Advertisement
ಹಲವಾರು ನಟರನ್ನು ಪರೀಕ್ಷಿಸಿ ಅದರಲ್ಲಿ ಕೆಲವೇ ಕೆಲವರನ್ನು ನಾಯಕಪಟ್ಟಕ್ಕೇರಿಸಿರುವ ಮಲಯಾಳ ಚಿತ್ರರಂಗದಲ್ಲಿ ಯುವ ಮನಸ್ಸಿನ ಹೊಸಪ್ರಯತ್ನವೊಂದು ಕಾಸರಗೋಡಿನ ಯುವ ಕನಸುಗಾರನನ್ನು ಮಲಯಾಳ ಚಿತ್ರದ ನಾಯಕನನ್ನಾಗಿ ಮಾಡಿದೆ. ಕಾಸರಗೋಡಿನಲ್ಲಿ ಈಗ ಆ ಭಾಗ್ಯದ ಬಾಗಿಲು ತೆರೆದಿರುವುದು ಕಾಸರಗೋಡು ವಿದ್ಯಾನಗರದ ನಿವಾಸಿ ವಿಷ್ಣು ನಂಬ್ಯಾರ್‌ಗೆ. ತಾನು ತಯಾರಿಸಿದ ಚಿಕ್ಕ ವೀಡಿಯೋ ಒಂದು ಜೀವನದಲ್ಲಿ ತಂದಿತ್ತ ದೊಡ್ಡ ಸೌಭಾಗ್ಯವನ್ನು ವಿಷ್ಣು ಬಹಳ ಸಂತೋಷದಿಂದ ಸ್ವೀಕರಿಸಿದ್ದಾರೆ. ಕಾಸರಗೋಡಿನ ಹಿರಿಯ ಪತ್ರಕರ್ತ ವಿ.ವಿ. ಪ್ರಭಾಕರನ್-ಕೆ.ಪಿ.ವತ್ಸಲ ದಂಪತಿ ಪುತ್ರನಾದ ವಿಷ್ಣು ನಂಬ್ಯಾರ್ ಜತೆ ನಡೆಸಿದ ಮಾತುಕತೆಯ ತುಣುಕುಗಳು ಇಲ್ಲಿವೆ…
Related Articles
Advertisement
ವಿಷ್ಣು : ಎಲ್ಲರಂತೆ ನನಗೂ ಸಿನಿಮಾದ ಹುಚ್ಚು ತುಂಬಾನೇ ಇತ್ತು. ಯಾವುದೇ ಒಂದು ಹೊಸ ಸಿನಿಮಾ ಬಂದ ಕೂಡಲೇ ಗೆಳೆಯರೊಂದಿಗೆ ಹೋಗಿ ವೀಕ್ಷಿಸುತ್ತಿದ್ದೆ. ಇಷ್ಟವಾದ ಸಿನಿಮಾಗಳನ್ನು ನಾಲ್ಕೆ çದು ಬಾರಿ ನೋಡಿದ್ದೂ ಇದೆ. ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಒಂದೆರಡು ಕಿರುಚಿತ್ರಗಳನ್ನೂ ತಯಾರಿಸಿದೆ. ಸಮಾನಾಸಕ್ತಿಯ ಗೆಳೆಯರ ಸಹವಾಸ ನನ್ನನ್ನು ಮುನ್ನಡೆಸಿತು. ಈ ಸಂದರ್ಭದಲ್ಲಿ ನಾನು ಸಿನಿಮಾದ ಆಡಿಶನ್‌ಗೂ ಹೋಗಿದ್ದೆನಾದರೂ ಪ್ರವೇಶ ಪಡೆಯಲಾಗಲಿಲ್ಲ. ಆಗಲೂ ಹೇಗಾದರೂ ಸಿನಿಮಾದಲ್ಲಿ ಅಭಿನಯಿಸಬೇಕೆಂಬ ಮೋಹ ನನ್ನೊಳಗೆ ಗಟ್ಟಿಗೊಳ್ಳುತ್ತಲೇ ಇತ್ತು. ಅದು ಸುಲಭದಲ್ಲಿ ನನಸಾಗುವ ಕನಸಲ್ಲ ಎಂಬುದೂ ನನಗೀ ಸಮಯದಲ್ಲಿ ಮನದಟ್ಟಾಗಿತ್ತು.
ಪ್ರಶ್ನೆ: ಎಲ್ಲೆಡೆ ಸಂಚಲನ ಮೂಡಿಸಿದ ನಿಮ್ಮ ಡಬ್ ಸ್ಮಾಷ್ ವೀಡಿಯೋದ ಕುರಿತು ಏನು ಹೇಳ ಬಯಸುತ್ತೀರಿ?ವಿಷ್ಣು : “ಡಬ್ ಸ್ಮಾಷ್’ ಕೇವಲ ನಾಲ್ಕು ನಿಮಿಷದ ನಾನು ಅಭಿನಯಿಸಿದ ವೀಡಿಯೋ. ಯೂ ಟ್ಯೂಬ್ ಹಾಗೂ ಫೇಸ್ ಬುಕ್‌ನಲ್ಲಿ ಪ್ರಕಟಿಸಿದಾಗ ದೊರೆತ ಪ್ರತಿಕ್ರಿಯೆ ನನ್ನನ್ನು ಬೆರಗುಗೊಳಿಸಿತು. ಸುಮಾರು ಅರುವತ್ತೆ$çದು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಆ ವೀಡಿಯೋವನ್ನು ವೀಕ್ಷಿಸಿದ್ದಾರೆ. ಪ್ರತಿಕ್ರಿಯೆಗಳೂ ಧಾರಾಳವಾಗಿ ಬಂದಿತ್ತು. ಇದು ನನ್ನ ಆಸೆಗೆ ರೆಕ್ಕೆ ಮೂಡಿಸಿತು. ಪ್ರಶ್ನೆ: ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಅರಸಿಬಂದ ಬಗ್ಗೆ ವಿವರಿಸಬಹುದೇ? ವಿಷ್ಣು: ನನ್ನ ಡಬ್ ಸ್ಮಾಷ್ ವೀಡಿಯೋ ವೀಕ್ಷಿಸಿದ ಹಲವಾರು ನಿರ್ದೇಶಕರು ಕರೆಮಾಡಿ ಅಭಿನಂದಿಸಿದರು. ಮಾತ್ರವಲ್ಲದೆ ಸಿನಿಮಾದಲ್ಲಿ ಅಭಿನಯಿಸಲು ಆಹ್ವಾನಿಸಿದರು. ಧಾರಾವಾಹಿಗಳಿಂದಲೂ ಅವಕಾಶ ಅರಸಿ ಬಂತಾದರೂ ನಾನು ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಧಾರಾವಾಹಿಗಳಲ್ಲಿ ಅಭಿನಯಿಸುವ ಆಸಕ್ತಿ ಇರಲಿಲ್ಲ. ನನ್ನ ಮೋಹ ಸಿನಿಮಾದೆಡೆಗಿತ್ತು. ಈ ಸಮಯದಲ್ಲಿ ಮಲಯಾಳಂನ ಹೆಸರಾಂತ ನಿರ್ದೇಶಕರಾದ ರಾಜೀವ್ ವರ್ಗೀಸ್ ಅವರು ನನ್ನನ್ನು ಸಂಪರ್ಕಿಸಿದರು. ಆಗ ಉಂಟಾದ ಆನಂದ ಮಾತಿನಲ್ಲಿ ಹೇಳಲಾಗದು. ಹೆಸರಾಂತ ನಿರ್ದೇಶಕರ ಸಿನಿಮಾದಲ್ಲಿ ಅಭಿನಯಿಸುವ ಭಾಗ್ಯ ಅದೂ, ನಾಯಕ ನಟನಾಗಿ ಅಭಿನಯಿಸಲು ಅವಕಾಶ ನೀಡಿದಾಗ ನನಗೆ ಮೊದಲಿಗೆ ನಂಬಲೇ ಸಾಧ್ಯವಾಗಲಿಲ್ಲ. ತಕ್ಷಣ ಅದಕ್ಕೆ ಒಪ್ಪಿಗೆ ನೀಡಿದೆ. ಪ್ರಶ್ನೆ: ನಿಮ್ಮ ಮೊದಲ ಚಿತ್ರ ಹಾಗೂ ಅನುಭವಗಳ ಕುರಿತು ಎರಡು ಮಾತು? ವಿಷ್ಣು: “ಅಂಙನೆ ಞ್ಞನುಂ ಪ್ರೇಮಿಚ್ಚು’ ಇದು ನನ್ನ ಮೊದಲ ಚಿತ್ರ. ಇದರ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡು ಇನ್ನೇನು ಶೀಘ್ರದಲ್ಲಿ ತೆರೆಕಾಣಲಿದೆ. ಹಲವು ಚಿತ್ರಗಳಲ್ಲಿ ಅಭಿನಯಿಸಿ ಪ್ರಖ್ಯಾತರಾಗಿರುವ ಶಿವಗಾಮಿ ಈ ಚಿತ್ರದ ನಾಯಕಿ. ಅಮರ್ ಎಂಬ ಡ್ರಾಮಾ ಸ್ಕೂಲ್‌ನ ವಿದ್ಯಾರ್ಥಿ ಪಾತ್ರ ನನ್ನದು. ಮಲಯಾಳಂನ ಹಲವಾರು ತಾರೆಯರೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಾತ್ರವಲ್ಲದೆ ಈ ಚಿತ್ರಪೂರ್ಣಗೊಂಡ ಬೆನ್ನಲ್ಲೇ ಇನ್ನೊಂದು ಚಿತ್ರಕ್ಕೆ ನಾಯಕನಟನಾಗಿ ಆಯ್ಕೆಯಾಗಿದ್ದೇನೆ. ಆ ಚಿತ್ರದ ಹೆಸರು ನಮಸ್ತೆ ಇಂಡಿಯಾ. ಓರ್ವ ಸಂಗೀತಜ್ಞನ ಪಾತ್ರದಲ್ಲಿ ಅಭಿನುಸುತ್ತಿದ್ದೇನೆ. ಇಂಗ್ಲಿಷ್ ನಟಿ ಎಲೀನಾ ಈ ಚಿತ್ರದ ನಾಯಕಿ. ಕೇರಳ, ಕರ್ನಾಟಕ, ದಿಲ್ಲಿ, ಆಗ್ರಾ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ಇದರ ಚಿತ್ರೀಕರಣ ನಡೆಯುತ್ತಿದೆ. ಖ್ಯಾತ ನಿರ್ದೇಶಕ ಕೈಲಾಸ್‌ರವರ ಸಹಾಯಕ ನಿರ್ದೇಶಕರಾಗಿದ್ದ ಅಜೆಯ್ ರವಿಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಕಾಣಲಿದೆ. ಪ್ರಶ್ನೆ : ಕಾಸರಗೋಡು ಗಡಿಪ್ರದೇಶ ಎಂಬ ಕಾರಣದಿಂದಲೋ ಏನೋ ಹಿಂದೆ ತಳ್ಳಲ್ಪಟ್ಟಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇದರ ಬಗ್ಗೆ ನೀವೇನು ಹೇಳುತ್ತೀರಿ? ವಿಷ್ಣು: ನಿಮ್ಮ ಮಾತು ನಿಜ. ಇಲ್ಲಿಂದ ಸಿನಿಮಾದಂತ ಅದ್ಭುತ ಲೋಕಕ್ಕೆ ಪ್ರವೇಶಿಸುವುದು ಸ್ವಲ್ಪ ಕಷ್ಟವೇ… ಆದರೂ ಈಗ ಕಾಲದೊಂದಿಗೆ ಜನರೂ ಬದಲಾಗುತ್ತಿದ್ದಾರೆ. ಕಾಸರಗೋಡಿನ ಭೌಗೋಳಿಕ ಸೌಂದರ್ಯ ಸಿನಿಮಾ ಚಿತ್ರೀಕರಣಕ್ಕೆ ಯೋಗ್ಯವಾಗಿದೆ ಎಂಬುದನ್ನು ಮನಗಂಡು ಕಾಸರಗೋಡಿನಲ್ಲಿ ಹೆಚ್ಚಿನ ಎಲ್ಲ ಚಿತ್ರಗಳ ಕೆಲವು ಭಾಗಗಳನ್ನಾದರೂ ಚಿತ್ರೀಕರಿಸಿ ಯಶಸ್ಸುಗಳಿಸುತ್ತಿರುವುದನ್ನು ಕಾಣಬಹುದು. ಕಾಸರಗೋಡಲ್ಲಿ ಚಿತ್ರೀಕರಿಸಿದ ಚಿತ್ರಕ್ಕೆ ಗೆಲುವು ನಿಶ್ಚಿತ ಎನ್ನುವ ಮನೋಭಾವ ಸಿನಿಮಾ ಲೋಕದಲ್ಲಿ ಮೂಡುತ್ತಿದೆಯೇ ಎಂಬ ಸಂದೇಹ ನನಗೆ. ಇದು ಒಂದು ಉತ್ತಮ ಬೆಳವಣಿಗೆ. ಪ್ರಶ್ನೆ: ಕಾಸರಗೋಡಿನ ಪ್ರತಿಭೆಗಳು ಎದುರಿಸುವ ಅವಕಾಶಗಳ ಕೊರತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ವಿಷ್ಣು: ಹಲವಾರು ಭಾಷೆಗಳಿಂದ ಸಂಪನ್ನವಾಗಿರುವ ಕಾಸರಗೋಡಿನ ಪ್ರತಿಭೆಗಳು ಅವಕಾಶವನ್ನು ಹುಡುಕಿಹೋಗಬೇಕಾದ ಅನಿವಾ ರ್ಯತೆಯನ್ನು ನಾನೂ ಗಮನಿಸಿದ್ದೇನೆ. ಗಡಿ ಪ್ರದೇಶದ ಜನರ ಸಾಧನೆಗಳು ಇನ್ನೂ ತಲುಪ ಬೇಕಾದಲ್ಲಿ ತಲುಪದಿರುವುದು ವಿಪರ್ಯಾಸ. ಅದೃಷ್ಟ, ಬದಲಾದ ತಂತ್ರಜ್ಞಾನ, ಜಾಲತಾಣಗಳು ನಮ್ಮೂರ ಪ್ರತಿಭೆಗಳ ಬೆಳವಣಿಗೆಗೆ ಪೂರಕವಾಗ ಬಲ್ಲುವು ಎಂಬ ನಂಬಿಕೆ ನನಗಿದೆ. ಎರಡು ರಾಜ್ಯಗಳ ನಡುವೆ ಭಾಷೆಯ ವ್ಯತ್ಯಾಸವೂ ಸೇರಿ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ಪ್ರಶ್ನೆ: ಕಾಸರಗೋಡಿನ ಕಲಾವಿದ ನಾಗಿ ಅಥವಾ ನಟನಾಗಿ ನೀವು ಮುಂದು ವರಿಯಬೇಕೆಂಬುದು ನಮ್ಮಾಸೆ. ನಿಮ್ಮದು? ವಿಷ್ಣು : ಕಾಸರಗೋಡಿನ ಕನ್ನಡಿಗರ ಮೇಲೆ ನನಗೆ ಅಪಾರವಾದ ಪ್ರೀತಿ. ಅವರು ತೋರುವ ಆತಿಥ್ಯ, ಪ್ರೀತಿ, ಕಾಳಜಿ ಹಾಗೂ ನೀಡುವ ಪ್ರೋತ್ಸಾಹ ಮರೆಯಲಾಗದು. ಕಾಸರಗೋಡಿನ ನಟನಾಗಿ ಬೆಳೆಯುವಾಸೆ ನನಗಿದೆ. ನನ್ನನ್ನು ನಟನನ್ನಾಗಿ ಮಾಡಿದ ಹುಟ್ಟೂರ ಹೆಸರನ್ನು ಎಲ್ಲಿಹೋದರೂ ಜತೆಯಲ್ಲಿ ಕೊಂಡೊಯ್ಯುವೆ. ಯಾವ ಮಟ್ಟಕ್ಕೆ ಬೆಳೆದರೂ ನಾವು ಹುಟ್ಟೂರನ್ನು ಅಭಿಮಾನದಿಂದ ಗೌರವದಿಂದ ಕಾಣಬೇಕು. ಇಲ್ಲಿನ ಜನರ ಪ್ರೀತಿ ವಿಶ್ವಾಸವನ್ನು ಸಂರಕ್ಷಿಸುವ ಜವಾಬ್ದಾರಿ ನನ್ನ ಮೇಲಿದೆ. ಪ್ರಶ್ನೆ: ಮುಂದಿನ ಯೋಜನೆಗಳು…? ವಿಷ್ಣು: ಸದ್ಯ ಸಿನಿಮಾದ ಚಿತ್ರೀಕರಣವನ್ನು ಉತ್ತಮ ರೀತಿಯಲ್ಲಿ ಮುಗಿಸುವ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ. ಈ ಸಿನಿಮಾದ ಸೆಟ್‌ನಲ್ಲಿ ಎಲ್ಲರೂ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಾರೆ. ನಿರ್ದೇಶಕರು ಓರ್ವ ಸೋದರನಂತೆ ಬೇಕಾದ ಸಲಹೆ ಸೂಚನೆಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಪ್ರತಿಯೊಬ್ಬರ ಸಹಾಯ ಸಹಕಾರ ನನ್ನಲ್ಲಿ ಧೈರ್ಯ ತುಂಬಿ ಚೆನ್ನಾಗಿ ಅಭಿನಯಿಸಲು ಪ್ರೇರಣೆಯಾಯಿತು ಎಂದರೂ ತಪ್ಪಲ್ಲ. ಪ್ರಶ್ನೆ: ಇತರೆ ಆಸಕ್ತಿ, ಅಭಿರುಚಿಗಳೇನಾದರೂ…? ವಿಷ್ಣು: ಲೋಂಗ್ ಡ್ರೈವ್ ತುಂಬಾ ಇಷ್ಟ. ಕ್ರಿಕೆಟ್ ಚೆನ್ನಾಗಿ ಆಡಬಲ್ಲೆ. ಆದರೆ ಹೆಚ್ಚಿನ ಸಮಯವನ್ನು ಸಿನಿಮಾ ನೋಡುವುದರಲ್ಲೇ ಕಳೆಯುವುದು ನನಗಿಷ್ಟ. ನನ್ನ ಒಲವು ಆ ಕಡೆಗಿದೆ. ಪ್ರಶ್ನೆ: ನಿಮ್ಮ ಕನಸು ನನಸಾಗಿದೆ. ಸಿನಿಮಾದ ನಾಯಕನಾಗಿ ಎರಡನೇ ಚಿತ್ರದಲ್ಲಿ ಅಭಿನಯಿಸುತ್ತಿದ್ದೀರಿ. ಈ ಸಂದರ್ಭದಲ್ಲಿ ನಿಮ್ಮ ನಿಜವಾದ ಪ್ರೇರಣೆ ಯಾರೆಂದು ಹೇಳಬಹುದೇ? ವಿಷ್ಣು: ಯಾವುದಕ್ಕೂ ಬೇಕು ಬೇಡ ಎನ್ನದ ನನ್ನ ಹೆತ್ತವರು. ನನ್ನ ಮೇಲೆ ಅವರಿಟ್ಟ ವಿಶ್ವಾಸ. ಅನಂತರ ನನ್ನ ಗೆಳೆಯರ ಬಳಗ. ನನ್ನ ಆಸಕ್ತಿಗೆ ನೀರೆರೆದು ಬೆಳೆಸಿದವರು, ಅಭಿನಯಿಸಲು ಅವಕಾಶ ಮಾಡಿಕೊಟ್ಟವರು, ನನ್ನ ಕಾರ್ಯಯೋಜನೆಗಳಿಗೆ ಸದಾ ಜತೆಯಾದ ನನ್ನ ಗೆಳೆಯರೇ ನನ್ನ ಬೆಳವಣಿಗೆಗೆ ಕಾರಣ. ನನ್ನ ಪ್ರಯತ್ನಕ್ಕೆ ಅವರ ಸಾಥ್ ಇಲ್ಲದಿರುತ್ತಿದ್ದರೆ ನಾನೀ ಅವಕಾಶವನ್ನು ಗಳಿಸಲು, ಕನಸನ್ನು ನನಸಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಗೆಳೆಯರೊಂದಿಗೆ ಸೇರಿ ತಯಾರಿಸಿದ ಮೊದಲ ಕಿರುಚಿತ್ರವನ್ನು ಆಗ ಮಂತ್ರಿಯಾಗಿದ್ದ ಅಡೂರು ಪ್ರಕಾಶ್ ಅವರು ಬಿಡುಗಡೆಗೊಳಿಸಿದ್ದರು. ಅದೆಲ್ಲ ಸಾಧ್ಯವಾದುದು ನನ್ನ ಜತೆಗಿರುವ ನನ್ನ ಗೆಳೆಯರ ಬಳಗದಿಂದಲೇ. ವಿಷ್ಣುವಿನೊಂದಿಗೆ ಮಾತನಾಡಿ ಹೊರ ಬರುವಾಗ ಆ ಸರಳತೆ, ವಿನಯ ಸದಾ ಆ ನಟನಿಗೆ ಬೆಂಗಾವಲಾಗಿರುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಕಾಸರ ಗೋಡಿನ ಜನರಲ್ಲಿ ಅವರ ಸಿನಿಮಾಗಳು ಹೊಸ ನಿರೀಕ್ಷೆಯನ್ನು ಉಂಟು ಮಾಡುವುದರಲ್ಲೂ ಸಂದೇಹವಿಲ್ಲ. ಕಾಸರಗೋಡಿನ ಮಣ್ಣಿನಲ್ಲೂ ನಾಯಕನಟನೊಬ್ಬನ ಉದಯವಾಗಿದೆ. ಇದು ನಮ್ಮ ನಡುವೆ ಇರುವ ಇತರ ನಟನಾಸಕ್ತರಿಗೆ, ಯುವ ನಟರಿಗೆ ಪ್ರೇರಣೆಯಾಗಲಿ. ಅಂತೆಯೇ ವಿಷ್ಣುವಿಗೆ ಇನ್ನೂ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಭಾಗ್ಯ ಒದಗಿಬರಲಿ. ಗಡಿನಾಡಿನ ಹಿರಿಮೆಯ ಮುಕುಟಕ್ಕೆ ಇನ್ನೊಂದು ಗರಿ ಮೂಡಲಿ. ಅಖೀಲೇಶ್ ನಗುಮುಗಂ