವ ಬ್ರಾಹ್ಮಣ ಸಮುದಾಯ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಅರ್ಚಕರ ಗೌರವಧನ ಹೆಚ್ಚಳಕ್ಕೆ ಮುಂದಾದೆ. ಇದೀಗ ಗೌರವಧನ 4000 ರೂ.ಗೆ ಏರಿಕೆಯಾಗಿದ್ದು, ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ವಾಮೀಜಿಗಳು, ಆರ್‌ಎಸ್‌ಎಸ್‌ ಕಾರ್ಯ ಚಟುವಟಿಕೆಗಳ ಪರಿಣಾಮವಾಗಿ ಧರ್ಮದ ಹೆಸರೇಳಲು ಹಿಂದೇಟು ಹಾಕುತ್ತಿದ್ದವರೆಲ್ಲಾ ಇಂದು ತಾವು ಹಿಂದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಆದರೆ ಹಿಂದು ಧರ್ಮದ ನಂಬಿಕೆಗಳಿಗೆ ಬದ್ಧರಾಗಿದ್ದಾರೆಯೇ ಎಂದು ಸಮಾಜ ಪ್ರಶ್ನಿಸಬೇಕು. ರಾಮ ಮಂದಿರ ನಿರ್ಮಾಣ, ಗೋಹತ್ಯೆ ನಿಷೇಧದ ವಿಚಾರದಲ್ಲೂ ಬೆಂಬಲಿಸುತ್ತಾರೆಯೇ ಎಂದು ಅವರನ್ನು ಪ್ರಶ್ನೆ ಮಾಡಬೇಕು ಎಂದು ಹೇಳಿದರು.

ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಶಾಸಕರಾದ ಎಸ್‌.ಸುರೇಶ್‌ಕುಮಾರ್‌, ಬಿ.ಎನ್‌.ವಿಜಯ ಕುಮಾರ್‌, ಬಿಜೆಪಿ ಮುಖಂಡ ಸುಬ್ಬನರಸಿಂಹ, ಉದ್ಯಮಿ ಉದಯ್‌ ಗರುಡಾಚಾರ್‌, ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next