Advertisement
ಇದೆಲ್ಲೋ ವಿದೇಶದ ಕಥೆ ಇರಬಹುದು ಅಂದುಕೊಳ್ಳಬೇಕಿಲ್ಲ. ನೆರೆಯ ಮಹಾರಾಷ್ಟ್ರದ ಗ್ರಾಮವೊಂದರ ಕಥೆ. ಬ್ರಿಟನ್‌ನ ವೇಲ್ಸ್‌ನ ಹೇಯ್ ಆನ್ ವೇಯ ಮಾದರಿಯಲ್ಲೇ ಭಾರತದಲ್ಲೂ ಇದೇ ಮೊದಲ ಬಾರಿಗೆ “ಪುಸ್ತಕ ಗ್ರಾಮ’ ವೊಂದು ರೂಪು ತಳೆದಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಭಿಲಾರ್ ಗ್ರಾಮ ಪುಸ್ತಕ ಗ್ರಾಮವಾಗಿದ್ದು ಮೇ 4ರಂದು ಇದು ಲೋಕಾರ್ಪಣೆಗೊಳ್ಳಲಿದೆ.
ಪುಸ್ತಕಗಳೇ ಪುಸ್ತಕಗಳು: ಗ್ರಾಮದ ಶಾಲೆ, ಮನೆಗಳು, ದೇಗುಲ ಎಂದು ಸುಮಾರು 25 ಕಡೆಧಿಗಳಲ್ಲಿ ಪುಸ್ತಕಗಳನ್ನು ಇಡಲಾಗಿದ್ದು, ವೃತ್ತ ಪತ್ರಿಕೆಗಳಿಂದ ಹಿಡಿದು ಮರಾಠಿ ಭಾಷೆಯ ಅತಿ ಅಪರೂಪದ ಪುಸ್ತಕಗಳು ಇಲ್ಲಿ ಓದುಗರಿಗಾಗಿ ಲಭ್ಯವಿವೆ. ಮಹಾರಾಷ್ಟ್ರ ಸರಕಾರ ಪುಸ್ತಕ ಗ್ರಾಮಕ್ಕಾಗಿ ಸುಮಾರು 10 ಸಾವಿರ ಪುಸ್ತಕಗಳನ್ನು ಪೂರೈಸಿದೆ. ಇವುಗಳಲ್ಲಿ ಪ್ರಕಟಣೆ ನಿಲ್ಲಿಸಿದವು, ತೀರ ಅಪರೂಪದ ಸಾಹಿತ್ಯ ಪುಸ್ತಕಗಳು, ಶೇಷ್ಠ ಬರಹಗಾರರ ಕೃತಿಗಳು ಇತ್ಯಾದಿಗಳಿವೆ. ಸದ್ಯ ಇಲ್ಲಿ ಮರಾಠಿ ಪುಸ್ತಕಗಳನ್ನೇ ಹೆಚ್ಚಾಗಿ ಇಡಲಾಗಿದ್ದು ಮುಂದಿನ ದಿನಗಳಲ್ಲಿ ಇಂಗ್ಲಿಷ್, ಹಿಂದಿ ಪುಸ್ತಕಗಳೂ ಲಭ್ಯವಾಗಲಿವೆ. ಓದುಗರು ಠೇವಣಿ ಇಟ್ಟು, ಪುಸ್ತಕಗಳನ್ನು ಓದಲು ಎರವಲು ಪಡೆದುಕೊಳ್ಳಬಹುದಾಗಿದೆ. ಇದೀಗ ಪುಸ್ತಕ ಗ್ರಾಮವನ್ನು ಸುಮಾರು 75 ಮಂದಿ ಕಲಾವಿದರು, ಸುಣ್ಣ ಬಣ್ಣ ಕೊಟ್ಟು ಅಲಂಕರಿಸಿದ್ದು ಚಿತ್ರಗಳನ್ನೂ ಬಿಡಿಸಿದ್ದಾರೆ. ಓದುಗರೊಂದಿಗೆ ಪ್ರವಾಸಿಗರನ್ನೂ ಕೈಬೀಸಿ ಕರೆಯುವಂತಿದೆ.
ಸ್ಟ್ರಾಬೆರಿ ಕೃಷಿಯ ತಾಣ
ಭಿಲ್ಹಾರ್ ಗ್ರಾಮ ಸ್ಟ್ರಾಬೆರಿ ಕೃಷಿಗೆ ಪ್ರಸಿದ್ಧ. 10 ಸಾವಿರ ಜನಸಂಖ್ಯೆಯ ಗ್ರಾಮ ವಾರ್ಷಿಕ ಸುಮಾರು 50 ಕೋಟಿ ರೂ. ಮೌಲ್ಯದ 100 ಟನ್ ಸ್ಟ್ರಾಬೆರಿ ಬೆಳೆಯುತ್ತಿದೆ. ಶೇ.90ರಷ್ಟು ಗ್ರಾಮದ ಜನ ಸ್ಟ್ರಾಬೆರಿ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಪುಸ್ತಕ ಗ್ರಾಮವಾಗಿಸುವತ್ತ ಸರಕಾರದೊಂದಿಗೆ ಗ್ರಾಮಸ್ಥರೂ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.