Advertisement

ಮೂರು ದಿನಗಳಲ್ಲಿ ಮಳೆಗಾಲ ಋತು ಅಂತ್ಯ; ಇನ್ನೂ ಚಳಿಗಾಲದ ಸುಳಿವಿಲ್ಲ

07:50 PM Dec 28, 2019 | mahesh |

ಮಹಾನಗರ: ಹವಾಮಾನ ಇಲಾಖೆಯ ವಾಡಿಕೆಯಂತೆ ಕರಾವಳಿ ಭಾಗದಲ್ಲಿ ಹಿಂಗಾರು ಮಳೆಯ ಋತು ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದೆ. ಇದರೊಂದಿಗೆ, ಈ ಬಾರಿಯ ಮಳೆಗಾಲ ಕೊನೆಗೊಳ್ಳಲು ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿಯಿದೆ.

Advertisement

ಹವಾಮಾನ ಇಲಾಖೆಯ ಅಂಕಿ-ಅಂಶದಂತೆ ಈ ಬಾರಿ ಉಭಯ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಕೈಕೊಟ್ಟರೆ, ಮುಂಗಾರು ಮತ್ತು ಹಿಂಗಾರು ಉತ್ತಮವಾಗಿತ್ತು. ಅದೇ ಕಾರಣಕ್ಕೆ ಒಟ್ಟಾರೆ ಋತುವಿನಲ್ಲಿ ಅಂದರೆ, ಜ. 1ರಿಂದ ಡಿ. 28ರ ವರೆಗೆ ದ.ಕ. ಜಿಲ್ಲೆಯಲ್ಲಿ ಶೇ.1ರಷ್ಟು ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ.14ರಷ್ಟು ಮಳೆ ಪ್ರಮಾಣವು ಹೆಚ್ಚಳವಾಗಿದೆ.ಈ ಬಾರಿಯ ಪೂರ್ವ ಮುಂಗಾರು (ಮಾರ್ಚ್‌-ಮೇ) ಕರಾವಳಿ ಭಾಗಕ್ಕೆ ಅಷ್ಟೇನು ಉತ್ತಮವಾಗಿರಲಿಲ್ಲ. ದ.ಕ. ಜಿಲ್ಲೆಯಲ್ಲಿ 227.1 ಮಿ.ಮೀ. ವಾಡಿಕೆ ಮಳೆಯಲ್ಲಿ 77.6 ಮಿ.ಮೀ. ಮಳೆಯಾಗಿ ಶೇ. 66ರಷ್ಟು ಮಳೆ ಕೊರತೆ, ಉಡುಪಿ ಜಿಲ್ಲೆಯಲ್ಲಿ 227.3 ಮಿ.ಮೀ. ವಾಡಿಕೆ ಮಳೆಯಲ್ಲಿ 14.4 ಮಿ.ಮೀ. ಮಳೆ ಯಾಗಿ ಶೇ. 94 ರಷ್ಟು ಮಳೆ ಕೊರತೆ ಉಂಟಾಗಿದೆ. ಮುಂಗಾರು (ಜೂನ್‌ – ಸೆಪ್ಟಂಬರ್‌) ಕರಾವಳಿ ಭಾಗದಲ್ಲಿ ಉತ್ತಮ ವಾಗಿತ್ತು. ದ.ಕ. ಜಿಲ್ಲೆಯಲ್ಲಿ 3,354.3 ಮಿ.ಮೀ. ವಾಡಿಕೆ ಮಳೆಯಲ್ಲಿ 3,513.8 ಮಿ.ಮೀ. ಮಳೆಯಾಗಿ ಶೇ. 5ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ. ಉಡುಪಿಯಲ್ಲಿ 3,742.3 ಮಿ.ಮೀ. ವಾಡಿಕೆ ಮಳೆಯಲ್ಲಿ 4,542.6 ಮಿ.ಮೀ. ಮಳೆಯಾಗಿ ಶೇ. 21ರಷ್ಟು ಮಳೆ ಪ್ರಮಾಣ ಹೆಚ್ಚಳ ವಾಗಿತ್ತು.

ಹಿಂಗಾರು ಉತ್ತಮ
ಹಿಂಗಾರು ಮಳೆ ಪ್ರಮಾಣ ಲೆಕ್ಕಾಚಾರ ಮಾಡಿದಾಗ ಕರಾವಳಿ ಭಾಗದಲ್ಲಿ ಯಥೇತ್ಛವಾಗಿ ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ 367 ಮಿ.ಮೀ. ವಾಡಿಕೆ ಮಳೆಯಲ್ಲಿ 631 ಮಿ.ಮೀ. ಮಳೆಯಾಗಿ ಶೇ. 72ರಷ್ಟು ಹೆಚ್ಚಳವಾಗಿದೆ. ಉಡುಪಿಯಲ್ಲಿ 298 ಮಿ.ಮೀ. ವಾಡಿಕೆ ಮಳೆಯಲ್ಲಿ 700 ಮಿ.ಮೀ. ಮಳೆಯಾಗಿ ಶೇ. 135 ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ.

ತಾಪಮಾನ ಏರಿಕೆ
ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ದ.ಕ., ಉಡುಪಿ ಜಿಲ್ಲೆ ಸಹಿತ ಕರಾವಳಿ ಭಾಗದಲ್ಲಿ ಮೈ ಕೊರೆಯುವ ಚಳಿಯ ಅನು ಭವಾಗುವುದು ವಾಡಿಕೆ. ಆದರೆ ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ಕರಾವಳಿ ಭಾಗಕ್ಕೂ ವ್ಯಾಪಿ ಸುತ್ತಿದ್ದು, ಹವಾಮಾನದಲ್ಲಿ ಸಾಕಷ್ಟು ಏರುಪೇರು ಆಗುತ್ತಿರುವುದು ಅನುಭವಕ್ಕೆ ಬರುತ್ತಿದೆ. ಆ ಮೂಲಕ ಋತುವಿನಲ್ಲಿ ಅನಿರೀಕ್ಷಿತ ಬದಲಾವಣೆಯಾಗುತ್ತಿದೆ. ಹೀಗಾಗಿ, ಚಳಿಗಾಲದಲ್ಲಿ ಅದರಲ್ಲಿಯೂ ರಾತ್ರಿ ವೇಳೆ ಚಳಿಗಿಂತ ಸೆಕೆಯ ಪ್ರಮಾಣ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಸುಮಾರು 38 ಡಿ.ಸೆ.ಗಿಂತಲೂ ಹೆಚ್ಚಿನ ತಾಪಮಾನ ದಾಖಲಾಗತ್ತಿದ್ದು, ಹತ್ತು ವರ್ಷಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ ಇದಾಗಿದೆ. ಈವರೆಗೆ ದಾಖಲೆ ಅಂದರೆ 2012ರ ಡಿಸೆಂಬರ್‌ 21ರಂದು 36.9 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿತ್ತು.

ಹವಾಮಾನ ವೈಪರಿತ್ಯದಿಂದ ಬದಲಾವಣೆ
ಹವಾಮಾನ ಇಲಾಖೆಯ ವಾಡಿಕೆಯಂತೆ ಈ ತಿಂಗಳಾಂತ್ಯಕ್ಕೆ ಮಳೆಗಾಲ ಕೊನೆಗೊಳ್ಳುತ್ತದೆ. ಈಗಾಗಲೇ ಚಳಿಗಾಲ ಆರಂಭಗೊಳ್ಳಬೇಕಿತ್ತು. ಆದರೆ ಜಾಗತಿಕ ಹವಾಮಾನ ವೈಪರಿತ್ಯದಿಂದ ವಾತಾವರಣ ಬದಲಾಗುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಚಳಿಗಾಲದ ಅನುಭವ ಆಗಬಹುದು.
– ಸುನಿಲ್‌ ಗವಾಸ್ಕರ್‌, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next