Advertisement

ಕರ್ನಾಟಕದ ಪರಿಸರ, ಜನರೆಂದರೆ ನನಗಿಷ್ಟ

11:19 AM Jan 01, 2018 | Team Udayavani |

ಬೆಂಗಳೂರು: ಮಕ್ಕಳಲ್ಲಿ ಸಂಸ್ಕೃತಿ ಮತ್ತು ಪರಿಸರ ಪ್ರಜ್ಞೆ ಮೂಡಿಸುವುದು ತುರ್ತು ಅಗತ್ಯವಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದ್ದಾರೆ. ನಗರದ ನ್ಯಾಷನಲ್‌ ಕಾಲೇಜಿನ ಶತಮಾನೋತ್ಸವ ಹಾಗೂ ಅದಮ್ಯ ಚೇತನ ಸಂಸ್ಥೆಯ ಸೇವಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಸಂಸ್ಕೃತಿ ಮತ್ತು ಪರಂಪರೆಯ ಜತೆಗೆ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಬೇಕಿದೆ. ಅದಮ್ಯ ಚೇತನ ಸಂಸ್ಥೆ ಈ ವರ್ಷ ಪ್ರಕೃತಿ ಮತ್ತು ಸಂಸ್ಕೃತಿ ವಿಷಯದ ಮೇಲೆ ಉತ್ಸವ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

Advertisement

“ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ನಂತರ ನಾನು ಕರ್ನಾಟಕಕ್ಕೆ ಬರುತ್ತಿರುವುದು ಇದು ಎರಡನೇ ಬಾರಿ. ಇಲ್ಲಿನ ಪರಿಸರ ಮತ್ತು ಜನ ತುಂಬಾ ಇಷ್ಟವಾಗಿದ್ದಾರೆ. ನ್ಯಾಷನಲ್‌ ಕಾಲೇಜು ರೀತಿಯ ಶಿಕ್ಷಣ ಸಂಸ್ಥೆಗಳು ದೇಶದ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಿವೆ.
ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಖ್ಯಾತ ಕ್ರಿಕೆಟ್‌ ತಾರೆ ಅನಿಲ್‌ ಕುಂಬ್ಳೆ, ಚಿತ್ರ ನಟ ದಿ ವಿಷ್ಣುವರ್ಧನ್‌ ಅವರಂತಹ ಪ್ರತಿಷ್ಠಿತರನ್ನು, ಶ್ರೇಷ್ಠ ಪ್ರತಿಭೆಗಳನ್ನು ದೇಶಕ್ಕೆ ಕೊಡುಗೆ
ನೀಡಿದ ಹೆಮ್ಮೆ ನ್ಯಾಷನಲ್‌ ಕಾಲೇಜಿಗೆ ಸಲ್ಲುತ್ತದೆ,’ ಎಂದರು.

ಮಕ್ಕಳಿಗೆ ಶಿಕ್ಷಣದ ಬಗ್ಗೆ ಅಭಿರುಚಿ ಮೂಡಿಸಲು, ಶಾಲೆ ತೊರೆದ ಮಕ್ಕಳನ್ನು ಮತ್ತೆ ಶಾಲೆಗಳತ್ತ ಕರೆತರುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಮಹತ್ವದ ಪಾತ್ರ ವಹಿಸಿದೆ. ಈ ಯೋಜನೆ ಜಾರಿಯಾದ ನಂತರ ಶಾಲೆಗೆ ಬರುವ, ಶಿಕ್ಷಣ ಪಡೆಯುವ
ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದರು.

ಸತ್ಯಾಗ್ರಹ-ಸಚ್ಚಾಗ್ರಹ-ಸಸ್ಯಾಗ್ರಹ: ಕೇಂದ್ರ  ರಾಸಾಯನಿಕ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಮಾತನಾಡಿ, 1917ರಲ್ಲಿ ಮಹಾತ್ಮಾ ಗಾಂಧೀಜಿಯವರು ಬಿಹಾರದ ಚಂಪಾರಣ್ಯದಲ್ಲಿ “ಸತ್ಯಾಗ್ರಹ’ ಆರಂಭಿಸಿದ್ದರು. ಅವರಿಂದ ಪ್ರೇರಿತರಾದ ಪ್ರಧಾನಿ ನರೇಂದ್ರ ಮೋದಿ “ಸಚ್ಚಾಗ್ರಹ’ ಆರಂಭಿಸಿದ್ದಾರೆ. ಅದೇ ರೀತಿ ಅದಮ್ಯ ಚೇತನ ಸಂಸ್ಥೆ “ಸಸ್ಯಾಗ್ರಹ’ ಯೋಜನೆ ಆರಂಭಿಸಿದೆ. ಈ ಮೂಲಕ ರಾಜ್ಯದಲ್ಲಿ 1.5 ಕೋಟಿ ಸಸಿನೆಡುವ ಯೋಜನೆ ಆರಂಭಿಸಿದ್ದೇವೆ. ಪ್ರಧಾನಿ ನರೇಂದ್ರ
ಮೋದಿ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರತಿ ಭಾನುವಾರ ಸೈಕಲ್‌ ಡೇ ಆರಂಭಿಸಿರುವ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಭಾನುವಾರ “ಹಸಿರು ಸೈಕಲ್‌ ದಿನ’ ಆರಂಭಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಭಗವದ್ಗೀತೆ ಪುಸ್ತಕ ಮತ್ತು ಅನ್ನಪೂರ್ಣೇಶ್ವರಿ ವಿಗ್ರಹ ನೀಡಿ ಸನ್ಮಾನಿಸಲಾಯಿತು. ರಾಜ್ಯಪಾಲ ವಜುಬಾಯಿ ವಾಲಾ, ಅದಮ್ಯ ಚೇತನದ ವ್ಯವಸ್ಥಾಪಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್‌ ಹಾಗೂ ನ್ಯಾಷನಲ್‌ ಕಾಲೇಜು ಅಧ್ಯಕ್ಷ ಡಾ. ಎ.ಎಚ್‌. ರಾಮ್‌ ರಾವ್‌ ಉಪಸ್ಥಿತರಿದ್ದರು. ಮೂರು ದಿನ ನಡೆಯುವ ಸೇವಾ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Advertisement

ಮಕ್ಕಳ ಪ್ರಕೃತಿ-ಸಂಸ್ಕೃತಿ ಆವಿಷ್ಕಾರ 
ಅಲ್ಲಿ ಮಕ್ಕಳ ಕಲ ರವ ತುಂಬಿತ್ತು. ಸಂಸ್ಕೃತಿ, ಪರಿಸರ ಉಳಿಸುವುದು ಹಾಗೂ ಆ ನಿಟ್ಟಿನಲ್ಲಿ ನೈಸರ್ಗಿಕ ಸಂಪತ್ತಿನ ಪುನರ್‌ಬಳಕೆ ಮಾಡುವ ಕುರಿತು ಮಕ್ಕಳೇ ಸಂಶೋಧನೆ ನಡೆಸಿದ್ದರು. ಜತೆಗೆ ಆ ಬಗ್ಗೆ ಹಿರಿಯರಿಗೂ, ಕಿರಿಯರಿಗೂ ಪಾಠ ಹೇಳುತ್ತಿದ್ದರು. ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅದಮ್ಯ ಚೇತನ ಸೇವಾ ಉತ್ಸವದಲ್ಲಿ ಆಯೋಜಿಸಿರುವ ಪ್ರಕೃತಿ-ಸಂಸ್ಕೃತಿ ಹೆಸರಿನ ಪರಿಸರ ರಕ್ಷಣೆ ಹಾಗೂ ಪುನಶ್ಚೇತನ ಕುರಿತ ಪ್ರದರ್ಶನದಲ್ಲಿ ನಗರದ ಸುಮಾರು 17 ಶಾಲೆಗಳ ಮಕ್ಕಳು ಹೊಸ
ಮಾದರಿಯ ಸಂಶೋಧನೆ ನಡೆಸಿ ತಮ್ಮ ಜಾಣ್ಮೆ ಪ್ರದರ್ಶನ ಮಾಡುತ್ತಿದ್ದಾರೆ. ನೇಚರ್‌ ಸೈನ್ಸ್‌ ಇಂಟರ್ನ್ಶಿಪ್‌ ಪ್ರೋಗಾಂ ಅಡಿಯಲ್ಲಿ ಅದಮ್ಯ ಚೇತನ ಸಂಸ್ಥೆ ಹಾಗೂ ಐಐಎಸ್ಸಿ ಬೆಂಗಳೂರು ಜಂಟಿಯಾಗಿ ನಗರದ ಸುಮಾರು 72 ಶಾಲೆಯ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಜತೆಗೆ ವಿಜ್ಞಾನದ ಬೆಳವಣಿಗೆ ಕುರಿತು ಎರಡು ತಿಂಗಳು ತರಬೇತಿ ನೀಡಿ, ಮಕ್ಕಳಿಂದಲೇ ಹೊಸ ಆವಿಷ್ಕಾರ ನಡೆಸುವ ಪ್ರಯೋಗ ಮಾಡಿದ್ದಾರೆ. ಇದರಲ್ಲಿ ಪರಿಸರ ಸಂರಕ್ಷಣೆ, ನವೀಕರಣ ಇಂಧನ ಬಳಕೆ, ಹೆಚ್ಚಿನ ಖರ್ಚಿಲ್ಲದೇ ಮನೆಯ ಅಕ್ಕಪಕ್ಕದ ಖಾಲಿ ಜಾಗದಲ್ಲೇ ಪವನ ವಿದ್ಯುತ್‌ ಉತ್ಪಾದನೆ, ಅಂತರ್ಜಲ ಮರುಪೂರಣ ಮಾಡುವ ಸರಳ ವಿಧಾನ, ನಗರ ಪ್ರದೇಶದ ತಾರಸಿ ಮೇಲೆ ಕಡಿಮೆ ನೀರು ಬಳಸಿ ತರಕಾರಿ ಬೆಳೆಯುವ ಪದ್ಧತಿ ಕುರಿತು ತಮ್ಮದೇ ರೀತಿಯಲ್ಲಿ ಸಂಶೋಧನೆ ನಡೆಸಿ ಪ್ರಾತ್ಯಕ್ಷಿಗಗಳನ್ನು ಪ್ರದರ್ಶನ ನಡೆಸಿದ್ದಾರೆ. ಇದಲ್ಲದೇ ರಕ್ಷಣಾ ಇಲಾಖೆಯ ಯುದ್ಧ ವಿಮಾನಗಳ ಪ್ರದರ್ಶನ, ಎಚ್‌.ಎ.ಎಲ್‌ ವಿಮಾನ ತೈಯಾರಿಕಾ ಮಾದರಿ, ಅದಮ್ಯ ಚೇತನ ಮಧ್ಯಾಹ್ನದ ಬಿಸಿಯೂಟ ಸಿದ್ಧತೆ ಕುರಿತ ಪ್ರಾತ್ಯಕ್ಷಿಕೆ ಕೂಡ ಉತ್ಸವದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next