Advertisement
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಶಿಕ್ಷಕ-ಶಿಕ್ಷಕಿಯರಿಗೆ ನಡೆದ ಕನ್ನಡ ಭಾಷೆಯಲ್ಲಿ ಜಾನಪದ ಸೊಗಡು ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬದುಕಿನಲ್ಲಿ ಜಾನಪದ ಹಾಸುಹೊಕ್ಕಾಗಿರು ವುದನ್ನು ಗಾದೆ ಮಾತುಗಳು, ಹಾಡುಗಳನ್ನು ಉದಾಹರಿಸಿ ಸ್ವಾರಸ್ಯಕರವಾಗಿ ವಿವರಿಸುವ ಮೂಲಕ ಸಭೆಯ ಗಮನ ಸೆಳೆದರು.
Related Articles
Advertisement
ಬದುಕಿನ ಸ್ವಾರಸ್ಯವನ್ನು ಕಾಪಿಡುವಂತಹದ್ದು ಜಾನಪದ ಸಂಸ್ಕೃತಿಯಾಗಿದ್ದು, ಇದು ಬದುಕಿಗೆ ಪೂರಕ ಮತ್ತು ಪ್ರೇರಕವಾಗಿದೆ. ಯಾವತ್ತು ನಮ್ಮ ಜಾನಪದ ಸಂಸ್ಕೃತಿಯ ಭಾಗವಾದ ನೆಲದ ಭಾಷೆಯನ್ನು ನಾವು ಹೊರ ಹಾಕಿ ಇತರ ಭಾಷೆಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಲು ಮುಂದಾಗುತ್ತೇವೋ ಅದು ಯಾವತ್ತೂ ಮಾರಕ ವಾಗುತ್ತದೆ. ವಿಶ್ವಮಾನವತೆಯ ಜಾನಪದ ಸಂಸ್ಕೃತಿಯ ಬೇರುಗಳು ಸಡಿಲವಾಗಿಲ್ಲ. ಆದರೆ, ಇಂತಹ ಜಾನಪದಕ್ಕೆ ಕಸಿ ಮಾಡಲು ಹೊರಟಾಗ ಕಸಿವಿಸಿಯಾಗುತ್ತದೆಂದು ಇಂದಿನ ಆಂಗ್ಲಭಾಷಾ ವ್ಯಾಮೋಹ ಮತ್ತು ಸಂಸ್ಕೃತಿಯ ಅನುಕರಣೆಯನ್ನು ಕಣ್ಣನ್ ಟೀಕೆಗೆ ಒಳಪಡಿಸಿದರು.
ಇಂಗ್ಲಿಷ್ ವ್ಯಾಮೋಹದಿಂದ ಇಂಟರ್‌ನ್ಯಾಷನಲ್ ಸ್ಕೂಲ್‌ಗಳಿಗೆ ದಾಖಲಾಗುವ ಮಕ್ಕಳು ತಮ್ಮ ಮೂಲ ಸಂಸ್ಕೃತಿಯಿಂದ ದೂರವಾಗಿ ಅಂತರ್ ಪಿಶಾಚಿಗಳಂತಾಗುತ್ತಿರುವ ಬಗ್ಗೆ ಅತೀವ ಬೇಸರವನ್ನು ವ್ಯಕ್ತಪಡಿಸಿದ ಕಣ್ಣನ್, ನಮ್ಮೆಲ್ಲ ಭಾವನೆಗಳಿಗೆ ಹತ್ತಿರವಾದ ಭಾಷೆಯನ್ನು ದೂರಮಾಡಿ ಬದುಕು ಜಠಿಲವಾಗುತ್ತಿದೆಯೆಂದರು.
ಪ್ರಸ್ತುತ ವ್ಯವಸ್ಥೆಯಡಿ ಯಾವುದಾದರು ಒಂದು ವೃತ್ತಿ ಜಾತ್ಯತೀತವೆಂದಿದ್ದರೆ ಅದು ಶಿಕ್ಷಕ ವೃತ್ತಿ. ಶಿಕ್ಷಕ ಮತ್ತು ಶಿಕ್ಷಕಿಯರು ಸಮಾಜದ ರಕ್ಷಕ ಮತ್ತು ರಕ್ಷಕಿಯರೆ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ವಿಚಾರಗೋಷ್ಠಿಯನ್ನು ಸಸಿಗೆ ನೀರೆರೆದು ಉದ್ಘಾಟಿಸಿದ ಮಾತನಾಡಿದ ರೋಟರಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ರೊಟರಿ ಸಂಸ್ಥೆ ತನ್ನ ಕ್ಲಬ್‌ಗಳ ಮೂಲಕ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದರು. ಪ್ರಸ್ತುತ ಶಿಕ್ಷಣಕ್ಕೆ ಪೂರಕವಾದ ಟೀಚ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, 10 ಸಾವಿರ ಇ-ಲರ್ನಿಂಗ್ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಿದೆಯೆಂದು ತಿಳಿಸಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಜೀವನ ಮೌಲ್ಯಗಳು ಅಳಿಸಿಹೋಗುತ್ತಿರುವ ಹಂತದಲ್ಲಿ ಗ್ರಾಮೀಣ ಜಾನಪದ ಸೊಗಡನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳುವುದು ಅತ್ಯವಶ್ಯ ಎಂದರು.
ವ್ಯಾವಹಾರಿಕವಾಗಿ ನಾವು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳನ್ನು ಬಳಸುತ್ತೇವಾದರು ನೆಲದ ಭಾಷೆ ಕನ್ನಡದ ಬಳಕೆಯಿಂದ ಮಾತ್ರ ಇದು ನನ್ನದು ಎನ್ನುವ ಭಾವನೆ ಮೂಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮಂಜುನಾಥ್‌ಗೆ ಗೌರವಾರ್ಪಣೆ ಹಿರೇಮಗಳೂರು ಕಣ್ಣನ್ ಮತ್ತು ಅವರನ್ನು ಇಲ್ಲಿಗೆ ಬರಮಾಡಿಕೊಳ್ಳಲು ಕಾರಣರಾದ ಹಿರಿಯ ಪತ್ರಕರ್ತ ಎಂ.ಎನ್. ಮಂಜುನಾಥ್ ಅವರನ್ನು ಇದೇ ಸಂದರ್ಭ ಗೌರವಿಸಲಾಯಿತು. ಇದೇ ಸಂದರ್ಭ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು.ವೇದಿಕೆಯಲ್ಲಿ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಮಿಸ್ಟಿ ಹಿಲ್ಸ್ ಗೌರವ ಕಾರ್ಯದರ್ಶಿ ಪಿ.ಎಂ. ಸಂದೀಪ್, ರೋಟರಿ ಟೀಚ್ ಕಾರ್ಯಕ್ರಮದ ಅಧ್ಯಕ್ಷರಾದ ರಾಜೇಶ್ ಬಿ.ಎಂ. ಉಪಸ್ಥಿತರಿದ್ದರು.