Advertisement

ವಿದ್ಯುತ್‌ ತಂತಿ ತಗುಲಿ ಬಾಲಕ ಗಂಭೀರ

12:25 AM Apr 28, 2019 | Lakshmi GovindaRaj |

ಬೆಂಗಳೂರು: ಬೆಸ್ಕಾಂ ಹಾಗೂ ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ, ಮಹಾಲಕ್ಷ್ಮೀ ಬಡಾವಣೆಯಲ್ಲಿ ಜೋತು ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ಎಂಟು ವರ್ಷ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸುವಂತಾಗಿದೆ.

Advertisement

ಮಹಾಲಕ್ಷ್ಮೀ ಬಡಾವಣೆಯ 7ನೇ ಅಡ್ಡರಸ್ತೆಯ ನಾಗಲಿಂಗೇಶ್ವರ ದೇವಾಲಯ ಬಳಿ ನಿವಾಸಿಗಳಾದ ಬಸವರಾಜ್‌ ಮತ್ತು ರೇವತಿ ಎಂಬವರ ಪುತ್ರ ಸಾಯಿ ಚರಣ್‌ (8) ವಿದ್ಯುತ್‌ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶುಕ್ರವಾರ ಸಂಜೆ ಸಾಯಿಚರಣ್‌ ಮನೆ ಸಮೀಪ ಸ್ನೇಹಿತರೊಂದಿಗೆ ಆಟವಾಡುವ ಸಂದರ್ಭದಲ್ಲಿ ಬಾಲ್‌ ತೆಗೆದುಕೊಂಡು ಬರಲು ಹೋದಾಗ ನೆಲದ ಮೇಲೆ ತುಂಡಾಗಿದ್ದ ವಿದ್ಯುತ್‌ ತಂತಿ ತುಳಿದ ಪರಿಣಾಮ ಶಾಕ್‌ ಹೊಡದಿದೆ. ಗಂಭೀರವಾಗಿ ಗಾಯಗೊಂಡು ನರಳಾಗುತ್ತಿದ್ದ ಸಾಯಿ ಚರಣ್‌ನನ್ನು ಸ್ಥಳೀಯರು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ಯಾಬ್‌ ಚಾಲಕರಾಗಿರುವ ಬಸವರಾಜ್‌ ದಂಪತಿಗೆ ಹಲವು ವರ್ಷಗಳ ಬಳಿಕ ಸಾಯಿ ಚರಣ್‌ ಜನಿಸಿದ್ದರಿಂದ ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಆದರೆ, ಮಗ ಇದೀಗ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೊರಾಡುತ್ತಿರುವುದನ್ನು ಕಂಡು ಪಾಲಕರು ಕಂಗಾಲಾಗಿದ್ದು, ಮಗನನ್ನು ಬದುಕಿಸಿಕೊಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದಾರೆ.

ವಿದ್ಯುತ್‌ ತಂತಿ ಜೋತು ಬಿದ್ದಿರುವ ಕುರಿತು ಸ್ಥಳೀಯರಯ ಬೆಸ್ಕಾಂ ಸಿಬ್ಬಂದಿಗೆ ದೂರು ನೀಡಿದ ಕೂಡಲೇ ಅದನ್ನು ಸರಿಪಡಿಸಿದ್ದರೆ, ನಮ್ಮ ಮಗನಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪೋಷಕರು ಕಣ್ಣೀರಾಕಿದ್ದಾರೆ.

Advertisement

ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ: ಬೆಸ್ಕಾಂ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ನಂದಿನಿ ಬಡಾವಣೆ ಪೊಲೀಸರು, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯುತ್‌ ತಂತಿ ತುಂಡಾಗಿ ಬಿದ್ದಿರುವ ಬಗ್ಗೆ ಸ್ಥಳೀಯರು ಬೆಸ್ಕಾಂ ಸಿಬ್ಬಂದಿಗೆ ಈ ಹಿಂದೆಯೇ ಮಾಹಿತಿ ನೀಡಿದ್ದಾರೆ. ಆದರೆ, ಸಿಬ್ಬಂದಿ ಅದನ್ನು ಸರಿಪಡಿಸದ ಕಾರಣ ಅವಘಡ ಸಂಬಂಧಿಸಿದೆ. ಹಿಂದೆ ದೂರು ನೀಡಿದಾಗ ಸ್ಥಳಕ್ಕೆ ಬಂದಿದ್ದ ಸಿಬ್ಬಂದಿ, ಕೆಳಗೆ ಬಿದ್ದದ್ದ ತಂತಿಗಳನ್ನು ಮೇಲೆ ಕಟ್ಟಿ ಹೋಗಿದ್ದರು. ಮತ್ತೆ ತಂತಿ ತುಂಡಾಗಿ ಬಿದ್ದು ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇತ್ತೀಚೆಗೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಎಲ್‌ಆರ್‌ ಬಂಡೆ ಸಮೀಪ ಆಟವಾಡುತ್ತಿದ್ದ ಬಾಲಕ, ವಿದ್ಯುತ್‌ ತಂತಿ ತಗುಲಿ ಮೃಪಟ್ಟಿದ್ದ. ಆ ದುರ್ಘ‌ಟನೆ ಮರೆಯುವ ಮುನ್ನವೇ ಮತ್ತೂಂದು ಅವಘಡ ಸಂಭವಿಸಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.

ಬಿಬಿಎಂಪಿಯದ್ದೇ ತಪ್ಪು – ಬೆಸ್ಕಾಂ ಸ್ಪಷ್ಟನೆ: ವಿದ್ಯುತ್‌ ತಂತಿ ತಗುಲಿ ಬಾಲಕ ಗಂಭೀರವಾಗಿ ಗಾಯಗೊಂಡಿರುವ ವಿಷಯ ತಿಳಿದ ಕೂಡಲೇ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಬಿಎಂಪಿಯಿಂದ ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಘಟನೆಗೆ ಕಾರಣ. ಒಂದು ದೀಪದಿಂದ ಮತ್ತೂಂದು ದೀಪಕ್ಕೆ ಸಂಪರ್ಕಿಸುವ ತಂತಿಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡುಬಂದಿದ್ದು, ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ದೂರು ದಾಖಲಾಗಿದೆ ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.

ಆರೋಗ್ಯ ವಿಚಾರಿಸಿದ ಮೇಯರ್‌: ವಿಷಯ ತಿಳಿದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್‌ ಗಂಗಾಂಬಿಕೆ ಅವರು, ಸಾಯಿ ಚರಣ್‌ ಆರೋಗ್ಯ ವಿಚಾರಿಸಿದ್ದಾರೆ. ನಗರದಲ್ಲಿ ಪದೇ ಪದೇ ವಿದ್ಯುತ್‌ ತಂತಿ ತಗುಲಿ ದುರ್ಘ‌ಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ಬೆಸ್ಕಾಂ ಅವಂತಾರಗಳ ಚರ್ಚೆಗೆ ವಿಶೇಷ ಸಭೆ: ನಗರದ ವಿವಿಧ ಭಾಗಗಳಲ್ಲಿ ಹೈಟೆನ್ಷನ್‌ ವೈರ್‌ಗಳು ಹಾಗೂ ವಿದ್ಯುತ್‌ ತಂತಿಗಳು ತುಂಡಾದ ಪರಿಣಾಮ ಸಾವು-ನೋವುಗಳು ಸಂಭವಿಸುತ್ತಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್‌ ಗಂಗಾಂಬಿಕೆ, ಬೆಸ್ಕಾಂನಿಂದ 198 ವಾರ್ಡ್‌ಗಳಲ್ಲಿ ಆಗುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಚರ್ಚಿಸಲು ವಿಶೇಷ ಸಭೆ ಕರೆಯಲು ನಿರ್ಧರಿಸಿದ್ದಾರೆ.

ಅದರಂತೆ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಜರಿರಲಿದ್ದು, ಪಾಲಿಕೆಯ ಸದಸ್ಯರು ಬೆಸ್ಕಾಂನಿಂದ ಆಗುತ್ತಿರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ಅನುಕೂಲವಾಗಲಿದೆ ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next