Advertisement

ಗಡಿಯಲ್ಲಿ ಕಟ್ಟೆಚ್ಚರ-ವ್ಯಾಕ್ಸಿನ್‌ ಗೆ ಒತ್ತು

07:25 PM Jun 26, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ನಿಟ್ಟುಸಿರುವ ಬಿಡುವ ಮುನ್ನವೇ ಜನರ ನಿರ್ಲಕ್ಷé ಎದ್ದು ಕಾಡುತ್ತಿದೆ. ಸಾಮಾಜಿಕ ಅಂತರ ಪಾಲನೆಯನ್ನೇ ಸಾರ್ವಜನಿಕರು ಮರೆತಂತಿದ್ದಾರೆ.

Advertisement

ಮೇಲಾಗಿ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಈಗಿನಿಂದಲೇ ಎಚ್ಚರಿಕೆ ಕ್ರಮ ವಹಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾ °ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ನಾಲ್ಕು ವಾರಗಳಿಂದ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದೆ.

ನಿತ್ಯ ಸರಾಸರಿ 20ರಿಂದ 25 ಹೊಸ ಪ್ರಕರಣ ಮಾತ್ರ ಕಂಡುಬರುತ್ತಿವೆ. ಆದರೆ, ಕಳೆದ ವಾರದಲ್ಲಿ ಮೂರು ದಿನ 30ಕ್ಕೂ ಹೆಚ್ಚು ಹೊಸ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಇದೊಂದು ಎಚ್ಚರಿಕೆ ಗಂಟೆ ಮತ್ತು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು. ಜಿಲ್ಲೆಯ ಜನರಿಗೆ ಕೊರೊನಾದಿಂದ ರಕ್ಷಿಸಿಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಅರಿವು ಇದೆ. ಆದರೆ, ಅನ್‌ ಲಾಕ್‌ ಪ್ರಕ್ರಿಯೆ ಆರಂಭವಾದ ನಂತರ ಎಲ್ಲೆಂದರಲ್ಲಿ ಗುಂಪುಗೂಡುವುದು ಹೆಚ್ಚಾಗಿದೆ. ಸಾಮಾಜಿಕ ಅಂತರವನ್ನೇ ಪಾಲಿಸುತ್ತಿಲ್ಲ. ಇದು ಅಪಾಯಕ್ಕೆ ಆಹ್ವಾನ ನೀಡುವ ಸಾಧ್ಯತೆಯೂ ಇದೆ.

ಇದೇ ವೇಳೆ ನೆರೆಯ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಜಿಲ್ಲೆಯ ಗಡಿಗೆ ಹೊಂದಿಕೊಂಡ ಸೊಲ್ಲಾಪುರದಲ್ಲಿ ಪ್ರತಿ ದಿನ 300ರಿಂದ 400 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಆದ್ದರಿಂದ ಗಡಿ ಭಾಗದಲ್ಲಿ ಈಗಿನಿಂದಲೇ ಮತ್ತೆ ಬಿಗಿ ಕ್ರಮಗಳೊಂದಿಗೆ ಲಸಿಕೆ ವಿತರಣೆಗೂ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತೀರ ಹೆಚ್ಚೇನಿಲ್ಲ.

ಆದರೆ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಅಫಜಲಪುರ, ಆಳಂದ ತಾಲೂಕಿನಲ್ಲಿ ಎಚ್ಚರ ವಹಿಸಬೇಕಾಗಿದೆ. ಮಹಾರಾಷ್ಟ್ರದ ಗಡಿಗಳ ಮೂಲಕ ಜಿಲ್ಲೆ ಪ್ರವೇಶಿಸುವವರಿಗೆ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ ಮಾಡಲಾಗಿದೆ. ಈ ನಿಟ್ಟಿನಲ್ಲಿ ಎರಡೂ ತಾಲೂಕುಗಳ ಐದು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮ ಅನುಸರಿಸಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುವವರೆಗೆ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ.

Advertisement

ನೆಗೆಟಿವ್‌ ಇಲ್ಲದವರ ವಾಹನಗಳನ್ನು ಮರಳಿ ಕಳಿಸಲಾಗುತ್ತಿದೆ ಎಂದರು. ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ ಸಂಬಂಧ ಈಗಾಗಲೇ ಜಿಲ್ಲಾಡಳಿತದಿಂದ ಮಹಾ ರಾಷ್ಟ್ರದ ಸೊಲ್ಲಾಪುರ, ಉಸ್ಮಾನಾಬಾದ್‌ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಇದೇ ವೇಳೆ ನಿತ್ಯ ಕೆಲಸ ಕಾರ್ಯಗಳಿಗೆ ಓಡಾಡುವ ಜಿಲ್ಲೆಯ ಜನರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಕೊರೊನಾ ಲಸಿಕೆಗೆ ಪ್ರಮುಖ್ಯತೆ ನೀಡಲು ನಿರ್ಧರಿಸಲಾಗಿದೆ. ಗಡಿ ಗ್ರಾಮದ ಜನ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರೆ, ಅಂತವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next