Advertisement

ಕೊನೆಗಾಣದ ಕಡಲ ಮಕ್ಕಳ ಸಂಕಟ..

12:32 PM Aug 04, 2019 | Suhan S |

ಹೊನ್ನಾವರ: ಮೂರು ದಶಕಗಳಿಂದ ತಾಲೂಕಿನ ಕಡಲ ತೀರದ ನಿವಾಸಿಗಳಿಗೆ ದುಸ್ವಪ್ನವಾಗಿರುವ ಕಡಲ ಕೊರೆತವೆಂಬ ಸಂಕಟಕ್ಕೆ ಕೊನೆಯೇ ಇಲ್ಲದಾಗಿದೆ. ಈ ವರ್ಷ ತೊಪ್ಪಲಕೇರಿ ಮತ್ತು ಕಾಸರಕೋಡ ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಕಾಸರಕೋಡನ ರಾಮನಗರ, ಜಟಕನ ಮನೆ ಪ್ರದೇಶದ ಸಮುದ್ರ ಕೊರೆತ ತಡೆಗೆ ತುರ್ತು ಕಾಮಗಾರಿ ನಡೆಸಬೇಕಾಗಿದೆ.

Advertisement

ನೇರವಾಗಿ ಸಮುದ್ರ ಸೇರುತ್ತಿದ್ದ ಶರಾವತಿಗೆ ಹೆದ್ದಾರಿ ಸೇತುವೆ ನಿರ್ಮಾಣವಾಯಿತು. ಶರಾವತಿ ಟೇಲರೀಸ್‌ ಅಣೆಕಟ್ಟು ನಿರ್ಮಾಣವಾಯಿತು. ಕಾಡು ನಾಶದಿಂದ ಸಂಗಮದಲ್ಲಿ ಹೂಳು ತುಂಬಿತು. ಮತ್ತೆ ರೇಲ್ವೆ ಸೇತುವೆ ನಿರ್ಮಾಣವಾಗಿದೆ, ಹೆದ್ದಾರಿಗೆ ಇನ್ನೊಂದು ಸೇತುವೆ ಬಂದಿದೆ. ಇದರಿಂದ ಶರಾವತಿ ಸಮುದ್ರ ಸೇರದೆ ತೆವಳತೊಡಗಿತು. ಬಲಕ್ಕೆ ಸರಿಯುತ್ತ ಹೋಯಿತು. ಇದರಿಂದ ಉಂಟಾದ ಸಮುದ್ರ ಕೊರೆತ ಮಲ್ಲುಕುರ್ವೆ ಎಂಬ ಕಂದಾಯ ಗ್ರಾಮವನ್ನು ಬಲಿಪಡೆಯಿತು. ಆಗ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿ ಆರಂಭವಾಗಿತ್ತು. ಊರು ಸೂರೆ ಹೋದ ಮೇಲೆ ದಿಡ್ಡಿಬಾಗಿಲು ಹಾಕಿದಂತೆ ಪಾವಿನಕುರ್ವೆ ಕೊರೆತ ಆರಂಭವಾದ ಮೇಲೆ ಕಾಸರಕೋಡ ಕಡೆ ಕೊರೆತ ಆರಂಭವಾಯಿತು. ಹೂಳು ತುಂಬಿ ಮೀನುಗಾರಿಕಾ ಬೋಟ್‌ಗಳು ಅಳವೆಯ ಹೊಯ್ಗೆ ದಿನ್ನೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನೂರಾರು ಬೋಟ್‌ಗಳು ಘಾಸಿಗೊಂಡವು. 15ಕ್ಕೂ ಹೆಚ್ಚು ಜನ ಬಲಿಯಾದರು. ಮೀನುಗಾರರ ಸತತ ಹೋರಾಟ ಅಳವೆ ಕಾಮಗಾರಿಗೆ ಕೇಂದ್ರ ಸರ್ಕಾರದ 300ಕೋಟಿ ರೂ. ಬಂತು. ಈ ಹಣ ಬಳಕೆಯಾಗಿದ್ದರೆ ಕಡಲ ಕೊರೆತ ಕಡಿಮೆಯಾಗುತ್ತಿತ್ತು. ಕಾಮಗಾರಿ ಆರಂಭವಾಗುವ ಮೊದಲು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಂದರು ಮಂತ್ರಿಗಳಾಗಿದ್ದ ಪಾಲೇಮಾರ್‌ ಆಂಧ್ರದ ಬಂಡವಾಳದಾರರ ಹೊನ್ನಾವರ ಪೋರ್ಟ್‌ ಕಂಪನಿಗೆ ಅಳವೆ ಸಹಿತ 100ಎಕರೆ ಭೂಮಿಯನ್ನು ಟೊಂಕದಲ್ಲಿ ಬಿಟ್ಟುಕೊಟ್ಟಿತ್ತು. ಅಳವೆ ನಿರ್ಮಾಣದ ಹಣ ಮರಳಿ ಹೋಯಿತು. ಮೀನುಗಾರರು ಬೀದಿಯಲ್ಲಿ ಬಿದ್ದರು. ಕಂಪನಿ ಈಗ ಧಕ್ಕೆ ನಿರ್ಮಾಣ ಆರಂಭಿಸಿದೆ. ಅಳವೆ ಹೂಳು ತೆಗೆದು ನಿರ್ಮಾಣ ಆರಂಭಮಾಡಿಲ್ಲ. ಬೋಟ್‌ಗಳು 5ನೇ ತಾರೀಖೀನಿಂದ ಸಮುದ್ರಕ್ಕಿಳಿಯಲಿವೆ. ಮುಂದೇನೋ ಗೊತ್ತಿಲ್ಲ.

ಈ ಮಧ್ಯೆ ಗಾಳಿ ಜೋರಾಗಿ ಸಮುದ್ರ ಕೊರೆತ ತೀವ್ರವಾಗಿದೆ. ಹಿಂದೆ ಕಟ್ಟಿದ್ದ ತಡೆಗೋಡೆಗಳ ಕಲ್ಲನ್ನು ಸಮುದ್ರ ಕಬಳಿಸಿ, ಭೂಮಿ ಸ್ವಾಹಾ ಮಾಡುತ್ತಿದೆ. ರಾಮನಗರದಲ್ಲಿ ನೆಲೆಸಿದವರು ಬಹುಪಾಲು ಮಲ್ಲುಕುರ್ವೆ, ಪಾವಿನಕುರ್ವೆ ನಿರಾಶ್ರಿತರು. ತುಂಬ ಹೋರಾಡಿ ಕೆಲವರು ಪಟ್ಟ ಪಡೆದಿದ್ದಾರೆ. ಇಕೋ ಬೀಚಿನಿಂದ ಸುಮಾರು 2ಕಿಮೀ ಶರಾವತಿ ಸಂಗಮದವರೆಗೆ ಅಲ್ಲಲ್ಲಿ ತಡೆಗೋಡೆ ಕುಸಿದು ರಸ್ತೆ ಮುರಿದು ನೀರು ನುಗ್ಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಹಣ ಯಾತಕ್ಕೂ ಸಾಲದು. 3 ವರ್ಷದಿಂದ ಹಣಬಿಡುಗಡೆಗಾಗಿ ಕಾಯುತ್ತಿರುವ ತೊಪ್ಪಲಕೇರಿಯವರು ಪ್ರಧಾನಿಯವರೆಗೆ ದೂರು ಸಲ್ಲಿಸಿದ್ದಾರೆ. ಈವರೆಗೆ ಯಾವ ಪ್ರಗತಿಯೂ ಆಗಿಲ್ಲ.

ಹೊನ್ನಾವರ, ಭಟ್ಕಳ ತಾಲೂಕಿನಲ್ಲಿ ಕನಿಷ್ಠ 10ಕಿಮೀ ಪ್ರದೇಶದಲ್ಲಿ ತೀವ್ರ ಸಮುದ್ರ ಕೊರೆತವಿದೆ. ಈ ವರ್ಷ 100ಕೋಟಿ ರೂ. ಮಂಜೂರಾದರೆ ತುರ್ತು ಕಾಮಗಾರಿ ನಡೆಸಬಹುದು. ಮುಂದಿನ ವರ್ಷದಲ್ಲಿ ಇನ್ನೆಲ್ಲಿ ಕೊರೆಯುತ್ತದೆಯೋ ಗೊತ್ತಿಲ್ಲ. ಕಡಲ ತೀರದವರ ಕಣ್ಣೀರು ಸಮುದ್ರದ ಉಪ್ಪುನೀರಿನ ಜೊತೆ ಬೆರೆತು ಹೋಗುತ್ತಿದೆ. ಸಂಪೂರ್ಣ ಸುರಕ್ಷತೆ ಮರೀಚಿಕೆಯಾಗಿದೆ.

 

Advertisement

•ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next