Advertisement

ನೋಟು ರದ್ದತಿಯಿಂದ ದೇಶದ ಆರ್ಥಿಕತೆ ಕುಂಠಿತ

09:05 PM Feb 23, 2020 | Lakshmi GovindaRaj |

ಚಾಮರಾಜನಗರ: ಕೇಂದ್ರ ಕೈಗೊಂಡ ನೋಟು ಅಮಾನ್ಯಿಕರಣ ಸರಿ ನಿರ್ಧಾರವಲ್ಲ. ಇದರಿಂದ ದೇಶದ ಆರ್ಥಿಕತೆ ಕುಂಠಿತವಾಯಿತು. ಬ್ಯಾಂಕುಗಳ ವಿಲೀನೀಕರಣದಿಂದ ಜನ ಸಾಮಾನ್ಯರಿಗೆ ಅನುಕೂಲವಿಲ್ಲ. ಈ ವಿಲೀನೀಕರಣದಿಂದ ಜಗತ್ತಿನ ಅನೇಕ ದೇಶಗಳು ಆರ್ಥಿಕ ಮುಗ್ಗಟ್ಟು ಅನುಭವಿಸಿವೆ ಎಂದು ಆರ್ಥಿಕ ತಜ್ಞ ಡಾ. ರೇಣುಕಾರ್ಯ ಅಭಿಪ್ರಾಯಪಟ್ಟರು.

Advertisement

ನಗರದ ದೀನಬಂಧು ಸೃಜನಶೀಲ ಕಲಿಕಾ ಕೇಂದ್ರ ಶಾಲೆಯಲ್ಲಿ ಸ್ಥಾಪಿಸಿರುವ ಕಾಯಕ ಕುಟೀರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಗಳು ಕೈಗೊಂಡ ಕೆಲವು ನಿರ್ಧಾರಗಳಿಂದಾಗಿ ದೇಶದ ಆರ್ಥಿಕತೆ ನಿಧಾನಗತಿಯಲ್ಲಾಗಿದೆ. ಜಿಡಿಪಿ ಕಡಿಮೆಯಾಗಿದೆ. ಬ್ಯಾಂಕುಗಳು ವಿಕೇಂದ್ರೀಕರಣವಾಗಬೇಕೆ ಹೊರತು ಕೇಂದ್ರೀಕರಣವಾಗಬಾರದು ಎಂದರು.

ಗಾಂಧೀಜಿ ನಮಗೆ ಹೆಚ್ಚು ಪ್ರಸ್ತುತ: ಹಿರಿಯ ಸಾಹಿತಿ ಡಾ. ಹನೂರು ಕೃಷ್ಣಮೂರ್ತಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಜೀವನ ಕ್ರಮ ಹಾಗು ಶ್ರಮ ಸಂಸ್ಕೃತಿಯು ಸೃಜನ ಶೀಲತೆಯನ್ನು ಪ್ರತಿಪಾದಿಸುತ್ತದೆ. ಇಂದು ಗಾಂಧೀಜಿ ನಮಗೆ ಹೆಚ್ಚು ಪ್ರಸ್ತುತರಾಗಿದ್ದಾರೆ. ನಾವು ಅವರ ಜೀವನ ಕ್ರಮದ ಕಡೆಗೆ ಹೋಗಬೇಕಾಗಿದೆ. ನಮ್ಮ ವಚನಕಾರರು ಕೂಡ ಕಾಯಕ ಅಥವಾ ಶ್ರಮ ಸಂಸ್ಕೃತಿ ಪ್ರತಿಪಾದಿಸಿದ್ದರು. ತಮ್ಮ ಜೀವನದಲ್ಲಿ ಸೃಜನಶೀಲತೆ ಬೆಳೆಸಿಕೊಂಡಿದ್ದರು. ಅವರ ವಚನಗಳು ಇಡೀ ಜಗತ್ತಿಗೇ ಮಾದರಿಯಾಗಿತ್ತು ಎಂದು ಹೇಳಿದರು.

ಮಕ್ಕಳಿಗೆ ಕೌಶಲ ತರಬೇತಿ: ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪೊ›.ಜಿ.ಸ್‌.ಜಯದೇವ ಮಾತನಾಡಿ, ಇಲ್ಲಿ ಮಕ್ಕಳು ಚರಕ, ಕೈಮಗ್ಗ, ಕುಂಬಾರಿಕೆ ಮುಂತಾದ ಕೌಶಲ ಕಲಿಯುತ್ತಲೇ ದೇಶದ ಸಂತರು, ಶರಣರು ಹಾಗೂ ಮಹಾತ್ಮರು ಸಾರಿದ ಸರಳ ಜೀವನ ಹಾಗೂ ಅಧ್ಯಾತ್ಮಿಕ ಒಳನೋಟವನ್ನು ಬೆಳೆಸಿಕೊಳ್ಳಲಿದ್ದಾರೆ. ಪರಂಪರಾಗತವಾಗಿ ಬಂದ ಕರಕುಶಲ ಕಲೆಗಳನ್ನು, ತಮ್ಮ ಶ್ರಮವನ್ನು ನಂಬಿಕೊಂಡು ಬಂದಂತಹ ಜನರು ಅದನ್ನು ಬಳಸಿಕೊಂಡು ಜೀವನ ಮಾಡಿದ್ದಾರೆ.

ಶಿಕ್ಷಣ ಎನ್ನುವುದು ಬಂಡವಾಳಶಾಹಿಗಳ ಕೈಯಲ್ಲಿದೆ ಎನ್ನುವ ಮಾತಿದೆ. ಮಕ್ಕಳನ್ನು ಕಾರ್ಪೊರೇಟ್‌ ಜಗತ್ತಿನ ಉತ್ಪಾದನೆಗಳನ್ನು ಕೊಳ್ಳುವ ಸಾಮರ್ಥ್ಯ ಉಳ್ಳವರನ್ನಾಗಿ ಮಾಡಬೇಕು ಎನ್ನುವುದು ಬಂಡವಾಳಶಾಹಿಗಳ ಆಶಯ. ಶಿಕ್ಷಣವು ಸಮಾಜದ ಸಮಸ್ಯೆಗಳಿಗೆ ಪರಿಹಾರ ಆಗಬೇಕೆ ವಿನಾ ಅದು ಸಮಸ್ಯೆಯಾಗಬಾರದು. ನಮ್ಮಲ್ಲಿ ಅದು ಸಮಸ್ಯೆಯ ಭಾಗವಾಗಿದೆ ಎಂದರು.

Advertisement

ಗಾಂಧಿ ಮಾತನ್ನು ಅರಿಯಬೇಕು: ನಮಗೆ ಇಂದು ಸುಸ್ಥಿರ ಆರ್ಥಿಕತೆ ಬೇಕಾಗಿದೆ. ಭೂಮಿ ಮೇಲೆ ನೆಲ, ಜಲ, ಖನಿಜ, ಗಾಳಿ ಎಲ್ಲ ಇದೆ. ಇದು ಮೂಲ ಬಂಡವಾಳವಾಗಿದ್ದು. ಇದು ಇದ್ದಂತೆಯೇ ಇರಬೇಕು. ಇಂದು ಮೂಲ ಬಂಡವಾಳವನ್ನೇ ತಿಂದು ಮುಗಿಸುವ ಕೆಲಸ ನಡೆಯುತ್ತಿದೆ. ಎಲ್ಲರ ಆಸೆಗಳನ್ನು ಪೂರೈಸುವಷ್ಟು ಸಂಪನ್ಮೂಲ ಭೂಮಿಯಲ್ಲಿದೆ, ದುರಾಸೆಗಳನ್ನಲ್ಲ ಎಂಬ ಮಹಾತ್ಮ ಗಾಂಧಿಯವರ ಮಾತನ್ನು ಎಲ್ಲರೂ ಅರಿಯಬೇಕು ಎಂದರು.

ಮೈಸೂರು ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ಮುಕ್ತಾನಂದಜೀ ಅಧ್ಯಕ್ಷತೆ ವಹಿಸಿದ್ದರು. ಕೋಲ್ಕೊತಾ ರಾಮಕೃಷ್ಣ ಆಶ್ರಮದ ಇಂದಿರಾತ್ಮಾನಂದಜೀ, ಸಾಹಿತಿ ಕೆ.ಬಿ.ಪ್ರಭು ಪ್ರಸಾದ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಶಾಲೆಯ ಆಡಳಿತಾಧಿಕಾರಿ ಪ್ರಜ್ಞಾ ನಿಲಗುಂದ್‌, ಟಿಆರ್‌ಸಿಯ ಸುನೀಲ್‌, ಮುಖ್ಯ ಶಿಕ್ಷಕರಾದ ಹರೀಶಾರಾಧ್ಯ, ಪ್ರಕಾಶ್‌ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಕಾಯಕ ಕುಟೀರ ಉದ್ಘಾಟನೆ: ವಿದ್ಯಾರ್ಥಿಗಳಲ್ಲಿ ಸೃಜನಶೀಲ ಕಲಿಕೆಗೆ ಒತ್ತು ನೀಡಿರುವ ನಗರದ ದೀನಬಂಧು ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಮಕ್ಕಳಲ್ಲಿ ಗ್ರಾಮೀಣ ಕಸುಬು, ಸುಸ್ಥಿರ ಬದುಕಿನ ಪರಿಚಯ ಮಾಡಿಕೊಡುವ ಸಲುವಾಗಿ ಸ್ಥಾಪಿಸಿರುವ ಕಾಯಕ ಕುಟೀರವನ್ನು ಮೈಸೂರು ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ಮುಕ್ತಾನಂದಜೀ ಉದ್ಘಾಟಿಸಿದರು. ಶಾಲೆಯ ಆವರಣದಲ್ಲಿ ಗುಡಿಸಲು ಕುಟೀರವನ್ನು ನಿರ್ಮಿಸಲಾಗಿದ್ದು, ಇದರೊಳಗೆ ಕುಂಬಾರಿಕೆ, ನೂಲುವಿಕೆ ಕೈಮಗ್ಗ ಚಾಪೆಯ ನೇಯ್ಗೆಯ ಸಲಕರಣೆಗಳನ್ನು ಅಳವಡಿಸಿ, ವಾರದಲ್ಲಿ ಕೆಲವು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಕಲಿಸಿಕೊಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next