ಬೆಂಗಳೂರು: ನೈತಿಕ ಪೊಲೀಸ್ ಗಿರಿ ವಿಚಾರವಾಗಿ ಬೆಂಬಲ ನೀಡಬೇಡಿ ಎಂದು ನಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು, ಆದರೆ ಅವರು ಪ್ರೋತ್ಸಾಹ ನೀಡಿದ್ದರ ಪರಿಣಾಮ ಇಂದು ಅವರು ಹಾಗೂ ನಾವು ಪಶ್ಚಾತಾಪ ಪಡುವಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಪುಂಡಾಟಿಕೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ, ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ದೇಶಕ್ಕಾಗಿ ಹೋರಾಟ ಮಾಡಿದ ದೇಶಪ್ರೇಮಿಗಳ ಯಾವುದೇ ಪ್ರತಿಮೆಯನ್ನಾಗಲಿ, ಯಾವುದೇ ಜಾತಿ ಅಥವಾ ಧರ್ಮದವರ ಪ್ರತಿಮೆಯನ್ನು ಪುಂಡಾಟಿಕೆಯಿಂದ ನಾಶ ಮಾಡುವುದನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.
ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇವಲ ಬೆಳಗಾವಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ನಾನು ಬೇರೆ ಪ್ರಕರಣಗಳನ್ನು ಉದಾಹರಣೆಯಾಗಿ ಹೇಳಿದರೆ ವಿಷಯ ಬೇರೆ ಕಡೆಗೆ ಹೋಗುತ್ತದೆ. ರಾಜಕಾರಣಿಗಳ ಹಸ್ತಕ್ಷೇಪದಿಂದ ಪೊಲೀಸ್ ಇಲಾಖೆ ಗೌರವ ಹಾಳಾಗುತ್ತಿದೆ. ಅವರ ಮೇಲೆ ಒತ್ತಡ ಹಾಕಿ ನಿರ್ದಿಷ್ಟ ಸೆಕ್ಷನ್ ಹಾಕಿಸಲಾಗುತ್ತಿದೆ. ಗೃಹ ಸಚಿವರು, ಅವರ ಮಾತುಗಳು ಸರಿಯಾಗಿಲ್ಲ. ಅವರು ಒಳ್ಳೆಯವರು, ಮೃದು ಸ್ವಭಾವದವರೆ ಆಗಿರಬಹುದು. ಆದರೆ ಅದು ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಪೊಲೀಸ್ ಠಾಣೆ ಮುಂದೆ ಪೊಲೀಸರು ಬೇರೆ ಬಟ್ಟೆ ಹಾಕಿ ಕೂತರಲ್ಲಾ ಅದು ಸರಿಯೇ? ಕೇಸರಿ ಬಣ್ಣಕ್ಕೆ ನಾವು ಗೌರವ ಕೊಡುತ್ತೇವೆ. ಆದರೆ ಪೊಲೀಸ್ ಅಧಿಕಾರಿಗಳು ಖಾಕಿ ಬಟ್ಟೆ ಬಿಟ್ಟು ಬೇರೆ ಬಟ್ಟೆ ಹಾಕಿಸಿ ಏನು ಮಾಡಲು ಹೊರಟಿದ್ದಾರೆ? ಎಂದು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಭಾಷಾ ಸಂಘರ್ಷವಾಗುವ ವಾತಾವರಣ ನಿರ್ಮಾಣವಾಗುತ್ತಿದೆ ಎಂಬ ಪ್ರಶ್ನೆಗೆ, ‘ಇದು ಕರ್ನಾಟಕ, ಶಾಂತಿ ಕಾಪಾಡಬೇಕು. ಕರ್ನಾಟಕದಲ್ಲಿರುವವರೆಲ್ಲರೂ ಕನ್ನಡಿಗರೇ, ಕನ್ನಡ ಪ್ರೇಮಿಗಳೇ. ನಮ್ಮ ಭಾಷೆ, ನಮ್ಮ ಬಾವುಟ ನಮ್ಮದೇ. ಇಲ್ಲಿ ಯಾವುದೇ ಜಾತಿ ಮೇಲೆ ದೂಷಿಸುವುದಲ್ಲ. ಪ್ರತಿಮೆ ನಾಶ ಮಾಡಿರುವುದು ಸರಿಯಲ್ಲ, ನಾವು ಅದನ್ನು ಖಂಡಿಸುತ್ತೇವೆ’ ಎಂದರು.