Advertisement

ಚುನಾವಣೆಗೂ ಮಠದ ಭೇಟಿಗೂ ಸಂಬಂಧವಿಲ್ಲ

10:31 AM Mar 07, 2019 | Team Udayavani |

ಶೃಂಗೇರಿ: ಲೋಕಸಭಾ ಚುನಾವಣೆಗೂ ಶೃಂಗೇರಿ ಪೀಠಕ್ಕೆ ಆಗಮಿಸುತ್ತಿರುವುದಕ್ಕೂ ಸಂಬಂಧವಿಲ್ಲ. ಅಧಿಕಾರ ಇದ್ದರೂ ಇಲ್ಲದಿದ್ದರೂ ಇಲ್ಲಿಗೆ ಆಗಮಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿದರು.

Advertisement

ಶ್ರೀ ಶಾರದಾ ಪೀಠಕ್ಕೆ ಆಗಮಿಸುವ ಮುನ್ನ ಬುಧವಾರ ಕೊರಡಕಲ್ಲಿನ ಹೆಲಿಪ್ಯಾಡ್‌ನ‌ಲ್ಲಿ ಮಾತನಾಡಿದ ಅವರು, ನಿಖೀಲ್‌ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಹಿನ್ನೆಲೆಯಲ್ಲಿ ಶಾರದಾಪೀಠಕ್ಕೆ ಬಂದಿಲ್ಲ. ಮೊದಲಿನಿಂದಲೂ ನಮ್ಮ ಕುಟುಂಬ ಶೃಂಗೇರಿಗೆ ಯಾವಾಗಲೂ ಆಗಮಿಸುತ್ತಿದೆ ಎಂದರು.

ಶ್ರೀಮಠದ ಭಕ್ತರಾಗಿರುವ ನಮ್ಮ ಕುಟುಂಬ ಮಠಕ್ಕೆ ಬರುತ್ತಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ನಾನು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಇಲ್ಲಿಗೆ ಬರುತ್ತಿದ್ದೆ. ಜಗದ್ಗುರುಗಳ ಹಾಗೂ ದೇವಿಯ ಆಶೀರ್ವಾದ ಪಡೆಯಲು ಶ್ರೀಮಠಕ್ಕೆ ಆಗಮಿಸಿರುವುದಾಗಿ ಹೇಳಿದರು. 

ರೈತರ ಸಾಲ ಮನ್ನಾ ವಿಷಯದಲ್ಲಿ ಪ್ರಧಾನಿ ಮೋದಿಯವರು ಸಾಲ ಮನ್ನಾ ಮಾಡುವುದು ಪಾಪದ ಕೃತ್ಯ ಎಂದು ಹೇಳಿದ್ದರು ಆದರೆ ಈಗ ಚುನಾವಣೆ ಎದುರಾಗೋ ಸಂದರ್ಭದಲ್ಲಿ ರೈತರ ಖಾತೆಗೆ 6 ಸಾವಿರ ರೂ. ಜಮಾ ಮಾಡುವುದಾಗಿ ಹೇಳುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ ಎಂದರು.
 
 ರಾಜ್ಯ ಸರಕಾರ ರೈತರ ಹಾಗೂ ಜನ ಸಾಮಾನ್ಯರ ಪರವಾಗಿ ಆಡಳಿತ ನೀಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಕಳೆದ ಐದು ವರ್ಷದಲ್ಲಿ ಏನು ಕೊಟ್ಟಿದ್ದಾರೆ ಎಂಬುದು ಜನತೆ ತೀರ್ಮಾನ ಮಾಡಲಿ. ರೈತರ ಖಾತೆಗೆ ಕೇವಲ ಅಲ್ಪ ಮೊತ್ತದ ಹಣ ನೀಡಿ ಅದನ್ನೇ ದೊಡ್ಡ ಸಾಧನೆ
ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ರಾಜ್ಯ ಸರಕಾರ ರೈತರ 42 ಸಾವಿರ ಕೋಟಿ ರೂ. ಮನ್ನಾ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ. 

ರಿಮೋಟ್‌ ಕಂಟ್ರೋಲ್‌ ಮುಖ್ಯಮಂತ್ರಿ ಎಂದು ಮೋದಿ ವ್ಯಾಖ್ಯಾನಿಸಿರುವುದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ನಾನು ಅನೇಕ ಮುಖಂಡರ ಸಲಹೆ, ಸಹಕಾರ ಪಡೆಯುತ್ತಿದ್ದೇನೆ. ಅದನ್ನು ರಿಮೋಟ್‌ ಕಂಟ್ರೋಲ್‌ ಎಂದು ಹೇಳುವುದು ಸರಿಯಲ್ಲ. ದೇವೇಗೌಡ ಕುಟುಂಬ ಗೌಡ ಜನಾಂಗವನ್ನು ಜಿಪಿಎ ಎಂದು ಭಾವಿಸಿದೆ ಎಂಬ ಶಾಸಕ ಪ್ರೀತಂಗೌಡ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಈ ರೀತಿ ಊಹೆ ಮಾಡಿಕೊಂಡರೆ ನಾನೇನು ಮಾಡಲಿ. ಅವರ ಮಾತು ಹುಡುಗಾಟಿಕೆಯದ್ದು. ಜನರ ಪ್ರೀತಿ ವಿಶ್ವಾಸದಿಂದ ನಮ್ಮ ಕುಟುಂಬ ರಾಜಕೀಯದಲ್ಲಿದ್ದು,ಜನರ ಸೇವೆ ಮಾಡುವ ಅವಕಾಶ ದೊರಕಿದೆ ಎಂದರು.

Advertisement

ಮುಖ್ಯಮಂತ್ರಿಗಳೊಂದಿಗೆ ಮಾಜಿ ಪ್ರದಾನಿ ಎಚ್‌ .ಡಿ.ದೇವೇಗೌಡ, ಚನ್ನಮ್ಮ, ಅನಿತಾಕುಮಾರಸ್ವಾಮಿ, ನಿಖೀಲ್‌ಗೌಡ ಆಗಮಿಸಿದ್ದರು. ಮುಖ್ಯಮಂತ್ರಿಗಳನ್ನು  ಹೆಲಿಪ್ಯಾಡಿನಲ್ಲಿ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ, ಎಚ್‌.ಜಿ.ವೆಂಕಟೇಶ್‌, ಬಿ.ಬಿ.ನಿಂಗಯ್ಯ, ಜಿಲ್ಲಾಧಿಕಾರಿ ಡಾ|ಗೌತಮ್‌ ಮತ್ತಿತರರು ಇದ್ದರು.

ಶ್ರೀ ಮಠಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಶ್ರೀಮಠದ ಆಡಳಿತಾಧಿಕಾರಿ ಡಾ|ಗೌರಿಶಂಕರ್‌ ಪೂರ್ಣಕುಂಭ ಸ್ವಾಗತ ನೀಡಿದರು. ಗುರುವಾರ ಮುಖ್ಯಮಂತ್ರಿಗಳ ಕುಟುಂಬ ಶ್ರೀಮಠದಲ್ಲಿ ವೀಶೇಷ ಪೂಜೆ ನೆರವೇರಿಸಲಿದ್ದು, ನಂತರ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ
ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆಯಲಿದ್ದಾರೆ.

ರೈತರ ಸಾಲ ಮನ್ನಾ ವಿಷಯದಲ್ಲಿ ಪ್ರಧಾನಿ ಮೋದಿಯವರು ಸಾಲ ಮನ್ನಾ ಮಾಡುವುದು ಪಾಪದ ಕೃತ್ಯ ಎಂದು ಹೇಳಿದ್ದರು
ಆದರೆ ಈಗ ಚುನಾವಣೆ ಎದುರಾಗೋ ಸಂದರ್ಭದಲ್ಲಿ ರೈತರ ಖಾತೆಗೆ 6 ಸಾವಿರ ರೂ. ಜಮಾ ಮಾಡುವುದಾಗಿ ಹೇಳುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ
 ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತಿ

Advertisement

Udayavani is now on Telegram. Click here to join our channel and stay updated with the latest news.

Next