ಬೆಂಗಳೂರು: ಪರ್ಸ್ ಕದ್ದಿರುವುದಾಗಿ ವೃದ್ಧೆ ಮೇಲೆ ಸುಳ್ಳು ಆರೋಪ ಹೊರಿಸಿದ ಇಬ್ಬರು ಮಹಿಳೆಯರು ಆಣೆ -ಪ್ರಮಾಣ ಮಾಡಿಸುವ ನೆಪದಲ್ಲಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತೆಗೆಸಿದ್ದು, ನಂತರ ಗಮನ ಬೇರೆಡೆ ಸೆಳೆದು ಸರದೊಂದಿಗೆ ಪರಾರಿಯಾಗಿದ್ದಾರೆ.
ಜ್ಞಾನಭಾರತಿ ಮಾರುತಿ ಕೃಪಾ ಮುಖ್ಯ ರಸ್ತೆ ನಿವಾಸಿ ವೆಂಕಟಲಕ್ಷ್ಮಮ್ಮ(70) ಸರ ಕಳೆದುಕೊಂಡ ವೃದ್ಧೆ. ಜೂ.19ರಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ಇಲ್ಲಿನ ಶಾಲೆಯಿಂದ ಮಕ್ಕಳನ್ನು ಕರೆದೊಯ್ಯಲು ವೆಂಕಟಲಕ್ಷ್ಮಮ್ಮ ತೆರಳಿದ್ದರು. ಈ ವೇಳೆ ಅಮ್ಮ ಆಶ್ರಮದ ಮುಖ್ಯರಸ್ತೆಯಲ್ಲಿ ಎದುರಿಗೆ ಬಂದ ಮಹಿಳೆಯೊಬ್ಬರು ಪರ್ಸ್‌ವೊಂದನ್ನು ವೃದ್ಧೆಗೆ ತೋರಿಸುತ್ತಾ, ಅಲ್ಲಿ ಬಿದ್ದಿತ್ತು ಎಂದು ಕೈಗೆ ಕೊಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಮತ್ತೂಬ್ಬ ಮಹಿಳೆ ಬಂದು ನನ್ನ ಪರ್ಸ್ ಕಳೆದು ಹೋಗಿದ್ದು, ವೃದ್ಧೆ ಮೇಲೆ ಕಳುವಿನ ಆರೋಪ ಮಾಡಿದ್ದಾರೆ. ವೃದ್ಧೆ ಇಲ್ಲ ಎಂದರೂ ಬಿಡದ ಇಬ್ಬರು ಕಳ್ಳಿಯರು ನಿನ್ನ ಕುತ್ತಿಗೆಯಲ್ಲಿರುವ ತಾಳಿ ಸರ ತೆಗೆದು ಆಣೆ ಮಾಡುವಂತೆ ತಾಕೀತು ಮಾಡಿದ್ದಾರೆ.
ಕಂಗಾಲದ ವೆಂಕಟಲಕ್ಷ್ಮಮ್ಮ ಅವರು 20 ಗ್ರಾಂ ತೂಕದ ಚಿನ್ನದ ಸರವನ್ನು ತೆಗೆದಿದ್ದಾರೆ. ನಂತರ ಸರವನ್ನು ಪೇಪರ್‌ವೊಂದರಲ್ಲಿ ಸುತ್ತಿಕೊಂಡಿದ್ದಾರೆ.ಈ ಸಂದರ್ಭಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರು ಮಹಿಳೆಯರು, ವೃದ್ಧೆಯ ಗಮನ ಬೇರೆಡೆ ಸೆಳೆದು ಮಣ್ಣು ತುಂಬಿಕೊಂಡಿದ್ದ ಮತ್ತೂಂದು ಪೇಪರ್ ಅನ್ನು ಕೊಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ವಲ್ಪ ದೂರ ಹೋದ ಮೇಲೆ ವೆಂಕಟಲಕ್ಷ್ಮಮ್ಮ ಕತ್ತಿಗೆ ಹಾಕಿಕೊಳ್ಳಲು ಪೇಪರ್ ತೆಗೆದುನೋಡಿದಾಗ ಮಣ್ಣು ಕಂಡಿದೆ. ಈ ಸಂಬಂಧ ವೃದ್ಧೆ ದೂರು ಕೊಟ್ಟಿದ್ದು, ಕಳ್ಳಿಯರ ಪತ್ತೆಗೆ ಹುಡುಕಾಟ ನಡೆಯುತ್ತಿದೆ ಎಂದು ಜ್ಞಾನಭಾರತಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.