ರೋಮ್: ದಿನ ಕಳೆದಂತೆ ಕೋವಿಡ್-19 ಸೋಂಕು ಪ್ರಕರಣಗಳು ಅಧಿಕವಾದಂತೆ ವೈರಸ್ ಪರಿಣಾಮದ ಪಟ್ಟಿಯೂ ಹೆಚ್ಚಾಗುತ್ತಿದೆ. ಬಿಕ್ಕಟ್ಟು ಪ್ರಾರಂಭವಾದಗಿನಿಂದ ಸೋಂಕು ಮೂಲ ಪತ್ತೆ ಸೇರಿದಂತೆ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಬಗ್ಗೆ ನಾನಾ ದೇಶಗಳ ಸಂಶೋಧಕರು ತಂಡೋಪತಂಡವಾಗಿ ಅಧ್ಯಯನ ನಡೆಸುತ್ತಿದ್ದು, ಸೋಂಕಿನ ಕುರಿತಾಗಿ ಪ್ರತಿದಿನ ಒಂದಲ್ಲ ಒಂದು ವಿಭಿನ್ನ ಮಾಹಿತಿ ಹೊರ ಬೀಳುತ್ತಲೇ ಇದೆ. ಇದೀಗ ಈ ಡೆಡ್ಲಿ ವೈರಸ್‌ಗೆ ತುತ್ತಾಗಿರುವ ಸೋಂಕಿತರ ಕುರಿತಾದ ಮಾಹಿತಿಯೊಂದು ಹೊರಬಿದ್ದಿದ್ದು, ಹತ್ತು ಕೋವಿಡ್ ರೋಗಿಗಳಲ್ಲಿ ಓರ್ವರಿಗೆ ರುಚಿ ಮತ್ತು ವಾಸನೆ ಗ್ರಹಿಕೆ ತಿಂಗಳು ಕಳೆದರೂ ಮರಳಿ ಬರುವುದು ಕಷ್ಟ ಸಾಧ್ಯ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಕೆಲ ದಿನಗಳ ಹಿಂದೆಯಷ್ಟೇ ಸೋಂಕು ಗುಣಲಕ್ಷಣಗಳ ಪಟ್ಟಿಗೆ ಸೇರ್ಪಡೆಯಾಗಿದ್ದ ವಾಸನೆ ಗ್ರಹಿಕೆ ಮತ್ತು ರುಚಿ ಸಾಮರ್ಥ್ಯ ಕುಂದುವಿಕೆ ಗುಣಲಕ್ಷಣಗಳ ಮೇಲೆ ಅಧ್ಯಯನ ನಡೆಸಿದ್ದು, ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.
ಇಟಾಲಿಯನ್ ಸಂಶೋಧಕರ ತಂಡವೊಂದು ಕೊರೊನಾ ಸೋಂಕಿಗೆ ತುತ್ತಾದ ರೋಗಿಗಳು ತಿಂಗಳ ನಂತರವೂ ರುಚಿ ಮತ್ತು ವಾಸನೆ ಗ್ರಹಿಸಲು ಹೋರಾಟ ನಡೆಸುತ್ತಿರುವುದಾಗಿ ಕಂಡುಕೊಂಡಿದ್ದು, ವರದಿಯು ಜೆಎಎಂಎ ಒಟೋಲರಿಂಗೋಲಜಿ ಹೆಡ್ ಆ್ಯಂಡ್ ನೆಕ್ ಸರ್ಜರಿ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಇನ್ನು ಸುಮಾರು 187 ಇಟಾಲಿಯನ್ ಸೋಂಕಿತರನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು, ಎಲ್ಲ ಸೋಂಕಿತರ ಆರೋಗ್ಯವೂ ಆಸ್ಪತ್ರೆಗೆ ದಾಖಲಿಸುವಷ್ಟು ಉಲ್ಬಣವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಒಂದು ತಿಂಗಳಿಂದ ಸೋಂಕಿಗೆ ಒಳಗಾದವರನ್ನು ಸಂಶೋಧನೆಯಲ್ಲಿ ತಮ್ಮ ವಾಸನೆ ಮತ್ತು ರುಚಿಯ ಗ್ರಹಿಕೆಯನ್ನು ಪ್ರಾಮಾಣೀಕರಿಸಲು ಹೇಳಲಾಗಿದ್ದು, ಅವರು ವಾಸನೆ ಗ್ರಹಿಕೆ ಸಾಮರ್ಥ್ಯ ಇನ್ನು ಮರಳಿ ಬಂದಿಲ್ಲ ಎಂದು ತಿಳಿದುಬಂದಿದೆ.
ಇದರಲ್ಲಿ ಶೇ. 60 ರಷ್ಟು ಅಂದರೆ 113 ಮಂದಿಯಲ್ಲಿ ತಮ್ಮ ವಾಸನೆ ಮತ್ತು ರುಚಿಯ ಗ್ರಹಿಕೆಯಲ್ಲಿ ಬದಲಾವಣೆ ಕಂಡುಬಂದಿದೆ. ಇವರಲ್ಲಿ 55 ಮಂದಿ ಸಂಪೂರ್ಣ ಗುಣಮುಖರಾಗಿರುವುದಾಗಿ ತಿಳಿಸಿದ್ದಾರೆ. 46 ಮಂದಿ ತಮ್ಮ ದೇಹದಲ್ಲಿ ಸುಧಾರಣೆ ಕಾಣುತ್ತಿರುವುದಾಗಿ ಹೇಳಿದ್ದಾರೆ. ಉಳಿದ 12 ಮಂದಿ ರೋಗದಿಂದ ದೇಹದಲ್ಲಿ ಬದಲಾವಣೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಕೇವಲ ಅರ್ಧದಷ್ಟು ಜನರು ಮಾತ್ರ ತಮ್ಮ ರುಚಿ ಮತ್ತು ವಾಸನೆಯನ್ನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನುಳಿದ ಶೇ. 40 ಮಂದಿ ತಮ್ಮ ರೋಗ ಲಕ್ಷಣಗಳಲ್ಲಿ ಸುಧಾರಣೆ ಕಂಡಿದ್ದರೆ, 10 ರಷ್ಟು ಮಂದಿ ಸುಧಾರಣೆಯನ್ನೇ ಕಂಡಿಲ್ಲ. ಗಂಭೀರವಾದ ರೋಗ ಲಕ್ಷಣಗಳು ಕಂಡುಬಂದಿರುವ ಜನರ ಪರಿಸ್ಥಿತಿ ಸುಧಾರಿಸಲು ಬಹಳಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಪಡೋವಾ ಯೂನಿವರ್ಸಿಟಿಯ ಡಾ. ಪಾವೊಲೊ ಬಾಸ್ಕೊಲೊ ರಿಜೋ ಅಭಿಪ್ರಾಯಪಟ್ಟಿದ್ದಾರೆ.