ಕೆಲವು ವರ್ಷಗಳೇ ಆಗಿತ್ತು, ರಾಮ್ ಕುಮಾರ್ ಚಿತ್ರವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು. ಈಗ ಬಹಳ ದಿನಗಳ ನಂತರ ಅವರು “ಅಬ್ಬೆ ತುಮಕೂರು ಸಿದ್ಧಿಪುರುಷ ವಿಶ್ವಾರಾಧ್ಯರು’ ಎಂಬ ಚಿತ್ರದಲ್ಲಿ ವಿಶ್ವಾರಾಧ್ಯರಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷವೇ ಈ ಚಿತ್ರವು ಸೆಟ್ಟೇರಿತ್ತು. ಆ ನಂತರ ಸುದ್ದಿಯಾಗಿರಲಿಲ್ಲ. ಚಿತ್ರ ಮುಗಿದಿರುವುದಷ್ಟೇ ಅಲ್ಲ, ಬಿಡುಗಡೆಗೂ ಸಿದ್ಧವಾಗುತ್ತಿದೆ. ಅದಕ್ಕೂ ಮುನ್ನ ಕಳೆದ ವಾರ ಅಂಬೇಡ್ಕರ್ ಭವನದಲ್ಲಿ ಚಿತ್ರದಲ್ಲಿ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು.
ಬಹುಶಃ ಇತ್ತೀಚಿನ ದಿನಗಳಲ್ಲಿ ಯಾವೊಂದು ಕಾರ್ಯಕ್ರಮಕ್ಕೂ ಅಷ್ಟೊಂದು ಸಂಖ್ಯೆಯ ರಾಜಕೀಯ ಧುರೀಣರು ಮತ್ತು ಸಿನಿಮಾ ಕಲಾವಿದರು ಬಂದ ಉದಾಹರಣೆಗಳು ಕಡಿಮೆಯೇ. ಆದರೆ, “ಅಬ್ಬೆ ತುಮಕೂರು ಸಿದ್ಧಿಪುರುಷ ವಿಶ್ವಾರಾಧ್ಯರು’ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಗೃಹಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಡಾ ದೊಡ್ಡರಂಗೇಗೌಡ, ಪುನೀತ್ ರಾಜಕುಮಾರ್, ಜಗ್ಗೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಹಲವರು ಹಾಜರಿದ್ದರು.
“ಅಬ್ಬೆ ತುಮಕೂರು ಸಿದ್ಧಿಪುರುಷ ವಿಶ್ವಾರಾಧ್ಯರು’ ಚಿತ್ರವನ್ನು ಡಾ ಗಂಗಾಧರ ಮಹಾಸ್ವಾಮಿಗಳು ನಿರ್ಮಿಸಿದರೆ, ಸಾಯಿಪ್ರಕಾಶ್ ನಿರ್ದೇಶಿಸಿದ್ದಾರೆ. ಇವರ 99ನೇ ಚಿತ್ರವಂತೆ. ಅವರಿಗೆ ವಿಶ್ವಾರಾಧ್ಯರ ಕುರಿತು ಹೆಚ್ಚು ವಿಷಯಗಳು ಗೊತ್ತಾಗಿದ್ದು ಎರಡು ವರ್ಷಗಳ ಹಿಂದೆ. “ವಿಶ್ವಾರಾಧ್ಯರ ಕುರಿತು ಚಿತ್ರ ಮಾಡಬೇಕು ಎಂದು ತೀರ್ಮಾನವಾದಾಗ, ಯಾವ್ಯಾವ ಅಂಶಗಳನ್ನು ಹೇಳಬೇಕೆಂದು ಸಾಕಷ್ಟು ಚರ್ಚೆ ಮಾಡಿದೆವು. ವಿಶ್ವಾರಾಧ್ಯರ ಪಾತ್ರವನ್ನು ಯಾರಿಂದ ಮಾಡಿಸಬೇಕೆಂಬ ಚರ್ಚೆಯಾದಾಗ, ರಾಮ್‌ಕುಮಾರ್ ಅವರ ಹೆಸರು ಎಲ್ಲರಿಂದ ಬಂತು. ಅದಲ್ಲದೆ ಚಿತ್ರದಲ್ಲಿ 75 ಜನಪ್ರಿಯ ಕಲಾವಿದರು ನಟಿಸಿದ್ದಾರೆ. ಈ ಚಿತ್ರದಲ್ಲಿ ಜವಾರಿ ಕನ್ನಡವನ್ನು ಬಳಸಲಾಗಿದೆ. ಫೆಬ್ರವರಿ 20ರಂದು ಶ್ರೀಕ್ಷೇತ್ರದಲ್ಲಿ ಉತ್ಸವ ನಡೆಯಲಿದ್ದು, ಆ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದರು.
ವಿಶ್ವಾರಾಧ್ಯರ ಪಾತ್ರವನ್ನು ಮಾಡುವುದಕ್ಕೆ ತಾವು ಪುಣ್ಯ ಮಾಡಿದ್ದಾಗಿ ರಾಮ್ ಕುಮಾರ್ ಹೇಳಿದರು. ಚಿತ್ರದಲ್ಲಿ ಹರೀಶ್ ರಾಜ್, ದಿಶಾ ಪೂವಯ್ಯ, “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ ಸೇರಿದಂತೆ ಹಲವರು ನಟಿಸಿದ್ದು, ಅವರೆಲ್ಲಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ಚಿತ್ರಕ್ಕೆ ಪಿ. ಬಲರಾಮ್ ಸಂಗೀತ ಸಂಯೋಜಿಸಿದ್ದಾರೆ.