ಹೊಸದಿಲ್ಲಿ: ಭ್ರಷ್ಟಾಚಾರಿಗಳ ಬಗ್ಗೆ ಯಾವುದೇ ವರದಿಗಳನ್ನು ಸರಕಾರದ ಪರವಾನಗಿ ಇಲ್ಲದೇ ಪ್ರಕಟಿಸದಂತೆ ಅಧ್ಯಾದೇಶ ಹೊರಡಿಸಿರುವ ರಾಜಸ್ಥಾನ ಸರಕಾರದ ಕ್ರಮದ ಬಗ್ಗೆ ಎಡಿಟರ್ ಗಿಲ್ಡ್ ಆಕ್ಷೇಪ ಎತ್ತಿದೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿ ಸರಕಾರದ ವಿರುದ್ಧ ರಾಜಸ್ಥಾನ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ಸಾಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸುವ ಮಾಧ್ಯಮಗಳ ಸ್ವಾತಂತ್ರ್ಯ ಹರಣ ಮಾಡುವಂಥ ಅಸಂಬದ್ಧ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಹೇಳಿರುವ ಎಡಿಟರ್ ಗಿಲ್ಡ್, “ಸಮಾಜ ಸೇವಕರು, ನ್ಯಾಯಾಧೀಶರು ಹಾಗೂ ಮ್ಯಾಜಿಸ್ಟ್ರೇಟ್‌ಗಳ ವಿರುದ್ಧ ವರದಿ ಮಾಡಲಿಕ್ಕೇ ನಿಷೇಧಾಜ್ಞೆ ಹೊರಡಿಸುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದಿದೆ. ಜತೆಗೆ, ಸರಕಾರ ಈ ಮೂಲಕ ಮಾಧ್ಯಮಗಳನ್ನು ನಿಯಂತ್ರಿಸಲು ಹೊರಟಿದೆ. ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದೆ ಎಂದು ಹೇಳಿದೆ.
ಈ ಎಲ್ಲಾ ಬೆಳವಣಿಗೆಗಳ ಬೆನ್ನಿಗೇ ಸೋಮವಾರ ಸರಕಾರದ ಕ್ರಮದ ವಿರುದ್ಧ ರಾಜಸ್ಥಾನ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಸಾಮಾಜಿಕ ಕಾರ್ಯಕರ್ತ ಭಾಗÌತ್ ಗೌರ್ ಎಂಬುವರು ಕ್ರಿಮಿನಲ್ ಕಾಯ್ದೆಯಡಿ ಜೈಪುರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. “ಭಾರತೀಯ ದಂಡ ಸಂಹಿತೆ ಭಾಗ 3ರ ಪ್ರಕಾರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿ ಸರಕಾರ ಕ್ರಮಕ್ಕೆ ಮುಂದಾಗಿದೆ. ಇದು ನಿಯಮಕ್ಕೆ ವಿರುದ್ಧ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕಾಂಗ್ರೆಸ್ ಪ್ರತಿಭಟನೆ: ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರದ ಕ್ರಮದ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ರಾಜಸ್ಥಾನ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ಹಾಗೂ ಪಕ್ಷದ ಕೆಲ ನಾಯಕರು ಸೋಮವಾರ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೈಲಟ್ ಸೇರಿ ಉಳಿದ ನಾಯಕರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.
ಕೇಂದ್ರ ಸಮರ್ಥನೆ: ರಾಜಸ್ಥಾನ ಸರಕಾರದ ಹೊಸ ಅಧ್ಯಾದೇಶ ಸಮತೋಲನದಿಂದ ಕೂಡಿದೆ. ಅಷ್ಟೇ ಅಲ್ಲ, ಸರಿಯಾದ ಕ್ರಮವನ್ನೇ ತೆಗೆದುಕೊಂಡಿದೆ ಎಂದು ಹೇಳುವ ಮೂಲಕ ಕೇಂದ್ರ ಸರಕಾರದ ಪರವಾಗಿ ಸಚಿವ ಪಿಪಿ ಚೌಧರಿ ಅವರು ಸಮರ್ಥಿಸಿಕೊಂಡಿದ್ದಾರೆ.