Advertisement

ಸರಳತೆಯ ಸಾಕಾರ ಮೂರ್ತಿ ಸುಧಾ ಮೂರ್ತಿ

04:59 PM Jun 26, 2020 | mahesh |

ವ್ಯಕ್ತಿಯೋರ್ವರ ಸರಳತನವೇ ಅವರ ಯಶಸ್ಸಿಗೆ ಮುನ್ನುಡಿಯಾಗಿರುತ್ತದೆ. ಇದು ಎಷ್ಟೋ ಜನರಿಗೆ ಸ್ಫೂರ್ತಿಯಾಗಬಲ್ಲದು.

Advertisement

ಪ್ರತಿಯೊಬ್ಬ ವ್ಯಕ್ತಿಯ ಬಾಳಿನಲ್ಲಿ ಭೂತಕಾಲದ ಘಟನೆ, ಕ್ಷಣಗಳು ಅನುಭವವಾಗಿ ಜೀವನದುದ್ದಕ್ಕೂ ಸ್ಮರಣೀಯವಾಗಿರುತ್ತವೆ. ನಮ್ಮ ತಪ್ಪು-ಒಪ್ಪುಗಳು ನಾಳಿನ ಜೀವನದಲ್ಲಿ ಅನುಭವಗಳಾಗಿ ಜೀವನ ಪಾಠವಾಗುತ್ತವೆ. ಅನುಭವಗಳೆಂಬ ಮಾಲೆಯು ಮಲ್ಲಿಗೆಯ ಅರಳಿದ ಹೂಗಳಿಂದಲೂ ಕೂಡಿರಬಹುದು ಅಥವಾ ಬಾಡಿದ ಮಾಲೆಯೂ ಆಗಿರಬಹುದು. ಸಿಹಿ-ಕಹಿಯ ಸಂತೆ. ಇದರಂತೆ ಯುಗಾದಿ ಹಬ್ಬವೂ ಬೇವು-ಬೆಲ್ಲದ ಸಂದೇಶ ರವಾನಿಸುತ್ತದೆ. ವರ್ಷಾರಂಭದಲ್ಲಿ ಸಿಹಿ-ಕಹಿಗಳಿಂದ ಕೂಡಿದ ಸಮಾನ, ಸುಂದರ ಜೀವನ ಪ್ರಾರಂಭಗೊಳ್ಳಲಿ ಎಂಬ ಆಶಯ ಹಬ್ಬದು. ಮನುಷ್ಯ ಸ್ವತಃ ಸಂಘ ಜೀವಿ. ಸಂಬಂಧಗಳೊಂದಿಗೆ ಬಂದಿಯಾಗಿದ್ದಾನೆ. ಸಂಬಂಧಗಳು ಮನುಷ್ಯ ಜೀವನದ ಪ್ರತಿಯೊಂದು ಘಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಮಯ ಮತ್ತು ಸಂಬಂಧಗಳು ಮನುಷ್ಯನಿಗೆ ಮೌಲ್ಯ ಎನಿಸುತ್ತವೆ. ಇವೆ ಲ್ಲ ವ ನ್ನೂ ಕಣ್ಮುಚ್ಚಿ ನೆನೆದರೆ ಸಾಕು ಜೀವನದ ಪ್ರತಿಯೊಂದು ಕ್ಷಣಗಳು ಕಣ್ಣಂಚನಲ್ಲಿ ಬರುತ್ತವೆ. ಕಳೆದುಕೊಂಡ ಮತ್ತು ಪಡೆದುಕೊಂಡ ಸಂಗತಿಗಳು ಜೀವನದ ಅನುಭವದ ಸಾಲಿಗೆ ನಿಂತು ಜೀವನದ ಪಾಠವನ್ನು ಕಲಿಸಿಕೊಡುತ್ತವೆ.

ನನ್ನದು ವಯಸ್ಸು ಇಪ್ಪತ್ತಾದರೂ ಸಾವಿರ ನೆನಪುಗಳು. ಅಮ್ಮನ ನೆನಪು, ಅಪ್ಪನ ಕೋಪ, ಅಜ್ಜಿಯ ಕಾಳಜಿ ಇವೆಲ್ಲದರ ನಡುವೆ ಎಲ್ಲವನ್ನೂ ಮೀರಿ ನಿಂತ ಬದುಕು. ಜೀವನದ ಅನುಭವಗಳು ಏನನ್ನೇ ಹೇಳಬಹುದು. ಆದರೆ ಅದೆಲ್ಲ ಮುಂದಿನ ಜೀವನಕ್ಕೆ ಸ್ಫೂರ್ತಿಯಾಗಿವೆ. ಜೀವನದ ಅನುಭವಗಳು ಕನಸಿನಂತೆ. ಅದು ಒಂದೋ ನಮ್ಮ ಜೀವನಕ್ಕೆ ದಾರಿದೀಪವಾಗಬೇಕು. ಇಲ್ಲವಾದರೆ ಬೇರೋಬ್ಬರ ಜೀವನಕ್ಕೆ ಮಾರ್ಗದರ್ಶಿಯಾಗಬೇಕು. ಜೀವನದ ಅನುಭವ ತೃಪ್ತಿಯ ಸಾರ ಹಾಗೂ ಕಣ್ಮುಚ್ಚಿ ತೆರೆಯುವ ಕನಸಿನ ಹಾರ.

ಬಡತನ, ಸಂಕಷ್ಟಗಳ ಸಂಕೋಲೆಯಲ್ಲಿ ಸಿಲುಕಿ ನಲುಗಿದ್ದರೂ ಸಾಧನೆ ಎಂಬುದನ್ನು ತನ್ನ ಸ್ವತ್ತು ಅಂದುಕೊಂಡವನ ದಾಹ ಉತ್ಸಾಹ ಮತ್ತು ಅವರಲ್ಲಿನ ಛಲ ಎಂದಿಗೂ ಬತ್ತುವುದಿಲ್ಲ. ಸಮಸ್ಯೆಗಳಿಗೆ ಬೆನ್ನು ತೋರಿಸಿದೆ ಅವುಗಳನ್ನು ಮೆಟ್ಟಿ ನಿಂತು ಯಶಸ್ಸಿನ ಪತಾಕೆ ಹಾರಿಸಿದ ಅದೆಷ್ಟೋ ಸಾಧಕರನ್ನು ನಾವು ಗುರುತಿಸಬಹುದಾಗಿದೆ. ಅಂತಹವರಲ್ಲಿ ದೈತ್ಯ ಇನ್ಫೋಸಿಸ್‌ ಫೌಂಡೇಶನ್‌ನ ನೇತಾರರು ಹಾಗೂ ಅದೆಷ್ಟೋ ಪ್ರತಿಭೆಗಳ ಬಾಳಿನ ಬೆಳಕು ಸುಧಾ ಮೂರ್ತಿ ಕೂಡ ಒಬ್ಬರು. ಸರಳ, ಭಾವಜೀವಿ, ತಮ್ಮ ವಿಶಿಷ್ಟ ಅಂಕಣಗಳ ಮೂಲಕ ಸಮಾಜವನ್ನು ತಲುಪುವ, ಎಲ್ಲರೂ ಮೆಚ್ಚಿಕೊಳ್ಳುವ ಮತ್ತು ಎಲ್ಲರಿಗೂ ಇಷ್ಟವಾಗುವ ಸುಧಾ ಮೂರ್ತಿ ತಮ್ಮ ಇನ್ಫೋಸಿಸ್‌ ಫೌಂಡೇಶನ್‌ ಮೂಲಕ ಅದೆಷ್ಟೋ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದಾರೆ. ಸರಳತನವೇ ಮನುಷ್ಯನ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂಬ ಅವರ ಮಾತು ಪ್ರತಿಯೊಬ್ಬರಲ್ಲೂ ಹೊಸ ಪ್ರೇರಣೆ ಮೂಡಿಸುತ್ತದೆ. ಇವರೇ ಈ ಬಾರಿಯ ಸ್ಫೂರ್ತಿ ಅಂಕಣದ ಯಜಮಾನಿ. ಅವರ ಒಂದಿಷ್ಟು ಅನುಭವಗಳು, ಸ್ಪೂರ್ತಿದಾಯಕ ಮಾತುಗಳು ಇಲ್ಲಿವೆ.

ಯಶಸ್ಸಿಗೆ ಪರಿಶ್ರಮ ಮುಖ್ಯ
ಸುಧಾಮೂರ್ತಿ ಅವರ ಪ್ರಕಾರ, ಏನನ್ನಾದರೂ ಸಾಧಿಸಬೇಕೆಂದು ಹೊರಟವನಿಗೆ ಪ್ರಮುಖವಾಗಿ ಧೈರ್ಯ ಮತ್ತು ಪರಿಶ್ರಮ ಪಡುವ ಗುಣವಿರಬೇಕಂತೆ. ಬದುಕೆಂಬ ಚದುರಂಗದಾಟದಲ್ಲಿ ನಾವು ಎಷ್ಟು ಬುದ್ಧಿವಂತರಿದ್ದೀವೆ, ಎಷ್ಟು ಚೆನ್ನಾಗಿದ್ದೀವಿ ಅಥವಾ ಎಷ್ಟು ಚೆನ್ನಾಗಿ ಸಂಪರ್ಕಗಳನ್ನು ಹೊಂದಿದ್ದೀವಿ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಪರಿಶ್ರಮ ಪಟ್ಟು ಕೆಲಸ ಮಾಡಲು ನಾವು ಎಷ್ಟು ಸಮರ್ಥರು ಹಾಗೂ ಯಾರೇ ಬಡಿದರೂ, ಚುಚ್ಚಿದರೂ, ಆಡಿದರೂ ಜಗ್ಗದಂಥ ಧೈರ್ಯದ ಅಣೆಕಟ್ಟೆ ಇದ್ದರೆ ಮಾತ್ರ ಯಶಸ್ವಿ ವ್ಯಕ್ತಿಗಳಾಗಬಹುದು.

Advertisement

ಹೆಣ್ಣುಮಕ್ಕಳ ದಾರಿದೀಪ
ಸರಳತೆಗೆ ಇನ್ನೊಂದು ಹೆಸರೇ ಸುಧಾ ಮೂರ್ತಿ. ಆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾದ್ದೇ ಇಲ್ಲ. ಅವರ ಉಡುಗೆ-ತೊಡುಗೆ, ಮಾತು, ಚಟುವಟಿಕೆಗಳಲ್ಲೇ ಅದು ತಿಳಿಯುತ್ತದೆ. ಆ ಮೂಲಕ ಎಷ್ಟೋ ಹೆಣ್ಣು ಮಕ್ಕಳಿಗೆ ಪ್ರೇರಣೆ, ಸ್ಫೂರ್ತಿ ಆಗಿರುವ ಇವರು ದೇವದಾಸಿ ಪದ್ಧತಿ ಕಿತ್ತೂಗೆಯಲು ಹೋರಾಟ ಮಾಡಿದ್ದಾರೆ. ದೇಶಕ್ಕೆ ಅಂಟಿಕೊಂಡಿದ್ದ ಈ ಅನಿಷ್ಟ ಪದ್ಧತಿಯ ಆಚರಣೆಯಲ್ಲಿ ಮುನ್ನಲೆಯಲ್ಲಿದ್ದ ರಾಯಚೂರಿನ ಸುಮಾರು 20 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಇದರ ಸುಳಿಯಿಂದ ಪಾರು ಮಾಡಿ, ಅವರಿಗೆ ಕೌದಿ ಹೊಲಿಯುವುದನ್ನು ಹೇಳಿಕೊಟ್ಟು ಸ್ವಾವಲಂಬಿಯಾಗಿ ಬದುಕಲು ಕಲಿಸಿಕೊಡುವ ಮೂಲಕ ಅವರ ಪಾಲಿಗೆ ದಾರಿದೀಪವಾಗಿದ್ದಾರೆ.

ಸಹಾನುಭೂತಿ ಇದ್ದರೆ ಸಕಲವೂ ಲಭ್ಯ
ಜೀವನದಲ್ಲಿ ನಾವು ಎಷ್ಟೋ ಬಾರಿ ಹಣ ಆಸ್ತಿ ಸಂಪಾದಿಸಬೇಕು ಎಂಬ ಭರದಲ್ಲಿ ನಮ್ಮಲ್ಲಿದ್ದ ಮೌಲ್ಯಗಳನ್ನು ಗಾಳಿಗೆ ತೂರುತ್ತೇವೆ. ಪರಿಣಾಮ ಸಂಬಂಧಗಳು ಅಳಿಸುತ್ತವೆ ಎಲ್ಲರೂ ದೂರ ಆಗುತ್ತಾರೆ. ಸಾಧನೆಯ ಹಾದಿ ಹಿಡಿದವರು ಎಲ್ಲ ಕಳೆದುಕೊಂಡು ತೊಳಲಾಡುತ್ತಾರೆ. ಅದಕ್ಕೆ “ಸಾಧನೆ, ಹಣ, ಪ್ರಶಸ್ತಿ ಅಥವಾ ಪದವಿಗಳನ್ನು ಹೊಂದಿರುವುದಕ್ಕಿಂತ ಮುಖ್ಯವಾಗಿ ಒಳ್ಳೆಯ ಸಂಬಂಧ, ಸಹಾನುಭೂತಿಯನ್ನು ಹಾಗೂ ಮನಃಶಾಂತಿಯನ್ನು ಹೊಂದಬೇಕು. ಆಗ
ತಾನಾಗಿ ಯೇ ಸಕಲವೂ ಒಲಿದು  ಬರುತ್ತದೆ.

ಸಮಸ್ಯೆಗಳನ್ನು ದೀರ್ಘ‌ವಾಗಿ ಎಳೆಯದಿರಿ
ಪ್ರಕೃತಿ ತುಂಬಾನೆ ಸೂಕ್ಷ್ಮವಾಗಿದ್ದು ಪ್ರತಿಯೊಬ್ಬರನ್ನೂ ಸರಿ ಸಮಾನವಾಗಿ ನೋಡುತ್ತದೆ. ಆದರೆ ಅದರ ಸೃಷ್ಟಿಯಾಗಿರುವ ಮನುಷ್ಯ ಮಾತ್ರ ತನ್ನ ಸುತ್ತ ಭೇದ-ಭಾವಗಳನ್ನು, ಬಡವ-ಶ್ರೀಮಂತ ಎಂಬ ಬೇಲಿಗಳನ್ನು ಹಾಕಿಕೊಂಡಿದ್ದಾನೆ. ಸಲ್ಲದ್ದಕ್ಕೆ ಇದರ ಆಧಾರದ ಮೇಲೆ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಬೇರೆ ಅಳೆಯುತ್ತಾನೆ. ಆದರೆ ನಾವು ನೋಡಲಿಕ್ಕೆ ಚಂದವಿದ್ದೀವೋ ಇಲ್ಲವೋ, ನಾವು ಶ್ರೀಮಂತರೋ ಅಲ್ಲವೋ, ನಾವು ಬುದ್ಧಿವಂತರೋ ಅಲ್ಲವೋ ಈ ಮಾನದಂಡಗಳನ್ನು ಲೆಕ್ಕಿಸದ ಪ್ರಕೃತಿ ಎಲ್ಲರಿಗೂ ದಿನಕ್ಕೆ 24 ಗಂಟೆಗಳನ್ನೇ ಕೊಟ್ಟಿದೆ ಹೊರತು ದುಡ್ಡು ಇರುವವನಿಗೆ ಒಂದು, ಇಲ್ಲದವನಿಗೆ ಮತ್ತೂಂದು ಕೊಟ್ಟಿಲ್ಲ. ಆದ ಕಾರಣ ಸಮಸ್ಯೆಗಳನ್ನು ದೀರ್ಘ‌ವಾಗಿ ಎಳೆಯದೇ ನಮ್ಮ ತೊಂದರೆಗಳು, ಕಷ್ಟಗಳು ಅಥವಾ ಪರಿಹಾರಗಳು ಏನೇ ಇದ್ದರೂ ಅವುಗಳನ್ನು ಈ 24 ಗಂಟೆಗಳಲ್ಲೇ ಮುಗಿಸಿ ಕೊಳ್ಳಬೇಕು.


ಅಭಿಷೇಕ್‌ಎಸ್‌. ಜನಿಯಾ,
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next