Advertisement

ಲಾಕ್‌ಡೌನ್‌ ಪರಿಣಾಮ ಹೇಗಿದೆ? ವೈರಸ್ ವಿರುದ್ಧ ಯುದ್ಧ ಗೆದ್ದಿತೇ ಭಾರತ?

08:18 AM May 03, 2020 | Hari Prasad |

ವಿಶ್ವಾದ್ಯಂತ ಕೋವಿಡ್ 19 ವೈರಸ್ ಸದ್ದು ಮಾಡಲಾರಂಭಿಸಿದಾಗ, ಎಲ್ಲರ ಚಿತ್ತವೂ ಭಾರತದತ್ತ ಹೊರಳಿತು. ಭಾರತದ ಭಾರೀ ಜನಸಂಖ್ಯೆಯನ್ನು ಪರಿಗಣಿಸಿದರೆ, ಕೋವಿಡ್ ಕಾಡ್ಗಿಚ್ಚಿನಂತೆ ಹಬ್ಬಲಿದೆ ಎಂದೇ ವಿಶ್ವಾದ್ಯಂತ ಪರಿಣತರು ಅಂದಾಜು ಹಾಕಿದ್ದರು.

Advertisement

ಆದರೆ, ಭಾರತವು ತ್ವರಿತವಾಗಿ ರಾಷ್ಟ್ರಾದ್ಯಂತ ಲಾಕ್‌ಡೌನ್‌ ಜಾರಿಮಾಡಿದ್ದರಿಂದಾಗಿ, ಭಾರೀ ಅಪಾಯ ತಪ್ಪಿತು. ಲಾಕ್‌ಡೌನ್‌ ತರದೇ ಹೋಗಿದ್ದರೆ ಎಪ್ರಿಲ್‌ 24ರ ವೇಳೆಗೆ ದೇಶದಲ್ಲಿ 2ಲಕ್ಷಕ್ಕೂ ಅಧಿಕ ಸೋಂಕಿತರು ಇರುತ್ತಿದ್ದರು ಎಂದು ಹೇಳಲಾಗುತ್ತದೆ.

ಇದೇನೇ ಇದ್ದರೂ, ಈಗ ಲಾಕ್‌ ಡೌನ್‌ ಅವಧಿ 2 ವಾರ ವಿಸ್ತರಣೆಯಾಗಿದೆ. ಏಕೆಂದರೆ, ಅಪಾಯದ ತೂಗುಗತ್ತಿ ಇನ್ನೂ ನಮ್ಮ ನೆತ್ತಿಯ ಮೇಲಿಂದ ದೂರವಾಗಿಲ್ಲ. ಹೀಗಾಗಿ, ಸುರಕ್ಷತಾ ಕ್ರಮಗಳನ್ನು ಚಾಚೂತಪ್ಪದೇ ನಾವೆಲ್ಲ ಪಾಲಿಸಲೇಬೇಕಿದೆ.

ತ್ವರಿತ ಲಾಕ್‌ಡೌನ್‌ ಸಹಾಯ ಮಾಡಿತೇ?
ಭಾರತದಲ್ಲಿ ಮಾರ್ಚ್‌ 24ರಿಂದ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಯಿತು. ಆದಾಗ್ಯೂ, ಅದಕ್ಕೂ ಮೊದಲೇ ಲಾಕ್‌ಡೌನ್‌ ತರಬೇಕಿತ್ತು ಎಂಬ ವಾದವಿದೆಯಾದರೂ, ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಈ ವಿಚಾರದಲ್ಲಿ ಬಹಳ ಬೇಗನೇ ಕಠಿಣ ನಿರ್ಧಾರ ಕೈಗೊಂಡಿರುವುದು ಅರ್ಥವಾಗುತ್ತದೆ.

ಜಗತ್ತಿನ ಎರಡನೇ ಅತಿದೊಡ್ಡ ಜನಸಂಖ್ಯೆಯ ರಾಷ್ಟ್ರವಾದ ಭಾರತ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಗೆ ತಂದರೆ, ಪ್ರಪಂಚದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ, ಕೋವಿಡ್ ಮೂಲವಾಗಿರುವ ಚೀನ ಇದುವರೆಗೂ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಗೊಳಿಸಿಲ್ಲ ಎನ್ನುವುದು ಗಮನಾರ್ಹ. ಅದು ಕೆಲವು ನಗರಗಳಲ್ಲಷ್ಟೇ ಲಾಕ್‌ಡೌನ್‌ ತರುತ್ತಿದೆ.

Advertisement

ಗಮನಿಸಬೇಕಾದ ಸಂಗತಿಯೆಂದರೆ, ಕೋವಿಡ್ ಸಾಂಕ್ರಾಮಿಕದಿಂದಾಗಿ ಅತಿಹೆಚ್ಚು ತತ್ತರಿಸಿರುವ ಐರೋಪ್ಯ ರಾಷ್ಟ್ರ ಇಟಲಿಯಲ್ಲೂ ಆರಂಭದಲ್ಲಿ ದೇಶವ್ಯಾಪಿ ಲಾಕ್‌ಡೌನ್‌ ಜಾರಿ ಮಾಡಲು ಅಲ್ಲಿನ ಆಡಳಿತ ಹಿಂದೇಟು ಹಾಕಿತು.

ರೋಗಿಗಳ ಸಂಖ್ಯೆ 9 ಸಾವಿರದ ಗಡಿ ದಾಟಿದ ನಂತರವೇ ಇಟಲಿ, ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿ ಮಾಡಿತ್ತು. ಇಟಲಿ ತೋರಿದ ಈ ವಿಳಂಬ ಧೋರಣೆಯೇ ಅದಕ್ಕೆ ಮಾರಕವಾಯಿತು ಎಂದು ಈಗ ಪರಿಣತರು ಹೇಳುತ್ತಿದ್ದಾರೆ.

ಉತ್ತಮ ಕ್ರಮಗಳು
ಮೇ 1ರ ವೇಳೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ಮಂಗಳವಾರದ ವೇಳೆಗೆ ಭಾರತದಲ್ಲಿ ಕೋವಿಡ್‌ನಿಂದಾಗಿ ಪ್ರತಿ ಹತ್ತು ಲಕ್ಷ ಜನರಲ್ಲಿ 0.76 ವ್ಯಕ್ತಿಗಳು ಮೃತಪಟ್ಟಿದ್ದರೆ, ಅಮೆರಿಕದಲ್ಲಿ ಪ್ರತಿ 10 ಲಕ್ಷಕ್ಕೆ 175 ಜನ ಮೃತಪಟ್ಟಿದ್ದಾರೆ.

ದೇಶದ ಭಾರೀ ಜನಸಂಖ್ಯೆಯನ್ನು ಪರಿಗಣಿಸಿ, ಅನ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರೋಗ ನಿಯಂತ್ರಣದ ಕ್ರಮಗಳು ಅತ್ಯುತ್ತಮವಾಗಿ ಕೆಲಸ ಮಾಡಿವೆ ಎಂದು ಅರ್ಥವಾಗುತ್ತದೆ. ಆದರೆ, ಈ ತಿಂಗಳು ದೇಶದ ಪಾಲಿಗೆ ಅತ್ಯಂತ ನಿರ್ಣಾಯಕವಾಗಲಿದ್ದು, ಮುಂದೇನಾಗಬಹುದು ಎಂಬ ಆತಂಕವಂತೂ ಇದ್ದೇ ಇದೆ.

ಅಪಘಾತಗಳಿಲ್ಲದೇ ಕೆಲವರ ಬ್ಯುಸಿನೆಸ್‌ ಡೌನ್‌!
130 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ, 2019ರ ವೇಳೆಗೆ ವಿವಿಧ ಕಾರಣಗಳಿಗೆ ಮೃತ ಪಡುವವರ ಪ್ರಮಾಣ 1000 ಜನಕ್ಕೆ 7 ಜನರಷ್ಟಿತ್ತು. ಇದರರ್ಥ, ಪ್ರತಿದಿನ ಸರಾಸರಿ 26000 ಜನ ದೇಶದಲ್ಲಿ ನಿಧನರಾಗುತ್ತಿದ್ದರು.

ಅದರಲ್ಲೂ ರಸ್ತೆ ಅಪಘಾತ-ರೈಲ್ವೆ ಅಪಘಾತಗಳಿಂದ ಮೃತಪಡುವವರ ಸಂಖ್ಯೆಯಂತೂ ಬೆಚ್ಚಿಬೀಳಿಸುವಂತಿತ್ತು. 2018ರೊಂದರಲ್ಲೇ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ 15,0000 ಜನ ಮೃತಪಟ್ಟಿದ್ದರು! ಇದಕ್ಕೆ ಹೋಲಿಸಿದರೆ, ಆ ವರ್ಷ ಅಮೆರಿಕದಲ್ಲಿ 36,000 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್‌ ಮತ್ತು ಅಂತಿಮಯಾತ್ರೆಯ ಸೇವೆಯನ್ನು ಒದಗಿಸುವ ಖಾಸಗಿ ಕಂಪನಿಯೊಂದರ ಮಾಲೀಕರೊಬ್ಬರು, ‘ಸಾಮಾನ್ಯ ದಿನಗಳಲ್ಲಿ ಕನಿಷ್ಠ 20 ದೇಹಗಳನ್ನಾದರೂ ನಾವು ಸಾಗಿಸುತ್ತಿದ್ದೆವು. ಈಗ ಒಬ್ಬರಿಂದ ಇಬ್ಬರ ದೇಹಗಳಷ್ಟೇ ಬರುತ್ತಿವೆ. ಈಗಲೂ ಹೃದಯಘಾತದಿಂದ ಮೃತಪಡುವವರ ಕೇಸುಗಳು ಬರುತ್ತವೆ.

ಆದರೆ ಎಲ್ಲರೂ ಮನೆಯಲ್ಲೇ ಇರುವುದರಿಂದ ರಸ್ತೆ ಅಪಘಾತಗಳು ಆಗುತ್ತಿಲ್ಲ. 1994ರಲ್ಲಿ ನಾವು ಬ್ಯುಸಿನೆಸ್‌ ಆರಂಭಿಸಿದ್ದೆವು, ಆದರೆ ನಮ್ಮ ಬ್ಯುಸಿನೆಸ್‌ಗೆ ಇಷ್ಟೊಂದು ಕಷ್ಟ ಯಾವತ್ತೂ ಎದುರಾಗಿರಲಿಲ್ಲ. ನಾವು 45 ಜನಕ್ಕೆ ಸಂಬಳ ಕೊಡಬೇಕು’ ಎನ್ನುತ್ತಾರೆ! ಇದಷ್ಟೇ ಅಲ್ಲದೇ, ಲಾಕ್‌ಡೌನ್‌ ನಂತರದಿಂದ ದೇಶಾದ್ಯಂತ ಹತ್ಯೆ, ಕಳ್ಳತನದ ಸಂಖ್ಯೆಯೂ ಗಣನೀಯವಾಗಿ ತಗ್ಗಿದೆ ಎನ್ನುತ್ತವೆ ಪೊಲೀಸ್‌ ಇಲಾಖೆಯ ವರದಿಗಳು.

ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಪ್ರತಿ ದಿನ ಲೋಕಲ್‌ ಟ್ರೇನುಗಳಿಗೆ ಸಿಲುಕಿ ಕನಿಷ್ಠ 8 ಜನರು ಮೃತಪಡುತ್ತಿದ್ದರು. ಆದರೆ, ಮಾರ್ಚ್‌ 22ರಿಂದ ಪ್ಯಾಸೆಂಜರ್‌ ಟ್ರೇನುಗಳನ್ನು ನಿಲ್ಲಿಸಿದಾಗಿಂದ ಇದುವರೆಗೂ, ಅಂದರೆ ಎಪ್ರಿಲ್‌ 26ರವರೆಗೂ 9 ಜನರಷ್ಟೇ ರೈಲ್ವೆ ಅಪಘಾತದಲ್ಲಿಮೃತಪಟ್ಟಿದ್ದಾರೆ (ಗೂಡ್ಸ್‌ ಟ್ರೇನ್‌ಗಳಿಗೆ ಸಿಲುಕಿ).

ಆರೋಗ್ಯ ಸೇತು ಸಹಾಯ
ಕೇಂದ್ರ ಸರಕಾರ  ಹೊರತಂದಿರುವ ಆರೋಗ್ಯ ಸೇತು ಆ್ಯಪ್‌ ರೋಗ ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ತಜ್ಞರು ಬಣ್ಣಿಸಲಾರಂಭಿಸಿದ್ದಾರೆ. ಖುದ್ದು ವಿಶ್ವಬ್ಯಾಂಕ್‌ ಕೂಡ ಭಾರತದ ಈ ತಂತ್ರಜ್ಞಾನಿಕ ಮಾಧ್ಯಮವನ್ನು ಶ್ಲಾಘಿಸಿದೆ.

ಗಮನಾರ್ಹ ಅಂಶವೆಂದರೆ, ಭಾರತದಲ್ಲಿ ಕೆಲವು ದಿನಗಳಿಂದ ಫೇಸ್‌ಬುಕ್‌ಗಿಂತಲೂ ಆರೋಗ್ಯ ಸೇತು ಆ್ಯಪ್‌ನ ಡೌನ್‌ಲೋಡ್‌ ಅತ್ಯಧಿಕವಾಗುತ್ತಿದೆ. ಜಿಪಿಎಸ್‌ ಮತ್ತು ಫೋನಿನಲ್ಲಿರುವ ಬ್ಲೂಟೂತ್‌ ಟೆಕ್ನಾಲಜಿಯನ್ನು ಬಳಸಿಕೊಳ್ಳುವ ಈ ಆ್ಯಪ್‌, ನಾವೇನಾದರೂ ಕೋವಿಡ್‌-19 ರೋಗಿಯ ಸಂಪರ್ಕಕ್ಕೆ ಬಂದರೆ, ಕೂಡಲೇ ನಮಗೆ ಎಚ್ಚರಿಕೆಯ ಸಂದೇಶ ಕಳುಹಿಸುತ್ತದೆ. ಸರ್ಕಾರಿ ಹಾಗೂ ಖಾಸಗಿ ನೌಕರರಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ.

ನಿಯಂತ್ರಣ ತಪ್ಪಿಲ್ಲ
ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತುಸ್ಥಿತಿ ಕಾರ್ಯಕ್ರಮದ ನಿರ್ದೇಶಕರಾದ ಮೈಕ್‌ ರ್ಯಾನ್‌ ಅವರು, “ಪ್ರತಿ 1 ಪಾಸಿಟಿವ್‌ ಕೇಸಿಗೆ 11 ನೆಗೆಟಿವ್‌ ಕೇಸುಗಳಿರುವುದು ಉತ್ತಮ ಮಾನದಂಡ’ ಎನ್ನುತ್ತಾರೆ.

ಭಾರತದಲ್ಲಿ ನೆಗೆಟಿವ್‌-ಪಾಸಿಟಿವ್‌ ಕೇಸುಗಳ ತುಲನೆ ಮಾಡಿದಾಗ, ನಮ್ಮ ದೇಶವಿನ್ನೂ ಅಪಾಯಕಾರಿ ಸನ್ನಿವೇಶವನ್ನು ಎದುರಿಸುತ್ತಿಲ್ಲ ಎನ್ನುವುದು ಅರ್ಥವಾಗುತ್ತದೆ.

ಎಪ್ರಿಲ್‌ 20ರ ವೇಳೆಗೆ ಭಾರತದಲ್ಲಿ ಒಟ್ಟು ಸೋಂಕಿತರಲ್ಲಿ 3 ಪ್ರತಿಶತ ಜನರು ಮೃತಪಟ್ಟಿದ್ದಾರೆ. ಇಟಲಿಯಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 13 ಪ್ರತಿಶತವಿದ್ದರೆ, ಅಮೆರಿಕ ಹಾಗೂ ಫ್ರಾನ್ಸ್‌ನಲ್ಲಿ 14 ಪ್ರತಿಶತವಿದೆ ಎನ್ನುತ್ತದೆ ಜಾನ್‌ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಇತ್ತೀಚಿನ ವರದಿ.

ಅಂದರೆ, ಸದ್ಯಕ್ಕೆ ಭಾರತದಲ್ಲಿ ಕೋವಿಡ್ ವೈರಸ್ ಅಪಾಯಕಾರಿ ಹಂತ ತಲುಪಿಲ್ಲ ಎಂದರ್ಥ. ಆದರೆ, ಇದೇ ವೇಳೆಯಲ್ಲೇ, ದೇಶದಲ್ಲಿ ಪರೀಕ್ಷೆಗಳ ಪ್ರಮಾಣವೂ ಕಡಿಮೆಯಿದೆ.

ಎಪ್ರಿಲ್‌ 23ರ ವೇಳೆಗೆ ದೇಶದಲ್ಲಿ ದಿನನಿತ್ಯ 1 ಲಕ್ಷ ಜನರಲ್ಲಿ ಸರಾಸರಿ 48 ಜನರ ಪರೀಕ್ಷೆಯಾಗಿದೆ. ಇದಕ್ಕೆ ಹೋಲಿಸಿದರೆ ದ.ಕೊರಿಯಾದಲ್ಲಿ 1, 175 ಹಾಗೂ ಅಮೆರಿಕದಲ್ಲಿ 1,740 ಪರೀಕ್ಷೆಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next