ಕೊಪ್ಪಳ: ವಿಧಾನ ಪರಿಷತ್ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಜನ ಸ್ವರಾಜ್ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳ ಪೂರ್ಣಗೊಳಿಸುವ ಭರವಸೆ ನೀಡಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಜನ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆ ನನಗೆ ಹತ್ತಿರದ ಜಿಲ್ಲೆ. ಈ ಜಿಲ್ಲೆಯ ಒಡನಾಟ ತುಂಬಾ ಹಳೆಯದು. ನಾನು ನೀರಾವರಿ ಸಚಿವನಾಗಿದ್ದಾಗ ಇಲ್ಲಿನ ನೀರಾವರಿ ಗಮನಕ್ಕೆ ಬಂದವು. 1,200 ಕೋಟಿ ರೂ. ಅಡಿ ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಮಾಡಿದ್ದೇನೆ.
ಕಾಂಗ್ರೆಸ್ 10-15 ವರ್ಷ ಆಡಳಿತ ನಡೆಸಿದೆ. ಆಗ ಇಲ್ಲಿನ ಅಭಿವೃದ್ಧಿ ಯಾರೂ ನೋಡಿರಲಿಲ್ಲ. ಆಗ ಇಲ್ಲಿನ ನೀರಾವರಿಗಳಿಗೆ ಎ, ಬಿ ಸ್ಕೀಂ ಎಂದೆನ್ನುತ್ತಿದ್ದರು. ನಾನು ಅದನ್ನು ಕೊಪ್ಪಳ ಏತ ನೀರಾವರಿ ಯೋಜನೆ ಎಂದು ಮಾಡಿ, 2009 ನವೆಂಬರ್ ನಲ್ಲಿ ಚಾಲನೆ ನೀಡಿದ್ದೆವು. ಕಾಂಗ್ರೆಸ್ ಅ ಧಿಕಾರಕ್ಕೆ ಬಂದಾಗ ಅದಕ್ಕೆ ಶನಿ ಹಿಡಿಯಿತು. ಕೃಷ್ಣೆ ಮೇಲೆ ಆಣೆ ಮಾಡಿದವರು ನೀರಾವರಿ ಮಾಡಲಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಇನ್ನು ಒಂದೂವರೆ ವರ್ಷದಲ್ಲಿ ನೀರಾವರಿ ಮಾಡಲಿದ್ದೇವೆ ಎಂದರು.
ತುಂಗಭದ್ರಾ ಡ್ಯಾಂ ಹೂಳು ತೆಗೆಸಲು ಸಾಧ್ಯವಾಗಿಲ್ಲ. ಬದಲಾಗಿ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ಡಿಪಿಆರ್‌ಗೆ 20 ಕೋಟಿ ಕೊಟ್ಟಿದೆ. ಸಮಾನಾಂತರ ಬ್ಯಾರೇಜ್ ಕಟ್ಟಲು ಆಂಧ್ರದ ಜೊತೆ ಮಾತಾಡುತ್ತೇವೆ. ಎಲ್ಲ ಪ್ರಯತ್ನ ಮಾಡಿ ಸಮಾನಾಂತರ ಜಲಾಶಯ ನಿರ್ಮಿಸಲಿದ್ದೇವೆ. ಸಿಂಗಟಾಲೂರು ಏತ ನೀರಾವರಿ ಜಾರಿಗೂ ನಾವು ಶ್ರಮಿಸಲಿದ್ದೇವೆ. ಮುನಿರಾಬಾದ್ ಮಹೆಬೂಬ್ ನಗರ, ಗದಗ-ವಾಡಿ ಅಭಿವೃದ್ಧಿ ಮಾಡಲಿದ್ದೇವೆ. ಈ ಎಲ್ಲ ಅಭಿವೃದ್ಧಿಗೂ ಜನ ಆಶೀರ್ವಾದ ಕೇಳಲು ಬಂದಿದ್ದೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಸಿಎಂ ರೈತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಅವರ ಮಕ್ಕಳಿಗೆ ಸಾವಿರ ಕೋಟಿ ಕೊಟ್ಟಿದ್ದಾರೆ. ಮಾಸಾಶನದಲ್ಲೂ ಹೆಚ್ಚಳ ಮಾಡಿ ಎಲ್ಲರ ಗಮನ ಸೆಳೆದರು. ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ 14 ಯೋಜನೆ ಜಾರಿ ಮಾಡಿದ್ದಾರೆ. ಕಾಂಗ್ರೆಸ್ ದುರಾಡಳಿತದಿಂದ ನಮ್ಮ ಸರ್ಕಾರ ಅ ಧಿಕಾರಕ್ಕೆ ತರಲು ಜನರು ಮತ ನೀಡಿದರು. ಕೋವಿಡ್ ವೇಳೆ ಉತ್ತಮ ಆಡಳಿತ ನೀಡಿದ್ದೇವೆ. ಲಸಿಕೆ ಉತ್ಪಾದನೆ, ಸಂಶೋಧನೆಗೆ ಮೋದಿ ಶ್ರಮಿಸಿದ್ದಾರೆ. ಕೊಪ್ಪಳ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ 5 ವರ್ಷದಲ್ಲಿ ನೀರಾವರಿಗೆ ನಯಾಪೈಸೆ ಕೊಡಲಿಲ್ಲ. ಮುಂದಿನ ವರ್ಷ ಜಿಲ್ಲೆಗೆ ನೀರಾವರಿಯಾಗಲಿದೆ. ಬಿಜೆಪಿ ಎಲ್ಲ ಕ್ಷೇತ್ರದಲ್ಲಿ ನಾವು ಹೆಚ್ಚು ಗೆದ್ದಿದ್ದೇವೆ. ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚು ಮತ ನೀಡಿ ಗೆಲ್ಲಿಸುವಂತೆ ಮನವಿ ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಉತ್ಪಾದನೆಯಲ್ಲಿ ಯಶಸ್ಸು ಕಂಡಿದ್ದಾರೆ. ಲಸಿಕೆ ಸಂಶೋಧನೆಗೆ ವಿಜ್ಞಾನಿಗಳು ಶ್ರಮಿಸಿದ್ದಾರೆ. ಕೋವಿಡ್ ಸಮಯಲ್ಲಿ ಆಗ ಬಿಎಸ್‌ವೈ ಸರ್ಕಾರ ಪ್ಯಾಕೆಜ್ ಕೊಟ್ಟಿತು. ಬೊಮ್ಮಾಯಿ ಅವರು ಮಕ್ಕಳಿಗೆ ಸ್ಕಾಲರ್‌ಶಿಪ್ ಕೊಟ್ಟಿದ್ದಾರೆ. ಮಾಸಾಶನ ಕೊಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ವಿಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಮನೆಗಳ ನಿರ್ಮಾಣಕ್ಕೆ ಸಿಎಂ ಮುಂದಾಗಲಿದ್ದಾರೆ. ಯಾರೇ ಅಭ್ಯರ್ಥಿಗಳು ಆದರೂ ಗೆಲುವು ನಿಶ್ಚಿತ. ನವಲಿ ಡ್ಯಾಂ, ಕೊಪ್ಪಳಕ್ಕೆ ವಿಮಾನ ನಿಲ್ದಾಣ ನಿರ್ಮಿಸುವಂತೆ ಅವರು ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಮಾತನಾಡಿದರು. ಸಚಿವ ಆನಂದ್ ಸಿಂಗ್, ಸಂಸದ ಪ್ರತಾಪ್ ಸಿಂಹ, ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಎನ್. ಮಹೇಶ, ಮಾಲಿಕಯ್ಯ ಗುತ್ತೆದಾರ್, ಸಿದ್ದರಾಜು, ದೊಡ್ಡನಗೌಡ ಪಾಟೀಲ್, ಸಿ.ವಿ. ಚಂದ್ರಶೇಖರ ಸೇರಿ ಇತರರುಉಪಸ್ಥಿತರಿದ್ದರು.
ಮಳೆಯಿಂದ ಬೆಳೆ ಹಾನಿ ಹಾನಿಯಾಗಿರುವ ಕುರಿತು ಅಧಿಕಾರಿಗಳಿಗೆ ಸರ್ವೇ ಮಾಡುವಂತೆ ತಿಳಿಸಿದ್ದೇನೆ. ಎಲ್ಲ ಮಾಹಿತಿ ಬಂದ ತಕ್ಷಣ ಹಣಕಾಸು ಇಲಾಖೆಯ ಜೊತೆ ಚರ್ಚಿಸಿ, ಸಮೀಕ್ಷಾ ವರದಿ ಬಂದ ತಕ್ಷಣ ರೈತರಿಗೆ ಬೆಳೆ ಹಾನಿ ಪರಿಹಾರ ಕೊಡುವ ಕೆಲಸ ಮಾಡಲಾಗುವುದು. ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇನ್ನೆರೆಡು ದಿನದಲ್ಲಿ ಅಭ್ಯರ್ಥಿಗಳು ಘೋಷಣೆಯಾಗಲಿದ್ದಾರೆ.
ಬಸವರಾಜ ಬೊಮ್ಮಾಯಿ,
ಮುಖ್ಯಮಂತ್ರಿ