ನರಗುಂದ: ಪಟ್ಟಣದ 80 ವರ್ಷ ವಯಸ್ಸಿನ ವೃದ್ಧೆ ಶಂಕ್ರವ್ವ ಕಾಂಬಳೆ ಬಾಲ್ಯದಿಂದಲೇ ಗಣೇಶ ಮೂರ್ತಿ ತಯಾರಿಸುವ ಕಲೆ ರೂಢಿಸಿಕೊಂಡು ಕಳೆದ ಆರು ದಶಕಗಳಿಂದ ಇದನ್ನೇ ತಮ್ಮ ಜೀವನೋಪಾಯಕ್ಕೆ ಮುಡುಪಾಗಿರಿಸಿಕೊಂಡಿದ್ದಾರೆ.
ಶಂಕ್ರವ್ವ ಇದುವರೆಗೂ ಕೇವಲ ಮಣ್ಣಿನ ಮೂರ್ತಿಗೆ ಮಾತ್ರ ಆದ್ಯತೆ ನೀಡುವ ಮೂಲಕ ಸಾಂಪ್ರದಾಯಿಕತೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ.
60ಕ್ಕೂ ಹೆಚ್ಚು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ ಶಂಕ್ರಮ್ಮಳ ಕುಟುಂಬಕ್ಕೆ ಜೀವನೋಪಾಯವಾಗಿದೆ. ಮಣ್ಣಿನ ಮೂರ್ತಿ ತಯಾರಿಕೆಗೆ ಮಾತ್ರ ಸೀಮಿತವಾದ ಅವರ ಕೈಚಳಕದಲ್ಲಿ ಅರಳಿದ ಗಣೇಶ ಮೂರ್ತಿಗಳು ಭಕ್ತರಿಂದ ಪೂಜಿಸಲ್ಪಡುತ್ತಿವೆ.ಪ್ರತಿ ವರ್ಷ ಸುಮಾರು 200ರಿಂದ 300 ಗಣೇಶ ಮೂರ್ತಿ ತಯಾರಿಸಿ ಮಾರಾಟ ಮಾಡುವ ಶಂಕ್ರಮ್ಮ ಈ ಬಾರಿ ಅತಿವೃಷ್ಠಿ ಬಾಧಿಸಿದ್ದರಿಂದ ಮಣ್ಣು ಸಿಗದೇ ವರ್ಷಕ್ಕಿಂತ ಕಡಿಮೆ ಪ್ರಮಾಣದ ಗಣೇಶ ಮೂರ್ತಿ ಸಿದ್ಧ ಮಾಡಿದ್ದಾರೆ. ಅತಿವೃಷ್ಠಿ ಹೊಡೆತಕ್ಕೆ ಹಳೆ ಮನೆ ಸೋರಿಕೆಯಿಂದ 50, 60 ಗಣೇಶ ಮೂರ್ತಿಗಳು ಹಾಳಾಗಿರುವ ನೋವು ಇವರಲ್ಲಿದೆ.
ಹಿಂದಿನಿಂದಲೂ ಪಟ್ಟಣದ ಕೆಂಪಗೇರಿ ಜಾಗದಲ್ಲಿ ಮಣ್ಣು ತಂದು ಮೂರ್ತಿ ತಯಾರಿಸುತ್ತಿದ್ದೆವು. ಅಲ್ಲಿ ಜಲಾಶಯ ನಿರ್ಮಿಸಿದ ಬಳಿಕ ಬಾದಾಮಿ ತಾಲೂಕು ಮುತ್ತಲಗೇರಿ ಗ್ರಾಮದಿಂದ ಮಣ್ಣು ತರುತ್ತಿದ್ದೇವೆ. ಈ ಬಾರಿ ಮಳೆಯಿಂದಾಗಿ ಅಲ್ಲಿಯೂ ಮಣ್ಣು ಸಿಗಲಿಲ್ಲ. ಸಿಕ್ಕ ಒಂದಷ್ಟು ಮಣ್ಣಿನಿಂದ ಮೂರ್ತಿ ತಯಾರಿಸಿದ್ದೇವೆ ಎನ್ನುತ್ತಾರೆ ವೃದ್ಧೆ ಶಂಕ್ರಮ್ಮ ಕಾಂಬಳೆ.
ಒಟ್ಟಾರೆ ಪಿಒಪಿ ಮೂರ್ತಿಗಳಿಗೆ ಮಾರುಹೋಗದೇ ಕೇವಲ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯನ್ನೇ ಶಂಕ್ರಮ್ಮ ಕಾಂಬಳೆ ಜೀವನಕ್ಕೆ ಆಧಾರವಾಗಿಸಿಕೊಂಡಿದ್ದಾರೆ.