Advertisement

ವ್ಯಕ್ತಿ-ಸಿದ್ಧಾಂತದ ಚಿಮ್ಮು ಹಲಗೆಯಾಗದ ಚುನಾವಣೆ

11:41 PM Oct 25, 2019 | mahesh |

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆಗೆ ಚುನಾವಣೆ ನಡೆಯಿತಾದರೂ ಅದರ ಫ‌ಲಿತಾಂಶ ಮಾತ್ರ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಮಹತ್ವದ್ದು. 

Advertisement

ಇದು ಕೇವಲ ಸ್ಥಳೀಯ ಹಣಾಹಣಿ ಅಷ್ಟೇ ಆಗಿಲ್ಲ. ಇದೊಂದು ರೀತಿಯಲ್ಲಿ ರಾಷ್ಟ್ರೀಯ ಜನಾದೇಶವೆಂದು ಬಿಜೆಪಿ ನಾಯಕರೇ ಭಾವಿಸಿದ್ದರು. ಏಕೆಂದರೆ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ದಿಗ್ವಿಜಯದ ನಂತರ ನಡೆದ ಮೊದಲ ಮಿನಿ ಮಹಾಸಮರ ಇದು. ಹೀಗಾಗಿ ರಾಷ್ಟ್ರೀಯವಾದ, ಹಿಂದುತ್ವ ಕುರಿತಂತೆ ಬಿಜೆಪಿಯ ಕಲ್ಪನೆಯ ಮುಂದುವರಿದ ರಣತಂತ್ರಕ್ಕೆ, ಈ ಚುನಾವಣೆಯ ಫ‌ಲಿತಾಂಶ ಮೊಹರು ಒತ್ತಿದ್ದೇ ಆದರೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಮತ್ತೂಮ್ಮೆ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮುವುದು ನಿಶ್ಚಿತ ಎಂದೇ ಬಿಂಬಿಸಲಾಗಿತ್ತು. ಇಂಥ ಏಕಪಕ್ಷೀಯ ನಂಬಿಕೆಗೆ ಕಾರಣ ದುರ್ಬಲ ಪ್ರತಿಪಕ್ಷ.  ಹೀಗಾಗಿಯೇ ಈ ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಲೋಕಸಭೆ ಚುನಾವಣೆಯ ಮಾದರಿ ಯಲ್ಲಿ ನಡೆದವು. ದಾಖಲೆ ಎನ್ನಿಸುವಷ್ಟು ಬಾರಿ ಮೋದಿ ಅಖಾಡಕ್ಕೆ ಧುಮುಕಿದರು. ಅಮಿತ್‌ ಶಾ ಮಹಾರಾಷ್ಟ್ರ, ಹರ್ಯಾಣದಲ್ಲಿ ಬೀಡುಬಿಟ್ಟು, ವಾರ್‌ ರೂಂನಿಂದ ಕ್ಷಣಕ್ಷಣದ ವಿದ್ಯಮಾನಗಳನ್ನು ನಿಯಂತ್ರಿಸಿದರು.

ಅಷ್ಟೇ ಯಾಕೆ? ಸ್ಥಳೀಯ ಸಮಸ್ಯೆಗಳಿಗೆ ತಿಲಾಂಜಲಿ ನೀಡಿ ಕಾಶ್ಮೀರ 370 ವಿಧಿ ರದ್ದತಿಯನ್ನೂ ವಿಷಯವನ್ನಾಗಿಸಿ ಮತ ಕೋರಲಾಯಿತು. ಅದನ್ನು ರಾಷ್ಟ್ರೀಯ ಹಿರಿಮೆ ಎಂದು ಬಣ್ಣಿಸಲಾಯಿತು. ಇದು ಒಂದು ಭಾಗವಾದರೆ ಆಂತರಿಕ ಕಚ್ಚಾಟ, ನಾಯಕತ್ವದ ಕೊರತೆ ಯಿಂದ ತತ್ತರಿಸಿ ರುವ ಕಾಂಗ್ರೆಸ್‌ ಕೇವಲ ಅಸ್ತಿತ್ವಕ್ಕಾಗಿ ಕಾದಾಟ ನಡೆಸಿದೆ ಎನ್ನಲಾಯಿತು. ಆದರೆ ಈಗ ಫ‌ಲಿತಾಂಶ ಹೊರಬಂದಿದ್ದು, ಸೂತ್ರ ಬದಲಾಗಿದೆ. ಅಂದುಕೊಂಡಿದ್ದು ಸಂಪೂರ್ಣವಾಗಿ ಆಗಿಲ್ಲ. ಎರಡೂ ಕಡೆಯ ಫ‌ಲಿ ತಾಂಶವೂ ವ್ಯಕ್ತಿ ವೈಭವದ, ಸಿದ್ಧಾಂತದ ಚಿಮ್ಮುಹಲಗೆ ಆಗಲಿಲ್ಲ. ರಾಷ್ಟ್ರೀಯವಾದವನ್ನೇ ಮೂಲ ವಿಷಯ ಮಾಡಿ ಭಾರತದ ಬೇರುಮಟ್ಟದ ರಾಜಕಾರಣವನ್ನು ನಿಯಂತ್ರಿ ಸಬಹುದು, ಇಲ್ಲವೇ, ಬದಲಿಸಬಹುದು ಎಂಬ ದೊಡ್ಡ ತಂತ್ರಕ್ಕೆ ನಿರೀಕ್ಷಿತ ಜಯ ಸಿಗಲಿಲ್ಲ. ಬದಲಿಗೆ ಇದು ವಿಭಿನ್ನ ರೀತಿಯ ವಿಶ್ಲೇಷಣೆಗೆ ವೇದಿಕೆ ಸಜ್ಜುಗೊಳಿಸಿದೆ.

ನೇರ ವಿಚಾರಕ್ಕೆ ಬರುವುದಾದರೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಆಗಲಿ, ಹರ್ಯಾಣ ಮುಖ್ಯಮಂತ್ರಿ ಮನೋಹರ ಖಟ್ಟರ್‌ ಅವರಾಗಲಿ ಸಮಸ್ಯೆಗಳಿಂದ ಹೊರತಾದ ನಾಯಕರು ಆಗಿರಲಿಲ್ಲ. ಮಹಾರಾಷ್ಟ್ರದಲ್ಲಿ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣ, ಹರ್ಯಾಣ ದಲ್ಲಿ ಹಿಂದೆಂದೂ ಕಂಡರಿಯದ ನಿರುದ್ಯೋಗ ಸಮಸ್ಯೆ ಈ ಚುನಾವಣೆಯ ಮುಖ್ಯ ಸವಾಲುಗಳಾಗಿ ದ್ದ ವು. ಫ‌ಡ್ನವೀಸ್‌ಗೆ ಮರಾಠ ಮೀಸಲು ಹೋರಾಟದ ದಿಗಿಲು, ಅತ್ತ ಖಟ್ಟರ್‌ಗೆ ಜಾಟ್‌ ಮೀಸಲು ಬೇಡಿಕೆಯ ಕಗ್ಗಂಟು ಸೃಷ್ಟಿಸಿದ ರಾಜಕೀಯ ಒತ್ತಡ, ಆತಂಕ ಅಷ್ಟಿಷ್ಟಲ್ಲ. ಇಂಥ ಮುಖ್ಯ ಜ್ವಲಂತ ಸಮಸ್ಯೆಗಳು ಇರು ವಾಗ, ಜನರ ಗಮನ ಬೇರೆಡೆಸೆಳೆದು ರಾಷ್ಟ್ರೀಯ ಭದ್ರತೆ, ರಾಷ್ಟ್ರೀಯವಾದ, ಅಯೋಧ್ಯೆ, ಎನ್‌ಆರ್‌ಸಿ ವಿಷಯಗಳ ಆಧಾರದ ಮೇಲೆ ಚುನಾವಣೆ ನಡೆಸುವ ತಂತ್ರ ಇದೆಯಲ್ಲ ಅದನ್ನು ಮಾಮೂಲಿ ತಂತ್ರ ಎನ್ನಲಾಗುವುದಿಲ್ಲ. ಅದರಲ್ಲೂ ದೇಶದ ಆರ್ಥಿಕ ರಾಜಧಾನಿ ಮುಂಬೈ ನೆಲೆಯಲ್ಲಿ ನಡೆದ ಚುನಾವಣೆಯಲ್ಲಿ ಆರ್ಥಿಕ ಹಿಂಜರಿತ, ನೋಟು ಅಮಾನ್ಯಿàಕರಣ ಹಾಗೂ ಜಿಎಸ್‌ಟಿ ಹೊಡೆತದ ವಿಚಾರ ಬಿಟ್ಟು ಚುನಾವಣೆ ನಡೆಸಿ, ಅದ ನ್ನು ದಕ್ಕಿಸಿಕೊಳ್ಳುತ್ತೇವೆಂಬ ಅತೀವ ವಿಶ್ವಾಸಕ್ಕೆ ಪೂರಕ ಪ್ರತಿಕ್ರಿಯೆ ಸಿಗದೇ ಹೋಯಿ ತೇ? ಬಿಜೆಪಿ ಉತ್ತರ ಹುಡುಕಬೇಕಾದ ಪ್ರಶ್ನೆಯಿದು.

ಎರಡೂ ರಾಜ್ಯಗಳಲ್ಲಿ ಬಿಜೆಪಿ ಮಿತ್ರ ಪಕ್ಷಗಳು ಹೆಚ್ಚು ಸಂಖ್ಯೆಯಲ್ಲಿ ಗೆದ್ದು ಗದ್ದುಗೆ ಹಿಡಿಯುವ ನಿಟ್ಟಿನಲ್ಲೇ ವಿದ್ಯಮಾನಗಳು ನಡೆದಿವೆ. ಪ್ರಜಾಸತ್ತೆಯಲ್ಲಿ ಯಾರಾದರೇನು? ಸೋಲು ಸೋಲೇ. ಗೆಲುವು ಗೆಲುವೇ. ಅದಕ್ಕೆ ಇನ್ಯಾವುದೇ ವಿಶ್ಲೇಷಣೆಯ ಅಗತ್ಯವಿಲ್ಲ.ಆದರೆ ಗೆಲುವಿನ ಅಂತರ, ವೈಖರಿ ಬಹಳಷ್ಟು ರಾಜಕೀಯ ವ್ಯಾಖ್ಯಾನಗಳಿಗೆ ಕಾರಣ ಆಗುತ್ತದೆ.

Advertisement

ಮಹಾರಾಷ್ಟ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಜೊತೆ ಮೈತ್ರಿ ಇಲ್ಲದೆ ಬಿಜೆಪಿ ಬರೋಬ್ಬರಿ 122 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶಿವಸೇನೆ 63 ಸ್ಥಾನ ಗೆದ್ದಿತ್ತು. ಇವೆರಡೂ ಕೂಡಿದರೆ ಒಟ್ಟು 185 ಸ್ಥಾನ. ಇದೇ ಹರ್ಯಾಣದಲ್ಲಿ 47 ಸೀಟು ಗೆದ್ದು ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಆದರೆ ಈಗ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತ ಆದರೂ ಓಟಿನ ಪ್ರಮಾಣ ಕುಸಿದಿದೆ. ಸಂಖ್ಯೆಯೂ ಕಡಿಮೆಯಾಗಿದೆ. ಹರ್ಯಾಣದಲ್ಲಂತೂ ಬಿಜೆಪಿ ಅಧಿಕಾರಕ್ಕೆ ಬರಲು ಒದ್ದಾಡುವ ಪರಿಸ್ಥಿತಿ ಬಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇಕಡಾ 50ರಷ್ಟು ಬಿದ್ದಿದ್ದ ಮತಗಳು ಈಗ ಶೇ.35ಕ್ಕೆ ಕುಸಿದಿದೆ. ಕಾಂಗ್ರೆಸ್‌ ಮತ ಪ್ರಮಾಣ ಶೇ.10 ಹೆಚ್ಚಾಗಿದೆ. ಅಂದರೆ ಏನಿದರ ಅರ್ಥ? ಏನಿದರ ವ್ಯಾಖ್ಯಾನ?ಜನರ ಗಮನ ಬೇರೆಡೆ ಸೆಳೆಯುವ ರಾಷ್ಟ್ರೀಯವಾದದಂತಹ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಎಲ್ಲ ಕಾಲದಲ್ಲಿ ಮರಳು ಮಾಡಲು ಸಾಧ್ಯವಿಲ್ಲ ಎಂದು ಇದರ ಅರ್ಥವೇ? ಅಥವಾ ಇದನ್ನು ಮೀರಿ ಜ್ವಲಂತ ಸಮಸ್ಯೆಗಳಿದ್ದು ಅತ್ತ ಕಡೆ ನಿಗಾವಹಿಸಿ ಬಗೆಹರಿಸುವಂತೆ ಮತದಾರ ಈ ಪಕ್ಷಕ್ಕೆ ಕೊಟ್ಟ ಸೂಚನೆಯೇ? ಬಿಜೆಪಿಗೆ ಪರ್ಯಾಯ ರಾಜಕೀಯ ಪಕ್ಷ ಇದ್ದರೆ ಭವಿಷ್ಯದಲ್ಲಿ ಅಂತಹ ಪಕ್ಷಕ್ಕೆ ಆದ್ಯತೆ ಇದೆ ಎಂಬ ಎಚ್ಚರಿಕೆಯ ಸಂದೇಶವೇ?

ಇದು ವಿಶ್ಲೇಷಣೆಯ ಒಂದು ಮುಖ ಮಾತ್ರ. ಇದಕ್ಕೆ ಸದ್ಯದ ವರ್ತಮಾನಕ್ಕೆ ಕಿಚ್ಚು ಹೊತ್ತಿಸುವ ಇನ್ನೂ ಒಂದು ಮುಖವಿದೆ. ಬಿಜೆಪಿ ಈ ಫ‌ಲಿತಾಂಶವನ್ನು ಹೇಗೆ ಗ್ರಹಿಸಲಿದೆ ಎನ್ನುವುದು ಮುಖ್ಯ. ಏಕೆಂದರೆ ಆಗಲೇ ಹೇಳಿದಂತೆ ಗೆಲುವು ಗೆಲುವೇ. ಆದ್ದರಿಂದ ಇತ್ತೀಚೆಗೆ ಆರ್ಥಿಕ ಹಿಂಜರಿತ ಸರಿಪಡಿಸಲು ಕೈಗೊಂಡಿರುವ ಸುಧಾರಣೆ ಕ್ರಮಗಳನ್ನು ಸಮರ್ಥಿಸಿ ಮತದಾರ ನೀಡಿರುವ ಜನಾದೇಶ ಎಂದು ಭಾವಿಸಿದರೆ ವಿದ್ಯಮಾನ ಖಂಡಿತ ಬದಲಾಗಲಿದೆ. ತಲ್ಲಾಖ್‌, ಕಾಶ್ಮೀರ 370 ವಿಧಿ ರದ್ದತಿ ಆಯ್ತು. ಈಗಿ ನದ್ದು ಸಮಾನ ನಾಗರಿಕ ನೀತಿ ಸಂಹಿತೆ ಜಾರಿ ನಿಟ್ಟಿನಲ್ಲಿ ಜನ ನೀಡಿರುವ ಸಾಂಕೇತಿಕ ತೀರ್ಪು ಎಂದು ವಿಧಾನಸಭೆ ಚುನಾವಣೆ ಫ‌ಲಿತಾಂಶವನ್ನೇ ರಾಷ್ಟ್ರೀಕರಣ ಮಾಡಿ ಮುಂದಿನ ಗುರಿಯತ್ತ ಬಿಜೆಪಿ ದಾಪುಗಾಲು ಹಾಕಲೂಬಹುದು.

ಎನ್‌ಆರ್‌ಸಿಯನ್ನು ಇಡೀ ರಾಷ್ಟ್ರಕ್ಕೆ ವಿಸ್ತರಿಸಲು ಸಿಕ್ಕ ಸಾಂಕೇತಿಕ ಗ್ರೀನ್‌ ಸಿಗ್ನಲ್‌ ಎಂದೂ ವಿಶ್ಲೇಷಿಸಬಹುದು. ರಾಜಕಾರಣದಲ್ಲಿ ಯಶಸ್ಸಿನ ವಿಶ್ಲೇಷಣಾ ಕ್ರಮ ಬಹಳಷ್ಟು ಬಾರಿ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಆಗಿರುತ್ತದೆ ಎನ್ನುವುದು ಗೊತ್ತಿರುವ ವಿಚಾರ. ಹೀಗಾದರೆ ಮುಂದೇನು ಎನ್ನುವುದೇ ಇಲ್ಲಿನ ಕುತೂಹಲಕಾರಿ ಸಂಗತಿ. ಪ್ರಜಾಸತ್ತೆಯಲ್ಲಿ ಎಲ್ಲ ಆರೋಪಗಳನ್ನು ಆಡಳಿತ ಪಕ್ಷದ ಮೇಲೆ ಮಾಡಿ, ಪ್ರತಿಪಕ್ಷಗಳನ್ನು ಹೊರಗಿಡುವುದು ಎಷ್ಟು ಸರಿ ಎನ್ನುವುದು ನಮ್ಮ ಮುಂದಿರುವ ಮತ್ತೂಂದು ಪ್ರಶ್ನೆ. ಶಕ್ತಿ ಉಳಿಸಿಕೊಳ್ಳಲು ಸಾಹಸ: ಮುಖ್ಯ ಪ್ರತಿಪಕ್ಷ ಕಾಂಗ್ರೆಸ್‌ ವಿಚಾರಕ್ಕೆ ಬಂದಾಗ ಬಿಜೆಪಿಗೆ ಪರ್ಯಾಯ ರಾಜಕೀಯ ಮಾಡುವುದರಲ್ಲೂ ಕಾಂಗ್ರೆ ಸ್‌ ಗೆ ಇರುವ ಬದ್ಧತೆ ಏನು ಎನ್ನುವುದು.

ಮಹಾರಾಷ್ಟ್ರ, ಹರ್ಯಾಣ ಫ‌ಲಿತಾಂಶ ಗಮನಿಸಿದರೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರ ನಾಯಕತ್ವ, ಸಂಕಲ್ಪದ ಕೊರತೆಯ ನಡುವೆಯೂ ತನ್ನ ಶಕ್ತಿ ಉಳಿಸಿಕೊಳ್ಳಲು ಹರ ಸಾಹಸ ನಡೆಸಿದೆ. ಮಹಾರಾಷ್ಟ್ರದಲ್ಲಿ ಸಂಪೂರ್ಣ ಧೂಳಿಪಟ ಆಗುವ ಲೆಕ್ಕಾಚಾರ ಹುಸಿಯಾಗಿದೆ. ಹರ್ಯಾಣದಲ್ಲಿ ಬಿಜೆಪಿಯನ್ನು ಭರ್ಜರಿಯಾಗಿ ಹಿಮ್ಮೆಟ್ಟಿಸಲು ಯತ್ನಿಸಿ ಅದರ ಜಂಘಾಬಲವೇ ಉಡುಗಿ ಹೋಗುವಂತೆ ಮಾಡಿದೆ.

ಚುನಾವಣೆ ವೇಳೆ ಆ ಪಕ್ಷದ ನಾಯಕ ರಾಹುಲ್‌ ಗಾಂಧಿ ಧ್ಯಾನ, ಮನಃಶಾಂತಿಗಾಗಿ ಕಾಂಬೋಡಿಯಾಗೆ ಹೋಗಿ ಬಂದರೆಂದರೆ ಇನ್ನು ಕಾಂಗ್ರೆಸ್‌ ಪಕ್ಷದ ಸ್ಥಿತಿ ಹೇಗಿರಬೇಡ? ರಾಹುಲ್‌ ಗಾಂಧಿ ಅವರಂತೂ ಈ ಮಹಾಸಮರದಲ್ಲಿ ಬೆರಳೆಣಿಕೆಯಷ್ಟು ಬಾರಿ ಪ್ರಚಾರಕ್ಕೆ ಬಂದು ಹೋದದ್ದು ಈ ಪಕ್ಷದ ಬಗ್ಗೆ ಆ ನಾಯಕರಿಗೆ ಇರುವ ತಾತ್ಸರವೆಂದು ಟೀಕೆಗೆ ಗುರಿಯಾಗಿತ್ತು.

ಆದರೆ ಫ‌ಲಿತಾಂಶ ನೋಡಿದರೆ ಕಾಂಗ್ರೆಸ್‌ ಪಕ್ಷ ಆಂತರಿಕ ಕಚ್ಚಾಟ ಪಕ್ಕಕ್ಕಿಟ್ಟು ಸರಿಯಾದ ರಾಜಕೀಯ ತಂತ್ರ, ಪ್ರಚಾರ ನಡೆಸಿದ್ದರೆ, ಮಹಾರಾಷ್ಟ್ರದಲ್ಲಿ ಮತ್ತಷ್ಟು ಪೈಪೋಟಿಯನ್ನು ನೀಡಬಹುದಿತ್ತು, ಹರ್ಯಾಣದಲ್ಲಿ ಹೆಚ್ಚು ಕಮ್ಮಿ ಗೆಲುವನ್ನೇ ಸಾಧಿಸಿಬಿಡಬಹುದಿತ್ತು ಎನಿ ಸು ತ್ತ ದೆ. ಹರ್ಯಾಣದಲ್ಲಿ ತೀರ ತಡವಾಗಿ ಅಲ್ಲಿಯ ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷೆ ತಂದು ಕೂರಿಸಿ, ಹೂಡಾಗೆ ಟಿಕೆಟ್‌ ಹಂಚಿಕೆ ಅಧಿಕಾರ ನೀಡಲಾ ಯಿತು. ಇದ ನ್ನೇ, ಇನ್ನೂ ಬೇಗ ಮಾಡಿ ಸವಾಲೊಡ್ಡುವ ರೀತಿಯಲ್ಲಿ ತಂತ್ರಗಾರಿಕೆ ರೂಪಿಸಿದ್ದರೆ ಅತಂತ್ರ ವಿಧಾನಸಭೆ ಬರದೆ, ಕಾಂಗ್ರೆಸ್‌ ಸರಳ ಬಹುಮತ ಪಡೆಯುವತ್ತ ಹೆಜ್ಜೆ ಹಾಕುತ್ತಿತೇನೋ?

ಕಾಂಗ್ರೆಸ್‌ ಪಕ್ಷಕ್ಕೆ ಮೇಜರ್‌ ಸರ್ಜರಿಯ ಅಗತ್ಯ ಅಷ್ಟೇ ಅಲ್ಲ, ಹೊಸ ತಲೆಮಾರಿಗೆ ಅಧಿಕಾರ ಹಸ್ತಾಂತರ ಮಾಡುವ ಬಗ್ಗೆಯೂ ಈ ಚುನಾವಣೆ ಮುಖ್ಯ ಸಂದೇಶ ಕಳುಹಿಸಿದೆ.  ಭಾರತದ ಸಮಕಾಲೀನ ಸಮಸ್ಯೆ ಮತ್ತು ವಿಚಾರಗಳ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಇನ್ನಷ್ಟು ಸ್ಪಷ್ಟತೆ ಬೇಕು ಎನ್ನುವುದಕ್ಕೂ ಈ ಫ‌ಲಿತಾಂಶ ಸಾಕ್ಷಿ. ಸೋನಿಯಾ ಗಾಂಧಿ ಸುತ್ತ ಅವಿತು, ಅಧಿಕಾರಕ್ಕೆ ಅಂಟಿ ಕುಳಿತ ಹಿರಿಯ ನಾಯಕರಿಗೂ, ಬದಲಾವಣೆ ಬಯಸಿರುವ ಯುವ ನಾಯಕರಿಗೂ ಇರುವ ಕಚ್ಚಾಟ ಇದೀಗ ಬಟಾಬಯಲಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್‌ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಅಸ್ತಿತ್ವಕ್ಕೆ ಸಂಚಕಾರ ನಿಶ್ಚಿತ. ಕಾಂಗ್ರೆಸ್‌ನಲ್ಲಿ ಹಿರಿಯ ಮತ್ತು ಕಿರಿಯ ನಾಯಕರ ನಡುವಿನ ತಿಕ್ಕಾಟ ಇದೀಗ ತಾರ್ಕಿಕ ಘಟ್ಟಕ್ಕೆ ಬಂದು ತಲುಪಿದೆ. ಆದ್ದರಿಂದ ಹೊಸ ರೂಪು, ಹೊಸ ಸಂಘಟನಾತ್ಮಕ ತಂತ್ರ ಮತ್ತು ಬಿಜೆಪಿ ಎತ್ತುವ ಭಾವನಾತ್ಮಕ ವಿಚಾರಗಳನ್ನು ಎದುರಿಸುವ(ಜನರ ಮನಸ್ಸಿಗೆ ಘಾಸಿಗೊಳಿಸದಂತೆ) ಜಾಣ್ಮೆಯ ಮೇಲೆ ಅದರ ಭವಿಷ್ಯವಿದೆ.

ಕೊನೆಯದಾಗಿ ಒಂದು ಮಾತು. ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುತ್ತಿರುವ ಫ‌ಡ್ನವೀಸ್‌ ರಾಷ್ಟ್ರ ರಾಜಕಾರಣದಲ್ಲಿ ಹೊಸ ನಾಯಕನಾಗಿ ಉದ್ಭವ ಆಗಿ¨ªಾರೆ. ಮೋದಿ, ಅಮಿತ್‌ ಶಾ ಅವರು ಅಖಾಡಕ್ಕೆ ಧುಮುಕುವ ಎರಡು ತಿಂಗಳು ಮೊದಲೇ ಅವರು ನಡೆಸಿದ ಮಹಾ ಜನಾದೇಶ ಯಾತ್ರೆ ಅವರ ಶಕ್ತಿ ಪ್ರದರ್ಶನದ ಯಾತ್ರೆಯಾಯಿ ತು. ಅವರು ರಾಷ್ಟ್ರ ಮಟ್ಟದ ನಾಯಕರಾಗಿ ಹೊರಹೊಮ್ಮುತಿರುವುದು ಬರುವ ದಿನಗಳ ಬಿಜೆಪಿ ರಾಜಕಾರಣದ ಮೇಲೆ ಪರಿಣಾಮ ಬೀರಲಿರುವ ಮಹತ್ವದ ಬೆಳೆವಣಿಗೆ ಆಗಿದೆ.

– ಬೆಲಗೂರು ಸಮೀಉಲ್ಲಾ ಹಿರಿಯ ಪತ್ರಕರ್ತರು

Advertisement

Udayavani is now on Telegram. Click here to join our channel and stay updated with the latest news.

Next