ವಿಶ್ವ ಪರಿಸರ ದಿನ ಎಂಬುದು ಹತ್ತಾರು ಗಿಡ ನೆಡುವುದಕ್ಕೆ ಮಾತ್ರ ಪ್ರತಿವರ್ಷ ಸೀಮಿತಗೊಂಡಿದೆ. ಇಷ್ಟು ಮಾತ್ರದಿಂದ ನಮ್ಮ ಪರಿಸರಕ್ಕೆ ಒಳಿತಾಗುತ್ತದೆ ಎಂದು ನಾವು ತಿಳಿದಿದ್ದೇವೆ. ನಮ್ಮ ಪರಿಸರ ಎಲ್ಲವನ್ನೂಒಳಗೊಂಡಿರಬೇಕಾದರೆ ಅವುಗಳ ಬಗ್ಗೆಯೂ ನಾವು ಅರಿವನ್ನು ಹೊಂದಿರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಗಿಡ ನೆಡಲು ಬೇಕಾದ ಜಾಗವನ್ನೂ ನಮ್ಮಿಂದ ಉಳಿಸಿ ಕೊಳ್ಳಲಾಗುತ್ತಿಲ್ಲ. ದಿನ ನಿತ್ಯದ ನಮ್ಮ ಜೀವನ ಶೈಲಿಯಿಂದ ಪರಿಸರವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದೇವೆ.
ಪ್ರತಿಯೊಂದು ಜೀವಿಯೂ ಪರಿಸರದ ಮೇಲೆ ಅವಲಂಬಿತವಾಗಿದೆ. ಆದರೆ ಅಂಥ ಪರಿಸರಕ್ಕೆ ನಾವು ವಿಷವನ್ನು ಉಣಬಡಿಸುತ್ತಿದ್ದೇವೆ. ನಮ್ಮ ಹೊಣೆಗಾರಿಕೆ, ಜವಾಬ್ದಾರಿಯನ್ನು ಇನ್ನು ಮೇಲಾದರೂ ಅರಿತುಕೊಳ್ಳದಿದ್ದರೆ ನಮ್ಮ ಅವನತಿಗೆ ನಾವೇ ಕಾರಣೀಭೂತರಾಗುತ್ತೇವೆ. ನಮ್ಮ ಅವಶ್ಯಗಳಾದ ಗಾಳಿ, ನೀರು, ಆಹಾರ ವಿಷ ಮುಕ್ತವಾಗುವಲ್ಲಿ ನಾವು ಗಮನ ಹರಿಸಬೇಕಿದೆ. ಜನಸಂಖ್ಯೆಗಿಂತಲೂ ಹೆಚ್ಚು ವಾಹನಗಳನ್ನು ಹೊಂದಿರುವ ನಾವು ವಾಹನಗಳಿಗೆ ಕಡಿವಾಣ ಹಾಕಿ ಮಾಲಿನ್ಯವನ್ನು ತಡೆಯಬೇಕಿದೆ. ಕಸ, ಕೃಷಿ ತ್ಯಾಜ್ಯಗಳಿಗೆ ಬೆಂಕಿ ಇಡುವುದನ್ನು ನಿಲ್ಲಿಸಬೇಕಿದೆ. ಜೀವದಾಯಿನಿ ನದಿಗಳಿಗೆ ನಿತ್ಯ ಬಂದು ಸೇರುವ ಕೊಳಚೆ ನೀರು, ಕಾರ್ಖಾನೆಗಳ ತ್ಯಾಜ್ಯ, ರಾಸಾಯನಿಕಗಳಿಗೆ ತಡೆಯೊಡ್ಡಬೇಕಿದೆ.
ಕೃಷಿಯನ್ನೇ ನೆಚ್ಚಿಕೊಂಡಿರುವ ಶೇ. 60ರಿಂದ 70ರಷ್ಟು ರೈತರು ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯುವ ಧಾವಂತದಲ್ಲಿ ಭೂಮಿಯ ಒಡಲಿಗೆ ವಿಷಯುಕ್ತ ರಾಸಾಯನಿಕಗಳನ್ನು ಸುರಿಯುತ್ತಿದ್ದಾರೆ. ಇದರಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತ ಹೋಗಿ ಒಂದು ದಿನ ನಿರ್ಜೀವವಾಗುವುದರಲ್ಲಿ ಸಂಶಯವಿಲ್ಲ. ಹಣ್ಣು, ತರಕಾರಿಗಳಿಗೆ ಸಿಂಪಡಿಸುವ ಔಷಧಿಗಳು ಇಂದು ಆಹಾರ ರೂಪದಲ್ಲಿ ಮಾನವನ ದೇಹವನ್ನು ಸೇರುತ್ತಿವೆ. ಹೀಗಾಗಿ ರೈತರಿಗೆ ಸಾವಯವ ಕೃಷಿಯ ಅರಿವು ಮೂಡಿಸಬೇಕಿದೆ.
ಇನ್ನು ಈ ಶತಮಾನದ ವಿನಾಶಕಾರಿ ಆವಿಷ್ಕಾರವಾದ ಪ್ಲಾಸ್ಟಿಕ್ ಎಂಬ ಮಾರಿ ಪರಿಸರದ ಮೇಲೆ ತನ್ನ ಅಟ್ಟಹಾಸವನ್ನೇ ಮೆರೆದಿದೆ. ನಮ್ಮ ಜೀವನದ ಅನಿವಾರ್ಯವಾಗಿ ಬಿಟ್ಟಿದೆ ಪ್ಲಾಸ್ಟಿಕ್. ಹಿಂದೆ ನಮ್ಮ ಹಿರಿಯರು ಪ್ಲಾಸ್ಟಿಕ್ ಇಲ್ಲದೆಯೂ ಜೀವನವನ್ನು ನಡೆಸಿದ್ದಾರೆ ಎಂಬ ಅರಿವು ನಮಗಿರಬೇಕು. ದೃಢವಾದ ನಿರ್ಧಾರದಿಂದ ಪ್ಲಾಸ್ಟಿಕ್ ಮುಕ್ತ ಜೀವನವನ್ನು ನಡೆಸಲು ಸಾಧ್ಯವಿದೆ.
ನಮ್ಮ ಮುಂದಿನ ತಲೆಮಾರು ನಮ್ಮ ಮಕ್ಕಳು, ಅವರ ಮಕ್ಕಳು ಹೀಗೆ ನಮ್ಮವರನ್ನೇ ಒಳಗೊಂಡಿದೆ. ಅವರು ಬಾಳಿ ಬದುಕಲು ಬೇಕಾದ ಪರಿಸರವನ್ನು ಉಳಿಸಬೇಕಾದ್ದು ನಮ್ಮ ಕರ್ತವ್ಯ ಹಾಗೂ ಧರ್ಮ ಕೂಡ. ನಮ್ಮ ಸ್ವಾರ್ಥ ಮುಂದಿನ ಪೀಳಿಗೆಯ ವಿನಾಶಕ್ಕೆ ಕಾರಣವಾಗದಿರಲಿ. ಇನ್ನಾದರೂ ಎಚ್ಚೆತ್ತುಕೊಂಡು ನಿಜವಾದ “ಪರಿಸರ ದಿನ’ವನ್ನು ಆಚರಿಸುವಂತಾಗೋಣ ಹಾಗೂ ಉಳಿಸುವಂಥವರಾಗೋಣ.
ಗೌರಿ ಚಂದ್ರಕೇಸರಿ, ಶಿವಮೊಗ್ಗ