Advertisement

ಕೊನೆಗೂ ಫಲಿಸಿತು ತಾಯಿಯ ಹರಕೆ !

12:29 AM Apr 14, 2019 | sudhir |

ಗಂಗೊಳ್ಳಿ: ಸರಿ ಸುಮಾರು 33 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಹಿರಿ ಮಗ ಇಂದಲ್ಲ ನಾಳೆ ಮನೆಗೆ ಬಂದೇ ಬರುತ್ತಾನೆ ಎಂದು ಕಾಯುತ್ತಿದ್ದ ಆ ತಾಯಿಯ ಅಚಲವಾದ ನಂಬಿಕೆ ಕೊನೆಗೂ ಸುಳ್ಳಾಗಲಿಲ್ಲ. ಸಿಕ್ಕ – ಸಿಕ್ಕ ದೇವರಲ್ಲಿ ಹರಕೆ ಹೊತ್ತುಕೊಂಡು ಮನೆ ಮಗನ ಬರುವಿಕೆಯನ್ನೇ ಎದುರು ನೋಡುತ್ತಿದ್ದ ಅಮ್ಮನಿಗೀಗ ಸಂಭ್ರಮ.

Advertisement

3 ದಶಕದ ಹಿಂದೆ ಮನೆ ಬಿಟ್ಟು ಹೋಗಿದ್ದ ಆ ಮನೆಯ ಹಿರಿ ಮಗ ಮತ್ತೆ ಮನೆಗೆ ಮರಳಿ ಬಂದರೆ ಹೆತ್ತ ತಾಯಿಯ ಸಂಭ್ರಮ ಹೇಗಿರಬಹುದು. ಹೌದು ಕಳೆದ ಬುಧವಾರ ಗಂಗೊಳ್ಳಿಯಲ್ಲಿ ಇಂತಹ ಒಂದು ಅಪರೂಪದ ಸನ್ನಿವೇಶಕ್ಕೆ ಕಮಲಾ ಖಾರ್ವಿ ಅವರ ಮನೆ ಸಾಕ್ಷಿಯಾಗಿದೆ.

ಮ್ಯಾಂಗನೀಸ್‌ ರಸ್ತೆಯ ಗೋಧಿಹಿತ್ಲು ನಿವಾಸಿ ದಿ| ಗೋವಿಂದ ಖಾರ್ವಿ ಮತ್ತು ಕಮಲಾ ಖಾರ್ವಿ ದಂಪತಿ ಹಿರಿಯ ಪುತ್ರ ರಾಮ ಖಾರ್ವಿ (50) ಅವರು ಸುಮಾರು 33 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ಈಗ ಮತ್ತೆ ತನ್ನ ಮನೆಗೆ ಮರಳಿ ಬಂದಿದ್ದಾರೆ.

ಬರೋಬ್ಬರಿ 33 ವರ್ಷಗಳ ಬಳಿಕ ಮನೆಗೆ ಬಂದ ರಾಮ ಖಾರ್ವಿಯನ್ನು ಕಂಡ ಮನೆ ಮಂದಿಯಲ್ಲಿ ಆಶ್ಚರ್ಯದೊಂದಿಗೆ, ಸಂಭ್ರಮವು ಮನೆ ಮಾಡಿತ್ತು.
ಕಮಲಾ ಖಾರ್ವಿಯವರಿಗೆ ಏಳು ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರು. ಈ ಪೈಕಿ ಹಿರಿಯರು. ಇವರದು ಬಡ ಮೀನುಗಾರಿಕಾ ಕುಟುಂಬವಾಗಿದ್ದು, ಚಿಕ್ಕಂದಿನಲ್ಲಿ ಬೋಟು ದುರಸ್ತಿ ಕೆಲಸ ಮಾಡುತ್ತಿದ್ದರು.

ಮನೆ ಬಿಟ್ಟು ಹೊಟೇಲ್‌ ಕೆಲಸ…
ಕಾಲಿನ ಗಾಯದ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ ರಾಮ ತನ್ನ 17ನೇ ವಯಸ್ಸಿನಲ್ಲಿ ಅಂದರೆ 1986ರ ಮೇಯಲ್ಲಿ ಮನೆ ಬಿಟ್ಟು ಬೆಂಗಳೂರಿಗೆ ಹೋಗಿದ್ದರು. ಅಲ್ಲಿ 7 ವರ್ಷವಿದ್ದು, ಆ ಬಳಿಕ ಒಡಿಸ್ಸಾದ ಭುವನೇಶ್ವರದಲ್ಲಿ 3 ವರ್ಷ ಹೊಟೇಲ್‌ ಕೆಲಸ, ಮತ್ತೆ ಬೆಂಗಳೂರಲ್ಲಿ ಹೊಟೇಲ್‌ ಕೆಲಸ, 2000ರಿಂದ ಹೈದರಾಬಾದ್‌ನಲ್ಲಿ 12 ವರ್ಷ, ಕಳೆದ 7 ವರ್ಷಗಳಿಂದ ಒಡಿಸ್ಸಾದ ಭುವನೇಶ್ವರದಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದೆ ಎಂದು ರಾಮ ತನ್ನ ಬಗ್ಗೆ ಹೇಳುತ್ತಾರೆ.

Advertisement

ಗಂಗೊಳ್ಳಿಯಲ್ಲಿಯೇ ಉಳಿಯುವೆ
ಮುಂದೆ ಗಂಗೊಳ್ಳಿಯಲ್ಲಿಯೇ ಉಳಿಯುವ ಆಸೆ ಇದೆ. ಬಾಲ್ಯದಲ್ಲಿ ಮನಸ್ಸಿಗೆ ಏನೋ ತೋಚಿ ಮನೆ ಬಿಟ್ಟು ಹೋಗಿದ್ದೆ. ಆದರೆ ಈಗ ಮತ್ತೆ ಮನೆಯನ್ನು ಸೇರುವಂತಾಗಿರುವುದು ನನ್ನ ಪುಣ್ಯ. ಮನೆಯವರೊಂದಿಗೆ ನಾನು ಸಂತೋಷಗೊಂಡಿದ್ದೇನೆ.
– ರಾಮ ಖಾರ್ವಿ

ಗಾಯದ ನೆರವು
ಬುಧವಾರ ಮ್ಯಾಂಗನೀಸ್‌ ರಸ್ತೆಯ ಸುತ್ತ ಮನೆ ಹುಡುಕುತ್ತಿದ್ದ ರಾಮ ಖಾರ್ವಿ ವಿಶ್ರಾಂತಿ ಪಡೆಯಲು ಮನೆಯೊಂದರ ಸಮೀಪ ಕುಳಿತಿದ್ದರು. ಈ ಸಂದರ್ಭ ಅಲ್ಲೇ ಇದ್ದ ಪ್ರಕಾಶ ಖಾರ್ವಿ ಅವರಲ್ಲಿ ತನ್ನ ಮನೆಯವರ ಪರಿಚಯ ಹೇಳಿ ವಿಳಾಸ ತಿಳಿಸಿ ಎಂದು ಕೇಳಿದ್ದು, ಇವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದಾಗ ಸುಮಾರು 33 ವರ್ಷಗಳ ಹಿಂದೆ ಮನೆಬಿಟ್ಟು ಹೋದ ರಾಮ ಖಾರ್ವಿ ಎಂದು ತಿಳಿಯಿತು. ಇವರ ಮುಖವು ಕುಟುಂಬ ಸದಸ್ಯರೊಂದಿಗೆ ಅಷ್ಟೊಂದು ಹೋಲಿಕೆಯಾಗಲಿಲ್ಲ. ಆಗ ಸಣ್ಣ ವಯಸ್ಸಲ್ಲಿದ್ದಾಗ ರೋಪು ತಾಗಿ ಆದ ಗಾಯದಿಂದ ಇವರೇ ರಾಮ ಖಾರ್ವಿ ಎಂದು ಪತ್ತೆ ಗುರುತು ಹಿಡಿಯಲು ನೆರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next