ರಾಯಚೂರು: ವಿಧಾನ ಪರಿಷತ್ನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ಶುಕ್ರವಾರ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ಜಿಲ್ಲೆಯಲ್ಲಿ ಶೇ. ಶೇ.67.19 ಮತದಾನವಾಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಉತ್ತಮ ಮತದಾನವಾಗಿದ್ದು, ಗಮನಾರ್ಹ. ನಗರದ ಐದು ಸೇರಿ ಜಿಲ್ಲೆಯ 27 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಜಿಲ್ಲೆಯಲ್ಲಿ ಒಟ್ಟು 12,007 ಮತದಾರರಿದ್ದು, 8,903 ಪುರುಷರು, 3,103 ಮಹಿಳೆಯರು ಹಾಗೂ ಇತರೆ ಒಬ್ಬರು ಮತದಾರರಿದ್ದಾರೆ. ಆರಂಭದಿಂದಲೇ ಪದವೀಧರರು ಮತಗಟ್ಟೆಗಳತ್ತ ಧಾವಿಸಿ ಹಕ್ಕು ಚಲಾಯಿಸಿದರು. ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಜಿಲ್ಲೆಯಿಂದ ಪ್ರತಿನಿಧಿಸಿದ ಏಕೈಕ ಪಕ್ಷೇತರ ಅಭ್ಯರ್ಥಿ ಡಾ| ರಝಾಕ್ ಉಸ್ತಾದ್ ಪತ್ನಿ ಸಮೇತರಾಗಿ ಆಗಮಿಸಿ ಕರ್ನಾಟಕ ಸಂಘದಲ್ಲಿನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
ಸರ್ಕಾರಿ ಮತ್ತು ಖಾಸಗಿ ಪದವೀಧರರ ನೌಕರರಿಗೆ ಹಕ್ಕು ಚಲಾಯಿಸಲು ಅಧಿಕೃತ ರಜೆ ಘೋಷಣೆಯಾಗಿದ್ದರಿಂದ
ಬಹುತೇಕರು ಮತ ಚಲಾಯಿಸಿದರು. ಬೆಳಗ್ಗೆ 9 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ. 5.09 ಮತದಾನವಾಗಿತ್ತು. 11ಗಂಟೆ ವೇಳೆಗೆ ಶೇ.17.38 ಮತದಾನವಾಗಿತ್ತು. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೇ.35.60 ಹಾಗೂ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.51.91 ಮತದಾನವಾಗಿತ್ತು. ಸಂಜೆ ಐದು ಗಂಟೆ ವೇಳೆಗೆ ಶೇ.67.19 ಮತದಾನವಾಗಿದೆ. ನಗರದ ಐದು ಸೇರಿ ಯರಗೇರಾ, ಶಕ್ತಿನಗರ ಬೂತ್ಗಳಲ್ಲಿ 4500 ಮತಗಳಲ್ಲಿ 2871 ಮತಗಳು ಚಲಾವಣೆಯಾಗಿದ್ದು, ಶೇ. 63.8 ಮತದಾನವಾಗಿತ್ತು.
ಬೆಳಗ್ಗೆ 10.30ರ ನಂತರ ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆ ಶುರುವಾಯಿತು. ಇದರಿಂದ ಮತದಾನದ ವೇಗ ತುಸು ಇಳಿಮುಖವಾಯಿತು. ನಂತರ ವಾತಾವರಣ ತಂಪಾಗಿದ್ದರಿಂದ ಹಕ್ಕು ಚಲಾಯಿಸಲು ಜನ ಮತ್ತೆ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಮತದಾನ ಪ್ರಕ್ರಿಯೆ ಒಂದೇ ರೀತಿ ಸಾಗಿತು. ಹೆಚ್ಚು ಏರಿಳಿತಗಳು ಕಂಡು ಬರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಮತಗಟ್ಟೆಗಳಲ್ಲಿ ವೀಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು.
ಹಕ್ಕು ಚಲಾಯಿಸುವವರಿಗೆ ಎಡಗೈ ಉಂಗುರ ಬೆರಳಿಗೆ ಶಾಹಿ ಹಾಕಲಾಯಿತು. ಸಾಕಷ್ಟು ಪದವೀಧರರು ಮತದಾರರ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಹೆಸರುಗಳೇ ಪಟ್ಟಿಯಲ್ಲಿ ಕಂಡುಬರಲಿಲ್ಲ. ಇದರಿಂದ ಅವರು ಹಕ್ಕು ವಂಚಿತರಾದರು. ಆನ್ಲೈನ್ ಪರಿಶೀಲಿಸಿದರೂ ಹೆಸರು ತೋರಿಸಲಿ ಲ್ಲ. ಇದರಿಂದ ಮತ ಚಲಾಯಿಸಬೇಕು ಎಂಬ ಆಸೆಯುಳ್ಳ ಪದವೀಧರರು ಪೇಚಾಡುವಂತಾಯಿತು.
ಮತದಾತರರು ಈ ಬಾರಿ ಯಾವುದೇ ಪಕ್ಷಗಳ ಆಮಿಷಗಳಿಗೆ ತುತ್ತಾಗದೆ ಪ್ರಜ್ಞಾವಂತಿಕೆಯಿಂದ ಹಕ್ಕು ಚಲಾಯಿಸಿದ್ದಾರೆ. ರಾಯಚೂರು, ಕೊಪ್ಪಳ, ಕಲಬುರಗಿಯಲ್ಲಿ ನನಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಹೆಚ್ಚು ಮತದಾನವಾಗಿದೆ. ಕಳೆದ ಬಾರಿ ಕೇವಲ ಶೇ. 39 ಮಾತ್ರ ಮತದಾನವಾಗಿತ್ತು. ಈ ಬಾರಿ ಪಕ್ಷಕ್ಕಿಂತ ವ್ಯಕ್ತಿಗೆ ಆದ್ಯತೆ ಸಿಕ್ಕಿದ್ದು, ಗೆಲ್ಲುವ ವಿಶ್ವಾಸವಿದೆ.
ಡಾ| ರಝಾಕ್ ಉಸ್ತಾದ್, ಪಕ್ಷೇತರ ಅಭ್ಯರ್ಥಿ