Advertisement

ಸಂಸತ್‌ ಅಧಿವೇಶನ ಮುಕ್ತಾಯ; ಕೋವಿಡ್ ಹಿನ್ನೆಲೆಯಲ್ಲಿ ಎಂಟು ದಿನ ಮೊದಲೇ ಅಂತ್ಯ

12:53 AM Sep 24, 2020 | mahesh |

ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನವನ್ನು ಎಂಟು ದಿನಗಳಿಗೆ ಮೊದಲೇ ಅನಿರ್ದಿಷ್ಠಾವಧಿಗೆ ಮುಂದೂ ಡಿಕೆ ಮಾಡಲಾಗಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಅ.1ರ ವರೆಗೆ ಕಲಾಪ ನಡೆಸಲು ತೀರ್ಮಾನಿಸಲಾಗಿತ್ತು. ಸಂಸತ್‌ ಸದಸ್ಯರಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಲೋಕಸಭೆ, ರಾಜ್ಯಸಭೆ ಅಧಿವೇಶನವನ್ನು ನಡೆಸಲಾಗಿದೆ.

Advertisement

ಲೋಕಸಭೆಯಲ್ಲಿ ಬಂದರುಗಳಿಗೆ ಸಂಬಂಧಿಸಿದ ಮಸೂದೆಕ್ಕೆ ಅನುಮೋದನೆ ಸಿಗುತ್ತಲೇ ಸಭಾಧ್ಯಕ್ಷ ಓಂ ಬಿರ್ಲಾ ಕಲಾಪವನ್ನು ಅನಿರ್ಧಿಷ್ಠಾವಧಿಗೆ ಮುಂದೂಡುವ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿದ್ದರು. ಸೋಮವಾರ ರಾಜ್ಯಸಭೆಯ 8 ಸದಸ್ಯರನ್ನು ಸಸ್ಪೆಂಡ್‌ ಮಾಡಿದ್ದನ್ನು ಖಂಡಿಸಿ ಮಂಗಳವಾರ ಮತ್ತು ಬುಧವಾರ ವಿಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿದ್ದರು.

3 ಸಂಹಿತೆ ಅನುಮೋದನೆ: ರಾಜ್ಯಸಭೆಯಲ್ಲಿ ಕಾರ್ಮಿಕ ಕ್ಷೇತ್ರದ ಮೂರು ಮಸೂದೆಗಳನ್ನು ಅಂಗೀಕರಿಸಿದ ಬಳಿಕ ಕಲಾಪವನ್ನು ಅನಿಧಿಷ್ಠಾವಧಿಗೆ ಮುಂದೂಡಿಕೆ ಮಾಡಲಾಗಿದೆ. ಇದಕ್ಕೂ ಮೊದಲು ಕಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಮೂರು ಸಂಹಿತೆಗಳಿಗೆ ರಾಜ್ಯಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈ ಪೈಕಿ ಪ್ರಧಾನವಾಗಿರುವ ಅಂಶವೆಂದರೆ ಸರಕಾರದ ಅನುಮತಿ ಇಲ್ಲದೆ, 300 ಸಿಬ್ಬಂದಿ ಇರುವ ಕಾರ್ಖಾನೆ, ಉದ್ಯೋಗ ಕ್ಷೇತ್ರದಲ್ಲಿ ಆಡಳಿತ ಮಂಡಳಿಗೇ ತೆಗೆದು ಹಾಕುವ ಅಧಿಕಾರ ನೀಡಲಾಗಿದೆ.

ಮಸೂದೆ ವಾಪಸ್‌ ಮಾಡಿ: ಸಂಸತ್‌ನಲ್ಲಿ ಅನುಮೋದನೆ ಪಡೆದುಕೊಂಡಿರುವ 3 ಮಸೂದೆಗಳಿಗೆ ಸಹಿ ಹಾಕದೆ ಅದನ್ನು ಸರಕಾರಕ್ಕೆ ವಾಪಸ್‌ ಕಳಿಸಬೇಕೆಂದು ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷ ನಿಯೋಗ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ಗೆ ಮನವಿ ಮಾಡಿದೆ. ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಕೋವಿಂದ್‌ ಜತೆಗಿನ ಭೇಟಿ ವೇಳೆ ಮಸೂದೆಗಳು ಅಸಾಂವಿಧಾನಿಕ ಎಂದು ಬಣ್ಣಿಸಿದರು. ಕೇಂದ್ರ ಸರಕಾರ ಪ್ರತಿಪಕ್ಷಗಳು, ರೈತ ಮುಖಂಡರು ಮತ್ತು ಇತರ ಕ್ಷೇತ್ರಗಳ ನಾಯಕರ ಜತೆ ಸಮಾಲೋಚನೆ ನಡೆಸಿಯೇ ಇಲ್ಲ ಎಂದು ದೂರಿದ್ದಾರೆ.

ಅಲ್ಪಾವಧಿಯ ಅಧಿವೇಶನ
ಸೆ.14ರ ಬಳಿಕ ಮೇಲ್ಮನೆಯಲ್ಲಿ ಇದುವರೆಗೆ 25 ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು 6 ಹೊಸ ಮಸೂದೆಗಳನ್ನು ಮಂಡಿಸಲಾಗಿದೆ. 1952ರ ಬಳಿಕ ಇದು ಎರಡನೇ ಅತ್ಯಂತ ಅಲ್ಪಾವಧಿಯ ರಾಜ್ಯಸಭೆಯ ಮುಂಗಾರು ಅಧಿವೇಶನ. ಈ ಮೂಲಕ ರಾಜ್ಯಸಭೆ ಶೇ.100ರಷ್ಟು ಕಲಾಪ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಭಾಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

Advertisement

ಟ್ವಿಟರ್‌ ವಿರುದ್ಧ ಅಸಮಾಧಾನ
“ಟ್ವಿಟರ್‌ ಮತ್ತು ಫೇಸ್‌ಬುಕ್‌ ಅನಿಯಂತ್ರಿತವಾಗಿ ವಿಷಯಗಳನ್ನು ಸೆನ್ಸಾರ್‌ ಮಾಡುತ್ತಿವೆ’ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ಶೂನ್ಯವೇಳೆ ಈ ವಿಚಾರ ಪ್ರಸ್ತಾಪಿಸಿದ ಅವರು, “ರಾಷ್ಟ್ರೀಯತಾವಾದಿ ವಿಚಾರಗಳನ್ನಷ್ಟೇ ಟಾರ್ಗೆಟ್‌ ಮಾಡಿ, ಫೇಸ್‌ಬುಕ್‌- ಟ್ವಿಟ್ಟರ್‌ ಸೆನ್ಸಾರ್‌ ಮಾಡುತ್ತಿವೆ. ಈ ವಿಚಾರ ಕುರಿತು ಮಧ್ಯಪ್ರವೇಶಿಸಲು ಸರಕಾರ ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ. “ವಾಕ್‌ಸ್ವಾತಂತ್ರ್ಯ ನಿರ್ಬಂಧ ಹಿನ್ನೆಲೆಯಲ್ಲಷ್ಟೇ ಇದು ಸಾಂವಿಧಾನಿಕ ಸವಾಲಾಗಿ ಉಳಿದಿಲ್ಲ. ಚುನಾವಣೆ ವೇಳೆಯೂ ಇಂಥ ಹಸ್ತಕ್ಷೇಪಗಳು ನಡೆಯುತ್ತವೆ’ ಎಂದು ಹೇಳಿದ್ದಾರೆ.

ದೀರ್ಘ‌ಕಾಲದಿಂದ ನನೆಗುದಿಗೆ ಬಿದ್ದಿದ್ದ ಕಾರ್ಮಿಕ ನೀತಿಗಳ ಸುಧಾರಣಾ ಕಾಯ್ದೆಗೆ ಸಂಸತ್ತಿನ ಅಂಗೀಕಾರ ಸಿಕ್ಕಿರುವುದು ಉತ್ತಮವಾದ ಬೆಳವಣಿಗೆ. ಕಾರ್ಮಿಕ ನೀತಿಗಳಲ್ಲಾಗುವ ಸುಧಾರಣೆಗಳಿಂದ ಕೈಗಾರಿಕಾ ರಂಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ, ಕೆಲಸಗಾರರ ಆರ್ಥಿಕಾಭಿವೃದ್ಧಿ ಸಾಧ್ಯವಾಗಲಿದೆ.
ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next