Advertisement

ತಪ್ಪಿಸಿಕೊಂಡ ಕರಡಿ ಮರಿ

10:38 AM Oct 11, 2019 | sudhir |

ಮಂದರ ಪರ್ವತ ಸಾಲಿನಲ್ಲಿದ್ದ ಬುಡದ ಬಂಡೆಗಳ ನಡುವೆ ಹತ್ತಾರು ಕರಡಿಗಳು ವಾಸವಾಗಿದ್ದವು. ಒಂದು ದಿನ ತನ್ನ ಪರಿವಾರದೊಂದಿಗೆ ಹೊರಟ ಮರಿ ಕರಡಿ ಆಕಸ್ಮಿಕವಾಗಿ ಗುಂಪಿನಿಂದ ತಪ್ಪಿಸಿಕೊಂಡುಬಿಟ್ಟಿತು.

Advertisement

ಭಯಗೊಂಡು ಅದು ತನ್ನವರನ್ನು ಹುಡುಕುತ್ತ ಕಾಡಂಚನ್ನು ತಲುಪಿತು. ಹಸಿವು ನೀರಡಿಕೆಯಿಂದ ನಿತ್ರಾಣಗೊಂಡಿತ್ತು. ಕತ್ತಲು ಕವಿದಾಗ ದಾರಿಯಲ್ಲಿ ಸಿಕ್ಕ ದೊಡ್ಡ ಆಲದ ಮರದ ಕೆಳಗೆ ಧೊಪ್‌ ಎಂದು ಕುಸಿದುಬಿದ್ದಿತು. ಆ ಶಬ್ದ ಕೇಳಿ ಮರಿಯಾನೆಯೊಂದು ಓಡಿ ಬಂದಿತು. ನೆಲದಲ್ಲಿ ಬಿದ್ದ ಕರಡಿಯನ್ನು ಪಿಳಿ ಪಿಳಿ ನೋಡಿತು. ನಂತರ ಮರಿಯಾನೆ ತನ್ನ ಅಮ್ಮನ ಬಳಿ ತೆರಳಿ ತೊದಲುತ್ತಾ ತಾನು ಕಂಡಿದ್ದನ್ನು ಹೇಳಿತು. ಅಮ್ಮ ಮತ್ತು ಮರಿಯಾನೆ ಎರಡೂ ಕರಡಿ ಇದ್ದ ಜಾಗಕ್ಕೆ ಬಂದಿತು. ತಾಯಿ ಆನೆ ಕರಡಿ ಬಳಿ ಬಂದು ಅದರ ಮೈದಡವಿತು. ಕರಡಿ ಎಚ್ಚರಗೊಳ್ಳಲಿಲ್ಲ. ಕರಡಿ ಪ್ರಜ್ಞಾಶೂನ್ಯವಾಗಿದ್ದು ಆನೆಗೆ ತಿಳಿಯಿತು. ಅದಕ್ಕೊಂದು ಉಪಾಯ ಹೊಳೆಯಿತು.

ಅದು ತನ್ನ ತಲೆ ಎತ್ತಿ ಮರವನೊಮ್ಮೆ ದಿಟ್ಟಿಸಿತು. ಎರಡು ಹೆಜ್ಜೆ ಹಿಂದೆ ಬಂದು ಓಡುತ್ತಾ ರಭಸದಿಂದ ಇದ್ದ ಬಲವನ್ನೆಲ್ಲ ಬಳಸಿ ಮರಕ್ಕೆ ಡಿಕ್ಕಿ ಹೊಡೆಯಿತು. ಆ ಮರದಲ್ಲಿ ಒಂದು ಜೇನುಗೂಡಿತ್ತು. ಅದನ್ನು ಕಂಡೇ ಆನೆ ಮರಕ್ಕೆ ಡಿಕ್ಕಿ ಹೊಡೆದಿತ್ತು. ಆನೆಯ ಬಲಕ್ಕೆ ಮರ ಅಲುಗಾಡಿ ಜೇನುತುಪ್ಪ ಕೆಳಗೆ ನೆಲದ ಮೇಲಿದ್ದ ಕರಡಿಯ ಬಾಯಿಗೆ ಬಂದು ಬಿತ್ತು. ಜೇನುತುಪ್ಪದ ಪರಿಮಳ ಬರುತ್ತಿದ್ದಂತೆಯೇ ಎಚ್ಚರವಾಯಿತು. ಬಾಯಿ ತೆರೆದು ಮುಖದ ಮೇಲಿದ್ದ ಜೇನುತುಪ್ಪವನ್ನು ನೆಕ್ಕತೊಡಗಿತು. ಹೊಟ್ಟೆಗೆ ಜೇನುತುಪ್ಪ ಬೀಳುತ್ತಿದ್ದಂತೆಯೇ ಮರಿ ಕರಡಿಯ ನಿಶ್ಯಕ್ತಿ ಹೋಯಿತು. ಅದು ಆನೆ ಮತ್ತು ಮರಿಯಾನೆಗೆ ಧನ್ಯವಾದ ಅರ್ಪಿಸಿತು. ಅಷ್ಟರಲ್ಲಿ ಕರಡಿಗಳ ಪರಿವಾರವೂ ಕಳೆದುಹೋಗಿದ್ದ ಕರಡಿಯನ್ನು ಹುಡುಕುತ್ತಾ ಅಲ್ಲಿಗೆ ಬಂದಿತು. ಅಂದಿನಿಂದ ಆನೆ ಮತ್ತು ಕರಡಿ ಪರಿವಾರ ಸ್ನೇಹಿತರಾದವು.

– ಅರವಿಂದ ಜಿ.ಜೋಷಿ

Advertisement

Udayavani is now on Telegram. Click here to join our channel and stay updated with the latest news.

Next