ಬಾಹುಕ ಎಂಬ ರಾಜ ಶತ್ರುಗಳಿಂದ ಸೋತ. ಅವನು ಹೆಂಡತಿಯೊಡನೆ ಕಾಡಿಗೆ ಹೋದ. ಅಲ್ಲೇ ಆಕಸ್ಮಿಕವಾಗಿ ಮರಣ ಹೊಂದಿದ. ಆಗ ಅವನ ಹೆಂಡತಿ ಗರ್ಭಿಣಿ. ಅವಳು ಸಹಗಮನ ಮಾಡಲು ತೀರ್ಮಾನಿಸಿದಳು. ಔರ್ತನೆಂಬ ಋಷಿಯು ಅವಳನ್ನು ತಡೆದ. ಅವಳಿಗೆ ಗಂಡು ಮಗುವಾಯಿತು. ಅವನೇ “ಸಗರ’. ಔರ್ತ ಋಷಿಯೇ ಮಗುವನ್ನು ಬೆಳೆಸಿ, ವಿದ್ಯಾಭ್ಯಾಸ ಮಾಡಿಸಿದ. ಪರಾಕ್ರಮಿ ಯುವಕನಾದ ಸಗರನು ಶತ್ರುಗಳನ್ನು ಸೋಲಿಸಿ, ತಂದೆಯ ರಾಜ್ಯವನ್ನು ಪಡೆದು ಚಕ್ರವರ್ತಿಯಾದ.
ಸಗರನಿಗೆ ಇಬ್ಬರು ಹೆಂಡತಿಯರು. ಮೊದಲನೆಯವಳು ಕೇಶಿನಿ. ಅವಳಿಗೆ ಒಬ್ಬನೇ ಮಗ. ಹೆಸರು ಅಸಮಂಜ. ಅವನ ಹಿಂದಿನ ಜನ್ಮದಲ್ಲಿ, ಅವನ ತಪಸ್ಸಿಗೆ ಭಂಗ ಬಂದಿತ್ತು. ಈ ಜನ್ಮದಲ್ಲಿಯೂ ಅವನಿಗೆ ಅದರ ನೆನಪಿತ್ತು. ಹುಚ್ಚನಂತೆ ನಡೆದುಕೊಳ್ಳುತ್ತಿದ್ದ. ಮಕ್ಕಳನ್ನು ಸರಯೂ ನದಿಗೆ ಎತ್ತಿಹಾಕುತ್ತಿದ್ದ. ಸಗರನು ಅವನನ್ನು ರಾಜ್ಯದಿಂದಲೇ ಓಡಿಸಿಬಿಟ್ಟ. ಅವನು ತನ್ನ ಯೋಗಶಕ್ತಿಯಿಂದ ತಾನು ನದಿಗೆ ತಳ್ಳಿದ್ದ ಮಕ್ಕಳನ್ನು ಬದುಕಿಸಿ, ರಾಜ್ಯವನ್ನು ಬಿಟ್ಟು ಹೊರಟುಹೋದ. ಸಗರನ ಎರಡನೆಯ ಹೆಂಡತಿ ಸುಮತಿ. ಅವಳಿಗೆ ಅರವತ್ತು ಸಾವಿರ ಗಂಡು ಮಕ್ಕಳು!
ಸಗರನ ಗುರು ಔರ್ತ ಋಷಿಯು ಅವನಿಗೆ ಅಶ್ವಮೇಧ ಯಾಗವನ್ನು ಮಾಡುವಂತೆ ಪ್ರೇರೇಪಿಸಿದ. ಸಗರನು ಯಾಗವನ್ನು ಮಾಡಿದ. ಅನಂತರ ಅವನಿಗೆ ಒಂದು ನೂರು ಅಶ್ವಮೇಧ ಯಾಗಗಳನ್ನು ಮಾಡಬೇಕು ಎನ್ನಿಸಿತು. ಅವನ ಗುರುಗಳು ಒಪ್ಪಿದರು. ಒಂದು ನೂರು ಅಶ್ವಮೇಧ ಯಾಗಗಳನ್ನು ಮಾಡಿದವರಿಗೆ ಇಂದ್ರನ ಪದವಿಯು ಲಭ್ಯವಾಗುತ್ತದೆ. ಸಗರನು ತೊಂಬತ್ತೂಂಬತ್ತು ಯಾಗಗಳನ್ನು ಮುಗಿಸಿದ. ಒಂದು ನೂರನೆಯದಕ್ಕೆ ಸಿದ್ಧತೆಗಳನ್ನು ಮಾಡಿದ.
ಇಂದ್ರನಿಗೆ ಆತಂಕವಾಯಿತು. ಯಾಗವನ್ನು ನಡೆಯದಂತೆ ಮಾಡಬೇಕೆಂದು, ಕುದುರೆಯನ್ನು ಅಪಹರಿಸಿ ಪಾತಾಳದಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲ ಮಹರ್ಷಿಗಳ ಬಳಿ ಬಿಟ್ಟ. ಸಗರನು ಕುದುರೆಯನು ಹುಡುಕಿ ತರುವಂತೆ ತನ್ನ ಅರವತ್ತು ಸಾವಿರ ಮಕ್ಕಳಿಗೆ ಅಪ್ಪಣೆ ಮಾಡಿದ. ಅವರು ಭೂಮಿಯ ಮೇಲೆಲ್ಲ ಹುಡುಕಿದರು. ಕುದುರೆಯು ಸಿಗಲಿಲ್ಲ. ಒಂದು ಬಿಲವನ್ನು ಕಂಡು ಅದನ್ನು ಪ್ರವೇಶಿಸಿದರು, ಅದು ಅವರನ್ನು ಪಾತಾಳಕ್ಕೆ ಕರೆದೊಯ್ಯಿತು. ಅವರು ಕಪಿಲ ಋಷಿಗಳ ಹಿಂದೆ ಕುದುರೆಯನ್ನು ಕಂಡರು. ಕಪಿಲ ಋಷಿಯೇ ಕಳ್ಳನೆಂದು ಕೂಗಾಡತೊಡಗಿದರು. ಅವರು ಕಣ್ತೆರೆಯುತ್ತಲೇ ಅವರೆಲ್ಲ ಬೂದಿಯಾದರು.
ಬಹುಕಾಲವಾದರೂ ಮಕ್ಕಳು ಬರಲಿಲ್ಲ ಎಂದು ಸಗರನಿಗೆ ತಲೆಬಿಸಿಯಾಯಿತು. ಕುದುರೆ ಇಲ್ಲದೆ ಯಾಗವನ್ನು ಮುಗಿಸುವಂತಿರಲಿಲ್ಲ. ಅಸಮಂಜಸನ ಮಗ ಅಂಶುಮಂತ ಇನ್ನೂ ಚಿಕ್ಕವನು. ಆದರೆ, ಸಗರನು ವಿಧಿ ಇಲ್ಲದೆ ಅವನನ್ನು ಕುದುರೆ ಮತ್ತು ಚಿಕ್ಕಂಪಂದಿರನ್ನು ಹುಡುಕಲು ಕಳುಹಿಸಿದ. ಅವನು ಕಪಿಲ ಮುನಿಗಳು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದ. ಋಷಿಗಳನ್ನು ಕಂಡು ಭಕ್ತಿಯಿಂದ ನಮಸ್ಕರಿಸಿದ. ಅವರು ಸುಪ್ರೀತರಾಗಿ, “ಮಗೂ, ನಿನ್ನ ಚಿಕ್ಕಪ್ಪಂದಿರು ಇಲ್ಲಿಗೆ ಬಂದು ಬೂದಿಯಾದರು. ಅವರಿಗೆ ಸದ್ಗತಿಯು ಲಭಿಸಬೇಕಾದರೆ ದೇವಲೋಕದ ಗಂಗೆ ಈ ಬೂದಿಯ ಮೇಲೆ ಹರಿಯಬೇಕು. ಹೀಗೆ ಮಾಡುವುದು ನಿನ್ನಿಂದ ಸಾಧ್ಯವಿಲ್ಲ. ಈ ಕುದುರೆಯನ್ನು ಕೊಂಡೊಯ್ದು, ನಿನ್ನ ತಾತನಿಗೆ ಒಪ್ಪಿಸು’ ಎಂದರು.
ಅಶುಮಂತನು ಹಾಗೆಯೇ ಮಾಡಿದ. ಸಗರನು ಯಾಗವನ್ನು ಪೂರ್ಣಮಾಡಿದ. ಆದರೆ, ಮಕ್ಕಳನ್ನು ಕಳೆದುಕೊಂಡ ಅವನ ಮನಸ್ಸು ದುಃಖದಲ್ಲಿ ಮುಳುಗಿತ್ತು. ಅವನು ಅಂಶುಮಂತನಿಗೆ ರಾಜ್ಯವನ್ನು ಒಪ್ಪಿಸಿ, ತಪಸ್ಸಿಗೆ ಹೊರಟುಹೋದ.
ಪ್ರೊ. ಎಲ್.ಎಸ್. ಶೇಷಗಿರಿ ರಾವ್
(“ಕಿರಿಯರ ಭಾಗವತ’ ಕೃತಿಯಿಂದ)