Advertisement

ಮೊದಲ ದಿನದ ಡ್ಯೂಟಿ ಪ್ರಸಂಗ

05:34 AM May 26, 2020 | Lakshmi GovindaRaj |

ಮೊದಲ ದಿನದ ಡ್ಯೂಟಿ ಪ್ರಸಂಗಭಾನುವಾರಕ್ಕೂ, ಉಳಿದ ದಿನಗಳಿಗೂ ವ್ಯತ್ಯಾಸವೇ ಇರಲಿಲ್ಲ! ಬರ್ಮುಡ, ಟಿ ಶರ್ಟ್‌ ಹಾಕಿಕೊಂಡು ಮೀಟಿಂಗ್‌ ಅಟೆಂಡ್‌ ಮಾಡುತ್ತಿದ್ದುದೇ ಆಗಿತ್ತು. ಇಂತಿಪ್ಪ ಲಾಕ್‌ಡೌನ್‌ ಹಾಲಿಡೇಸ್‌ (?) ಮುಗಿದೇ  ಹೋಗುವುದು ಬೇಕೋ ಬೇಡವೋ, ಎಂಬ ಸಂಕಟ. ಮೊನ್ನೆ ಕಂಪನಿಯಿಂದ ಒಂದು ಮೇಲ್‌ ಬಂದಿತ್ತು: “ಬ್ಯುಸಿನೆಸ್‌ ಅಗತ್ಯದ ಕಾರಣವಾಗಿ ಆಫೀಸಿಗೆ ಬನ್ನಿ’ ಅಂತ. ನಾವು ಮ್ಯಾನೇಜರ್‌ಗೆ ಕ್ರಿಟಿಕಲ್‌ ರಿಸೋರ್ಸ್‌ ಅನ್ನಿಸುವುದು ಎರಡೇ  ಸಂದರ್ಭಗಳಲ್ಲಿರಬೇಕು, ಒಂದು: ನಾವು ಯಾವಾಗಾದರೂ ರಜೆ ಬೇಕು ಅಂತ ಕೇಳಿದಾಗ. ಇನ್ನೊಂದು: ಅವರ ಕೆಲಸವನ್ನು ಡೆಲಿಗೇಟ್‌ ಮಾಡಲು ಯಾರಾದರೊಬ್ಬರು ಬೇಕಾದಾಗ.

Advertisement

ಸರಿ, ಮುಂದಿನ ವಾರದಿಂದ ಆಫೀಸಿಗೆ ಹೋಗುವುದು ಅಂತ ಆಯ್ತು. ಈಗ ನಾವು ಲಾಕ್‌  ಡೌನ್‌ನಿಂದ ಮಾಡಿಕೊಂಡಿರುವ ದಿನಚರಿಯನ್ನು ಬ್ರೇಕ್‌ ಮಾಡುವುದು ಎಷ್ಟು ಕಷ್ಟ ಅಂತ ಅವರಿಗೇನಾದರೂ ಗೊತ್ತಾ? ಬೆಳಗ್ಗೆ ಏಳಕ್ಕೆ ಏಳಬೇಕು, ಎಂಟರೊಳಗೆ ತಿಂಡಿ ಆಗಬೇಕು,  ಒಂಬತ್ತಕ್ಕೆ  ಆಫೀಸಿನಲ್ಲಿರಬೇಕು. ನಿದ್ದೆ, ಸಿನಿಮಾ, ಸೀರೀಸ್‌ ನೋಡುವುದು ಎಲ್ಲವನ್ನೂ ತ್ಯಾಗ ಮಾಡಬೇಕು. ಒಲ್ಲದ ಮನಸ್ಸಿಂದಲೇ ರೆಡಿಯಾಗಿ, ಗಾಡಿ ತೆಗೆಯೋಣ ಅಂತ ಬೇಸ್‌ಮೆಂಟ್‌ಗೆ ಹೋದ್ರೆ, ನನ್ನ ಗಾಡಿಯನ್ನು ಯಾವುದೋ  ಮೂಲೆಗೆ ಒತ್ತರಿಸಿ ಹಾಕಿದ್ದಾರೆ. ಅದನ್ನು ಒಂದು ವಾರದಿಂದ ತೆಗೆದಿಲ್ಲ ಅನ್ನೋದು ನೆನಪಾಯ್ತು. ಹೇಗೋ ಸರ್ಕಸ್‌ ಮಾಡಿ, ಎಳೆದು ಜರುಗಿಸಿಕೊಂಡೆ.

ಅಷ್ಟರಲ್ಲೇ ಬೆವರಲು ಶುರುವಾಯ್ತು, ಲೇಟ್‌ ಬೇರೆ ಆಗುತ್ತಿತ್ತು. ಇನ್ನೇನು ಕಿಕ್‌  ಹೊಡೆಯಬೇಕು; ಅಷ್ಟರಲ್ಲಿಯೇ ಅಲ್ಲಿನ ಕೆಟ್ಟ ವಾಸನೆ ತಡೆಯಲಾಗದೆ ಕೆಮ್ಮು ಬಂತು! ಕೆಮ್ಮಿದರೆ ಕೊರೊನಾ ಅಂತ ಅನುಮಾನಿಸುವ ಜನ ಸುತ್ತಲೂ ಇದ್ದರು. “ಇವತ್ತು ಮಂಗಳವಾರ ಬೇರೆ, ಹುಷಾರು’ ಎಂಬ ಹೆಂಡತಿಯ ಮಾತೂ ನೆನಪಾಗಿ ಭಯವಾಯ್ತು. ಸದ್ಯಕ್ಕೆ, ಅವತ್ತು ಗಾಡಿ ಕೈ ಕೊಡಲಿಲ್ಲ. ನಮ್ಮ ಮನೆಯ ಕ್ರಾಸ್‌ನಿಂದ ಮೇನ್‌ ರೋಡಿಗೆ ಹೋಗುತ್ತೇನೆ, ಲಾಕ್‌ಡೌನ್‌ನಲ್ಲಿ ವಿಶಾಲ ಮೈದಾನದಂತಿದ್ದ ರೋಡುಗಳು, ಮತ್ತೆ ಕಿರಿದಾಗಿಬಿಟ್ಟಿವೆ. ಎಲ್ಲಾ  ಓಣಿಗಳಿಂದಲೂ ಕಾರು, ಸ್ಕೂಟರ್‌ಗಳು ಸಾಗರ ಸೇರಲು ಹೊರಟ ನದಿಗಳಂತೆ ಮೇನ್‌ ರೋಡಿಗೆ ಬಂದು ಸೇರುತ್ತಿವೆ.

ಇವರ್ಯಾರಿಗೂ ಕೊರೊನಾ ಎಂದರೆ ಭಯವೇ ಇಲ್ಲವೆ? ಅಂತ ಗಾಬರಿಯಾಯ್ತು. ಲಾಕ್‌ಡೌನ್‌ನಲ್ಲಿ ಪ್ರಶಾಂತ ಸಾಗರದಂತಿದ್ದ ಬೆಂಗಳೂರಿನ ರೋಡುಗಳು, ಲಾಕ್‌ಡೌನ್‌ ಸಡಿಲವಾದಂತೆ ಮತ್ತೆ ಮೊರೆಯಲು ಶುರುವಾಗಿವೆ. ನಾನು ನಿಧಾನವಾಗಿ ಗಾಡಿ ಓಡಿಸುತ್ತಿದ್ದೆ, ಪಕ್ಕದಲ್ಲೇ ಮತ್ತೂಬ್ಬ, ನನ್ನನ್ನು ಓವರ್‌ಟೇಕ್‌ ಮಾಡಿದ, ನೋಡಿದರೆ, ಮಾಸ್ಕ್‌  ಡ ಹಾಕಿಕೊಂಡಿಲ್ಲ ಪುಣ್ಯಾತ್ಮ. ಅವನಿಂದ ಕೊರೊನಾ ಬಂದರೆ ಏನಪ್ಪಾ ಗತಿ?- ಈ ಯೋಚನೆ ಬಂದಾಗ ನಿಂತಲ್ಲೇ ನಡುಗಿಹೋದೆ. ಹಾಗೋ, ಹೀಗೋ ಆಫೀಸ್‌ ತಲುಪಿ, ಗಾಡಿ ಪಾರ್ಕ್‌ ಮಾಡೋಕೆ ಹುಡುಕಿದರೆ, ಅದರ ಲೇಔಟ್‌ ಅನ್ನೇ  ಬದಲಿಸಿಟ್ಟಿದ್ದಾರೆ. ಇದು ನಮ್ಮ ಆಫೀಸೇನಾ ಅನ್ನಿಸುವಷ್ಟು ಅಯೋಮಯ.

ಬೇಸ್‌ಮೆಂಟಿನ ಲಿಫ್ಟ್‌ ಒಳಗೆ ಹೋಗಬೇಕು; ಅಷ್ಟರಲ್ಲೇ ಇಬ್ಬರನ್ನು ಟೆಂಪರೇಚರ್‌ ಚೆಕ್‌ ಮಾಡಲು, ಸ್ಯಾನಿಟೈಸರ್‌ ಹಾಕಲು ನಿಲ್ಲಿಸಿದ್ದರು. ಲಿಫ್ಟ್‌ ಒಳಗೆ  ಆಗಲೇ ಐದು ಜನ ಇದ್ದರು. ಭೌತಿಕ ಅಂತರ, ಸಾಮಾಜಿಕ ಅಂತರ ಬಹಳ ಮುಖ್ಯ ಅಂತ ತಿಂಗಳಿಡೀ ಜಪಿಸಿದ್ದೆ. ಇಲ್ಲಿ ನೋಡಿದರೆ ಒಬ್ಬರಿಗೊಬ್ಬರು ಅಂಟಿಕೊಳ್ಳದಿದ್ದರೆ ಪುಣ್ಯ ಅನ್ನುವಂತೆ ನಿಂತಿದ್ದಾರೆ! ಅಷ್ಟೆ: ಲಿಫ್ಟ್‌ನ ಬಟನ್‌ಗಳನ್ನು ಮುಟ್ಟಲೂ ಭಯವಾಯ್ತು.  ಒಂದೊಂದೇ ಮೆಟ್ಟಿಲೇರಿ ಆಫೀಸ್‌ ತಲುಪಿದಾಗ, ಉಬ್ಬಸ ಜೊತೆಯಾಗಿತ್ತು… ಆಫೀಸಿನ ಫ್ಲೋರ್‌ನಲ್ಲಿ ಇಳಿದು ರಿಸೆಪ್ಷನ್‌ಗೆ ಬಂದರೆ, ಅಲ್ಲೂ ಟೆಂಪರೇಚರ್‌ ಚೆಕ್‌ ಮತ್ತು ಮಾಸ್ಕ್‌ ವಿತರಣೆ  ಆಯ್ತು.  ಸ್ಯಾನಿಟೈಸರ್‌ ಅಂತೂ, ತೀರ್ಥ ಪ್ರಸಾದದ ಥರ ಆಗಿಬಿಟ್ಟಿದೆ.

Advertisement

ಒಳಗೆ ಹೋಗಿ ನನ್ನ ಕ್ಯುಬಿಕಲ್‌ ಅಲ್ಲಿ ಕೂತುಕೊಂಡೆ. ಅಲ್ಲಿ ಕೆಲಸ ಮಾಡುವಾಗಲೂ ಏನೇನೋ ಯೋಚನೆ. ದಾರಿಯಲ್ಲಿ ಬರುವಾಗ, ತುಂಬಾ ಹತ್ತಿರಕ್ಕೆ ಯಾರಾದರೂ ಬಂದಿದ್ದರಾ? ಪಾರ್ಕಿಂಗ್‌ನಲ್ಲಿ ಜೋರಾಗಿ  ಉಸಿರು ಬಿಟ್ಟನಲ್ಲ, ಆತ ಮಾಸ್ಕ್‌ ಹಾಕಿರಲಿಲ್ಲ. ಆಫೀಸ್‌ನ ಒಳಬಂದಾಗ ಕೈ ತೊಳೆಯಲಿಲ್ಲವಲ್ಲ… ಇಂಥವೇ ಯೋಚನೆಗಳು ಹಣ್ಣು ಮಾಡಿದವು. ಇದನ್ನೆಲ್ಲಾ ಯಾರ ಜೊತೆಗಾದರೂ ಹೇಳಿದರೆ,  ನನ್ನ ಗಂಟಲು ದ್ರವ ಪರೀಕ್ಷೆಗೆ ಒತ್ತಾಯಿಸುವುದು ಗ್ಯಾರಂಟಿ ಅನ್ನಿಸಿದಾಗ, ಗಪ್‌ಚುಪ್‌ ಆಗಿ ಕೂತುಬಿಟ್ಟೆ.  ಹಂ, ಆಗಿದ್ದಾಗಲಿ, ಇನ್ನು ಕೆಲಸಶುರುಮಾಡೋಣ ಅಂದುಕೊಂಡು, ನನ್ನ ಸಿಸ್ಟಮ್‌ ಆನ್‌ ಮಾಡಿ ನೋಡುತ್ತೇನೆ;

ಮನೆಯಲ್ಲಿ ತಿಂಗಳುಗಳ ಕಾಲ ಸತತವಾಗಿ ಲ್ಯಾಪ್‌ಟಾಪ್‌ ಬಳಸಿದ್ದರಿಂದಲೋ ಏನೋ, ಮೌಸ್‌ ಹಿಡಿಯುವುದೇ ಕಷ್ಟವಾಗುತ್ತಿದೆ. ಕೈ ಬೆರಳುಗಳು ದಾರಿ ತಪ್ಪಿ ಎತ್ತೆತ್ತಲೋ ಸಾಗುತ್ತಿವೆ. ಹೀಗಿದ್ದಾಗಲೇ, ಮಾಸ್ಕ್‌ ಒಳಗಿಂದ ಮೂಗು ಬೇರೆ  ತುರಿಸಲು ಶುರುವಾಯ್ತು. ಮಾಸ್ಕ್‌ ತೆಗೆಯೋಹಾಗಿಲ್ಲ, ಮೂಗು ಉಜ್ಜದೇ ಇರುವ ಹಾಗಿಲ್ಲ. ಏನ್‌ ಮಾಡೋದು ಅಂತ ಯೋಚಿಸ್ತಾ ಇದ್ದಾಗಲೇ, ಟ್ರಾμಕ್‌ಲಿ ಸಿಕ್ಕಿಕೊಂಡ್ರೆ ಕೊರೊನಾ ಬರ್ತದಂತೆ, ಹುಷಾರು ಎಂದು ಗೆಳೆಯ ಮೆಸೇಜ್‌ ಕಳಿಸಿದ! ಅಷ್ಟೆ; ಮಾಡಬೇಕಿದ್ದ ಕೆಲಸವೆಲ್ಲಾ ಮರೆತು ಹೋಗಿ, ಮನೆ ತಲುಪೋದು ಹೇಗೆ ಎಂಬ ಯೋಚನೆ ಶುರು ಆಯ್ತು. ಸಂಜೆ, ಎಲ್ಲರನ್ನೂ ಅನುಮಾನದಿಂದ ನೋಡುತ್ತಲೇ ಬೈಕ್‌ ಓಡಿಸಿಕೊಂಡು, ಒಮ್ಮೆಯೂ ಕೆಮ್ಮದೆ ಮನೆ ತಲುಪಿದೆ!

* ಪ್ರಸಾದ್‌ ಡಿ.ವಿ., ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next