Advertisement
ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ಯಲ್ಲಿ ಬಿಸಿಲೆ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಂತೆ 15 ಸಾವಿರ ಎಕರೆಯಲ್ಲಿ ಆನೆ ಕಾರಿಡಾರ್ ನಿರ್ಮಿಸುವ ಪ್ರಸ್ತಾಪವಿದೆ. ಆನೆ ಕಾರಿಡಾರ್ ಪ್ರಸ್ತಾಪಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸುಮಾರು 11 ಸಾವಿರ ಎಕರೆ ಯಿದ್ದರೆ. ರೈತರು ನ್ಯಾಯಯುತ ಪರಿಹಾರ ನೀಡಿದರೆ ತಮ್ಮ ಹಿಡುವಳಿಯ 3,300 ಎಕರೆ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಆದರೆ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದೂ ಸೇರಿದಂತೆ ಆನೆ ಕಾರಿಡಾರ್ ಸ್ಥಾಪನೆಯ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ.
Related Articles
Advertisement
ಕಳೆದೆರಡು ವರ್ಷಗಳಿಂದ ಜಾರಿಯಾಗು ತ್ತಿರುವ ಎತ್ತಿನಹೊಳೆ ಯೋಜನೆಗೆ ಸ್ವಾಧೀನಪಡಿಸಿ ಕೊಂಡ ಭೂಮಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಈಗ ಅಷ್ಟು ಪರಿಹಾರವನ್ನು ಆನೆ ಕಾರಿಡಾರ್ ನಿರ್ಮಾಣದ ಭೂ ಸ್ವಾಧೀನದ ಭೂಮಿಗೂ ನೀಡಲೇಬೇಕಾಗಿದೆ. ಹಾಗಾಗಿ ಭೂ ಪರಿಹಾರದ ಹೊರೆ ನೋಡಿ ರಾಜ್ಯ ಸರ್ಕಾರ ಕೈ ಚೆಲ್ಲಿದೆ. ಕೇಂದ್ರ ಸರ್ಕಾರ ಕ್ಯಾಂಪ್ಕೊ ನಿಧಿಯಿಂದ ನೆರವು ನೀಡಬೇಕು ಎಂಬ ವರಸೆಯನ್ನು ರಾಜ್ಯ ಸರ್ಕಾರ ಈಗ ಆರಂಭಿಸಿದೆ.
ಈಗೇನು ಮಾಡಬೇಕು?: ಆನೆ ಕಾರಿಡಾರ್ ನಿರ್ಮಾಣವಾಗಲೇಬೇಕೆಂಬ ಇಚ್ಛಾಶಕ್ತಿದ್ದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿ ಕ್ಯಾಂಪ್ಕೋ ನಿಧಿಯಿಂದ ನೆರವು ಪಡೆಯಲು ಯತ್ನಿಸಬೇಕು. ಏತನ್ಮಧ್ಯೆ ರೈತರ ಭೂ ಸ್ವಾಧೀನ ಪ್ರಕ್ರಿಯೆ ಆರಂಭಕ್ಕೆ ಸಕಲೇಶಪುರ ಉಪ ವಿಭಾಗಾಧಿ ಕಾರಿಯವರಿಗೆ ಜಿಲ್ಲಾಡಳಿತ ತಾಕೀತು ಮಾಡಿ ಭೂ ಸ್ವಾಧೀನದ ನಿಖರ ವೆಚ್ಚ ಎಷ್ಟಾಗುತ್ತದೆ ಎಂಬ ಅಂದಾಜು ಸಿದ್ಧಪಡಿಸಬೇಕು. ಈ ಪ್ರಕ್ರಿಯೆಗಳಾಗದ ಹೊರತು ಆನೆ ಕಾರಿಡಾರ್ ನಿರ್ಮಾಣ ಗಗನಕುಸುಮವಾದೀತು ಅಷ್ಟೇ.
ಮರ ಕಡಿಯಲು ಅನುಮತಿ: ಆನೆ ಕಾರಿಡಾರ್ ನಿರ್ಮಾಣಕ್ಕೆ ಭೂ ಸ್ವಾಧೀನವಾಗಲಿರುವ ಪ್ರದೇಶ ದಲ್ಲಿಯೇ ಹಿಡುವಳಿ ಪ್ರದೇಶದಲ್ಲಿ ಮರ ಕಡಿದು ಮಾರಾಟ ಮಾಡಲು ರೈತರಿಗೆ ಅನುಮತಿ ನೀಡಲು ಅರಣ್ಯ ಇಲಾಖೆ ಮುಂದಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಈ ಸಂಬಂಧ ಸ್ಪಷ್ಟನೆ ನೀಡಿರುವ ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂಬಾಬು ಅವರು, ಆನೆಕಾರಿಡಾರ್ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ 3,300 ಎಕರೆ ಪ್ರದೇಶ ಹೊರತುಪಡಿಸಿ ಏಲಕ್ಕಿ ತೋಟಗಳಲ್ಲಿನ ಮರ ಕಡಿಯಲು ಅನುಮತಿ ನೀಡಬೇಕೆಂಬ ಮನವಿ ರೈತರಿಂದ ಬಂದಿದೆ.
ಏಲಕ್ಕಿ ಬೆಳೆಗೆ ರೋಗ ಬಾಧೆ ಹೆಚ್ಚುತ್ತಿರುವುದರಿಂದ ಏಲಕ್ಕಿಗೆ ಪರ್ಯಾಯವಾಗಿ ಕಾಫಿ ಬೆಳೆಯುವುದಾಗಿ, ಈಗಿರುವ ಮರಗಳಿಂದ ನೆರಳು ಹೆಚ್ಚಾಗಿದ್ದು ಕಾಫಿ ಬೆಳೆಯಲು ಸಾಧ್ಯವಾಗದು. ಆದ್ದರಿಂದ ಮರ ಕಡಿದು ಮಾರಾಟ ಮಾಡಲು ಅನುಮತಿ ನೀಡಬೇಕೆಂದು ರೈತರ ಬೇಡಿಕೆ ಆಧರಿಸಿ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳುತ್ತಾರೆ.
ಈಗ ವಸತಿ ಶಾಲೆಗಳ ಪ್ರಸ್ತಾಪ: ಆನೆ ಕಾರಿಡಾರ್ ನಿರ್ಮಾಣದ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಆಸಕ್ತಿ ಇದ್ದಂತಿಲ್ಲ. ಈ ಬಗ್ಗೆ ಅವರು ಹೆಚ್ಚು ಪ್ರಸ್ತಾಪ ಮಾಡುತ್ತಲೂ ಇಲ್ಲ. ಕಾಡಾನೆ ಗಳ ಹಾವಳಿಯಿಂದ ಶಾಲೆ, ಕಾಲೇಜುಗಳಿಗೆ ಬಂದು ಹೋಗಲು ಈಗ ಅರಣ್ಯ ಇಲಾಖೆ ವಿದ್ಯಾರ್ಥಿಗಳನ್ನು ಮನೆಯಿಂದ ಆಲೂರು ಮತ್ತು ಸಕಲೇಶಪುರ ಮತ್ತು ಅಯಾ ತಾಲೂಕಿನ ಶಿಕ್ಷಣ ಸಂಸ್ಥೆಗಳಿಗೆ ಕರೆ ತಂದು ಮತ್ತೆ ಮನೆಗೆ ಬಿಡುತ್ತಿದೆ. ಸಕಲೇಶಪುರ ತಾಲೂಕಿನಲ್ಲಿ 2 ವ್ಯಾನ್‌ಗಳನ್ನು ಬಾಡಿಗೆ ಪಡೆದು ಓಡಿಸುತ್ತಿದೆ. ಆಲೂರು ತಾಲೂಕಿನಲ್ಲಿ ಇಲಾಖೆಯ ಒಂದು ವಾಹನವನ್ನು ವಿದ್ಯಾರ್ಥಿಗಳಿಗಾಗಿ ಓಡಿಸುತ್ತಿದೆ.
ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ ಒಂದೊಂದು ವಸತಿ ಶಾಲೆ ಆರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಮುಂದಾಗಿದ್ದಾರೆ. 1ನೇ ತರಗತಿಯಿಂದ ಪಿಯು ವರೆಗೂ ಶಿಕ್ಷಣ ನೀಡುವ ಸಂಸ್ಥೆ ಗಳನ್ನು ಸರ್ಕಾರದಿಂದ ನಿರ್ಮಿಸಲು ಸೂಕ್ತ ಸ್ಥಳ ಗುರ್ತಿಸಲು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ವಸತಿ ಶಾಲೆಗಳ ನಿರ್ಮಾಣ ಬಜೆಟ್‌ನಲ್ಲಿ ಘೋಷಣೆ ಆಗುವ ಸಾಧ್ಯತೆಯೂ ಇದೆ.
* ಎನ್. ನಂಜುಂಡೇಗೌಡ