Advertisement

ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ; ಗ್ರಾಮಸ್ಥರಿಗೆ ತಟ್ಟಲಾರಂಭಿಸಿದ ಬಿಸಿ

01:58 AM Jan 24, 2020 | mahesh |

ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆಯಾಗಿದ್ದು, ಸೋಮೇಶ್ವರ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕೂಡ ಘೋಷಣೆ ಯಾಗಲಿದೆ ಎಂಬ ವರದಿಯ ಬೆನ್ನಲ್ಲೇ ಸಾರ್ವಜನಿಕರಿಗೆ ಘೋಷಣೆಯ ಕಹಿ ಅನುಭವಗಳಾಗತೊಡಗಿವೆ.

Advertisement

ಈ ಕುರಿತು ಡಿ. 12ರಂದು “ಘೋಷಣೆಗಷ್ಟೇ ಬಾಕಿ ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಉದಯವಾಣಿ ವರದಿ ಪ್ರಕಟಿಸಿತ್ತು. ಬಂದೂಕು ಪರವಾನಿಗೆಗಾಗಿ ಜಿಲ್ಲಾಧಿಕಾರಿ ಗಳಿಗೆ ಅರ್ಜಿ ಹಾಕಿದ ಉಳ್ಳೂರು -74 ಗ್ರಾಮದ ಜಯಕರ ಪೂಜಾರಿ ಅವರಿಗೆ ಪ್ರಧಾನ ಮುಖ್ಯ ಅರಣ್ಯ (ವನ್ಯಜೀವಿ) ಸಂರಕ್ಷಣಾಧಿಕಾರಿಗಳ ಪತ್ರದ ಉಲ್ಲೇಖದೊಂದಿಗೆ ಬಂದ ಮಾಹಿತಿ ಪ್ರಕಾರ ಬಂದೂಕು ಲೈಸನ್ಸ್‌ ಅಲಭ್ಯವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದ ಘೋಷಣೆ ಎಂಬ ಕಾರಣ ನೀಡಲಾಗಿದೆ.

ಪತ್ರದ ಸಾರಾಂಶ ಹೀಗಿದೆ:
ಮೂಕಾಂಬಿಕಾ ಅಭಯಾರಣ್ಯದ ಸಿದ್ದಾಪುರ ಹತ್ತಿರವಿರುವ ಮೆಟ್ಕಳ್‌ ಗುಡ್ಡೆ ವನ್ಯಜೀವಿ ರಕ್ಷಿತಾರಣ್ಯದ ಗಡಿ ರೇಖೆಯಿಂದ ಉಳ್ಳೂರು ಗ್ರಾಮವು 4 ಕಿ.ಮೀ. ವ್ಯಾಪ್ತಿಯಲ್ಲಿದ್ದು, 10 ಕಿ.ಮೀ. ಪರಿಧಿಯಲ್ಲಿ ವಾಸಿಸುವ ಜನರಿಗೆ ಹೊಸದಾಗಿ ಕೋವಿ ಪರವಾನಿಗೆ ನೀಡಬಾರ ದಾಗಿ ಸೂಚನೆಯಿದೆ. ನಿರಾಕ್ಷೇಪಣ ಪತ್ರ ನೀಡಲು ಸಾಧ್ಯವಿಲ್ಲ.

ಮುಂದೇನು ?
ಉಳ್ಳೂರು 74 ಸಹಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಸೇರುವ ಗ್ರಾಮಗಳಲ್ಲಿ ರೆಸಾರ್ಟ್‌, ದೊಡ್ಡ ಹೊಟೇಲ್‌ ತೆರೆಯುವಂತಿಲ್ಲ, ಗಣಿಗಾರಿಕೆ, ಕೈಗಾರಿಕೆ ಬೃಹತ್‌ ವಿದ್ಯುತ್‌ ಸ್ಥಾವರ, ಕೋಳಿ ಫಾರಂ, ದೊಡ್ಡ ಪ್ರಮಾಣದ ಆಹಾರ ತಯಾರಿ ಘಟಕ, ಬೃಹತ್‌ ಕಟ್ಟಡ ನಿರ್ಮಾಣ, ವಿದ್ಯುದೀಕರಣ, ರಸ್ತೆ ಅಭಿವೃದ್ಧಿ ಷರತ್ತಿನಡಿ ಮಾಡಬೇಕಾಗುತ್ತದೆ. ಮನೆಗಳಿಗೆ, ಪಂಪ್‌ ಸೆಟ್‌ಗಳಿಗೆ ಭೂಮಿಯಡಿ ಕೇಬಲ್‌ ಹಾಕಿದರೆ ಮಾತ್ರ ವಿದ್ಯುತ್‌ ಸಂಪರ್ಕ. ಕೃಷಿ ಚಟುವಟಿಕೆಗಳಿಗೆ ರಾಸಾಯನಿಕ ಬಳಸುವಂತಿಲ್ಲ. ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಇದೆಲ್ಲ ಒಂದೊಂದಾಗಿ ಜಾರಿಗೆ ಬರಲಿವೆ. ರೈತರು ಭೂಮಿ ಮಾರಾಟಕ್ಕೂ ಪರದಾಡುವ ಸ್ಥಿತಿ ಬರಲಿದೆ. ಅರಣ್ಯ ಇಲಾಖೆಗೇ ಮಾರಬೇಕಾದ ಪರಿಸ್ಥಿತಿಯೂ ಬರಬಹುದು.

ಕಷ್ಟ ರೈತರಿಗೆ ಈಗ ಬಂದೂಕು ಪರವಾನಿಗೆ ಮಂಜೂರು ಕಷ್ಟ. ಅರ್ಜಿ ಸಲ್ಲಿಸುವ ಮೊದಲೇ ಪೊಲೀಸ್‌ ಇಲಾಖೆಯಿಂದ ಗುಂಡು ಸಿಡಿಸುವ 10 ದಿನಗಳ ತರಬೇತಿಯಾಗಿ ದೃಢಪತ್ರಿಕೆ ಪಡೆದು ಲಗತ್ತಿಸಬೇಕು. ಮೂರ್ನಾಲ್ಕು ಇಲಾಖೆಗಳ ನಿರಾಕ್ಷೇಪಣ ಪತ್ರ ಬೇಕು. ಹೀಗಿದ್ದೂ ಎನ್‌ಒಸಿ ಸಿಗುವುದು ಖಾತ್ರಿಯಿಲ್ಲ ಎನ್ನುತ್ತಾರೆ ಉಳ್ಳೂರು – 74 ಗ್ರಾಮ ಅರಣ್ಯ ಸಮಿತಿ ಕಾರ್ಯನಿರ್ವಹಣ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ.

Advertisement

ನಾನು 2-3 ವರ್ಷಗಳಿಂದ ಬಂದೂಕು ಪರವಾನಿಗೆಗಾಗಿ ಹೋರಾಡುತ್ತಿದ್ದೇನೆ. ಹಲವು ಇಲಾಖೆಗಳ ಎನ್‌ಒಸಿ ಬೇಕು. ಉಳ್ಳೂರು 74 ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದೆ. ಸರಕಾರ ಅಭಯಾರಣ್ಯದ ಪರಿಧಿಯನ್ನು 1 ಕಿ.ಮೀ. ವ್ಯಾಪ್ತಿಗೆ ಮಿತಿಗೊಳಿಸಿದರೆ ನನ್ನಂತಹ ಹಲವಾರು ರೈತರಿಗೆ ನ್ಯಾಯ ಸಿಗಬಹುದು. ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು.
– ಜಯಕರ ಪೂಜಾರಿ, ಉಳ್ಳೂರು – 74 ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next